ಬೊಗಳೂರು: ಕರ್ನಾಟಕದ ಭಾಗ್ಯದ ಬಾಗಿಲು ತೆರೆದಿದ್ದೇಕೆ ಎಂದು ಸ್ವತಃ ಯೆಂಡ್ಕುಡ್ಕರೇ ಬೆಚ್ಚಿ ಬಿದ್ದು, ಬಿದ್ದೆದ್ದು, ಎದ್‌ಬಿದ್ ಕ್ಯೂ ನಿಲ್ಲುತ್ತಾ ಆಲೋಚನೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ, ಈ ಕೋಟಿ ಡಾಲರ್ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಬೊಗಳೆ ರಗಳೆ ಬ್ಯುರೋ ಕೂಡ ಪೀಪಾಯಿಯನ್ನು ಹಿಡಿದುಕೊಂಡು ಊರೆಲ್ಲಾ ಸುತ್ತಾಡಿದೆ.
ಈ ಹಂತದಲ್ಲಿ ಬೊಗಳೆಯೂರಾದ ಮಂಗಳೂರಿನಲ್ಲಿ ನಾಡಿಗೇ ಕಾಡುಕೋಣವೊಂದು ಕೂಡ ಬಂದಿತ್ತು. ಹೆಂಡದಂಗಡಿಗಳ ಬಾಗಿಲು ತೆರೆದಾಕ್ಷಣ ಆದರ ಕಮಟು ವಾಸನೆ ಅಥವಾ ಪರಿಮಳಕ್ಕೆ ಮಾರು ಹೋಗಿ ಅದು ಮದ್ಯದಂಗಡಿಯನ್ನೇ ಹುಡುಕುತ್ತಾ ಹೊರಟಿದ್ದ ಹಿನ್ನೆಲೆಯಲ್ಲಿ, ಅದನ್ನು ಹಿಂಬಾಲಿಸಿದಾಗ ಕೆಲವೊಂದು ಅಸತ್ಯಗಳು ಬಯಲಾದವು. 40 ದಿನಗಳ ಲಾಕ್‌ಡೌನ್‌ನಿಂದಾಗಿ ಲೋಕವೇ ಕಂಗಾಲಾಗಿರುವ ಈ ಹೊತ್ತಿನಲ್ಲಿ, ಕರ್ನಾಟಕದ ಆರ್ಥಿಕತೆಯ ಹೆಬ್ಬಾಗಿಲು ತೆರೆಯಲು ನಿನ್ನೆ ದಿನ ವೈಕುಂಠ ದ್ವಾರದ ಬಾಗಿಲು ತೆಗೆಯುವುದನ್ನೇ ನೋಡಿ, ಪುನೀತರಾಗಲು ಸಾಲುಗಟ್ಟಿ ನಿಂತ ಜನ. ಆದರೆ, ಕೆಲವೆಡೆ ದೂರ ನಿಂತಿದ್ದರೂ, ಇನ್ನು ಕೆಲವೆಡೆ ಅಂಟಿಕೊಂಡು ತೂರಾಡಿಕೊಂಡೇ ನಿಂತಿದ್ದರು.
ಕಾಡುಕೋಣ ಕೂಡ ಮದ್ಯವರಸಿ ನಾಡಿಗೆ ಬಂದಿರುವುದರಿಂದ ನಾವೇನು ಮಹಾ ಎಂದುಕೊಂಡ ಜನರಿಗಾಗಿ, ಜನತಾ ಸರ್ಕಾರವು ಈ ಪರಿಯಾಗಿ ಬಾಗಿಲು ತೆರೆಯಲು ಕಾರಣವೆಂದರೆ, ದೇಶದ ಪ್ರಧಾನ ಸೇವಕರೇ ಇಂಥದ್ದೊಂದು ಶ್ಲಾಘನೆಯ ನುಡಿಯನ್ನು ನುಡಿದದ್ದು.
Moments like this fill the heart with happiness.— Narendra Modi (@narendramodi) April 30, 2020
This is the spirit of India.
We will courageously fight COVID-19.
We will remain eternally proud of those working on the frontline. https://t.co/5amb5nkikS
ಇದು ಭಾರತದ ಸ್ಪಿರಿಟ್, ಎಲ್ಲರ ಸ್ಪಿರಿಟ್ ಆಗಲಿ ಅಂತ ಅವರು ಹಾರೈಸಿದ್ದೇ ಹಾರೈಸಿದ್ದು. ಬೊಗಳೂರು ಸರ್ಕಾರವು ಸ್ಪಿರಿಟ್ ನೀಡಲು ಶುರು ಮಾಡಿಯೇಬಿಟ್ಟಿತು. ಅಲ್ಲಿಗೆ ಸ್ಪಿರಿಟ್ ನೀಡುವ ಅಂಗಡಿಗಳ ಹೆಬ್ಬಾಗಿಲು ಓಪನ್ ಆಗಿ, ಇಡೀ ನಾಡಿನ ಭಾಗ್ಯದ ಬಾಗಿಲು ತೆರೆದುಕೊಂಡಿತು ಎಂದು ನಮ್ಮ ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ವರದ್ದಿಸಿದ್ದಾರೆ. ಇದೀಗ ಇಡೀ ಭಾರತದ ಸ್ಪಿರಿಟ್ ಹೈ ಆಗಿದೆ, ವಿಶೇಷವಾಗಿ ಕರುನಾಡಿನ ಮೂಲೆ ಮೂಲೆಯಲ್ಲೂ ಹೈವೋಲ್ಟೇಜ್ ಉಂಟಾಗಿದೆ, ಇದರಿಂದ ವಿದ್ಯುತ್‌ಸಂಚಾರವಾದಂತಾಗಿ, ವಿದ್ಯುತ್ ಉತ್ಪಾದನೆಯಲ್ಲೂ ನೆರವಾಗಿದೆ, ಕತ್ತಲಲ್ಲಿ ತೂರಾಡಿಕೊಂಡಿದ್ದವರಿಗೆ ಬೆಳಕು ಮೂಡಿದೆ ಅಂತ ನಮ್ಮವರೇ ವರದ್ದಿ ತಂದು ಸುರುವಿದ್ದಾರೆ.
2 ಕಾಮೆಂಟ್‌ಗಳು
ನೀವು ನೀಡಿದ ಸ್ಪಿರಿಟ್ ಆಸ್ವಾದಿಸಿದೆ. ತುಂಬಾ ಕಿಕ್ ಕೊಡುತ್ತಿದೆ, ಗುರುಗಳೇ. ಎಲ್ಲಿ ಕೊಡುತ್ತಿದೆ ಎಂದು ದಯವಿಟ್ಟು ಕೇಳಬೇಡಿ!
ಪ್ರತ್ಯುತ್ತರಅಳಿಸಿಕೇಳಲ್ಲ, ಆದ್ರೆ ಮೊನ್ನೆ ನಿಮ್ಮೂರಲ್ಲಿ ಸ್ಕೂಟರಿನ ಕಿಕ್ಕರ್ ಮುರಿದಿದ್ದಕ್ಕೆ ನೀವೇ ಕಾರಣ ಅಂತ ಹೇಳೋದೇ ಇಲ್ಲ!
ಅಳಿಸಿಏನಾದ್ರೂ ಹೇಳ್ರಪಾ :-D