ಬೊಗಳೂರು, ಜೂ.30- ತಮ್ಮ ಖಾಸಗಿ ವೃತ್ತಿ ಬದುಕಿನ ಹೂರಣಗಳನ್ನೆಲ್ಲಾ ಬಯಲಿಗೆಳೆದು ಆಗಾಗ್ಗೆ ಅಪಮಾನ ಮಾಡುತ್ತಿರುವ ಮತ್ತು ಕೈಯಲ್ಲಿ ಕೋಲು ಹಿಡಿದುಕೊಂಡು ತಮ್ಮನ್ನೆಲ್ಲಾ ಆಟವಾಡಿಸುತ್ತಿರುವ ಕೋಲಾಯುಕ್ತರ ವಿರುದ್ಧ ಆಸ್ತಿ ಲೆಕ್ಕಿಗ, ಕೈ-ಆಭರಣ-ಗಾರಿಕಾ ಅಧಿಕಾರಿ, ಮತ್ತು ಗುಪ್ತವಾಗಿ ಚಲಿಸುತ್ತಿರುವ ಅಧಿಕಾರಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.
ಪ್ರಥಮಂ ಲೆಕ್ಕಿಗಂ...ಚ
ಈತ ಕುಗ್ರಾಮದಲ್ಲೂ "ಆಸ್ತಿ" ಎಲ್ಲಿ ಸಿಗುತ್ತದೆ ಎಂದು ಗುರುತಿಸಬಲ್ಲ ಗ್ರಾಮ ಲೆಕ್ಕಿಗ.
ಕೋಲಾಯುಕ್ತರಿಂದ ಎಲ್ಲ ಬಹಿರಂಗ ಮಾಡಿಸಿಕೊಂಡ ಮತ್ತು 10 ಕೋಟಿ ರೂ. ಕಕ್ಕಿದ ಪ್ರಥಮ ಮಿಕದ ಪ್ರಾಥಮಿಕ ಆಲಾಪ. ಆತನದೇ ಮಾತುಗಳಲ್ಲಿ ಕೇಳಿದಾಗ:
"ನಾನು ನಿಜಕ್ಕೂ ಸರಕಾರಿ ಹುದ್ದೆಯಲ್ಲಿಲ್ಲ. ಗ್ರಾಮ ಲೆಕ್ಕಿಗ ಹುದ್ದೆ ಸಿಕ್ಕಿದೆ, ಕೆಲಸ ಮಾಡದಿದ್ದರೂ ಸಂಬಳ ಅದರ ಪಾಡಿಗೆ ಬರುತ್ತಿರುತ್ತದೆ. ನಾನೇನಿದ್ದರೂ ಆ ಗ್ರಾಮದಲ್ಲಿ ಎಷ್ಟು ಮಂದಿ ಹಣ ಕೊಡುವವರಿದ್ದಾರೆ ಅಂತ ಲೆಕ್ಕ ಹಾಕುವ ಒಬ್ಬ ಸಾಮಾನ್ಯ ಲೆಕ್ಕಿಗ. ಗ್ರಾಮ ಲೆಕ್ಕಿಗ ಅಂತ ನನ್ನನ್ನು ತಪ್ಪಾಗಿ ಕರೆಯಲಾಗುತ್ತದೆ. ನಾನು ಗ್ರಾಮದಲ್ಲಿ ಎಷ್ಟು ಲಂಚ ದೊರೆಯಬಹುದು ಎಂದು ಲೆಕ್ಕ ಹಾಕುವ ಬರೇ ಲೆಕ್ಕಿಗ. ಆದುದರಿಂದ ಸರಕಾರಿ ಅಧಿಕಾರಿ ಅಂತ ನನ್ನ ಮೇಲೆ ದಾಳಿ ಮಾಡಿದ್ದು ಅಕ್ಷಮ್ಯ ಅಪರಾಧ."
ದ್ವಿತೀಯಕಂ....
ಈತ 8 ಕೋಟಿ ಕಕ್ಕಿದ ಗುಪ್ತಚರ ಇಲಾಖೆ ಅಧಿಕಾರಿ. ಆತನ ಮಾತುಗಳಲ್ಲಿ:
"ಮೊದಲ ವಾಕ್ಯ ನನ್ನದೂ ಲೆಕ್ಕಿಗ ಮಹಾಶಯರು ಹೇಳಿದ್ದೇ ಡಿಟ್ಟೋ. ಎರಡನೇ ವಾಕ್ಯದಲ್ಲಿ ಹುದ್ದೆಯ ಹೆಸರು ಮಾತ್ರ ಬದಲು. ಮುಂದಿನದು ಹೇಳುತ್ತಿದ್ದೇನೆ-ಕೇಳಿ. ಅಬಕಾರಿ ಇಲಾಖೆ ಅಂತ ಸರಕಾರ ಹುದ್ದೆ-ಸಂಬಳ ಕೊಡುತ್ತಿದ್ದರೂ, ನಾನು ಅಬಕಾರಿ ಬದಲು ನನ್ನದೇ ಆದ ಲಾಭಕಾರಿ ಹುದ್ದೆ ಆಯ್ದುಕೊಂಡಿದ್ದೇನೆ. ಎಲ್ಲೆಲ್ಲಾ ಲಂಚವೆಂಬ ಅಮೂಲ್ಯ ನಿಧಿ ದೊರೆಯುತ್ತದೆ ಅಂತ ಗುಪ್ತವಾಗಿ ತಿರುಗಾಡುತ್ತಾ ಮಾಹಿತಿ ಸಂಗ್ರಹಿಸುವುದು. ಇತರ ಅಧಿಕಾರಿಗಳಿಗೆ ವರದಿ ಸಲ್ಲಿಸುವುದು- ಅದೇ ಈ (ಎದೆ ತಟ್ಟಿಕೊಳ್ಳುತ್ತಾ) ಗುಪ್ತಚರನ ಕೆಲಸ"
ತೃತೀಯೋಧ್ಯಾಯಃ
ಈತ ಕೇವಲ 6 ಕೋಟಿ (ನುಂಗಿ) ವಾಂತಿ ಮಾಡಿದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿ.
"ಮೊದಲ ಮೂರು ವಾಕ್ಯಗಳು ನನ್ನದೂ ಡಿಟ್ಟೋ... ಕೈಗಾರಿಕೆ ಅಂದ್ರೆ ಕೈಗೆ ಚಿನ್ನಾಭರಣ ಸೇರಿಸಿಕೊಳ್ಳುವ ಕೈ-ಸೊಗಸುಗಾರಿಕೆ ಅನ್ನೋದು ನನ್ನ ಖಚಿತ ವಾದ. ಅಂತೆಯೇ ನನ್ನ, ಹೆಂಡತಿ ಮಕ್ಕಳ ಕೈಗಳನ್ನು ಚಿನ್ನ, ಹಣ ಇತ್ಯಾದಿಗಳಿಂದ ಅಲಂಕರಿಸಿ ಅಭಿವೃದ್ಧಿ ಮಾಡುವುದೇ ನನ್ನ ವೃತ್ತಿಯ ಧ್ಯೇಯ. ಸರಕಾರ ಅಭಿವೃದ್ಧಿ ಮಾಡಲು ಹೇಳಿದೆ. ಯಾವುದನ್ನು ಅಂತ ಸ್ಪಷ್ಟವಾಗಿ ಹೇಳಿಲ್ಲ. ಇದಕ್ಕಾಗಿ ಕೈಗಳನ್ನು ಮಾತ್ರ ಅಲಂಕರಿಸಿ ಅಭಿವೃದ್ಧಿಪಡಿಸಿದ್ದೇವೆ. ಆದುದರಿಂದ ನಾನು ಆಡಿದ್ದೇ ಆಟ, ಹಾಡಿದ್ದೇ ರಾಗ, ಆದರೆ ಈಗ ಓಡಿದ್ದೇ ಓಟ ಆಗಲು ಕೋಲಾಯುಕ್ತರು ಬಿಡುತ್ತಿಲ್ಲ."
ಇತಿ ಅಸಂಪೂರ್ಣಂ....
"ನಮ್ಮ ವೃತ್ತಿಯನ್ನೆಲ್ಲಾ ಕೋಲಾಯುಕ್ತರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಮಾತ್ರವಲ್ಲ ಕೇವಲ ಇಷ್ಟು ಮೊತ್ತದ ಆಸ್ತಿ ಬಹಿರಂಗ ಪಡಿಸಿ ನಾವು ಅಷ್ಟೇನೂ ಶ್ರೀಮಂತರಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟು, ಜನರೆದುರು ನಮ್ಮನ್ನು ಸಣ್ಣವರನ್ನಾಗಿ ಮಾಡಿದ್ದಾರೆ. ಅವರಿಗೆ ಲಂಚದ ಅಆಇಈ ಕಲಿಸುತ್ತೇವೆ" ಎಂಬುದು ತ್ರಿಮೂರ್ತಿಗಳ ಒಕ್ಕೊರಳಿನ ಅರಚಾಟ.
8 ಕಾಮೆಂಟ್‌ಗಳು
ಕೋಲಾಯುಕ್ತರಿಗೆ ಲಂಚಿಗರು ಕೇಲಾ ತಿನ್ನಿಸಿರಲಿಲ್ಲ ಅನ್ಸತ್ತೆ. ಅದಕ್ಕೇ ಅವರು ಲಂಚಿಗರಿಗೆ ತಿರುಗಿ ಬಿದ್ದದ್ದು. ಮುಂದೆ ಬರುವ ಕೋಕಾಯುಕ್ತರು ಹೇಗಿರುತ್ತಾರೋ ನೋಡೋಣ.
ಪ್ರತ್ಯುತ್ತರಅಳಿಸಿಮೂರು ಅಧ್ಯಾಯಗಳನ್ನು ಕರುಣಿಸಿದ್ದೀರಿ. ಇನ್ನೂ ಹದಿನೈದು ಬರಬೇಕು . ಕಾಯ್ತಿದ್ದೀನಿ. ಕೊನೆಯ ನನ್ನ ಅಧ್ಯಾಯವನ್ನು ಪ್ರತಿಕ್ರಿಯೆಯಾಗಿ ಬರೆಯುವೆ.
ಕೋಲಾಯುಕ್ತರಿಗೆ ಕೇಲಾ ತಿನ್ನಿಸಿದರೂ ಅವರು ತೆಗೆದುಕೊಳ್ಳದೆ, ಏನ್ಲಾ ಎಂದು ಕೇಳಿದ್ರೆ ಮತ್ತೇನು ಮಾಡಲಾದೀತು?
ಪ್ರತ್ಯುತ್ತರಅಳಿಸಿಇದು ಮುಗಿಯದ ಅಧ್ಯಾಯಗಳಿರುವ ಧಾರಾವಾಹಿಯಾದುದರಿಂದ ನಿಮ್ಮ ಪ್ರತಿಕ್ರಿಯೆಗೆ ಅವಕಾಶವಿರದು.
ಈ ಲಂಚಾನುನಾಯಿಗಳ ನಿತ್ಯಪ್ರಾರ್ಥನೆಯ ವಿಷಯ ಬಹುಶಃ ಅನ್ವೇಷಿಗಳ ಗಮನಕ್ಕೆ ಬಂದಿಲ್ಲ. ಆ ನಿತ್ಯಪ್ರಾರ್ಥನೆಯ ಪೂರ್ಣಪಾಠವನ್ನು ಅನ್ವೇಷಿಗಳ ಮತ್ತು ಬೊಗಳೆರಗಳೆಪೀಡಿತರ ಗಮನಕ್ಕಾಗಿ ಇಲ್ಲಿ ಕೊಡಲಾಗಿದೆ:
ಪ್ರತ್ಯುತ್ತರಅಳಿಸಿಅಸ್ಯ ಶ್ರೀ ಲಂಚಾಷ್ಟಕ ಸ್ತೋತ್ರ ಮಂತ್ರಸ್ಯ ಲಕ್ಷ್ಮೀ ದಾಸ ಋಷಿಃ ಭ್ರಷ್ಟರಾಜಕಾರಣೀ ದೇವತಾ ಪರಿಕಲ್ಪಿತ ಛಂದಃ ಗುಳುಂ ಗುಳುಂ ಬೀಜಮ್ ಬ್ರೀಫ್‌ಕೇಸ್ ಇತಿ ಕೀಲಕಮ್ ಸಕಲ ಸುಖ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ಭ್ರಷ್ಟಪುಢಾರಿ ಪೋಷಿತ ಲಂಚಮ್
ಕೋಮಲ ಕರಗಳ ಶೋಭಿತ ಲಂಚಮ್ |
ಸಕಲರ ದುಃಖ ನಿವಾರಕ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ಮಂತ್ರಿ ಕುತಂತ್ರಿ ಸುಪೂಜಿತ ಲಂಚಮ್
ದಾಹ ದಹನ ಕರುಣಾಕರ ಲಂಚಮ್ |
ಕಾರ್ಯಸಿದ್ಧಿಯ ಮಾಡುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ಕಟ್ಟಿದ ಕಡತವ ಬಿಚ್ಚುವ ಲಂಚಮ್
ಮೇಜಿನ ಕೆಳಗಡೆ ಕಾಣುವ ಲಂಚಮ್ |
ಕೈಬಿಸಿಯೆಂಬ ಕ್ಯಾಟಲಿಸ್ಟ್ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ರಸ್ತೆಯ ಕಾಂಕ್ರೀಟ್ ನುಂಗುವ ಲಂಚಮ್
ಆಸ್ತಿ ಹರಾಜು ತಡೆಯುವ ಲಂಚಮ್ |
ವಸ್ತು ನಿಷ್ಟರಿಗೆ ಕಂಟಕ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ಬೋಫೋರ್ಸ್ ತೋಪಿನ ಬುಲ್ಲೆಟ್ ಲಂಚಮ್|
ಹರ್ಷದ್ ಮೆಹ್ತಾ ಸೂಟ್‌ಕೇಸ್ ಲಂಚಮ್
ಜಾಖಂಡ್ ಮುಕ್ತಿ ಮೋರ್ಚಾ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ಸರ್ವ ಸುಗಂಧಿ ಸುಲೇಪಿತ ಲಂಚಮ್
ಬುದ್ಧಿ ವಿನಾಶನ ಕಾರಣ ಲಂಚಮ್ |
ಸಿದ್ಧ ಸುರಾಪ್ರಿಯ ವಂದಿತ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್||
ಯುಗ ಬದಲಾದರೂ ಬಗ್ಗದ ಲಂಚಮ್
ಜಗ ಬದಲಾದರೂ ಜಗ್ಗದ ಲಂಚಮ್ |
ಯುಗ ಜಗವನ್ನೇ ನುಂಗಿದ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್ ||
ಯಃ ಪಾಲಿಸೇ ಲಂಚಾಷ್ಟಕಮಿದಂ ನಿತ್ಯಂ ಸರ್ವ ಬಿಲ್ಲುಂ ಪಾಸಾಯಣಂ |
ಯಃ ಲಾಲಿಸೇ ಲಂಚಾಷ್ಟಕಮಿದಂ ಸತ್ಯಂ ಸರ್ವ ಗುಲ್ಲುಂ ನಿವಾರಣಂ ||
ಇತಿ ಶ್ರೀ ಲಂಚಾಷ್ಟಕ ಸ್ತೋತ್ರಂ ಸಂಪೂರ್ಣಂ
ಜೋಷಿಯವರೇ,
ಪ್ರತ್ಯುತ್ತರಅಳಿಸಿಹ್ಹಹ್ಹಹ್ಹಹ್ಹಹ್ಹಹ್ಹಹ್ಹಹ್ಹಾ.......ಹಹ್ಹಹಹ್ಹಹಹ್ಹಹ್ಹ
ಇಡೀ ಬೊಗಳೆ ರಗಳೆ ಬ್ಯುರೋವನ್ನೇ ನಗೆ ಸ್ಫೋಟದಿಂದ ನಡುಗಿಸಿ ಬಿಟ್ಟಿರಿ ನಿಮ್ಮ ಲಂಚಾಷ್ಟಕ ಸ್ತೋತ್ರದಿಂದ.
ನಿಮ್ಮ ಸರ್ವ ಬಿಲ್ಲುಗಳೂ ಪಾಸಾಗಲಿ ಈ ಸ್ತೋತ್ರಪಠಣದಿಂದ ಎಂಬುದು ನಮ್ಮ "ಪೀಡಿತ"ರಿಗೆ ಸಂದೇಶವೋ ಇದು?
ಇಲ್ಲಿ ಮಾಮಿ ಯಾರದ್ದು ಅಂತ ನಮ್ಮ ಲಂಚಾನು-ನಾಯಿಗಳಿಗೆ ಅರ್ಥವಾಗಿಲ್ಲ ಅಂತ ಫೋನ್ ಕರೆಗಳು ಬಂದಿವೆ.
"ಮಾಮಿ" ಯಾರೆಂದು ಗೊತ್ತಾಗದೇ ತಲೆಬಿಸಿ ಮಡಿಕೊಂಡವರು ಅಥವಾ ಮುಖಕೆಂಪು ಮಾಡಿಕೊಂಡವರು ಇಮಾಮಿ ಕೋಲ್ಡ್ ಕ್ರೀಮ್ ಹಚ್ಚಿಕೊಳ್ಳಬೇಕೆಂದು ಕೋರಲಾಗಿದೆ.
ಪ್ರತ್ಯುತ್ತರಅಳಿಸಿಜೋಶಿಯವರೇ, ನಿಮ್ಮ ಲಂಚಾಷ್ಟಕ ಸ್ತೋತ್ರಕ್ಕೆ ಸರಕಾರಿ ಕಚೇರಿಗಳಿಂದ ದೊಡ್ಡ ಸಂಖ್ಯೆಯ ಆರ್ಡರ್ ಬರಲಿದೆ, ಪ್ರತಿಗಳನ್ನು ತಯಾರಿಸಿ ಇಟ್ಟುಕೊಳ್ಳಿ :)
ಪ್ರತ್ಯುತ್ತರಅಳಿಸಿಜೋಷಿಯವರೆ,
ಪ್ರತ್ಯುತ್ತರಅಳಿಸಿನಿಮ್ಮ e-ಮಾಮಿಗೆ ಮೇಲ್ ಮೇಲ್ ಇ-ಮೇಲ್ ಕಳಿಸಿದ್ರೂ ಸ್ವೀಕರಿಸ್ತಿಲ್ವಂತೆ.
ಶ್ರೀ ತ್ರೀ ಅವರೆ,
ಪ್ರತ್ಯುತ್ತರಅಳಿಸಿದೊಡ್ಡ ದೊಡ್ಡ ಆರ್ಡರ್ ಬರಲಿವೆ ಎಂಬ ಕಟುವಾದ ಎಚ್ಚರಿಕೆ ನೀಡಿದ್ದೀರಿ. ಆದ್ರೆ ಅದರಲ್ಲಿ ಬರೋ ಲಾಭ ಮಾತ್ರ ಬೊಗಳೆ ಬ್ಯುರೋಗೆ. ಯಾಕಂದ್ರೆ ಈಗ ಅದು ಬೊಗಳೆ ಬ್ಯುರೋದ
Pay-ಟೆಂಟ್!
ಏನಾದ್ರೂ ಹೇಳ್ರಪಾ :-D