ಬೊಗಳೂರು: ಚಿಕಿತ್ಸೆಗಾಗಿ ಶಾಸಕರೆಲ್ಲರೂ ವಿದೇಶಕ್ಕೆ ಹೋಗುವ ಪರಿಪಾಠಕ್ಕೆ ಹೊಸ ತಿರುವು ಲಭಿಸಿದೆ. ಬೊಗಳೂರಿನ ಶಾಸಕರೊಬ್ಬರು ಇದೀಗ ಹಲ್ಲು ನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಲು ನಿರ್ಧರಿಸಿದ್ದಾರೆ ಎಂಬ ವರದ್ದಿಯ ಬೆನ್ನು ಬಿದ್ದ ಅಸತ್ಯ ಅನ್ವೇಷಣಾ ಬ್ಯುರೋಕ್ಕೆ ಹೊಸ ಸಂಗತಿಯೊಂದು ತನಿಖೆಯ ವೇಳೆ ಪತ್ತೆಯಾಗಿದೆ.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸು ಎದುರಿಸುತ್ತಿರುವ ಶಾಸಕರು ವಿದೇಶಕ್ಕೆ ಹೋಗಬೇಕೆಂದು ಹಠ ಹಿಡಿಯುತ್ತಿರುವುದರ ಬಗ್ಗೆ ಬೊಗಳೂರಿನ ಏಕಸದಸ್ಯ ಬ್ಯುರೋ ತನಿಖೆ ನಡೆಸಿದಾಗ ಅಚ್ಚರಿಯ ವಿಷಯಗಳು ಕೂಡ ತಿಳಿದುಬಂದವು.
Follow ಬೊಗಳೆ-ರಗಳೆ On Facebook and Twitter. ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.
ಹಾಗಂತ, ಹಲ್ಲು ನೋವಿಗೆ ಈ ಶಾಸಕರು ಮಾತ್ರವೇ ಹೊರದೇಶಕ್ಕೆ ಹೋಗುತ್ತಿರುವುದಲ್ಲ ಎಂಬುದನ್ನು ಬೊಗಳೂರು ಬ್ಯುರೋ ಕಂಡುಕೊಂಡಿದೆ. ಈ ಮೊದಲು, ಬೊಗಳೂರಿನ ಶೋಷಕರೊಬ್ಬರು, ಕೈನೋವು ಎಂದು ಹಿಂದೆ ಅಮೆರಿಕ, ಸಿಂಗಾಪುರ, ಲಂಡನ್ ಇತ್ಯಾದಿಗಳಿಗೆಲ್ಲ ಹೋಗಿಬಂದಿದ್ದಾರೆ.
ಅದೇ ರೀತಿ, ಅಕ್ರಮ ಆಸ್ತಿ ಪಾಸ್ತಿ ಸಂಗ್ರಹ, ಆದಾಯಕ್ಕಿಂತ ಹೆಚ್ಚು ಆಸ್ತಿ ಗುಡ್ಡೆ ಹಾಕಿರುವುದು, ಹಣವನ್ನು ಎಲ್ಲೆಲ್ಲೋ ಹಾಯಿಸಿ, ಕೊನೆಗೆ ತನ್ನದೇ ಬೇನಾಮಿ ಖಾತೆಗೆ ಬೀಳುವಂತೆ ಮಾಡುವುದು, ಮನಿ ಲಾಂಡ್ರಿ ಇಟ್ಟುಕೊಂಡು ಲಾಂಡರಿಂಗ್ ಮಾಡುವುದೇ ಮೊದಲಾದ ಕಾರಣಕ್ಕಾಗಿ ಇಡಿ ಇಡಿಯಾಗಿಯೇ ಇಡಿ (ಜಾರಿ ನಿರ್ದೇಶನಾಲಯ) ತಮ್ಮನ್ನು ವಿಚಾರಿಸಲು ಬರುವ ಹಂತದಲ್ಲೇ, ಒಂದೊಂದೇ ನೋವುಗಳು ಆಗಮಿಸುತ್ತವೆ ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕೆ ತಾಯಿ ಮಕ್ಕಳು ಕೂಡ ವಿದೇಶಕ್ಕೆ ಹೋಗುತ್ತಿದ್ದಾರೆಂಬ ಮಾಹಿತಿಯ ಸುಳಿವೊಂದು ಅಸತ್ಯ ಅನ್ವೇಷಣೆಯಲ್ಲಿರುವಾಗಲೇ ಕಾಲಿಗೆ ಸಿಕ್ಕಿಹಾಕಿಕೊಂಡಿದ್ದು, ಈ ಕುರಿತು ಮತ್ತಷ್ಟು ವಿವರಗಳನ್ನು ಕಲೆ ಹಾಕಲಾಗುತ್ತಿದೆ.
ಇಷ್ಟಲ್ಲದೆ, ಕೆಲವೊಂದು ವಿದ್ಯಮಾನಗಳಿಂದಾಗಿ ಕೆಲವರಿಗೆ ಆ ಭಾಗದಲ್ಲಿ ಉರಿಯಲಾರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಉರಿಗೂ ಅಂಡು ನೋವೆಂದು ಹೆಸರಿಸಿ, ಕೆಲವರು ಲಂಡನ್‌ಗೇ ಹೋಗಬೇಕಿರುವುದಾಗಿಯೂ ಹೇಳಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮಾಲ್ದೀವ್ಸ್‌ನಲ್ಲಿ ಆಸ್ಪತ್ರೆಗಳಿಲ್ಲದಿದ್ದರೂ ಪರವಾಗಿಲ್ಲ, ನಾವು ಅಲ್ಲಿಗೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಒಟ್ಟಿನಲ್ಲಿ ಹಲ್ಲು ನೋವು ಬರುವಾಗ ವಿದೇಶಕ್ಕೆ ಹೋಗುವ ವಿದ್ಯಮಾನವೊಂದು ಹೊಸ ಹೊಸ ನೋವುಗಳ ಸಾಧ್ಯತೆಗಳಿಗೂ ಕಾರಣವಾಗುತ್ತಿದೆ ಎಂಬುದನ್ನು ಬೊಗಳೆ ಬ್ಯುರೋ ಕಂಡುಕೊಂಡಿರುವುದಾಗಿಯೂ ವರದ್ದಿಯಾಗಿದೆ.
ಆದರೆ, ಬೊಗಳೂರು ನಿವಾಸಿಯೊಬ್ಬರು ತಾವು ಪ್ರತಿದಿನವೂ ಬೆಳಗ್ಗೆದ್ದು ಲಂಡನ್‌ಗೆ ತೆರಳುತ್ತಿರುವುದಾಗಿಯೂ, ಇದಕ್ಕೆ ಕೇವಲ ಒಂದು ಚೊಂಬು ಮಾತ್ರ ಸಾಕಾಗುತ್ತದೆ ಎಂದೂ ಹೇಳಿಕೊಂಡಿರುವುದು ವಿದೇಶ ಪ್ರವಾಸಕ್ಕೆ ಮಾಡಬೇಕಾಗಿಬರುವ ಖರ್ಚು ವೆಚ್ಚಗಳ ಕುರಿತಾಗಿಯೂ ಸಂದೇಹ ಹುಟ್ಟಿಸಿದೆ ಮತ್ತು ಈ ಕುರಿತು ತನಿಖೆಗೆ ಬೊಗಳೂರು ಅಸತ್ಯಾನ್ವೇಷಣಾ ಬ್ಯುರೋಗೆ ಮತ್ತೊಂದು ಹೊಸ ವಿಷಯ ಸಿಕ್ಕಂತಾಗಿದೆ. ಹಾಗಿದ್ದರೆ ಅವರಿಗೆ ಬಹುಶಃ ಅಂಡು ನೋವು ಬಂದಿರಬೇಕು. ಇದಕ್ಕೆ ಲಂಡನ್ ಯಾತ್ರೆಯೇ ಪರಿಹಾರ ಎಂಬುದನ್ನವರು ಕಂಡುಕೊಂಡಿರುವುದಾಗಿ ಪತ್ತೆಯಾಗಿದೆ.
2 ಕಾಮೆಂಟ್‌ಗಳು
ಭಂಡನೋವಿಗಾಗಿ ಎಲ್ಲಿ ಹೋಗುತ್ತಾರೆ, ಅನ್ವೇಷಿಗಳೆ?
ಪ್ರತ್ಯುತ್ತರಅಳಿಸಿಸುನಾಥೋತ್ತಮರೇ, ಅವ್ರೀಗ ನಾಡಲ್ಲೇ ಯಾವ ಕ್ಷೇತ್ರ ಉತ್ತಮ ಅಂತ ಹುಡುಕಾಟದಲ್ಲಿದ್ದಾರಂತೆ...
ಅಳಿಸಿಏನಾದ್ರೂ ಹೇಳ್ರಪಾ :-D