ಬೊಗಳೆ ರಗಳೆ

header ads

BARking News: ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಭಯಂಕರ ಕುಸಿತಕ್ಕೆ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಾ!

[ಬೊಗಳೂರು ವಂಚನಾ ಬ್ಯುರೋದಿಂದ]

ಬೊಗಳೂರು: ಬೊಗಳೂರೆಂಬ ಹಲವು ದೇಶಗಳ ಒಕ್ಕೂಟದಲ್ಲಿ ಇತ್ತೀಚೆಗೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ತೀವ್ರವಾಗಿ ಮತ್ತು ಭೀಕರವಾಗಿ ಇಳಿಕೆಯಾಗಿವೆ ಎಂದು ಬೊಗಳೆಯ ಏಕ ಸದಸ್ಯ ಬ್ಯುರೋದ ಸರ್ವ ಸದಸ್ಯರು ವರದ್ದಿ ಮಾಡಿದ್ದಾರೆ.

ಬೊಗಳೂರಿನ ಪಕ್ಕದ ದೇಶವಾದ ಭಾರತದಲ್ಲಿ ಇತ್ತೀಚೆಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚು ಮಾಡಲಾಗಿದೆ. ಆದರೆ ಮತ್ತೊಂದು ನೆರೆಹೊರೆಯ ದೇಶವಾದ ಪಾಪಿಸ್ತಾನದಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ತೀವ್ರವಾಗಿ ಕುಸಿತ ಕಂಡಿವೆ. ಇಷ್ಟೇ ಅಲ್ಲ, ಚೀನಾದಿಂದ ಸಹಾಯ ಪಡೆಯುತ್ತಾ ಮತ್ತೊಂದು ನೆರೆಯ ಹೊರೆರಾಷ್ಟ್ರವಾಗುತ್ತಿದ್ದ ಶ್ರೀಲಂಕಾದಲ್ಲಿ ಕೂಡ ಬ್ಯಾಂಕ್ ವಂಚನೆ ಪ್ರಕರಣಗಳು ಭಯಾನಕ ಎನ್ನಿಸುವಷ್ಟರ ಮಟ್ಟಿಗೆ ಕುಸಿತ ಕಂಡಿವೆ. ಈ ಕುರಿತು ಪ್ರತಿಸ್ಫರ್ಧಿ ಪತ್ರಿಕೆಗಳು ಸಾಕಷ್ಟು ವರದ್ದಿ ಮಾಡಿವೆ. 

Follow ಬೊಗಳೆ-ರಗಳೆ On Facebook and Twitterಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಆದರೆ, ಭಾರತದಲ್ಲಿಯೂ ಸ್ವಲ್ಪ ಮಟ್ಟಿಗೆ ಬ್ಯಾಂಕ್ ವಂಚನೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದಂತೂ ಸತ್ಯವೇ. ಪಾಪಿಸ್ತಾನ ಮತ್ತು ಲಂಕೆಗಳಲ್ಲಿ ಈ ಕಾರಣಕ್ಕಾಗಿಯೇ ದಂಗೆ, ಹಿಂಸಾಚಾರ, ಅತ್ಯಾಚಾರ, ಅನಾಚಾರ ಹೆಚ್ಚಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇಷ್ಟೇ ಅಲ್ಲ, ಇತ್ತೀಚೆಗೆ ಬೊಗಳೆ ಬ್ಯುರೋದ ಸೊಂಪಾದಕ, ಓದುಗ, ವಿತರಕ ಎಲ್ಲವೂ ಆಗಿರುವ ಅನ್ವೇಷಿಯ ಖಾತೆಯಿಂದಲೂ ಹಣ ದಿಢೀರನೇ ಮಾಯವಾಗುವ ಪ್ರಕರಣಗಳು ಕಡಿಮೆಯಾಗಿವೆ. ಇದೇ ಕಾರಣಕ್ಕೆ ಇತ್ತೀಚೆಗೆ, "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಎಂಬ ಸಂ-ಚಲನಚಿತ್ರವನ್ನೇ ಮಾಡಲಾಗಿದೆ.

ಬ್ಯಾಂಕಿಂಗ್ ವಂಚನೆ ಪ್ರಕರಣವೇ ಇಡೀ ಜಗತ್ತಿನ ಅತ್ಯಂತ ಪ್ರಮುಖ ಆದಾಯ ಮೂಲಗಳಲ್ಲಿ ಒಂದು. ಇದರಲ್ಲಿಯೇ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಈ ವಹಿವಾಟಿಗೇ ಈಗ ದಿಢೀರ್ ಆಗಿ ಭರ್ಜರಿ ಸಂಖ್ಯೆಯಲ್ಲಿ ಈ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಕುಸಿದಿವೆ ಎಂದಾದರೆ, ಇದು ಶಾಂತಿಧೂರ್ತರ ಹೊಟ್ಟೆಪಾಡಿನ ಪ್ರಶ್ನೆ ಎಂಬುದನ್ನು ಅರಿತ ಬೊಗಳೆ ಬ್ಯುರೋದ ತನಿಖಾ ಪುತ್ರಕರ್ತರು, ಅಪರೂಪರಕ್ಕೆಂಬಂತೆ ಸತ್ಯಾಂಶವೊಂದನ್ನು ಪತ್ತೆ ಮಾಡಿದ್ದಾರೆ.

ಕಾರಣವೇನು ಎಂದರೆ, ಅದುವೇ! ಸಂಚಲನಚಿತ್ರದ ಹೆಸರು - ನಿಮ್ಮ ಖಾತೆಯಲ್ಲಿ ಹಣವೇ ಇಲ್ಲ! ಕೋವಿಡ್ ಕಾರಣದಿಂದಾಗಿ ಜಗತ್ತಿನ ಜನಸಾಮಾನ್ಯರನೇಕರು ಬೆಂದು ನೊಂದು, ಉಳಿತಾಯವನ್ನೆಲ್ಲ ಖಾಲಿ ಮಾಡಿಕೊಂಡಿದ್ದಾರೆ. ಹೀಗಾಗಿ, ಯಾರದ್ದೇ ಖಾತೆಗೆ ಕನ್ನ ಹಾಕಿದರೂ, ಒಂದೆರಡ್ರೂಪಾಯಿ ಮಾತ್ರ ಸಿಗುತ್ತಿತ್ತು! ಖಾತೆಯಲ್ಲಿ ಹಣವಿಲ್ಲದೇ ಇದ್ದರೆ, ವಂಚನೆ ಪ್ರಕರಣಗಳು ನಡೆಯುವುದಾದರೂ ಎಂತು? ಹೀಗಾಗಿ, ಜಗತ್ತಿನಾದ್ಯಂತ ಶಾಂತಿಧೂರ್ತರು, ಪಾತಕಿಸ್ತಾನ ಮೂಲದ ಭಯೋತ್ಪಾದಕರು, ವಂಚಕರು ಕಂಗೆಟ್ಟಿದ್ದಾರೆ ಎಂಬುದು ತನಿಖೆಯಿಂದ ಹೊರಬಿದ್ದ ಅಂಶ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಎಲ್ಲ ಬ್ಯಾಂಕುಗಳನ್ನು ಮುಚ್ಚಿಬಿಡುವುದೇ ಉಳಿದಿರುವ ಮಾರ್ಗ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದೇ ಹೌದು ಸುನಾಥರೇ. ಖಾತೆಯಲ್ಲಿ ಹಣವಿಲ್ಲದಿದ್ದರೆ ಖಾತೆ ಇದ್ದೇನು ಪ್ರಯೋಜನ. ಖಾತೆಯೇ ಇಲ್ಲದಿದ್ದರೆ ಬ್ಯಾಂಕುಗಳೂ ಬೇಕಾಗಿಲ್ಲ. ಹಣವನ್ನು ಖರ್ಚು ಮಾಡದಿದ್ದರೆ ಉಳಿತಾಯ ಆಗುವಂತೆ, ಜನರನ್ನೂ ಬಳಸಿಕೊಳ್ಳದಿದ್ದರೆ ಜನರ ಉಳಿತಾಯವೂ ಆಗುತ್ತದೆ.

      ಅಳಿಸಿ

ಏನಾದ್ರೂ ಹೇಳ್ರಪಾ :-D