ಬೊಗಳೆ ರಗಳೆ

header ads

ಶಾಲೆಯ ಭಯ: ಎವರೆಸ್ಟ್ ಹುಡುಗ್ರ ಎವರ್ ರೆಸ್ಟ್!

[ಬೊಗಳೂರು ತನಿಖಾನ್ವೇಷಣಾ ಬ್ಯುರೋದಿಂದ]
ಬೊಗಳೂರು, ಜೂ.17- ಬೊಗಳೂರಿನ ಶಾಲೆಗಳಿಂದ ಮಕ್ಕಳು ಇತ್ತೀಚೆಗೆ ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಶಾಲೆಗಳಲ್ಲಿ ಹಾಜರಾತಿ ತೀರಾ ಕುಸಿದುಬಿದ್ದಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯದ ಸರ್ವರನ್ನೂ ಶಿಕ್ಷಿಸುವ ಅಭಿಯಾನದ ಹೊಣೆ ಹೊತ್ತ ಶಿಕ್ಷಣ ಸಚಿವರು, ಬೊಗಳೂರು ಬ್ಯುರೋ ಸಂಪರ್ಕಿಸಿ ಮಾಹಿತಿ ನೀಡಿದ್ದಾರಲ್ಲದೆ, ತನಿಖೆಯನ್ನೂ ನಡೆಸುವಂತೆ ಆದೇಶಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲು ಕನಿಷ್ಠ 26 ವರ್ಷಗಳಾದರೂ ಬೇಕು, ಅದಕ್ಕಿಂತ ಮೊದಲು ಬಾಲಕರು ನಾಪತ್ತೆಯಾಗಲು ಕಾರಣರಾದವರನ್ನು ಬಂಧಿಸಿದ ನಾಟಕವಾಡಿ, ಬಿಡುಗಡೆಗೊಳಿಸಿ ವಿಮಾನದಲ್ಲಿ ವಿದೇಶಕ್ಕೆ ಕಳುಹಿಸಿಕೊಡಬೇಕು... ಇತ್ಯಾದಿ ಫಾರ್ಮಾಲಿಟಿಗಳೆಲ್ಲಾ ಇವೆಯಲ್ಲಾ, ಅದೆಲ್ಲಾ ಆದ ಮೇಲೆ ನಾವು ತನಿಖೆ ಶುರು ಮಾಡುತ್ತೇವೆ ಎಂದು ಸರಕಾರಕ್ಕೆ ಭರವಸೆ ನೀಡಲಾಗಿದೆ.

ಇದಕ್ಕೆ ಸಚಿವರು ಒಪ್ಪಿದ ಬಳಿಕ ತನಿಖೆಯನ್ನು ತೀವ್ರಗತಿಯಲ್ಲೇ ಮುಂದುವರಿಸಲಾಯಿತು. ಹೀಗಾಗಿ ತಲೆಗೆ ಹೆಲ್ಮೆಟ್, ಬೆನ್ನಿಗೆ ಬಲುದೊಡ್ಡ ಗನ್ನಿ ಬ್ಯಾಗ್, ಅದರೊಳಗೆ ಪುಸ್ತಕಗಳ ರಾಶಿ, ಕೈಯಲ್ಲೊಂದು ಉದ್ದದ ಅಜ್ಜನ ಕೋಲಿನಂತಹ ಕೊಡೆ, ಓದಿ ಓದಿ ಹಾಳಾದ ಕಣ್ಣಿಗೆ ದಪ್ಪ ಗಾಜಿನ ಕನ್ನಡಕ, ಕಾಲಿಗೆ ಕರಿಬೂಟು, ಕೈಗೆ ಕೈಗವುಸು ಇತ್ಯಾದಿಗಳನ್ನೆಲ್ಲಾ ಧರಿಸಿಕೊಂಡು ನಮ್ಮ ಅನ್ವೇಷಣೆಯನ್ನು ಆರಂಭಿಸಲಾಯಿತು.

ಕನ್ಯಾಕುಮಾರಿಯಿಂದ ಅಭಿಯಾನ ಆರಂಭಿಸಿದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳೂ, ಮೇಲೆ ಮೇಲೆ ಇಂಚಿಂಚಾಗಿ ಶೋಧಿಸುತ್ತಾ ಹೊರಟು, "ಮದ್ಯ"ಪ್ರದೇಶದಲ್ಲಿ ಪೆಟ್ರೋಲ್ ಹಾಕಿಸಿಕೊಂಡು, ಅಲ್ಲಿಂದ ಮೇಲೇಳುತ್ತಿದ್ದ ಅನಿಲದ ವಾಸನೆಯನ್ನು ಆಘ್ರಾಣಿಸುತ್ತಾ, ಮುಂದುವರಿಯಲಾಯಿತು.

ಮೇಲಮೇಲಕ್ಕೆ ಹೋಗಿ ಹೋಗಿ ತಲುಪಿದ್ದು ಎವರೆಸ್ಟ್ ಶಿಖರದ ತುತ್ತ.... ತುದಿಗೆ ಖಂಡಿತಾ ಅಲ್ಲ, ಅದರ ಬುಟ್ಟ-ಬುಡಕ್ಕೆ! ಅಲ್ಲಿ ಹೋಗಿ ಆಯಾಸದಿಂದ ಬಿದ್ದವರು ಮೇಲಕ್ಕೆ ನೋಡಿದಾಗ... ಕಂಡಿದ್ದೇನು...! ಎಲ್ಲ ಮಕ್ಕಳೂ ಅದರ ತುತ್ತ ತುದಿಯಲ್ಲಿದ್ದಾರೆ!

ಕೂಡಲೇ ನಾವು ಕೂಡ ಮೇಲೇರಲು ಪ್ರಯತ್ನಿಸಿ ಪ್ರಯತ್ನಿಸಿ ವಿಫಲವಾದಾಗ, ಅಲ್ಲಿಂದಲೇ ಸಂದರ್ಶನಕ್ಕೆ ಕೋರಿಕೊಳ್ಳಲಾಯಿತು. ಬೇಗ ಮರಳಿ ಬನ್ನೀ, ನಿಮ್ಮನ್ನು ಎಲ್ಲರೂ ಕೇಳುತ್ತಿದ್ದಾರೆ ಎಂದು ಅವರಿಗೆ ಹೇಳಲಾಯಿತು.

ಅದಕ್ಕೆ, ಈಗಾಗಲೇ 13 ವಯಸ್ಸಿನಲ್ಲೇ ಎವರೆಸ್ಟ್‌ನಲ್ಲಿ ಏರಿ, ಇತಿಹಾಸ ಸೃಷ್ಟಿಸಿದ ಬಾಲಕರೆಲ್ಲರೂ, "ನಾವು ಖಂಡಿತಾ ಬರೋದಿಲ್ಲ, ಇಲ್ಲಾದರೆ ನಮಗೆ ಹೋಂ ವರ್ಕ್ ಒತ್ತಡ ಇಲ್ಲ, ಶಾಲೆಗೆ ಹೋಗಲೇಬೇಕಿಲ್ಲ, ಮಣಭಾರದ ಸ್ಕೂಲ್ ಬ್ಯಾಗ್ ಹೊರಬೇಕಿಲ್ಲ. ಮನೆಗೆ ಬಂದ ತಕ್ಷಣ ಟ್ಯೂಷನ್ ಕ್ಲಾಸಿಗೆ, ಸಂಗೀತ ಕ್ಲಾಸಿಗೆ, ನಾಟ್ಯ ಕ್ಲಾಸಿಗೆ, ಇಂಡಿಯನ್ ಐಡಲ್ ಕ್ಲಾಸಿಗೆ ಅಥವಾ ರಿಯಾಲಿಟಿ ಶೋಗಳಿಗೆ, ಲೈವ್ ಶೋಗಳಿಗೆ ಹೋಗು ಎಂಬ ಒತ್ತಡ ಇರಲ್ಲ. ನಾವು ಇಲ್ಲೇ ಆರಾಮವಾಗಿದ್ದೇವೆ. ಚೆಂಡಾಟ ಆಡಿಕೊಂಡು ಎವರೆಸ್ಟ್‌ನಲ್ಲಿಯೇ ಎವರ್ ರೆಸ್ಟ್ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ" ಎಂದುಬಿಟ್ಟರು.

ಇಲ್ಲೇ ಇದ್ದರೆ, ಜಗತ್ತಿನಲ್ಲಿ, ನಮ್ಮ ಭಾರತದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಒಂದಿಷ್ಟು ಬಗ್ಗಿ ನೋಡಿಬಿಟ್ಟರೆ ಎಲ್ಲವೂ ತಿಳಿಯುತ್ತದೆ ಎಂದು ಆ ಎವರೆಸ್ಟ್ ಏರಿದ ಅತಿ ಕಿರಿಯನೆಂಬ ಸಾಧನೆ ಮಾಡಿದ ಮಗು ಹೇಳಿದ ತಕ್ಷಣವೇ, ಅಲ್ಲಿಂದ ಧಢಾರನೆ ಬಿದ್ದ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಎದ್ದದ್ದು ಬೊಗಳೂರಿನಲ್ಲಿಯೇ! ಮತ್ತು ಆ ಮಕ್ಕಳಿಗೆ ಎವರೆಸ್ಟ್ ಏರುವುದನ್ನೇ ನಿಷೇಧಿಸಿರುವ ಚೀನಾ ಸರಕಾರದ ನಿರ್ಧಾರದಲ್ಲಿ ಬೊಗಳೆ ರಗಳೆ ಬ್ಯುರೋದ ಕೈವಾಡವಿಲ್ಲ ಎಂಬುದನ್ನು ತಿಳಿಹೇಳುವಲ್ಲಿ ಸಾಕುಬೇಕಾಯಿತು!

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಮಣಭಾರವನ್ನು ಹೊರುವ ನಮ್ಮ ಮಕ್ಕಳು ಎವರೆಸ್ಟ್ ಏರುವುದಿರಲಿ, ಪರ್ಮನೆಂಟ್ ರೆಸ್ಟ್ ತೆಗೆದುಕೊಳ್ಳದಿದ್ದರೆ ಅದೇ ಪುಣ್ಯ !.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಅಸತ್ಯಾನ್ವೇಶಿಗಳೆ...
    ಇಷ್ಟೆಲ್ಲಾ ಅಸತ್ಯಗಳನ್ನು ಸ೦ಚೋದಿಸಿದ ತಮ್ಮ ಏಕಸದಸ್ಯ ಬ್ಯೂರೋದ ಒಬ್ಬ ಸದಸ್ಯನಿಗಾದರೂ ಈ ಬಾರಿ ಒ೦ದಿಲ್ಲದಿದ್ದರೆ ಬಿಡಲಿ..ಚೂರಾದರೂ ಪ್ರಶಸ್ತಿ ಕೊಡುವ ಆಲೋಚನೆ ಸರಕಾರಕ್ಕೆ ಬರಲೀ ಎ೦ದು ಬಿದ್ದೆದ್ದು ಪ್ರಾರ್ಥಿಸಿ''ಕೊಳ್ಳಿ''ರೆನ್ದು ನೆನಪಿಸುತ್ತಿದ್ದೇನೆ....

    ಪ್ರತ್ಯುತ್ತರಅಳಿಸಿ
  4. ನೀವು ಸತ್ಯವನ್ನು ಕಂಡು ಹಿಡಿದು ಬಿಟ್ಟಿರಲ್ಲ!

    ಪ್ರತ್ಯುತ್ತರಅಳಿಸಿ
  5. ಸುಬ್ರಹ್ಮಣ್ಯರೇ,
    ಇದಕ್ಕಾಗಿಯೇ ಇತ್ತೀಚೆಗೆ ಶಾಲೆಗಳಲ್ಲಿಯೂ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

    ಪ್ರತ್ಯುತ್ತರಅಳಿಸಿ
  6. ಚುಕ್ಕಿಗಳೇ ಮತ್ತು ಚಿತ್ತಾರರೇ
    ನಿಮ್ಮ ಕಾಮೆಂಟನ್ನು ಎಷ್ಟೇ ಸಾರಿ ಓದಿಕೊಂಡರೂ, ಅಲ್ಲಿ 'ಪ್ರಶಸ್ತಿ' ಎಂಬುದರ ಬದಲಾಗಿ ನಮಗೆ 'ಒದೆ' ಎಂದೇ ಕಾಣಿಸುತ್ತಿದೆ. ನಮ್ಮ ಕಂಪ್ಯೂಟರಿನಲ್ಲಿ ಏನಾದರೂ ದೋಷವಿರಬಹುದೇ? ಅಥವಾ ಆ ಶಬ್ದ ಹಾಗೆಯೇ ಇರುತ್ತದೆಯೇ? ಆದರೂ ಪ್ರಾರ್ಥಿಸಿದ ಬಳಿಕ 'ಕೊಲ್ಲಿ'ರೆಂದು ಹೇಳಿದ್ದು ಸರಿಯೇ? ಅದನ್ನೂ ಸ್ಪಷ್ಟಪಡಿಸಲು ತನಿಖಾ ಮಂಡಳಿಯೊಂದನ್ನು ಈಗಲೇ ರಚಿಸಿದ್ದೇವೆ.

    ಪ್ರತ್ಯುತ್ತರಅಳಿಸಿ
  7. ಸುನಾಥರವರೇ,
    ಈ ವರದ್ದಿಯನ್ನೂ ನೀವು ಸತ್ಯ ಎಂದು ಜರೆದಿರುವುದರಿಂದ ಮತ್ತು ಸತ್ಯಾಸತ್ಯತೆಗಳ ನಡುವೆ ಈ ಗುಂಡಗಿರುವ ಭೂಮಿಯಲ್ಲೀಗ ವ್ಯತ್ಯಾಸವೇ ಗೋಚರಿಸದೇ ನಮ್ಮ ವರದ್ದಿಗಾರರು ಗೊಂದಲದಲ್ಲಿ ಇರುವುದರಿಂದಾಗಿ, ಈ ವಿಷಯವನ್ನು ಅಸತ್ಯಶೋಧನಾ ಸಮಿತಿಗೆ ಒಪ್ಪಿಸಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D