ಬೊಗಳೆ ರಗಳೆ

header ads

ಕಲ್ಲು, ಇಟ್ಟಿಗೆ ತೂರಾಟ: ಅಮಾಯಕರನ್ನೇ ಬಂಧಿಸಲು ಆಗ್ರಹ😆

[ಬೊಗಳೂರು ತನಿಖಾ ಬ್ಯುರೋದಿಂದ]

ಬೊಗಳೂರು: ದೇಶದಾದ್ಯಂತ ಈಗ ರಾಮನವಮಿ, ಹನುಮಜ್ಜಯಂತಿ ಮುಂತಾದ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ, ಇಟ್ಟಿಗೆ ತೂರಾಟ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ, ಪ್ರಕರಣದಲ್ಲಿ ಅಮಾಯಕರನ್ನೇ ಬಂಧಿಸುವಂತೆ ಆಗ್ರಹ ಹೆಚ್ಚಾಗಿದೆ.

ಕರುನಾಟಕದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರು ಕೂಡ ಅಮಾಯಕರನ್ನು ಬಂಧಿಸಬಾರದೆಂದು ಖಡಾಖಂಡಿತವಾಗಿ ಮತ್ತು ಅಪರೂಪದ ಏಕತೆಯಿಂದ ಹೇಳಿರುವಾಗ, ಅವರನ್ನೇ ಬಂಧಿಸುವಂತೆ ಆಗ್ರಹ ಯಾಕೆ ಕೇಳಿಬರುತ್ತಿದೆ ಎಂಬುದರ ಕುರಿತು ಅಸತ್ಯಾನ್ವೇಷಣೆಯ ಏಕಸದಸ್ಯ ಬ್ಯುರೋದ ಸರ್ವರೂ ತನಿಖೆಗೆ ಸಿದ್ಧರಾದಾಗ ಸ್ಫೋಟಕ ಅಂಶ ಬಯಲಾಗಿದೆ.

Follow ಬೊಗಳೆ-ರಗಳೆ On Facebook and Twitter

ದೇಶದ ಬೀದಿ ಬೀದಿಗಳಲ್ಲಿ ಇತ್ತೀಚೆಗೆ ಕಲ್ಲುಗಳು ಕಾಲಿಗೆ ಎಡತಾಕುವುದು ಕಡಿಮೆಯಾಗುತ್ತಿದೆ. ನಡೆದು ಹೋಗುವಾಗ ಪಾದಚಾರಿಗಳಿಗೆಲ್ಲ ಈ ಕಲ್ಲುಗಳು ತೀರಾ ಅಡಚಣೆ ಉಂಟು ಮಾಡುತ್ತಿರುವುದರಿಂದ ಅವುಗಳಿಂದ ಜನರಿಗೆ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಕೆಲವೊಂದು ಆರೋಪಿಗಳು ಕಲ್ಲುಗಳನ್ನು ಸಂಗ್ರಹಿಸಿ, ಶೇಖರಿಸಿಟ್ಟುಕೊಂಡಿದ್ದರು. ಅವುಗಳು ಮುಂದಕ್ಕೆ ತಮ್ಮ ತಲೆ ತಲಾಂತರದ ಪೀಳಿಗೆಗೆ ಮನೆ ಕಟ್ಟುವುದಕ್ಕೆ ಉಪಯೋಗವಾದೀತು ಎಂಬ ದೂರದೃಷ್ಟಿ ತಮ್ಮದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲ್ಲುತೂರಾಟಗಾರರೊಬ್ಬರು ಬೊಗಳೆ ಬ್ಯುರೋಗೆ ತಿಳಿಸಿದ್ದಾರೆ.

ಮುಂದುವರಿದು ತನಿಖೆ ನಡೆಸಿದಾಗ, ದೇಶದಲ್ಲಿ ಅಪ್ರಾಮಾಣಿಕರು, ಅಸತ್ಯ ನುಡಿಯುವವರು, ಅಹಿಂಸಾ ಪ್ರವರ್ತಕರು, ಅಶಾಂತಿಕೋರರು, ಅಪ್ರಾಪ್ತ ವಯಸ್ಕರು.... ಹೀಗೆ ಇವರ ಸಾಲಿನಲ್ಲೇ 'ಅ'ದಿಂದ ಆರಂಭವಾಗುವ ಹೆಸರಿನವರಾದ 'ಅ'ಮಾಯಕರು ಇದ್ದಾರೆ. ಕಲ್ಲು ತೂರಾಟ ನಡೆಸಿ ಮಾಯಕ (ಮಾಯ) ಆಗುವುದೇ ಅವರ ಜಾಯಮಾನ. ಹೀಗಾಗಿ ಅಮಾಯಕರನ್ನೂ ಬಂಧಿಸಬೇಕೆಂದು ಬೊಗಳೂರು ಅಮಾಯಕರ ಸಂಘದ ಅಧ್ಯಕ್ಷ ಮಾಯಕ್ ಕುಮಾರ್ ಬೊಗಳೆ ಬ್ಯುರೋಗೆ ತಿಳಿಸಿದ್ದಾರೆ.

ಈ ಮಧ್ಯೆ, ಜಾರಕಾರಣಿಗಳನ್ನೇ ಈ ಕುರಿತು ಮಾತನಾಡಿಸಿದಾಗ ಮತ್ತೊಂದು ಆಯಾಮದ ಮಾಹಿತಿಯೂ ದೊರೆಯಿತು. ಅಮಾಯಕರನ್ನೇ ಬಂಧಿಸಬೇಕು ಎಂದು ಅವರು ಆಗ್ರಹಿಸುವುದಕ್ಕೆ ಕಾರಣ ತಿಳಿದುಬಂತು. ಒಂದು ಕುಮಾರಸ್ವಾಮಿ ಬಣದವರು ಮತ್ತು ಸಿದ್ದರಾಮಯ್ಯ ಬಣದವರು ಅಮಾಯಕರನ್ನು ಬಂಧಿಸಲೇಬಾರದು ಎಂದಿದ್ದಾರೆ. ಕುಮಾರಸ್ವಾಮಿ 'ಬಂಧಿಸಬಾರದು' ಅಂತ ಟ್ವೀಟ್ ಮಾಡಿದ ತಕ್ಷಣ ಎದುರಾಳಿ ಬಣದವರು, ಅದೇ ರೀತಿ ಸಿದ್ದರಾಮಯ್ಯ ಕೂಡ 'ಬಂಧಿಸಬಾರದು' ಅಂತ ಟ್ವೀಟ್ ಮಾಡಿದ ತಕ್ಷಣ ಅವರ ಎದುರಾಳಿ ಬಣದವರು 'ಬಂಧಿಸಬೇಕು' ಅಂತನೇ ಆಗ್ರಹಿಸತೊಡಗಿದರು. ಒಟ್ಟಿನಲ್ಲಿ ಅವರಿಬ್ಬರು ಹೇಳಿದ್ದನ್ನು ನಿಜ ಮಾಡಿಸಬಾರದು ಎಂಬುದು ಮೂರನೆಯವರಾದ ಮತ್ತು ಅವರೆಲ್ಲರ ಹಿತಶತ್ರುಗಳಾದ ನಮ್ಮೆಲ್ಲರ ಆಗ್ರಹ. ಅವರಿಬ್ಬರನ್ನೂ ರಾಜಕೀಯವಾಗಿ ವಿರೋಧಿಸುವ ನಾವು ಇದಕ್ಕಾಗಿಯೇ 'ಅಮಾಯಕರನ್ನೇ ಬಂಧಿಸಬೇಕು' ಅಂತ ಆಗ್ರಹಿಸುತ್ತಿರುವುದಾಗಿ ಪ್ರತ್ಯುತ್ಪನ್ನ ಪಕ್ಷದ ಮಂದಿ ಗುಟ್ಟಿನಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ಅವರು ಇವರ ಮೇಲೆ, ಇವರು ಅವರ ಮೇಲೆ ಕೆಸರು ಎರಚುವ ಪ್ರಕ್ರಿಯೆಗಾಗಿ ಅಮಾಯಕರನ್ನೇ ಬಂಧಿಸಬೇಕು, ಮತ್ತು ಅವರನ್ನು ಬಂಧಿಸಬಾರದು ಎಂಬ ವಿವಾದ ಭುಗಿಲೆದ್ದಿದೆ ಎಂಬುದನ್ನು ಬೊಗಳೆ ಬ್ಯುರೋ ತನಿಖೆಯ ವೇಳೆ ಕಂಡುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ʻಕಲ್ಲು ತೂರುವವರ ಸಂಘ (ರಿ)ʼ ಎನ್ನುವ ಸಂಘಟನೆಯ ಅಧ್ಯಕ್ಷರು ಇದೀಗ ಒಂದು ಹೇಳಿಕೆ ಕೊಟ್ಟಿದ್ದಾರೆ: ಕಲ್ಲು ತೂರಾಟವನ್ನು ಓಲಿಂಪಿಕ್ಸ ಸ್ಪರ್ಧೆಯಲ್ಲಿ ಸೇರಿಸಲು ನಾವು ಆಗ್ರಹಿಸುತ್ತಿದ್ದೇವೆ. ಅದಕ್ಕಾಗಿ ಈಗಿನಿಂದಲೇ ನಾವು ನಮ್ಮ ತೂರಾಳುಗಳಿಗೆ ತರಬೇತಿಯನ್ನು ನೀಡುತ್ತಿದ್ದೇವೆ. ಇವರೆಲ್ಲರೂ ಅಮಾಯಕರೇ ಆಗಿರುವುದರಲ್ಲಿ ಸೋಜಿಗವೇನಿಲ್ಲ ! ನಮ್ಮ ಸಂಘದ ಘೋಷವಾಕ್ಯ ಹೀಗಿದೆ : ʻಎಲ್ಲಿ ಎಲ್ಲಿ ಕಲ್ಲḷ ಅಲ್ಲಿ ಅಲ್ಲಿ ನಾವು!"

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುನಾಥರೇ, ಕಲ್ಲು ತೂರಾಟಗಾರರನ್ನೇ ಪಾಕ್ ಜೊತೆಗೆ ಮುಂಚೂಣಿ ಯುದ್ಧರಂಗಕ್ಕೆ ಕಳಿಸುವುದಾಗಿ ಜಾತ್ಯತೂತರು ಹೇಳುತ್ತಿದ್ದಾರಂತಲ್ಲಾ...

      ಅಳಿಸಿ

ಏನಾದ್ರೂ ಹೇಳ್ರಪಾ :-D