ಬೊಗಳೆ ರಗಳೆ

header ads

ಬೊಗಳೋದನ್ನು ಕುಡುಕರ ಅರಚಾಟಕ್ಕೆ ಹೋಲಿಸಿದ್ದಕ್ಕೆ ಶ್ವಾನ ಸಂಘ ಕೆಂಡ

[ಬೊಗಳೂರು ಶ್ವಾನದಯಾ ಸಂಘದ ಬ್ಯುರೋದಿಂದ]
ಬೊಗಳೂರು, ಮಾ.23- ತಮ್ಮನ್ನು ಹೆಂಡದಂಗಡಿ ಬಳಿ ಕುಡುಕರು ಮಾತನಾಡುವಂತೆ ತಾನು ಬೊಗಳುತ್ತಿದ್ದೇನೆ ಎಂಬ ಆರೋಪವನ್ನು ಕೇಳಿ ದಿಢೀರನೇ ಎಚ್ಚೆತ್ತ ಹುಚ್ಚು ಸಂಘದ ಪದಾಧಿಕಾರಿಗಳು, ಈ ಬಗ್ಗೆ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ತಮಗೆ ಪ್ರತಿಭಟನೆಗೆ ಮಾರ್ಗದರ್ಶನ ಮಾಡಬೇಕು ಎಂದು ವಟವಟಾಳ್ ಗಾನರಾಜ್ ಅವರ ಮೊರೆ ಹೊಕ್ಕಿದೆ ಎಂದು ಮೂಲಗಳು ತಿಳಿಸಿವೆ.

ವಿಕಿಲೀಕ್ಸ್ ಬಹಿರಂಗವಾದಂದಿನಿಂದ ನಾಪತ್ತೆಯಾಗಿದ್ದ ಬೊಗಳೂರಿನ ಏಕೈಕ ಸದಸ್ಯರನ್ನೊಳಗೊಂಡ ಬ್ಯುರೋದ ಸಮಸ್ತ ಸಿಬ್ಬಂದಿಗಳ ಹಗರಣವನ್ನು ವಿಕಿಲೀಕ್ಸ್ ಮೂಲಕವೇ ಬಯಲಿಗೆ ತರುವುದಾಗಿ ಬೆದರಿಕೆಯೊಡ್ಡಿದ ತಕ್ಷಣವೇ ನಾಯಿ ಬೊಗಳುತ್ತಿರುವುದು ಕೇಳಿ ದಿಢೀರನೇ ಎಚ್ಚೆತ್ತ ಸಿಬ್ಬಂದಿ ಈ ಸುದ್ದಿಯ ವಾಸನೆ ಹಿಡಿದು ಮೂಗು ಮುಚ್ಚಿಕೊಂಡು ಹೊಸ ಸ್ಫೋಟಕ ಸುದ್ದಿ ತಂದಿದ್ದಾರೆ ಎಂದು ಬೊಗಳೆ ರಗಳೆ ಬ್ಯುರೋದ ಸೊಂಪಾದಕರುಗಳು ತಿಳಿಸಿದ್ದಾರೆ.

ಈಗಾಗಲೇ ನಿರ್ದಯಿ ಅಮಾನವರು ತಾವೇ ಮಾನವರು ಎಂದುಕೊಳ್ಳುತ್ತಾ, ನಿಷ್ಠೆಗೆ ಹೆಸರಾದ ನಮ್ಮನ್ನು ಪ್ರತಿಯೊಂದಕ್ಕೂ ಹೋಲಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಕುಲಕ್ಕೇ ಅವಮಾನ ಎಂದು ಶ್ವಾನಸಂಘದ ಪದಧಿಕ್ಕಾರಿಗಳು, ಬೊಗಳೂರು ಬ್ಯುರೋ ಎಚ್ಚೆತ್ತುಕೊಂಡಿದೆ ಎಂಬುದನ್ನು ತಿಳಿದಾಕ್ಷಣ ಸುದ್ದಿಗೋಷ್ಠಿ ಕಳೆದು ವಿವರ ನೀಡಿದ್ದಾರೆ.

ಇದಲ್ಲದೆ, ತಮ್ಮ ಸಂಘದಲ್ಲಿ ಯಾವುದೇ ಒಡಕಿಲ್ಲ. ಇಡೀ ಜಗತ್ತಿನಲ್ಲಿ ಇರುವುದು ಎರಡೇ ಎರಡು ಸಂಘಗಳು ಮಾತ್ರ. ಒಂದು ತಮ್ಮ ಶ್ವಾನ ಸಂಘ ಮತ್ತು ತಮ್ಮ ಹೆಸರು ಬಳಸಿಕೊಳ್ಳುತ್ತಿರುವವರು, ಸ್ವಾಮಿನಿಷ್ಠೆ ಎಂಬಿತ್ಯಾದಿ ಪದ ಉಪಯೋಗಿಸುತ್ತಿರುವವರು ಸೇರಿದ ಉಳಿದದ್ದೆಲ್ಲವೂ ಹುಚ್ಚು ಶ್ವಾನ ಸಂಘ ಎಂದು ಸ್ಪಷ್ಟನೆ ನೀಡಿದ ಅವರು, ನಾವು ಬೊಗಳುವುದಕ್ಕೂ ರಾಜಕಾರಣಿಗಳು ಬೊಗಳುವುದಕ್ಕೂ ಹೋಲಿಕೆ ಮಾಡಬಾರದು ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಒಂದಲ್ಲ ಒಂದು ದಿನ ಈ ರೀತಿ ಕೆಟ್ಟದಾಗಿ ಬೊಗಳುತ್ತಾ, ಅದು ಶ್ವಾನಗಳ ಬೊಗಳುವಿಕೆ ಎಂದು ಪೋಸು ಕೊಡುತ್ತಿರುವ ಅಮಾನವರ ಅಮಾನವೀಯ ಜನಾಂಗಕ್ಕೆ ಮುಂದಿನ ಜನ್ಮದಲ್ಲಾದರೂ ತಕ್ಕ ಪಾಠ ಕಲಿಸುವುದಾಗಿ ಶ್ವಾನ ಸಂಘದ ಎಲ್ಲ ಪದಧಿಕ್ಕಾರಿಗಳು (ಸಿಂಹಕ್ಕೆ ತಿಳಿಸಬೇಡಿ ಎನ್ನುತ್ತಲೇ) ಘರ್ಜಿಸಿದ್ದಾರೆ! ಮಾತ್ರವಲ್ಲ, ಇನ್ನು ಕರೆಂಟು ಕಂಬ ನೋಡಿದ ತಕ್ಷಣ ಕಾಲೆತ್ತುವವರು ಮಾತ್ರ ನಿಜವಾದ ಶ್ವಾನ ಸಂಘದವರು, ಹೋದಲ್ಲಿ, ಬಿದ್ದಲ್ಲಿ, ಎದ್ದಲ್ಲಿ ಕಾಲೆತ್ತುವವರು ಅಲ್ಲವೇ ಅಲ್ಲ ಎಂಬ ಸಂದೇಶವನ್ನೂ ಶ್ವಾನ ಸಂಘದ ಅಧ್ಯಕ್ಷರು ಬೊಗಳೆ ರಗಳೆ ಮೂಲಕ ಸಮಸ್ತ ಜನತೆಗೆ ಸಂದೇಶ ರವಾನಿಸಿದ್ದಾರೆ.

[ಸೂಚನೆ: ನಾಡಿದ್ದು ಸೋಮವಾರ 28ರಂದು ನಿಮ್ಮೂರಾದ ಬೊಗಳೂರಿನ ಬೊಗಳೆ ರಗಳೆ ಪತ್ರಿಕೆಯಲ್ಲಿ ವಿಶೇಷವಾದ ಘೋಷಣೆ ಇರುತ್ತದೆ - ಸಂ]

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಹಚಾ......ಎ೦ದು ಯಾರಿಗೆ ಬೈಯ್ಯಬೇಕೆ೦ಬುದೂ ತಿಳಿಯದಾಗಿದೆ.. ಅರಿಯದಾಗಿದೆ..!

    ಪ್ರತ್ಯುತ್ತರಅಳಿಸಿ
  2. ಛಿ .. ಛಿ .. ಇವರೆಲ್ಲ ನಮ್ಮ ರಾಜ್ಯವನ್ನಾಳೊ so called ... ಬೇಡ ಬಿಡಿ ,, ಹೇಳಿದರೆ ನಮ್ಮ ನಾಲಿಗೆಗೆ ಹೊಲಸು ...

    ಪ್ರತ್ಯುತ್ತರಅಳಿಸಿ
  3. ಒಂದು ತಿಂಗಳು ಪೂರ್ತಿ ನಿಮ್ಮನ್ನು ಹುಡುಕಾಡಬೇಕಾಯಿತು. ಜೋಕುಮಾರಸ್ವಾಮಿ ಹಾಗು ಚಡ್ಯೂರಪ್ಪನವರ Dogs'leak ಚೆನ್ನಾಗಿದೆ!

    ಪ್ರತ್ಯುತ್ತರಅಳಿಸಿ
  4. ಚುಕ್ಕಿ ಚಿತ್ತಾರಿಗಳೇ,
    ಹಚಾ ಹಚಾ ಎಂದು ಯಾರಿಗೂ ಬೈದ್ರೂ ಅದು ನಡೆಯುತ್ತೆ. ಆದ್ರೆ, ನಿಮ್ಮ ಮನೆಯ ಸುತ್ತಮುತ್ತ ತಿರುಗಾಡಿಕೊಂಡಿರುವ ಶ್ವಾನ ಸಂಘದ ಸದಸ್ಯರಿಗೆ ಮಾತ್ರ ಅಪ್ಪಿ ತಪ್ಪಿಯೂ ಬೈಯಬಾರದು!

    ಪ್ರತ್ಯುತ್ತರಅಳಿಸಿ
  5. ಶ್ರೀಧರ ಅವರೇ, ದಯವಿಟ್ಟು ಸೋ ಕಾಲ್ಡ್ ಎಂಬುದನ್ನು ಮುಂದವರಿಸಿ, ಶ್ವಾನಗಳು ಅಂತ ಹೇಳಬಾರದು. ಶ್ವಾನ ಸಂಘದ ಸದಸ್ಯರಿಗೆಲ್ಲರಿಗೂ ನೋವಾಗುತ್ತದೆಯಂತೆ!

    ಪ್ರತ್ಯುತ್ತರಅಳಿಸಿ
  6. ಸುನಾಥರೇ,
    ನಾವು ಕೂಡ ಒಂದೇ ತಿಂಗಳು ಅಂತ ತಿಳಿದುಕೊಂಡಿದ್ದೆವು. ಆದರೆ ಅದು ಎರಡು ತಿಂಗಳೇ ಕಳೆದಿದ್ದು ನಮಗೆ ಇವತ್ತೇ ಗೊತ್ತಾಗಿದ್ದು. ಜೋಕುಮಾರಸ್ವಾಮಿ ಅಂತೂ ಹೇಳ್ಬಿಟ್ಟಿದ್ದಾರೆ, ಈಗ ಲೀಕ್ ಆಗಿರೋದು ಕೇವಲ 20 ಶೇಕಡಾ ಮಾತ್ರ ಅಂತ. ಇನ್ನೂ 80 ಶೇಕಡಾ ಲೀಕ್ ಆಗೋವಾಗ, ಈ ಸರಕಾರ ಎಲ್ಲಿರುತ್ತೋ!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D