[ಬೊಗಳೂರು ಮದ್ಯದ ರಾತ್ರಿ ಬ್ಯುರೋದಿಂದ]
ಬೊಗಳೂರು, ಮಾ.7- ಮದ್ಯ ತುಂಬಿದ ಮಧ್ಯ ರಾತ್ರಿಯನ್ನು ವಿಸ್ತರಿಸಲಾಗಿದೆ ಎಂಬ ವರದ್ದಿ ಕೇಳಿದರೆ ಕೇಳಬೇಕೇ? ಇಂತಹಾ ಬಾರ್ಕಿಂಗ್ ಸುದ್ದಿಗಳನ್ನು ಕೇಳಿ ನಿದ್ದೆಯಲ್ಲೇ ನಡಿಗೆ ಆರಂಭಿಸುವವರಿರುವ ಬೊಗಳೂರಿನಲ್ಲೇ ಕಾರ್ಯಾಚರಿಸುತ್ತಿರುವ ಬೊಗಳೆ ಬ್ಯುರೋ ಕೂಡ ದಿಢೀರನೇ ಎಚ್ಚೆತ್ತುಕೊಂಡಿದ್ದು, ಹೊಸ ಸಂಗತಿಯನ್ನು ತರಲು ಸಿದ್ಧತೆ ಭರದಿಂದಲೇ ಸಾಗಿದೆ.ಸರಕಾರ ಈಗಾಗಲೇ ಬೊಗಳೂರಿನಲ್ಲಿ ರಾತ್ರಿ ಒಂದು ಗಂಟೆಯವರೆಗೆ ಕುಡಿದು ಕುಪ್ಪಳಿಸಲು ಅನುಮತಿ ನೀಡಿದೆ. ಇದರ ಹಿಂದಿನ ಮರ್ಮವೇನೆಂದು ತಿಳಿಯಲು ಅಸತ್ಯದ ಅನ್ವೇಷಣೆಗಾಗಿ ಹೊರಟಾಗ ಈ ವರದ್ದಿ ದೊರೆತಿದೆ.
ಈಗ ಕಾಲ ಬದಲಾಗಿದೆ. ರಾತ್ರಿ ಹಗಲು ಆಗಿದೆ, ಹಗಲು ರಾತ್ರಿ ಆಗಿದೆ. ಕೆಲವರಿಗಂತೂ ಹಗಲಲ್ಲೇ ನಕ್ಷತ್ರಗಳೂ ಗೋಚರಿಸುತ್ತವೆ. ಈ ಹಿನ್ನೆಲೆಯಲ್ಲಿ ನಿದ್ದರಾಮಯ್ಯ ಸರಕಾರವೇ ಈ ಕ್ರಮಕ್ಕೆ ಮುಂದಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿರುವ ಅಂಶ.
ಇದರ ಹಿಂದೆ ಪರಮಜ್ಞಾನಿಗಳ ತಂಡವೊಂದೂ ಕೆಲಸ ಮಾಡಿದೆ. ಮದ್ಯದ ವ್ಯವಹಾರಗಳೆಲ್ಲವೂ ರಾತ್ರಿಯಲ್ಲೇ ನಡೆಯುತ್ತಿರುವುದು. ಅದು ಸಾಗಿಸುವುದಿರಲಿ, ಕುಡಿಯುವುದಿರಲಿ, ಕುಣಿಯುವುದಿರಲಿ... ಮತ್ತು ಮದ್ಯದ ಆರಾಧನೆ ಮಾಡುವುದೇ ಇರಲಿ... ಈ ಕಾರಣದಿಂದಾಗಿ ಪರಮಾಜ್ಞಾನಿಗಳು ನೀಡಿದ ಸಲಹೆಯನ್ನು ನಿದ್ದರಾಮಯ್ಯ ಸರಕಾರ ಸ್ವೀಕರಿಸಿದೆ ಎಂದು ದೃಢಪಡಿಸದ ಮೂಲಗಳು ಖಚಿತಪಡಿಸಿವೆ.
ನೈಟ್ ಲೈಫ್ ಅಂತ ಕರೆಯುವುದೇಕೆ? ಈಗ ಹೇಗಿದ್ದರೂ ಹಗಲು ರಾತ್ರಿಗೆ ವ್ಯತ್ಯಾಸವಿಲ್ಲದಿರುವುದರಿಂದ, ನೈಟ್ ಎಂಬುದನ್ನು ಒಡೆದು ಹಾಕಿದರಾಯಿತು. ಆಗ ಎಲ್ಲೆಲ್ಲೂ ಲೈವ್ಲಿ ಲೈಫ್ ತುಂಬಿರುತ್ತದೆ ಎಂಬುದು ಒಂದು ಸಲಹೆಯಾದರೆ, ಮತ್ತೊಂದು ಅತ್ಯುತ್ತಮ ಶಿಫಾರಸು ಎಂದರೆ, ಮಧ್ಯ ರಾತ್ರಿ ಎಂದು ಯಾರೋ ಮಹಾಪ್ರಾಣಿಗಳು ಅಕ್ಷರವೊಂದನ್ನು ಒತ್ತಿ ಹೇಳಿದ್ದಾರೆ. ಅದು ನಿಜಕ್ಕೂ ಮದ್ಯ ರಾತ್ರಿ ಆಗಿತ್ತು. ಅಮಲೇರಿದಾಗ ಜನರ ನಾಲಿಗೆಯಲ್ಲಿ ಹೇಗೂ ಅಲ್ಪ ಪ್ರಾಣಿ ಮತ್ತು ಮಹಾಪ್ರಾಣಿಗಳಿಗೆ ವ್ಯತ್ಯಾಸ ಗೊತ್ತಾಗುವುದಿಲ್ಲವಾದುದರಿಂದ ಈ ರೀತಿ ತಪ್ಪಾಗಿ ಹಿಂದಿನ ಕಡತಗಳಲ್ಲಿ ಛಾಪಿಸಿದ್ದಾರೆ. ಇದನ್ನು ನಾವಾದರೂ ಸರಿಪಡಿಸಬೇಕು. ಅದು ಮದ್ಯ ರಾತ್ರಿಯೇ ಆಗಿರಲಿ, ಜನಕ್ಕೂ ಅದರ ನಿಜವಾದ ಅರ್ಥ ಗೊತ್ತಾಗಲಿ ಎಂಬುದು ಇವರ ವಾದ.
ಈ ವಾದವನ್ನು ಕೇಳಿದ್ದೇ ತಡ, ಏನಾಯಿತು ಹೇಗಾಯಿತು ಎಂಬುದನ್ನು ಹಿಂದೆ-ಮುಂದೆ ನೋಡದೆ ಸಂಕಟ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಅಂಗೀಕಾರ ಮುದ್ರೆ ಹಾಕಿಬಿಟ್ಟರು. ಹೇಗೂ ಚುನಾವಣೆಗಳು ಬರುತ್ತಿವೆ, ಮದ್ಯದ ಆರಾಧನೆ ಹೆಚ್ಚಾಗಿಯೇ ನಡೆಯುತ್ತಿರುವುದರಿಂದ, ರಾಜ್ಯದ ಬೊಕ್ಕಸವೂ ತುಂಬುತ್ತದೆ, ಅಪ್ಪಿ ತಪ್ಪಿದರೆ, ಮದ್ಯ ರಾತ್ರಿಯಲ್ಲಿ ವಾಹನ ಚಲಾಯಿಸಿದರೆ ದೇಶದ ಜನಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಇದು ಜನಸಂಖ್ಯೆಯಲ್ಲಾದರೂ ಚೀನಾವನ್ನು ಹಿಂದಿಕ್ಕಲು ಸಜ್ಜಾಗಿರುವ ದೇಶದ ಮದ್ಯ ರಾತ್ರಿಯ ಶ್ರಮಕ್ಕೊಂದು ಕೊಡುಗೆಯೂ ಆಗಬಹುದು ಎನ್ನಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
4 ಕಾಮೆಂಟ್‌ಗಳು
ನೀವು ಕರೆಕ್ಟೈಟಾಗಿ ಬರೆದಿದ್ದೀರ ಅನ್ವೇಷಿಗಳೇ ... !!!
ಪ್ರತ್ಯುತ್ತರಅಳಿಸಿಹೂಂ... ನಿಮ್ಮ ಸ್ಟೆಲ್ಲಿಂಗು ಮಿಕ್ಸ್‌ಟೇಕ್ ನೋಡಿದಾಗ್ಲೇ ಗೊತ್ತಾಯ್ತು...!
ಅಳಿಸಿಮದ್ಯಜೀವಿಗಳಿಗೆ ಮುದ್ದಾದ ಕೊಡುಗೆ!
ಪ್ರತ್ಯುತ್ತರಅಳಿಸಿಸುನಾಥರೇ,
ಅಳಿಸಿರಾತ್ರಿಯೂ ಅಲ್ಲ, ಹಗಲೂ ಅಲ್ಲ ಅಥವಾ ಹಗಲೇ ರಾತ್ರಿ, ರಾತ್ರಿಯೇ ಹಗಲು ಎಂಬಂತಿರುವ ಮಧ್ಯ-ದ ರಾತ್ರಿಯ ಜೀವಿಗಳಿಗೆ!
ಏನಾದ್ರೂ ಹೇಳ್ರಪಾ :-D