[ಪಕ್ಕಾ ಬೊಗಳೆ ಬ್ಯುರೋದಿಂದ]
ಬೊಗಳೂರು: ಸತ್ಯ ವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಧ್ಯೇಯ ವಾಕ್ಯವಿರುವ ಬೊಗಳೆ ಬ್ಯುರೋಗೇ ಕಾಂಪಿಟಿಷನ್ ನೀಡಿ, ಪ್ರೊಪೆಲ್ಲರುಗಳುಳ್ಳ ಬಿಳಿ ಕಾಗೆ ಹಾರಿಸುತ್ತಲೇ ಜಗದ್ವಿಖ್ಯಾತಿ ಗಳಿಸಿದ ಕ್ಲಾನ್ ಪ್ರತಾಪಿ ಎಮ್ಮೆನ್‌ಗೆ ಭಾರತ ಸರ್ಕಾರವು ಭಾರದ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲು ನಿರ್ಧರಿಸಿದೆ.
ಈ ಕುರಿತು ವರದ್ದಿಗಾರರೊಂದಿಗೆ ಮಾತನಾಡಿದ, ದೇಶದ ಹಾಗೂ ಜಗತ್ತಿನ ಅಜ್ಞಾನ ಮತ್ತು ತಂತ್ರಅಜ್ಞಾನ ಸಚಿವರು, ಕೇವಲ ಒಂದು ಪುಟ್ಟ ಕಾಗೆಯ ಮೇಲೆ 360 ಕಿಲೋ ಪೇಲೋಡ್ ಹೆಸರಿನ ಮೂಟೆಗಳನ್ನಿಟ್ಟು ಎತ್ತಿದ್ದೇ ಭಾರದ ರತ್ನ ಪಡೆಯಲು ಅರ್ಹವೆಂದು ಹೇಳಿದರು.
ಕೇವಲ ಎರಡು ವರ್ಷಗಳಲ್ಲಿ 7 ಸಾವಿರ ರಿಸರ್ಚ್ ಪೇಪರುಗಳನ್ನು ಓದುವುದು ನಮ್ಮಂತಹಾ, ಈಗಿನ ಯುವ ಪೀಳಿಗೆಯ ಅಜ್ಞಾನಿಗಳಿಗೆ ಅತ್ಯಂತ ಸುಲಭವಾದ ವಿಚಾರವಲ್ಲ. ಮೊಬೈಲ್‌ನಲ್ಲೇ ಈ ಪುಟಗಳು ಕಾಣಸಿಗುತ್ತವೆ. ಒಮ್ಮೆ ಕಣ್ಣು ಮಿಟುಕಿಸಿದಾಗ ಅಥವಾ ಒಮ್ಮೆ ಬೆರಳು ಟಚ್ ಮಾಡಿದ ತಕ್ಷಣ, ಮುಂದಿನ ಪುಟಕ್ಕೆ ಹೋಗುವುದು ಅತ್ಯಂತ ಸುಲಭ. ಏಕಕಾಲದಲ್ಲಿ ಹತ್ತು ಬಾರಿ ಟ್ಯಾಪ್ ಮಾಡಿದ ತಕ್ಷಣ ಒಂದಿಡೀ ರಿಸರ್ಚ್ ಪೇಪರನ್ನು ಗಂಟೆಯೊಳಗೆ 'ನೋಡಿ' ಮುಗಿಸುವುದು ಕಷ್ಟವೇನಲ್ಲ ಎಂದು ಕ್ಲಾನ್ ಪ್ರತಾಪಿ ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.
ಇದೀಗ ಈ ರಿಸರ್ಚ್ ಪೇಪರ್‌ಗಳನ್ನೇ ಒಂದೊಂದಾಗಿ ಕತ್ತರಿಸಿ, ಅದನ್ನು ರದ್ದಿಯನ್ನಾಗಿ ಪರಿವರ್ತಿಸಿ, ಈ ರದ್ದಿಯಿಂದಲೇ ತಾವು ಹೆಲಿಕಾಪ್ಟರ್, ಕಾಗದದ ವಿಮಾನ ಮುಂತಾದ ಕಾಗೆ ಡ್ರೋನುಗಳನ್ನು ಹಾರಿಸಿ ಅವರು, ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರದ ರತ್ನನ ಪ್ರಶಸ್ತಿಯನ್ನು ನೀಡುವುದು ಅನಿವಾರ್ಯವಾಯಿತು ಎಂದು ಬೊಗಳೂರಿನ ಅಜ್ಞಾನ ಮತ್ತು ತಂತ್ರಾಜ್ಞಾನ ಮಂತ್ರಿಗಳು ತಿಳಿಸಿದ್ದಾರೆ.
ಕೇವಲ ಎರಡು ವರ್ಷಗಳಲ್ಲಿ ಮುನ್ನೂರರುವತ್ತೈದು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವುದೇನೂ ಈಗಿನ ಕಾಲದಲ್ಲಿ ಸುಲಭದ ವಿಷಯವಲ್ಲ. ಸದಾ ಮೊಬೈಲ್-ಪ್ರೇಮಿಗಳಾಗಿರುವ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಒಂದು ಪೀರಿಯಡ್ ಪಾಠ ಮಾಡುವುದೇ ಕಷ್ಟ ಸಾಧ್ಯವಾಗಿರುವಾಗ, ಕ್ಲೋನ್ ಪ್ರತಾಪಿಯು ಈ ಪರಿಯಾಗಿ ಉಪನ್ಯಾಸ ಮಾಡಿರುವುದೆಂದರೆ, ಯಾರೂ ಮುರಿಯಲಾರದ ದಾಖಲೆ ಎಂದು ಬೊಗಳೂರು ಸರ್ಕಾರವು ಗುರುತಿಸಿದೆ ಎಂದು ಅಜ್ಞಾನ ಮಂತ್ರಿಗಳು ಹೇಳಿದ್ದಾರೆ.
ಈ ಕುರಿತು ಬಿಟಿವಿ ಅಂದರೆ ಬೊಗಳೂರು ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕ್ಲೋನ್ ಪ್ರತಾಪಿ, ಮೂರು ಗಂಟೆಗಳ ಕಾಲ ಬಂದೆರಗಿದ ಎಲ್ಲ ಪ್ರಶ್ನೆಗಳಿಗೂ ಒಂದೇ ಮಾತಿನಲ್ಲಿ ಉತ್ತರಿಸಿ, ಇಡೀ ಲೋಕದ ಬಾಯಿ ಮುಚ್ಚಿಸಿದ್ದರು. ಜಗತ್ತಿನ ಜನರು ತತ್ತರಿಸಿದ ಉತ್ತರವೇನು ಎಂದು ಸಂಚೋದನೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಆ ಉತ್ತರ ಹೀಗಿತ್ತು: "ಹೌದು ಸರ್, ಇರಬಹುದು ಸರ್, ಆದ್ರೆ ಅವೆಲ್ಲ ಪ್ರಿಲಿಮನರಿ ಸ್ಟೇಜ್‌ನವು ಸರ್, ಅವರ ಪ್ರಶ್ನೆಯೇ ಸರಿ ಇಲ್ಲ ಸರ್, ಟೆಕ್ನಿಕಲ್ ಎಲ್ಲ ಇಲ್ಲಿ ಬೇಡ ಸರ್, ಇಮೇಲ್ ಮಾಡ್ತೇನೆ ಸರ್, ಒಪ್ತೀನಿ ಸರ್, ಅವೆಲ್ಲ ಕಾನ್ಫಿಡೆನ್ಷಿಯಲ್, ಹೇಳಕ್ಕಾಗಲ್ಲಾ ಸರ್, ಮುಂದೆ ಮೇಲ್ ಮಾಡ್ತೀನಿ ಸರ್, ಹಾಗೆ ಹೇಳೇ ಇಲ್ಲ ಸರ್ !"
- Home
- NEWS
- _POLITICS
- __ಜಾರಕಾರಣ
- __ರಾಜಕೀಯ
- __ಪಾತಕಿಸ್ತಾನ
- _ELECTION
- __ಚುನಾವಣೆ
- __ಚುಚ್ಚುವ ಆಣೆ
- __ಎಲೆಕ್ಷನ್
- __ಓಟು
- _SPORTS
- BARKING NEWS
- YOUTH
- _ಭಗ್ನ ಹೃದಯ
- _ವಿಚ್ಛೇದನೆ
- _ಬಾಲ್ಯ ವಿವಾದ
- _ನಿರುದ್ಯೋಗ
- _ಬಾಲ-ಕರುಗಳ ಸಂಘ
- SCIENCE
- _ತಾಪಮಾನ
- _ಸಂಚೋದನೆ
- _ಕತ್ತರಿ ಪ್ರಯೋಗ
- _ಪ್ರಾಣಿ ನಿರ್ದಯ ಸಂಘ
- _ಒದೆಗಳು
- EDITORIAL
- EDUCATION
- _ಶೈ-ಕ್ಷಣಿಕ
- _ಬ್ಲಾಗಿನ
- _ಏಪ್ರಿಲ್ 1
- BUSINESS
- _ಕುದುರೆ ವ್ಯಾಪಾರ
- _ಆರ್ಥಿಕ ಸ್ಥಿತಿ
- _ವ್ಯವಹಾರ
- _ಜಾಹೀರಾತು
- __ನ್ಯಾನೋ
- HEALTH
- _ಕುಡುಕರ ಸಂಘ
- _ಅನಾರೋಗ್ಯ
- _ಜನಸಂಖ್ಯಾ ನಿಯಂತ್ರಣ
- INTERVIEWS
- _Someದರ್ಶನ
- _ಸಂದರ್ಶನ
2 ಕಾಮೆಂಟ್‌ಗಳು
ಇವನೇನು ಮಹಾ? ನಮ್ಮ ಎಮ್ಮೆ(ಲ್ಲೆ)ಗಳು ಇಂತಹ ನೂರಾರು ಕಾಗೆಗಳನ್ನು ದಿನವೂ ಹಾರಿಸುತ್ತಿಲ್ಲವೆ? ನಮ್ಮ ವರದ್ದಿಗಾರರು ‘ಕಾಗೆಗಳನ್ನು (ತಮ್ಮ ಬಾಲದಿಂದ) ಹಾರಿಸುತ್ತಿರುವ ಎಮ್ಮೆಗಳು’ ಎಂದು ಮಾಡಿದ ವರದ್ದಿಯನ್ನು ನೀವು ಓದಿಲ್ಲವೆ?
ಪ್ರತ್ಯುತ್ತರಅಳಿಸಿಹೌದೌದು, ಅವೆಲ್ಲವೂ ಬಿಳಿಯಾನೆಗಳಿಂದ ಹಾರಿಸಲಾಗುತ್ತಿರುವ ಬಿಳೀ ಬಿಳೀ ಕಾಗೆಗಳು. ಶುದ್ಧ ಚಾರಿತ್ರ್ಯದವು. ನಿಮ್ಮ ವರದ್ದಿಗಾರರನ್ನೂ ಈಗ ಕಿಡ್ನ್ಯಾಪ್ ಮಾಡಲು ನಿರ್ಧರಿಸಲಾಗಿದೆ, ಬಿಡಿ.
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D