[ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ]
ಬೊಗಳೂರು: ದೇಶ ಕಂಡ ಅಪ್ರತಿಮ ಮುತ್ಸದ್ಧಿ, ರಾಜಕಾರಣಿ ಹಾಗೂ ಮಾಜಿ ರಾಷ್ಟ್ರಪತಿ, 'ಭಾರತ ರತ್ನ' ಪ್ರಣಬ್ ಮುಖರ್ಜಿ ಅವರ ನಿಧನ ತುಂಬಲಾರದ ನಷ್ಟ. ಆದರೆ, ಈ ಸಂದರ್ಭದಲ್ಲಿ ರಜೆ ಕೊಡದಿರುವುದಕ್ಕೆ ಅಖಿಲ ಭಾರತ ಅಂಗನವಾಡಿ ಬಾಲಕರುಗಳ ಸಂಘ, ಅಖಿಲ ಭಾರತ ಹಿರಿ ಕಿರಿಯ ವಿದ್ಯಾರ್ಥಿಗಳ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿವೆ.
ಕೊರೊನಾ ಕಾಲದಲ್ಲಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇದ್ದೂ ಇದ್ದೂ ಬೋರಾಗಿದೆ. ಈ ಸಂದರ್ಭದಲ್ಲಾದರೂ ರಜೆ ಘೋಷಿಸಬಹುದಿತ್ತು ಎಂದು ಅಂಗನವಾಡಿ ವಿದ್ಯಾರ್ಥಿಗಳ ರಾಷ್ಟ್ರೀಯ ಅಧ್ಯಕ್ಷರಾಗಿರುವ ವಾರದರಜೆ ಕುಮಾರ್ ಅವರು ಕಿಡಿ ಕಾರಿದ್ದಾರೆ.
ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರೆದುರು ಆನ್‌ಲೈನ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು, ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಾದರೂ ರಜೆ ಇಲ್ಲ. ಈಗ ಮನೆಯಲ್ಲಾದರೂ ರಜೆ ನೀಡಬೇಕಿತ್ತು ಎಂದು, ಅಂಗನವಾಡಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಪಡಿಪಾಟಲುಗಳನ್ನು ಮುಂದಿಟ್ಟಿದ್ದಾರೆ.
ಮೂರೂ ಹೊತ್ತು ಸರಿಯಾದ ಸಮಯಕ್ಕೇ ಊಟ ಮಾಡಬೇಕಾಗುತ್ತದೆ, ಶಾಲೆಯಲ್ಲಿರುವಂತೆ ಹಗಲು ನಿದ್ದೆ ಮಾಡಲು ಅವಕಾಶ ನೀಡುವುದಿಲ್ಲ, ಅಂಗನವಾಡಿಯಲ್ಲಿ ದೊರೆಯುವ ಸಜ್ಜಿಗೆಯೂ ಸಿಗುತ್ತಿಲ್ಲ. ಅಕ್ಕ ಪಕ್ಕದವರ ಚಡ್ಡಿ ಅಥವಾ ಲಂಗ ಎಳೆಯುವ ಅವಕಾಶವೂ ಇಲ್ಲ. ಅಭ್ಯಾಸ ಬಲದಲ್ಲಿ ಏನಾದರೂ ಅಣ್ಣನ ಚಡ್ಡಿ ಎಳೆದರೆ, ಆನ್‌ಲೈನ್ ತರಗತಿಯಲ್ಲಿ ಮಗ್ನರಾಗಿರುವ ಆತ ರಪ್ಪನೇ ಬಾರಿಸಿಬಿಡುತ್ತಾನೆ ಎಂದು ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ.
ಇಡೀ ದಿನ ಅಣ್ಣ, ಅಕ್ಕ ಎಲ್ಲರೂ ಮೊಬೈಲ್ ಫೋನ್ ಅಥವಾ ಕಂಪ್ಯೂಟರಿನಲ್ಲಿ ಮುಳುಗಿರುತ್ತಾರೆ. ನಮಗಂತೂ ಗೇಮ್ ಆಡುವುದಕ್ಕೆ ಅವಕಾಶವೇ ನೀಡುವುದಿಲ್ಲ. ಅಪ್ಪ ಅಮ್ಮಂದಿರುವ ಕಣ್ಣೀರ ಧಾರಾವಾಹಿಗಳಲ್ಲಿ ಪುನಃ ಮಗ್ನರಾಗಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ನಾವೇನಾದರೂ ಕೇಳಿದರೆ ಸಿಡಿದು ಬೀಳುತ್ತಾರೆ. ಹೀಗಾಗಿ ಮನರಂಜನೆಯೇ ಇಲ್ಲವಾಗಿಬಿಟ್ಟಿದೆ ಎಂದು ಅಂಗನವಾಡಿ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ದಿನಾ ರಜಾ ಕುಮಾರ್ ಹೇಳಿದ್ದಾರೆ.
ಕೋವಿಡ್ ದಿನಗಳಾದುದರಿಂದ ಶಾಲೆ ಹೇಗೂ ಇಲ್ಲ. ಮನೆಗಾದರೂ ರಜೆ ಘೋಷಿಸಬೇಕಿತ್ತಲ್ಲಾ? ಇದು ಶಿಕ್ಷಣ ಇಲಾಖೆಯ ತಪ್ಪಲ್ಲವೇ ಎಂದು ಅವರು ಕೇಳಿದ್ದಾರೆ. ನಾವು ಶಾಲೆಗೆ ಹೋಗಿ ಆದರೂ ಪ್ರಣಬ್‌ದಾ ಅವರ ನಿಧನದಿಂದಾಗಿ ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳಲು ಈ ರಜೆಯನ್ನು ಬಳಸಿಕೊಳ್ಳುತ್ತಿದ್ದೆವು ಎಂದು ಅವರು ಯೋಜನೆಯನ್ನು ಮುಂದಿಟ್ಟಿದ್ದಾರೆ.
ಈ ಕುರಿತು ಮಕ್ಕಳ ಬಗ್ಗೆ ಅತ್ಯುತ್ತಮ ಕಾಳಜಿ ವಹಿಸುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಶಿಕ್ಷಣ ಇಲಾಖೆಯಿಂದ ತಕ್ಷಣ ಆದೇಶವೊಂದನ್ನು ಹೊರಡಿಸಿ, ಪುಟ್ಟ ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಈ ಪುಟ್ ಪುಟಾಣಿಗಳು ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
2 ಕಾಮೆಂಟ್‌ಗಳು
Good to see ಬೊಗಳೆ-ರಗಳೆ active again! :)
ಪ್ರತ್ಯುತ್ತರಅಳಿಸಿಸ್ವರ್ಗಾರೋಹಣ ಪರ್ವದಲ್ಲಿರುವ ಎಲ್ಲಾ ಹಿರಿಯ ಮುತ್ಸುದ್ದಿಗಳಿಗಾಗಿ, ಒಂದು ತಿಂಗಳ ರಜಾ-packageಅನ್ನು ಮುಂಗಡವಾಗಿ ಘೋಷಿಸುವುದು ಒಳ್ಳೆಯದು!
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D