ಅಭಿವೃದ್ಧಿ ಕಾರ್ಯಗಳಿಲ್ಲದೆ ಕೈಗೇನೂ ಸಿಗದೆ ಹತಾಶನಾಗಿರುವ ಶೋಷಕನ ಚಿತ್ರ |
[ಬೊಗಳೂರು ಸೆನ್‌ಸೆಕ್ಸ್ ಬ್ಯುರೋದಿಂದ]
ಬೊಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ್ಣು, ಹೂವು, ತರಕಾರಿ ಹಾಗೂ ಚಿನ್ನಕ್ಕೆ ಬೆಲೆ ಏರುತ್ತಿರುವಂತೆಯೇ ವಿವಿಧೆಡೆಗಳಲ್ಲಿ ಶೋಷಕರ ಬೆಲೆಯೂ ಏರಿಕೆಯಾಗಿದೆ ಎಂದು ನಮ್ಮ ರಾಜಸ್ಥಾನದ ಬಾತ್ಮೀದಾರರು ವರದ್ದಿ ತಂದು ಸುರುವಿದ್ದಾರೆ.
ಶೋಷಕರ ಬೆಲೆ ಏರಿಕೆ ಪ್ರಕ್ರಿಯೆಯೇನೂ ಹೊಸದಲ್ಲ. ಈ ಹಿಂದೆ ಕರುನಾಟಕದಲ್ಲಿ ಹಲವು ಬಾರಿ ಶೋಷಕರು ರೆಸಾರ್ಟ್ ಪ್ರವಾಸ, ಹೊರ ರಾಜ್ಯ ಪ್ರವಾಸ ಮುಂತಾದವುಗಳನ್ನು ನಡೆಸುತ್ತಾ, ಅದಕ್ಕಾಗಿ ತಗುಲುವ ವೆಚ್ಚವೆಲ್ಲವನ್ನೂ ಬಡ ತೆರಿಗೆದಾರರ ಖಾತೆಯಿಂದಲೇ ಭರಿಸಲಾಗುತ್ತಿತ್ತು.
ಆದರೆ, ಇತ್ತೀಚೆಗೆ ಕೋವಿಡ್-19 ಕಾಯಿಲೆ ಕಾಣಿಸಿಕೊಂಡಿರುವುದರಿಂದ, ಯಾವುದೇ ರೀತಿಯಲ್ಲೂ ನುಂಗಬಹುದಾದ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ಅಭಿವೃದ್ಧಿ ಯೋಜನೆಗಳೆಲ್ಲವೂ ಸ್ಥಗಿತಗೊಂಡಿರುವುದರಿಂದ ಶೋಷಕರಿಗೆ ಬದುಕುವುದು ಕೂಡ ಕಷ್ಟವಾಗಿಬಿಟ್ಟಿದೆ ಎಂದು ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರು ಅಲ್ಲಲ್ಲಿಂದ ವರದ್ದಿ ತಂದಿದ್ದಾರೆ.
ಕರುನಾಟಕ, ಮದ್ಯದ ಪ್ರದೇಶ, ಗೋಗೋವಾ, ಬಿಹಾರ, ತತ್ತರ ಪ್ರದೇಶ, ತತ್ತರಾಖಂಡ, ಅಸಾಮಿ ಮುಂತಾದೆಡೆಗಳಲ್ಲೆಲ್ಲಾ ಆಗಾಗ್ಗೆ ಈ ಶೋಷಕರ ಬೆಲೆಯು ಸೆನ್ಸೆಕ್ಸ್‌ನಂತೆ ಏರಿಳಿತ ಕಾಣುತ್ತಿತ್ತು. ಇತ್ತೀಚಿನ ಬೆಳವಣಿಗೆ ವರದ್ದಿಯಾಗಿರುವುದು ರಾಜಸ್ಥಾನದಿಂದ.
ಗೆಶೋಕ ಅಹ್ಲಾಟ್ ಸರ್ಕಾರದ ಕಾರ್ಯನೀತಿಗಳಿಂದ ರೋಸಿ ಪಚಿನ್ ಸೈಲಟ್ ನೇತೃತ್ವದ ಬಣವೊಂದು ಬಂಡಾಯವೆದ್ದು, ಬಂಡಾಯವೆದ್ದ ತಕ್ಷಣ ಶೋಷಕರ ಮಾರುಕಟ್ಟೆ ಸೂಚ್ಯಂಕ ನಿಧಾನವಾಗಿ ಏರುತ್ತಲೇ ಇತ್ತು. ಇದೀಗ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಶೋಷಕರ ಮಾರುಕಟ್ಟೆ ಸೂಚ್ಯಂಕವು ದಿಢೀರ್ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಸ್ವಯಮಾಭಿವೃದ್ಧಿ ಯೋಜನೆಗಳು ಯಾವುದು ಕೂಡ ಕಾರ್ಯಗತವಾಗಲು ಕೊರೊನಾ ಬಿಡುತ್ತಿಲ್ಲ. ಹೀಗಾಗಿ ನುಂಗಣ್ಣರಿಗೆ ನಿರುದ್ಯೋಗ ಸಮಸ್ಯೆಯೂ ಕಾಡುತ್ತಿದೆ. ಆದರೆ, ಕುದುರೆ ವ್ಯಾಪಾರಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
2 ಕಾಮೆಂಟ್‌ಗಳು
ಶೋಷಕರು ಎಂದರೇನು ಸಣ್ಣ ಆಸಾಮಿಗಳೆ? ಅವರ ಬೆಲೆಯು ಚೇಳಿನ ವಿಷದಂತೆ ಹಾರುತ್ತಲೇ ಇರುತ್ತದೆ!
ಪ್ರತ್ಯುತ್ತರಅಳಿಸಿಎಲ್ಲ ನಾಟಕ ಕಂಪನಿಗಳೂ ಶೋಷಕರನ್ನೇ ನೇಮಿಸಿಕೊಳ್ಳಲು ನಿರ್ಧರಿಸಿವೆಯಂತೆ ಸಾರೂ... ಸ್ವಲ್ಪ ಎಚ್ಚರಿಕೆ...
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D