ಬೊಗಳೂರು: ಅಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಬೊಗಳೂರು ಸರಕಾರ ಕೈಗೊಂಡ ನಿರ್ಧಾರಕ್ಕೆ ವ್ಯಾಪಕ ಸ್ವಾಗತ, ಪ್ರಶಂಸೆ ವ್ಯಕ್ತವಾಗಿದ್ದು, ಅಂಗನವಾಡಿ ವಿದ್ಯಾರ್ಥಿ ಸಂಘ ಸೇರಿದಂತೆ ದೇಶಾದ್ಯಂತ ಇರುವ ಬಾಲ-ಕರುಗಳ ಸಂಘವು ಹೊಸ ಒತ್ತಾಯವೊಂದನ್ನು ಮುಂದಿಟ್ಟು ಪ್ರತಿಭಟನೆ ನಡೆಸಿವೆ.
ಕುಡಿಯುವ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ಸರಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಅಂಗನವಾಡಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ದಿಢೀರ್ ಸಭೆ ಸೇರಿದರು. ಅಂಗನವಾಡಿ ಮಕ್ಕಳಿಗೂ, ಹಾಲು-ಮೊಟ್ಟೆ-ಬಾಳೆಹಣ್ಣು ಇತ್ಯಾದಿಗಳ ಬದಲಾಗಿ, ಕೇವಲ ಮದ್ಯ ಪೂರೈಸಿದರೆ ಸಾಕು. ಇದರಿಂದ ರಾಜ್ಯದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ ಎಂಬ ಹಕ್ಕೊತ್ತಾಯ ಮಂಡಿಸಲು ವಿದ್ಯಾರ್ಥಿ ಸಂಘವು ನಿರ್ಧರಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಬೊಗಳೆ ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ವರದ್ದಿ ಮಾಡಿದ್ದಾರೆ.
ಕೊರೊನಾ ಕಾಡಿದ ಕಾಲದಲ್ಲಿ ಎಲ್ಲವೂ ಮುಚ್ಚಿದ್ದರೂ, ಮದ್ಯದಂಗಡಿಗಳನ್ನು ಮೊದಲು ತೆರೆದಿದ್ದ ಸರಕಾರವು, ಕುಸಿದ ಆರ್ಥಿಕತೆಯನ್ನು ಮೇಲೆತ್ತುವಂತೆ ಮಾಡಿತ್ತು. ಇದೀಗ, ಮತ್ತಷ್ಟು ಕುಸಿದಿರುವ ಸಾಮಾಜಿಕ ಮೌಲ್ಯಗಳನ್ನು ಕಣ್ಣಿಗೆ ಕಾಣದಂತೆ ಮಾಡಲು ಸರಕಾರ ಮುಂದಾಗಿದೆ. ಇದಕ್ಕಾಗಿಯೇ ಕುಡಿಯುವ ವಯಸ್ಸನ್ನು 18ಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ತೊಟ್ಟಿಲು ಶಿಶು ಸಂಘಗಳೂ ಎಚ್ಚೆತ್ತುಕೊಂಡಿವೆ. ನಮಗೆ ಬಾಟಲಿ ಹಾಲು ಬೇಡವೇ ಬೇಡ, ಬಾಟಲಿಯಲ್ಲಿ ಮದ್ಯವನ್ನೇ ತುಂಬಿಸಿ ಕೊಡಿ ಎಂದು ಹಗಲು ರಾತ್ರಿಯೆನ್ನದೆ ಈ ಶಿಶುಗಳ ಸಂಘದ ಪದಾಧಿಕಾರಿಗಳು ತೊಟ್ಟಿಲಲ್ಲೇ ಕೈಕಾಲು ಅಲ್ಲಾಡಿಸುತ್ತಾ ಆಗ್ರಹ ಮುಂದಿಟ್ಟಿವೆ ಎಂದು ಅಸತ್ಯಾನ್ವೇಷಿ ಬ್ಯುರೋ ವರದಿ ಮಾಡಿದೆ.
ನಮಗೆ ತೊಟ್ಟಿಲಿನಿಂದ ಇಳಿದು, ಮದ್ಯದಂಗಡಿಗೆ ಹೋಗುವಷ್ಟು ಸಾಮರ್ಥ್ಯ ಇಲ್ಲ. ಹೀಗಾಗಿ, ನಾವು ಮಲಗಿದ್ದಲ್ಲಿಗೇ ಮದ್ಯ ಪೂರೈಸಬೇಕು ಎಂಬುದು ಈ ಶಿಶು ಸಂಘದ ಸಮಸ್ತ ಸದಸ್ಯರ ಬೇಡಿಕೆಯಾಗಿದೆ.
ಇದರ ನಡುವೆಯೇ, ಸ್ವಸ್ಥ ಸಮಾಜವಿದ್ದರೆ ಈ ಕಾಲದಲ್ಲಿ ಬದುಕುವುದು ಸಾಧ್ಯವಿಲ್ಲ. ಇದಕ್ಕಾಗಿ ಅಸ್ವಸ್ಥ ಸಮಾಜವೇ ಇಂದಿನ ಅಗತ್ಯ ಎಂದು ಮನಗಂಡಿರುವ ಶಿಶು ಸಂಘ ಹಾಗೂ ಅಂಗನವಾಡಿ ಸಂಘದ ಪದಾಧಿಕಾರಿಗಳು ಜಂಟಿ ಅಧಿವೇಶನ ನಡೆಸಿ, ತಮ್ಮ ಮುಂದಿನ ಬೇಡಿಕೆಗಳ ಪಟ್ಟಿಯನ್ನೂ ಸರಕಾರದ ಮುಂದಿಡಲು ತೀರ್ಮಾನಿಸಿದ್ದಾರೆ.
Follow ಬೊಗಳೆ-ರಗಳೆ On Facebook and Twitter.
ಅವುಗಳಲ್ಲಿ ಪ್ರಮುಖವಾದವೆಂದರೆ, ಸಾಮಾಜಿಕ ಮೌಲ್ಯಗಳನ್ನು ಕಣ್ಣಿಗೆ ಕಾಣದಂತೆ ಮಾಡಬೇಕಿದ್ದರೆ ಮತ್ತು ಸರಕಾರದ ಬೊಕ್ಕಸ - ತನ್ಮೂಲಕವಾಗಿ ರಾಜಕಾರಣಿಗಳ ಜೇಬು ತುಂಬಬೇಕಿದ್ದರೆ, ಶಿಶುಗಳಿಗೆ ಕುಳಿತಲ್ಲೇ ಮದ್ಯ, ಗಾಂಜಾ, ಹುಕ್ಕಾಗಳ ಸರಬರಾಜಾಗಬೇಕು; ಕೈಗೆ ಮೊಬೈಲ್ ಸಿಗುವಂತಿರಬೇಕು; ಜೊತೆಗೆ ಆದಷ್ಟು ಬೇಗ ತಮ್ಮ ವಯಸ್ಸನ್ನು ಮತ್ತಷ್ಟು ಇಳಿಸಿ, ಕಾಂಡೋಂ ಕೂಡ ಪೂರೈಸಬೇಕು ಎಂದು ಆಗ್ರಹಿಸಲು ನಿರ್ಧರಿಸಿರುವುದಾಗಿ ಬೊಗಳೂರು ತನಿಖಾ ಬ್ಯುರೋದ ಬಾತ್ಮೀದಾರರು ಬೊಗಳೆ ಬ್ಯುರೋ ಎದುರು ವರದ್ದಿ ತಂದು ಸುರುವಿದ್ದಾರೆ.
2 ಕಾಮೆಂಟ್‌ಗಳು
ನಿಮ್ಮ ವರದ್ದಿಯು (ಅ)ಸತ್ಯಕ್ಕೆ ಅತೀ ಹತ್ತಿರವಾಗಿದೆ.
ಪ್ರತ್ಯುತ್ತರಅಳಿಸಿಈ ಬಗ್ಗೆ ಮುಂದಕ್ಕೆ ಎಚ್ಚರದಿಂದ ಇರಲಾಗುತ್ತದೆ ಸುನಾಥರೇ, ಏನಾದರೂ ಸುಳಿವು ಸಿಕ್ಕಿದರೂ ತಕ್ಷಣ ನಮಗೆ ತಿಳಿಸಿ. ತನಿಖೆ ಮಾಡದೆಯೇ ನಿದ್ದೆ ಮಾಡುತ್ತೇವೆ.
ಅಳಿಸಿಏನಾದ್ರೂ ಹೇಳ್ರಪಾ :-D