[ಬೊಗಳೆ ಮಧ್ಯರಾತ್ರಿ ಬ್ಯುರೋದಿಂದ]
ಬೊಗಳೂರು: ದೇಶದಾದ್ಯಂತ ಭಾರಿ ಸದ್ದು ಮಾಡಿದ್ದ ಬೊಗಳೂರು ಗಲಭೆ ಪ್ರಕರಣದ ಮೂಲ ಕಾರಣ ಪತ್ತೆಯಾಗಿದ್ದು, ಇದೊಂದು ಭಾರಿ ಸ್ಫೋಟಕ ಸುದ್ದಿ ಎಂದು ಏಕಸದಸ್ಯ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಗಳು ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಸಾರಿ ಸಾರಿ ಹೇಳಲಾರಂಭಿಸಿದ್ದಾರೆ.
ಇತ್ತೀಚೆಗೆ ಬೊಗಳೂರು ಗಲಭೆ, ದೊಂಬಿ ಸುದ್ದಿಗಳನ್ನು ಕನ್ನಡದ ಟಿವಿ ವಾಹಿನಿಗಳು ಭಾರಿ ಸ್ಫೋಟಕ, ಸಂಚು, ಭಯಾನಕ, ಆತಂಕಕಾರಿ ಎಂಬಿತ್ಯಾದಿ ಪದಗಳಿಂದ ವರ್ಣಿಸುವುದರ ಮಧ್ಯೆ, ಅವರ ವರದಿಯಿಂದಲೇ ಸ್ಫೋಟಕ ಸುದ್ದಿಯೊಂದು ಬೊಗಳೆ ಬ್ಯುರೋಗೆ ಗೊತ್ತಾಗಿ, ಇಂಟರ್ನೆಟ್ ಕೂಡ ಸ್ಫೋಟಗೊಂಡಿದೆ.
ಎಲ್ಲದಕ್ಕೂ ಕಾರಣ ಒಂದು ಕಟ್ಟು ಕೊತಿಮಿರಿ ಸೊಪ್ಪು ಎಂಬ ಸ್ಫೋಟಕ ಸುದ್ದಿಯನ್ನು ಕ್ಯಾಮೆರಾ ಎದುರು ಕೂಲ್ ಆಗಿ ಹೇಳಿರುವ ಅಮಾಯಕ ಮಹಿಳೆಯಿಂದ ಕೇಜೀ ಹಳ್ಳಿ ಡೀಜೇ ಹಳ್ಳಿಗಳ ಗಲಭೆಗೆ ಹೊಸ ತಿರುವು ಸಿಕ್ಕಿದೆ.
ಅಣ್ಣ ಮಧ್ಯರಾತ್ರಿ 1 ಗಂಟೆಗೆ ಕೊತಿಮಿರಿ ತರಕ್ಕೆ ಹೋಗಿದ್ದು, ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಆಕೆ ಹೇಳಿದ್ದಳು. ಈ ಸುದ್ದಿ 'ಸ್ಫೋಟ' ಆಗುತ್ತಿರುವಂತೆಯೇ, ಕೊತಿಮಿರಿ ಏನೆಂಬುದರ ಬಗ್ಗೆ ಸಾಕಷ್ಟು ಸಂಚೋದನೆಗಳು ಅಂತರಜಾಲದಲ್ಲಿ ನಡೆಯಲಾರಂಭಿಸಿದವು.
ಬಹುಶಃ ತಾವು ಸಾಕಿದ್ದ ಕೋತಿ ಮರಿಯನ್ನು ಆತ ಮಧ್ಯರಾತ್ರಿ ಹುಡುಕಲು ಹೋಗಿರಬೇಕು, ಇದು ಬಾಯಿ ತಪ್ಪಿ ಕೊತಿಮಿರಿ ಅಂತ ಆಕೆ ಗಡಿಬಿಡಿಯಿಂದ ಹೇಳಿರಬಹುದು ಎಂಬುದು ಒಂದು ವಾದವಾದರೆ, ಶಾಸಕರ ಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಟ್ಟು ಹುಡುಕಲು ಹೋದವರು, ಫ್ರಿಜ್‌ನಲ್ಲೂ ಹುಡುಕಾಡಿ, ಸಿಗದೆ ಹತಾಶರಾಗಿ ಬೆಂಕಿ ಹಚ್ಚಿ ಬಂದಿರಬಹುದು ಎಂಬುದು ಮತ್ತೊಂದು ವಾದ.
ಅದು ಕೊತ್ತುಮಿರಿ ಸೊಪ್ಪು ಅಲ್ಲ, ಬಹುಶಃ ಹೊತ್ತು ಮೀರಿ ಸೊಪ್ಪು ತರಲು ಹೋಗಿದ್ದಾನೆ ಎಂದು ಆಕೆ ಹೇಳಿರುವ ಸಾಧ್ಯತೆಗಳಿವೆ ಎಂದೂ ಪೊಲೀಸರು ತರ್ಕಿಸಿದ್ದಾರೆ.
ಇದರ ನಡುವೆಯೇ, ದಿಢೀರನೇ ಎಚ್ಚೆತ್ತುಕೊಂಡಿರುವ ಕಾಗೆ ಹಾರಿಸುವ ದ್ರೋಣ್ ಪ್ರತಾಪ್, ಒಂದು ಮಾತ್ ನನ್ನಲ್ಲಿ ಹೇಳಿದ್ರೆ, ಒಂದು ಗಂಟೆಯಲ್ಲೇ ಕೊತ್ತಂಬರಿ ಸೊಪ್ಪು ತರಿಸೋ ದ್ರೋಣ್ ವ್ಯವಸ್ಥೆ ಮಾಡ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ರಾತ್ರಿ ಒಂದು ಗಂಟೆಯೋ ಅಥವಾ ಒಂದು ಗಂಟೆಯೊಳಗೋ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಈ ಅಮಾಯಕನೊಬ್ಬ ಮಧ್ಯರಾತ್ರಿ ಕೊತ್ತಂಬರಿ ಸೊಪ್ಪನ್ನೇ ತರೋದಿಕ್ಕೆ ಹೋಗಿದ್ದು, ಆತ ಸಿಗದೆ ಹತಾಶನಾಗಿ ಮರಳುತ್ತಿರುವಾಗ, ಆತನ ಎಲ್ಲ ಸ್ನೇಹಿತರೂ ಸೇರಿಕೊಂಡು, ಮಚ್ಚು, ಲಾಂಗ್, ಸ್ಟೀಲ್ ರಾಡ್, ಬೆಂಕಿ ಇತ್ಯಾದಿ ಎಲ್ಲವನ್ನೂ ಹಿಡಿದುಕೊಂಡು, ಕೊತ್ತಂಬರಿ ಸೊಪ್ಪು ಕಡಿಯಲು ಹೊರಟಿದ್ದರು ಎಂಬ ಅಂಶವೂ ಬೊಗಳೆ ತನಿಖೆಯ ವೇಳೆ ಬಯಲಾಗಿದೆ.
ತತ್ಪರಿಣಾಮವಾಗಿ, ಕೊತ್ತಂಬರಿ ಸೊಪ್ಪು ಮಧ್ಯರಾತ್ರಿ ಸ್ಫೋಟಗೊಂಡ ಬಳಿಕ, ಬೊಗಳೂರಿನ ಬೀದಿ ಬೀದಿಗಳಲ್ಲಿ ಗಾಡಿಯಲ್ಲಿ ತರಕಾರಿ ಮಾರುವವರು ಮರುದಿನ ಬೆಳಿಗ್ಗೆ ಯಾರ ಬಾಯಲ್ಲೂ ಕೊತ್ತಮರಿ ಸೊಪ್ಪು ಎಂಬ ಉದ್ಗಾರವೇ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಪ್ರಧಾನ ಕಾರಣ, ಹಿಂದಿನ ದಿನವೇ ಕೊತ್ತಂಬರಿ ಸೊಪ್ಪಿಗೆ ಡಿಮ್ಯಾಂಡ್ ಜಾಸ್ತಿಯಾಗಿ, ರೇಟ್ ಕೂಡ ಹೆಚ್ಚಾಗಿದ್ದಷ್ಟೇ ಅಲ್ಲದೆ, ಮಾರಾಟಕ್ಕೂ ಸಿಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಮಧ್ಯರಾತ್ರಿ ಕೊತ್ತಂಬರಿ ಸೊಪ್ಪನ್ನು ವಿದೇಶದಿಂದ ಆಮದು ಮಾಡಿಕೊಂಡು, ಬೆಲೆ ತಗ್ಗಿಸಲು ಮುಂದಾಗಬೇಕು ಎಂದು ಕೊತ್ತಂಬರಿ ಸೊಪ್ಪು ಮಾರಾಟಗಾರರ ಸಂಘ ಆಗ್ರಹಿಸಿದೆ.
ಈ ನಡುವೆ, ತನಗೆ ಇಬ್ಬರು ಚಿಕ್ ಮಕ್ಕಳಿದ್ದು, ಒಂದು ಏಳು ತಿಂಗಳ ಮಗು, ಮತ್ತೊಂದು ಮೂರು ತಿಂಗಳ ಕಂದ ಅಂತ ಸ್ಫೋಟಕ ಸುದ್ದಿಯ ಹಿನ್ನೆಲೆ ಬಗ್ಗೆ ತನಿಖೆ ನಡೆಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ ಎಂಬ ಅಂಶವನ್ನು ಬೊಗಳೂರು ಬ್ಯುರೋ ಕಂಡುಕೊಂಡಿದೆ.
2 ಕಾಮೆಂಟ್‌ಗಳು
ಮುಂದಿನ ಜಾಗತಿಕ ಯುದ್ಧಗಳು ಕೋತಿಮರಿ ಸೊಪ್ಪಿಗಾಗಿ ನಡೆಯುತ್ತವೆ ಎಂದು ಅಖಿಲಾಂಡ ಜ್ಯೋತಿಷಿಗಳು ಭವಿಷ್ಯ ಹೇಳುತ್ತಿದ್ದಾರೆ.
ಪ್ರತ್ಯುತ್ತರಅಳಿಸಿಸುನಾಥರೇ, ಬ್ರಹ್ಮಾಂಡಾಂಡಪಿಂಡ ಜ್ಯೋತಿಷಿಗಳ ಭವಿಷ್ಯವೇ ಡೋಲಾಯಮಾನವಾಗಿದೆ ಎಂಬ ಬಗ್ಗೆ ನಮ್ಮ ಬ್ಯುರೋದ ಎಲ್ಲರೂ ದಿನಕ್ಕೊಂದು ಸಂಚೋದನಾ ವರದ್ದಿ ತಂದಿಡುತ್ತಿದ್ದಾರೆ.
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D