[ಬೊಗಳೂರು ಭಯೋತ್ಪಾದನಾ ನಿಗ್ರಹ ಬ್ಯುರೋದಿಂದ]
ಬೊಗಳೂರು: ಕಳೆದ ಹತ್ತು ವರ್ಷಗಳಿಂದೀಚೆಗೆ ದೇಶದಲ್ಲಿ ಭಯದ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಬಾಂಬ್, ಪಿಸ್ತೂಲು, ಗನ್ನು ಮುಂತಾದವುಗಳ ಬೆಲೆ ತೀವ್ರವಾಗಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಬೊಗಳೂರು ತನಿಖಾ ಬ್ಯುರೋ ಪತ್ತೆ ಹಚ್ಚಿದೆ.
ಹತ್ತು ವರ್ಷಗಳಲ್ಲಿ ದೇಶಾದ್ಯಂತ ಆತಂಕಕ್ಕೆ, ಹಿಂಸಾಚಾರಕ್ಕೆ ತೀವ್ರ ಬರ ಕಾಣಿಸಿಕೊಂಡಿದೆ. ಹೀಗಾಗಿಯೇ ಭಯದ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿದೆ. ಇದೇ ವರ್ಷದಲ್ಲೇ 196 ಮೆಟ್ರಿಕ್ ಟನ್‌ನಷ್ಟು ಭಯ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ, ಇದು ಕೇವಲ ಐದಾರು ಮೆಟ್ರಿಕ್ ಟನ್‌ಗೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿಲ್ಲ.
ದೇಶಾದ್ಯಂತ ಆತಂಕಕಾರಿಗಳು ಮತ್ತು ಆತಂಕಕಾರಿ ವಸ್ತುಗಳಿಗೆ ಬರ ಇದೆ. ಇದಕ್ಕೆಲ್ಲ ಕಾರಣ, ಜನರು ಸರಿಯಾಗಿ ವಿದ್ಯಾವಂತರಾಗುತ್ತಿರುವುದೇ ಆಗಿದೆ. ಹಿಂದೆ, ವಿದ್ಯಾವಂತರಲ್ಲದ, ಅಶಿಕ್ಷಿತ ಜನರು ಸಾಕಷ್ಟು ಮಂದಿ ಕೂಲಿ-ನಾಲಿ ಕೆಲಸಕ್ಕೆ ಲಭ್ಯವಾಗುತ್ತಿದ್ದರು. ಆದರೆ, ಈಗ ಜನರು ಸುಶಿಕ್ಷಿತರಾಗಿದ್ದಾರೆ, ತಮ್ಮ ದೇಶದ ಮತ್ತು ದೇಹದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಹೀಗಾಗಿ ಭಯ ಉತ್ಪಾದನೆಯತ್ತ ಜನರು ಮುಖ ಮಾಡುತ್ತಿಲ್ಲ ಎಂದು ಅನ್ವೇಷಿ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.
ಜೊತೆಗೆ, ಭಯ ಉತ್ಪಾದನಾ ಉದ್ಯಮವು ಕೂಡ ತೀರ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಅನಾಮಿಕ ವ್ಯಕ್ತಿಗಳು ಈ ಉದ್ಯಮದಲ್ಲಿ ನಿರತರಾಗಿದ್ದವರನ್ನು ಟಾರ್ಗೆಟ್ ಮಾಡಿ, ಸದ್ದಿಲ್ಲದೇ ಮುಗಿಸಿಬಿಡುತ್ತಿದ್ದಾರೆ. ಹೀಗಾಗಿ, ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ವಿವಿಧೆಡೆಯೂ ಭಯದ ಉತ್ಪಾದನೆಗೆ ತೀವ್ರ ತೊಡಕಾಗಿದೆ.
ಬೆಲೆ ಏರಿಕೆ ತಡೆಯುವುದಕ್ಕಾಗಿ ಭಾರತವು ಕೂಡ ಆತಂಕವಾದಿಗಳನ್ನು ವಿದೇಶದಿಂದ, ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದಿಂದ ಆಮದು ಮಾಡುವುದಕ್ಕೂ ಕಡಿವಾಣ ಹಾಕಿದೆ. ಹೀಗಾಗಿ, ಪೂರೈಕೆಯ ಕೊರತೆಯುಂಟಾಗಿದೆ. ಈಗಾಗಲೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ಮುಂತಾದೆಡೆ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಆಮದಾಗುತ್ತಿದ್ದ ಉತ್ಪನ್ನಗಳಿಗೆ ಅಲ್ಲಿನ ಆಡಳಿತಗಳು ತೀವ್ರ ಕಡಿವಾಣ ಹಾಕಿ, ಕುತ್ತಿಗೆ ಬಿಗಿದಿವೆ. ಇದರಿಂದಾಗಿಯೇ ದೇಶದೆಲ್ಲೆಡೆ ಸಮಸ್ಯೆ ಆಗಿದೆ.
ಆದರೆ, ಪೂರ್ವದ ಪಶ್ಚಿಮ ಬಂಗಾಳದ ಸರಕಾರವು ಭಯ ಉತ್ಪಾದಕರಿಗೆ ಹೆಚ್ಚಿನ ನೆರವು ನೀಡಿ, ದೇಶದೊಳಗಿನ ಉತ್ಪನ್ನವನ್ನು ಹೆಚ್ಚಿಸಲು ಶ್ರಮಿಸುತ್ತಿರುವುದಾಗಿ ವರದಿಯಾಗಿದ್ದು, ಇದನ್ನು ಬೊಗಳೆ ಬ್ಯುರೋ ತನಿಖೆ ನಡೆಸಲು ನಿರ್ಧರಿಸಿದೆ.
2 ಕಾಮೆಂಟ್‌ಗಳು
ಭಯೋತ್ಪಾದಕರಿಗೆ ಭಯವಾಗುವುದನ್ನು ತಡೆಯುವ ಉದ್ದೇಶದಿಂದ ಅವರಿಗೆ ಆಧಾರಕಾರ್ಡ ಕೊಡಲಾಗುತ್ತಿದೆ ಎನ್ನುವ ಸುದ್ದಿಯು ಇತ್ತೀಚೆಗೆ ಕೊಲಕತ್ತಾದಿಂದ ಬಂದಿದೆ!
ಪ್ರತ್ಯುತ್ತರಅಳಿಸಿಸಾರೂ... ಈಗೆಲ್ಲ ಆಧಾರ್ ಕಾರ್ಡುಗಳಿಗೆ ಆಧಾರವೇ ಇಲ್ಲದಂತಾಗುತ್ತಿದೆ ಅಂತ ಕಾಣಿಸ್ತಿದೆ. ಒಬ್ಬರಿಗೆ ಎರಡೆರಡು ಆಧಾರ. ಎಲ್ಲ ವೋಟಿಗಾಗಿ...
ಅಳಿಸಿಏನಾದ್ರೂ ಹೇಳ್ರಪಾ :-D