[ಬೊಗಳೂರು ಜಾರಕೀಯ ಬ್ಯುರೋದಿಂದ]
ಬೊಗಳೂರು, ಮಾ.06- ಇದೀಗ ನಾಪತ್ತೆಯಾಗಿರುವ ರಾಹುಲ್ ಗಾಂಧಿ ಅವರ ಸ್ಥಾನದಲ್ಲಿ ಸಮರ್ಥ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸಲು ಒಳಗಿಂದೊಳಗೆ, ಬೂದಿ ಮುಚ್ಚಿದ ಕೆಂಡದಂತೆ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿರುವುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.ಪ್ರಸ್ತುತ ನರೇಂದ್ರ ಮೋದಿ ಎಂಬವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲು ಭರದಿಂದ ಪ್ರಯತ್ನಗಳು ಸಾಗುತ್ತಿವೆ ಎಂಬುದನ್ನು ಏಕ ಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸದಸ್ಯರು ತಮ್ಮಿಷ್ಟ ಬಂದಂತೆ ವರದ್ದಿಗಳನ್ನು ತಂದು ಬೊಗಳೆ ಬ್ಯುರೋದ ಬಾಗಿಲೆದುರು ತಂದು ಸುರುವಿ ಹೋಗಿದ್ದಾರೆ.
ಈಗಾಗಲೇ ದೇಶದಲ್ಲಿ ಮೋದಿ ಅಲೆಯು ಸುನಾಮಿಯಂತೆ ಕಾಂಗ್ರೆಸಿನ ಮೇಲೆ ಅಪ್ಪಳಿಸಿರುವುದರಿಂದ, ಈ ಹಿನ್ನಡೆಯನ್ನೇ ಸಾಧನೆಯಾಗಿ ಪರಿವರ್ತಿಸಬಾರದೇಕೆ ಎಂಬುದು ಕಾಂಗ್ರೆಸ್ ಲಾಗಾಯ್ತಿನಿಂದಲೂ ಚಾಣಾಕ್ಷ ನೀತಿಯ ಮೂಲಕ ಸಿದ್ಧಿ-ಪ್ರಸಿದ್ಧಿ ಗಳಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡರ ಪ್ರಶ್ನೆ.
ಕಾಂಗ್ರೆಸ್ ಯುವ ರಾಜ ಈಗಾಗಲೇ ಹೇಗಿದ್ದರೂ ನಾಪತ್ತೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ, ಅವರು ಬರುವುದರೊಳಗೆ ನರೇಂದ್ರ ಮೋದಿಯನ್ನು ಪೀಠಾರೋಹಣ ನಡೆಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ನಂಬಲನರ್ಹ ಮೂಲಗಳು ಸ್ಪಷ್ಟಪಡಿಸಿವೆ.
ಆದರೂ, ಆಗಾಗ್ಗೆ ನಾಪತ್ತೆಯಾಗುವ ಬೊಗಳೆ ರಗಳೆ ಬ್ಯುರೋದ ಕಿರಿಕಿರಿ ಸಂಪಾದಕ, ಹಿರಿ ಸಂಪಾದಕ, ಸಂಪಾದ-ಕರುಗಳು, ವಿತರಕ, ಓದುಗ... ಹೀಗೆ ಎಲ್ಲವೂ ಆಗಿರುವ ಅಸತ್ಯಾನ್ವೇಷಿ ರೀತಿಯೇ ರಾಹುಲ್ ಗಾಂಧಿಯವರೂ ಸಂಚು ಹೂಡುತ್ತಿದ್ದಾರೆಯೇ ಎಂಬ ಬಗ್ಗೆ ಏಕೈಕ ಸದಸ್ಯರಿರುವ ಬ್ಯುರೋದ ಎಲ್ಲರೂ ತನಿಖೆಗೆ ಹೊರಟಿರುವುದಾಗಿ ಮೂಲಗಳು ಬಾಯಿ ಬಿಡಲಾರಂಭಿಸಿವೆ.
4 ಕಾಮೆಂಟ್‌ಗಳು
ಯಾವ ಸೀಮೆ ಬ್ಯೂರೋ ಸ್ವಾಮಿ ನಿಮ್ದು. ನಾಪತ್ತೆ ಪ್ರಕರಣಗಳನ್ನು ಕ್ರೈಂ ಸುದ್ದಿ ಅಡಿ ಪ್ರಕಟಿಸಿ. ಪೋಲೀಸರಿಗೆ ಕ್ರಿಮಿನಲ್ ಕೇಸ್ ಜಡಿಯೋದಕ್ಕೆ ಅನುಕೂಲವಾಗುತ್ತೆ. ಇಷ್ಟಕ್ಕೂ 'ಬಾಲಕ ' ನಾಪತ್ತೆಯಾಗಿದ್ದಾನೆ ಎಂತಾ FIR ಆಗದಲೆ ನೀವ್ ಹೇಗ್ರಿ ರದ್ದಿ ಪೇಪರ್ ನಲ್ಲಿ ಹಾಕಿದಿರಿ !?. ಕ್ರಿಮಿನಲ್ ಮೈಂಡ್ ನಿಮ್ದು !. :P
ಪ್ರತ್ಯುತ್ತರಅಳಿಸಿಸುಬ್ರಹ್ಮಣ್ಯರೇ,
ಅಳಿಸಿಬಾಲಕ ಬದಲಾಗಿದ್ದಾನೆ. ಹೀಗಾಗಿ ನಾವೂ ಕ್ರಿಮಿನಲ್ ಮೈಂಡುಗಳನ್ನೇ ಪರಿವರ್ತಿಸಬೇಕಾಗಿದೆ...
‘ಆಪ್’ ಪಕ್ಷವನ್ನು ಸೇರ್ತಾ ಇದ್ದಾರಂತೆ ರಾಹುಲ ಗಾಂಧಿ!
ಪ್ರತ್ಯುತ್ತರಅಳಿಸಿಆಪೋ ತಾಪೋ, ತೋಪೋ... ಇನ್ನಷ್ಟೇ ಗೊತ್ತಾಗ್ಬೇಕಿದೆ...
ಅಳಿಸಿಏನಾದ್ರೂ ಹೇಳ್ರಪಾ :-D