(ಬೊಗಳೂರು ಓಂ ಶಾಂತಿ ಓಂ ಬ್ಯುರೋದಿಂದ)
ಬೊಗಳೂರು, ಫೆ. 16- ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಬೊಗಳೂರು ಬ್ಯುರೋದ ಸಿಬ್ಬಂದಿಯೂ ತನಿಖೆ ಮಾಡಿದ್ದು, ಪ್ರಧಾನ ಆರೋಪಿಯನ್ನು ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಸೇರಿಕೊಂಡು ಪತ್ತೆ ಹಚ್ಚಿದ್ದಾರೆ.
ಪುಣೆ ಸ್ಫೋಟದ ಹಿಂದಿನ ರೂವಾರಿ ಶಾ ಎಂಬ ಪದದಿಂದ ಆರಂಭವಾಗುವ ಹೆಸರಿರುವ ಒಬ್ಬ ಮಹಿಳೆ ಎಂದು ಆರಂಭಿಕ ತನಿಖೆಯಿಂದ ಗೊತ್ತಾದ ತಕ್ಷಣವೇ ಬೊಗಳೂರಿನ ಬೊಗಳಿಗರ ತಂಡವು ನೇರವಾಗಿ ತನಿಖೆಗೆ ಭಾರತ-ಪಾಕಿಸ್ತಾನ ಗಡಿಗೆ ಹೋಯಿತು.
ಮಹಿಳೆ ಎಂಬ ಸುಳಿವು ಪತ್ತೆಯಾಗುವುದಕ್ಕೂ ಕಾರಣವಿದೆ. ಇದೊಂದು ಸಿಲಿಂಡರ್ ಸ್ಫೋಟ ಪ್ರಕರಣ ಎಂದು ಆರಂಭಿಕ ಮಾಹಿತಿಗಳು ಹೇಳಿದ್ದಾಗಲೇ, ಬೊಗಳೂರು ಬ್ಯುರೋ, ಅಡುಗೆ ಸಿಲಿಂಡರ್ ಆಗಿರುವುದರಿಂದ ಇದರ ಹಿಂದೆ ಖಂಡಿತ ಮಹಿಳೆಯೊಬ್ಬರು ನಿಂತಿದ್ದಿರಬಹುದು ಎಂದು ಶಂಕಿಸಿತ್ತು. (ಈಗ ಕಾಲ ಬದಲಾಗಿ, ಮಹಿಳೆಯರ ಬದಲಾಗಿ ಕೆಲವೊಮ್ಮೆ ಪುರುಷರು ಕೂಡ ಅಡುಗೆ ಸಿಲಿಂಡರ್ ಇಟ್ಟುಕೊಂಡು ಮನೆಯಲ್ಲಿ ಅಡುಗೆ ಮಾಡುತ್ತಿದ್ದರೂ ಕೂಡ!).
ಈ ಮಹಿಳೆಯ ಹೆಸರು 'ಶಾ'ದಿಂದ ಆರಂಭವಾಗುತ್ತಿದೆ ಎಂದು ತಿಳಿದ ತಕ್ಷಣ, ಇದಕ್ಕೂ ಪಾತಕಿಸ್ತಾನದ ಬಗೆಗೆ ಕೇಂದ್ರ ಸರಕಾರದ ನೀತಿಗೂ ಸಂಬಂಧವಿದೆಯೇ ಎಂದು ಹೊಳೆಯಿತು. ತಕ್ಷಣವೇ ನಮ್ಮ ಸರಕಾರ ಹೇಳುತ್ತಿರುವ ಶಾಂತಿ ಮಂತ್ರವೇ ನೆನಪಾದ ತಕ್ಷಣ, ಈ ಮಹಿಳೆ ಬೇರಾರೂ ಅಲ್ಲ, ಶಾಂತಿ ಎಂಬುದು ಖಚಿತವಾಯಿತು.
ಇದರೊಂದಿಗೆ, ಪುಣೆ ಸ್ಫೋಟದಲ್ಲಿ ಶಾಂತಿಯ ಕೈವಾಡವಿರುವುದು ಬಹಿರಂಗಗೊಂಡಂತಾಗಿದೆ. ಭಯೋತ್ಪಾದನೆ ಕೈಬಿಡದೆ ಶಾಂತಿಯ ಕುರಿತಾದ ಮಾತುಕತೆಯನ್ನು ಪ್ರಪೋಸ್ ಮಾಡುವುದೇ ಇಲ್ಲ ಎಂದು ಹೇಳುತ್ತಿದ್ದ ಯುಪಿಎ ಸರಕಾರ, ಇತ್ತೀಚೆಗೆ ತೊಂದರೆ ಇಲ್ಲ, ಶಾಂತಿಯೇ ಬೇಕು ಎಂದು ಹಠ ಹಿಡಿದು ಪ್ರಸ್ತಾಪ ಮುಂದಿಟ್ಟಿತ್ತು. ಇದೀಗ ಈ ಶಾಂತಿಯೇ ಈ ಅಶಾಂತಿಗೆ ಕಾರಣ ಎಂದು ಬೊಗಳೂರು ಬ್ಯುರೋ ಪತ್ತೆ ಹಚ್ಚಿ, ಸಂಚೋದನೆ ನಡೆಸಿದೆ.
4 ಕಾಮೆಂಟ್‌ಗಳು
ಅತ್ತ ಶಾಂತಕ್ಕ...ಇತ್ತ ಅಶಾಂತಕ್ಕ..! ಅನ್ವೇಶಿಗಳ ಸಂಚೋದನೆಯಿಂದಲಾದರೂ ಶಾಂತಿ ಮೂಡಲಿ...ಸೋನಕ್ಕ ಏನನ್ನುತ್ತಾರೋ ??!
ಪ್ರತ್ಯುತ್ತರಅಳಿಸಿಓಂ ಶಾಂತಿಃ ಶಾಂತಿಃ ಶಾಂತಿಃ ||
ಪ್ರತ್ಯುತ್ತರಅಳಿಸಿಸುಬ್ರಹ್ಮಣ್ಯರೇ,
ಪ್ರತ್ಯುತ್ತರಅಳಿಸಿಶಾಂತಕ್ಕ ಪಾಪಕ್ಕ ಆಗಿ ಆಗಿ ದೇಶಾನೇ ಕೊರಗ್ತಾ ಇದೆ. ಸೋನಕ್ಕ ಅಂತೂ ಸಂಭ್ರಮದಿಂದ ಬೆಲೆ ಏರಿಕೆ ಆಚರಿಸ್ತಾ ಇದ್ದಾರೆ...
ವಿ.ಆರ್.ಭಟ್ ಅವರೇ, ಬೊಗಳೂರಿಗೆ ಸ್ವಾಗತ, ಸುಸ್ವಾಗತ.
ಪ್ರತ್ಯುತ್ತರಅಳಿಸಿಹೊಸ ವರ್ಷದ ಶುಭಾಶಯಕ್ಕೆ ಲೇಟಾಗಿ ಪ್ರತಿ-ಶುಭಾಶಯಗಳು. ನೀವು ಕೂಡ ಶಾಂತಿ ಮಂತ್ರ ಜಪಿಸುತ್ತಿರುವುದರಿಂದಾಗಿ ಶಾಂತಿಗೆ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ... ಎಚ್ಚರಿಕೆ...!
ಏನಾದ್ರೂ ಹೇಳ್ರಪಾ :-D