ಸಚಿವ ಸಂತೋಷ ಲಾಡಿಗೇ ದುಂಬಾಲುಬಿದ್ದ ಮದ್ಯಪಾನ ಪ್ರಿಯರು
[ಬೊಗಳೂರು ಹ್ಹೆಹ್ಹೆಹ್ಹೆ ಬ್ಯುರೋದಿಂದ]
ಬೊಗಳೂರು: ಬೊಗಳೆ-ರಗಳೆ ಬ್ಯುರೋವನ್ನೇ ಬೆಚ್ಚಿ ಬೀಳಿಸುವ, ಅನ್ವೇಷಿಯ ಅಸ್ತಿತ್ವಕ್ಕೇ ಧಕ್ಕೆ ತರುವ ವರದ್ದಿಯೊಂದನ್ನು ನಾಡಿನ ಪ್ರತಿಷ್ಠಿತ ಪತ್ರಿಕೆಗಳೆಲ್ಲವೂ ನಾಮುಂದು ತಾಮುಂದು ಎಂದು ಪೈಪೋಟಿಗೆ ಬಿದ್ದು ಪ್ರಕಟಿಸಿರುವುದು ಹೊಸ ಪ್ರತಿಭಟನೆಗೆ ನಾಂದಿ ಹಾಡಿದೆ.
ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ ಎಂಬ ಘೋಷವಾಕ್ಯವನ್ನೇ ಬಂಡವಾಳವಾಗಿಸಿಕೊಂಡ ಕುಡಿಗಳ ಸಂಘವೊಂದು, ಡಿಸೆಂಬರ್ 31ನ್ನು ಮದ್ಯಪಾನ ಪ್ರಿಯರ ದಿನವೆಂದು ಘೋಷಿಸಬೇಕೆಂದು ಆಗ್ರಹಿಸಿರುವುದು ತೀರಾ ಆಘಾತಕಾರಿ ವಿಚಾರ ಎಂದು ಬೊಗಳೂರು ಕುಡುಕರ ಸಂಘ (ನಾನ್-ರಿಜಿಸ್ಟರ್ಡ್)ದ ಅಧ್ಯಕ್ಷರು ಪುತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೊಗಳೆ ಬ್ಯುರೋವನ್ನು ಫೇಚುಬುಕ್ಕಿನಲ್ಲಿ ಇಲ್ಲಿ ಹಾಗೂ ಎಕ್ಸಿನಲ್ಲಿ ಇಲ್ಲಿ ಹಿಂಬಾಲಿಸಿ, ಪ್ರೋತ್ಸಾಹಿಸಿ.
ಕುಡಿಯುವವರನ್ನು ಕುಡುಕ ಎಂದು ಕರೆಯಬಾರದೆಂಬ ಬೇಡಿಕೆ ಮಾತ್ರ ತೀರಾ ಅಸಂಬದ್ಧ, ಆಘಾತಕಾರಿ ಮತ್ತು ಇದು ಕುಡುಕ ಜನಾಂಗಕ್ಕೇ ಅವಮಾನಕರ ಎಂದು ಈ ಸಂಘವು ಅದೇನೋ ಪ್ರಿಯರ ಸಂಘದ ವಿರುದ್ಧ ಪ್ರತಿ-ಪ್ರತಿಭಟನೆಗೆ ಸಜ್ಜಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸುವಂತೆ ಬೊಗಳೆ ಬ್ಯುರೋಗೆ ಕುಡುಕರ ಸಂಘವು ದುಂಬಾಲು ಬಿದ್ದಿದೆಯಾದರೂ, ಶೀಘ್ರದಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೊ.ರ. ಬ್ಯುರೋ ಮೂಲಗಳು ದೃಢಪಡಿಸಿವೆ.
ಡಿಸೆಂಬರ್ 31ನ್ನೇ ಮದ್ಯಪಾನ ಪ್ರಿಯರ ದಿನ ಎಂದು ಕರೆದರೆ, ನಾವು ಈಗಾಗಲೇ ಇಟ್ಟಿರುವ ಕುಡುಕರ ದಿನ (ಡಿಸೆಂಬರ್ 31 ಹಾಗೂ ಜನವರಿ 1) ಎಂಬುದಕ್ಕೆ ಅತಿದೊಡ್ಡ ಹೊಡೆತ ಬೀಳಲಿದೆ. ಹೊಸ ವರ್ಷದ ಹೆಸರಲ್ಲಿ ಸಂಭ್ರಮ ಅಲೆಯಲ್ಲಿ ಇದ್ದಲ್ಲೆಲ್ಲಾ ತೇಲಾಡುತ್ತಾ, ಓಲಾಡುತ್ತಾ, ಬೀಳಾಡುತ್ತಾ ಇರುವ ಕುಡುಕರ ಅಸ್ತಿತ್ವಕ್ಕೇ ಕೊಡಲಿಯೇಟು ಆಗಲಿದೆ. ಆ ದಿನ ಮಾಮೂಲಿಗಿಂತ ಹೆಚ್ಚು ಅಶಿಕ್ಷಿತರ ಜೊತೆಗೆ, ಸುಶಿಕ್ಷಿತರು, ಸಿರಿವಂತರು ಮತ್ತು ಸಮಾಜದ ಗಣ್ಯ ವ್ಯಕ್ತಿಗಳು ಕೂಡ ಕುಡುಕರ ಸಂಘಕ್ಕೆ ಸೇರಿಕೊಳ್ಳುತ್ತಾರೆ. ಹಾದಿ ಬೀದಿಯಲ್ಲಿ ಬಿದ್ದಿರುತ್ತಾರೆ ಮತ್ತು ತಮ್ಮದೇ ಮನೆಗೆ ವಾಪಸ್ಸಾಗುತ್ತಾರೆ ಎಂಬ ಗ್ಯಾರಂಟಿ ಇರುವುದಿಲ್ಲ. ಅಂದರೆ, ಬೇರೆಯವರ ಮನೆಯ ಬಾಗಿಲು ಬಡಿದು ಅತ್ಯಂತ ದೊಡ್ಡ ಮನರಂಜನೆಯ ದೃಶ್ಯಾವಳಿಗಳನ್ನು ಈಗಿನ ಬ್ರೇಕಿಂಗ್ ನ್ಯೂಸ್ ಚಾನೆಲ್‌ಗಳಿಗೆ ಕೊಡುತ್ತಿದ್ದಾರೆ ಎಂಬುದು ಕುಡುಕರ ಸಂಘದ ಸ್ಪಷ್ಟವಾದ ಮತ್ತು ಖಚಿತವಾದ ಮತ್ತು ನಾಲಿಗೆ ತಡವರಿಸದ ಹೇಳಿಕೆಯಾಗಿದೆ.
ಇಡೀ ನಾಡಿಗೇ ಅದೊಂದು ಮನರಂಜನೆಯ ಹಬ್ಬ. ಈಗ ಅವರನ್ನೆಲ್ಲ ಮದ್ಯಪಾನ ಪ್ರಿಯರು ಎಂದು ಬದಲಿಸಿದರೆ ಈ ಮನರಂಜನೆಗೆ ತೊಡಕಾಗಬಹುದು. ಮಧ್ಯರಾತ್ರಿಯನ್ನು ಈಗಾಗಲೇ ಮದ್ಯರಾತ್ರಿ ಎಂದೇ ಕರೆಯಲಾಗುತ್ತಿರುವುದರಿಂದ ಕುಡುಕರ ಸಂಘಕ್ಕೆ ದೊಡ್ಡ ಹೊಡೆತ ಆವತ್ತೇ ಬಿದ್ದಿದೆ. ಕುಡುಕರಿಂದ ಬೊಗಳೂರು ಸರ್ಕಾರಕ್ಕೆ ದೊರೆಯುವ ರಾಜಸ್ವಕ್ಕೂ ಮತ್ತಷ್ಟು ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.
ಇದಲ್ಲದೆ, ಆ ಸಂಘದವರು ಲಿವರ್ ಡ್ಯಾಮೇಜ್ ಆದ್ರೆ ಸರಕಾರವೇ ಹಣ ಕೊಡಬೇಕು, ಕುಡಿದು ಸತ್ತವರಿಗೆ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದೆಲ್ಲ ಅನರ್ಥಕಾರಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹೀಗೆಲ್ಲ ಆದರೆ ಜನಸಂಖ್ಯೆ ಏರುಗತಿಯಲ್ಲಿ ಸಾಗಿ, ಆಕಾಶದ ತುತ್ತತುದಿ ತಲುಪಬಹುದು. ವಾಸ್ತವವಾಗಿ ಕುಡುಕರೇ ದೇಶದ ಜನಸಂಖ್ಯೆ ನಿಯಂತ್ರಣದಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ, ಅವರ ಲಿವರು, ಕಿಡ್ನಿ, ಅದು ಇದು ಡ್ಯಾಮೆಜ್ ಆಗಿ, ಅವರು ಬೇಗನೇ ದೇಶದ ಜನಸಂಖ್ಯೆಯಿಂದ ಮರೆಯಾಗುತ್ತಾರೆ. ಹೀಗೆಲ್ಲ ಆದರೆ, ಸಾಮಾಜಿಕ ಇಂಬ್ಯಾಲೆನ್ಸ್ ಕೂಡ ಎದುರಾಗಬಹುದು ಎಂಬುದು ಕುಡುಕರ ಸಂಘದ ಆತಂಕ.
ನಮಗೆ ಕುಡುಕ ಹೆಸರೇ ಸೂಕ್ತ. ಮದ್ಯಪ್ರಿಯ ಎಂದರೆ ಅದೇನೋ ಪ್ರಿಯಕರನೂ ಬೇಕು, ಪ್ರಿಯತಮೆಯೂ ಬೇಕಾಗುತ್ತದೆ. ಇವೆಲ್ಲ ರಗಳೆ ನಮಗೆ ಬೇಕಾಗಿಲ್ಲ. ಹಾಗೆಲ್ಲ ಇದ್ದರೆ, ಮದ್ಯಪ್ರೇಮಿ, ಮದ್ಯಪ್ರೇಯಸಿ, ಮದ್ಯಪ್ರಿಯಕರ ಎಂದೆಲ್ಲ ಕೂಡ ಯಾರು ಯಾರಿಗೆ ಎನ್ನುವುದೇ ಮರೆತು ಹೋಗುತ್ತದೆ. ಆದರೆ, ಕುಡುಕ/ಕಿ ಎಂದರೆ ಎರಡೇ ಜಾತಿ. ಕುಡುಕರು ಮತ್ತು ಕುಡಿಯದವರು ಅಂತ.
ಹೀಗಾಗಿ, ಇಲ್ಲಿ ಮೀಸಲಾತಿಗೂ ಜಾಸ್ತಿ ಕಸರತ್ತು ನಡೆಸಬೇಕಾಗಿರುವುದಿಲ್ಲ. ಈ ಕುರಿತು ಶೀಘ್ರವೇ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಾಗುವುದು. ತೀರಾ ಅಗತ್ಯ ಬಿದ್ದರೆ ತೂರಾಡುತ್ತಲೇ ವಿಶ್ವ ಸಂಸ್ಥೆಗೂ ದೂರು ಒಯ್ಯಲಾಗುವುದು, ಅಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಬೊಗಳೂರು ಕುಡುಕರ ಸಂಘದ ಅಧ್ಯಕ್ಷ ಕುಡಿ ಕುಮಾರ್ ಮದಿರೂರು ಅವರು ಎಚ್ಚರಿಸಿದ್ದಾರೆ.
0 ಕಾಮೆಂಟ್‌ಗಳು
ಏನಾದ್ರೂ ಹೇಳ್ರಪಾ :-D