(ಬೊಗಳೂರು ಈಡಿಯಟ್ಸ್ ಬ್ಯುರೋದಿಂದ)
ಬೊಗಳೂರು, ಜ.18 -ಕರ್‌ನಾಟಕದ ಬೆಳವಣಿಗೆಗಳಿಂದ ತೀವ್ರ ರೊಚ್ಚಿಗೆದ್ದಿರುವ ಆಮೀರ್ ಖಾನ್, ವಿಧು ವಿನೋದ್ ಚೋಪ್ರಾ ಮತ್ತು ರಾಮ್ ಗೋಪಾಲ್ ವರ್ಮಾ ಅವರೆಲ್ಲರೂ ಸೇರಿಕೊಂಡು 3 ಈಡಿಯಟ್ಸ್ ಎಂಬ ಚಿತ್ರವನ್ನು ಕಸದಬುಟ್ಟಿಗೆ ಹಾಕಿ All Idiots ಎಂಬ ಚಿತ್ರ ನಿರ್ಮಿಸಲು ತರಾತುರಿಯ ನಿರ್ಧಾರ ಕೈಗೊಂಡಿದ್ದಾರೆ.
ಇದು ನಿರಂತರವಾಗಿ ಓಡಲಿರುವ ಚಿತ್ರವಾಗಿದ್ದು, ಇದನ್ನು ವೀಕ್ಷಿಸಲು ಯಾವುದೇ ಶುಲ್ಕ ತೆರಬೇಕಾಗಿಲ್ಲ. ಈ ಚಿತ್ರವು ಚಿತ್ರ ಮಂದಿರಗಳಲ್ಲಿಯೂ ಪ್ರದರ್ಶಿಸಲ್ಪಡುವುದಿಲ್ಲ. ಬದಲಾಗಿ, ಕರ್ನಾಟಕದ ಬೀದಿ ಬೀದಿಗಳಲ್ಲಿ, ನಿಧಾನಸೌಧದ ಒಳಗೆ ಮತ್ತು ಹೊರಗೆ ಹಾಗೂ ಬಹುತೇಕ ವಾರ್ತಾ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ವಿಭಾಗಗಳಲ್ಲೇ ಆಗಾಗ್ಗ ತೋರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಆದರೆ ಸಂಭಾಷಣೆ ಸಂದರ್ಭ ಮಧ್ಯೆ ಮಧ್ಯೆ 'ಕೀಂ....ssss' ಅಂತ ಸೌಂಡ್ ಬಂದರೆ ನಾವು ಜವಾಬ್ದಾರರಲ್ಲ ಎಂದೂ ನಿರ್ಮಾಪ-ಕರುಗಳು ತಿಳಿಸಿದ್ದಾರೆ.
ಈ ಮಧ್ಯೆಯೇ, ವೇದೇಗೌಡರ ಮಾಜಿ ಪ್ರಧಾನಿ ಎಂಬ ಬಿರುದನ್ನು ಕಿತ್ತೊಗೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವ ಸಂಗತಿಯೂ ಎಲ್ಲಿಯೂ ಬೆಳಕಿಗೆ ಬರಲಿಲ್ಲ. ನೈಸ್ ರಸ್ತೆಯಲ್ಲಿ ಹೇಗೆ ನಿಯಂತ್ರಣವಿಲ್ಲದೆಯೇ ಎಕ್ಸ್‌ಪ್ರೆಸ್ ಆಗಿ ನಾಲಿಗೆಯನ್ನು ಹರಿಯಬಿಟ್ಟರೆ ಹೇಗಾಗುತ್ತದೆ ಎಂದು ಪ್ರಯೋಗ ಮಾಡಿ ನೋಡಿರುವುದಾಗಿಯೂ ವೇದೇಗೌಡರು ಪ್ರತಿಕ್ರಿಯಿಸಿದ್ದಾರೆ.
ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವೆಂದರೆ, ಈಗಾಗಲೇ ಈ ಕನ್ನಡ ನಾಡಿನಲ್ಲಿ ನಾನು ಹುಟ್ಟಬಾರದಾಗಿತ್ತು ಎಂದೆಲ್ಲಾ ಹೇಳಿದ್ದ ವೇದೇಗೌಡರ ಬಾಯಲ್ಲಿ ಬಂದ ಅತ್ಯಮೂಲ್ಯ ಶಬ್ದಗಳು.
6 ಕಾಮೆಂಟ್‌ಗಳು
ನಿಜ...ಇಂತಹದ್ದೊಂದು ಸಿನಿಮಾ ಬರಬೇಕು...ಅದರ ಬಗ್ಗೆ ಮತ್ತೆ ನೀವು ಬರೆಯಬೇಕು...ಹ್ಹ...ಹ್ಹ..
ಪ್ರತ್ಯುತ್ತರಅಳಿಸಿವಿಧಾನಸೌಧದಲ್ಲಿ ನಿರ್ಮಾಣವಾಗಿ, ಬೀದಿ ಬೀದಿಗಳಲ್ಲಿ ಪ್ರದರ್ಶಿತವಾಗುವ ಈ (ವಿ)ಚಿತ್ರವು Comedy of the Century ಆಗಬಹುದೆ? ಈ ಈಡಿಯಟ್ಟುಗಳಲ್ಲಿ ನಾಯಕ ಈಡಿಯಟ್ ಯಾರು?
ಪ್ರತ್ಯುತ್ತರಅಳಿಸಿದಿ ಮೋಸ್ಟ್ ಪರ್ಫೆಕ್ಟ್ ಈಡಿಯಟ್ ಅವಾರ್ಡ್ ಅಂತು ಗೌಡ್ರ ಫೆಮಿಲಿಗೇ,, ಆದ್ರೆ ಪ್ರತಿಸಲ ಅಪ್ಪ, ಮಗ ಜೊತೆಗೆ ಈಗ ಬಹುರಾಣಿ(ನಮ್ ಗೌಡರ ಸೊಸೆ) ಯವರನ್ನೇ ಗೆಲ್ಲಿಸ್ತೀವಲ್ಲ, ನಾವು ಯಾವ ಕೆಟಗರಿ ಈಡಿಯಟ್ಟಿಗೆ ಸೇರ್ತೀವ್ರಿ?
ಪ್ರತ್ಯುತ್ತರಅಳಿಸಿಸುಬ್ರಹ್ಮಣ್ಯರೇ, ಸಿನಿಮಾ ಬಂದರೆ, ಅದರ ಬಗ್ಗೆ ಎಡವಟ್ಟು ಬರೆಯಲು ಈಡಿಯಟ್ಟುಗಳೇ ಬೇಕೂಂತ ಹಠ ಹಿಡಿದಿದ್ದಾರೆ ವೇದೇಗೌಡ್ರು.
ಪ್ರತ್ಯುತ್ತರಅಳಿಸಿಸುನಾಥರೇ,
ಪ್ರತ್ಯುತ್ತರಅಳಿಸಿಹೌದು, ಇದು ಕಾಮಿಡಿ ಆಫ್ ಎರರ್ಸ್ ಕೂಡ ಹೌದು.
ಸಾಗರಿಯವರೆ, ಬೊಗಳೂರಿಗೆ ಸ್ವಾಗತ, (ತಡವಾಗಿ ಕೋರುತ್ತಿದ್ದೇವೆ).
ಪ್ರತ್ಯುತ್ತರಅಳಿಸಿಕುಮಾರಣ್ಣನಿಗೆ ಬಹು-ರಾಣಿಯವರಿರುವ ಸಂಗತಿ ಈಗಾಗಲೇ ಜಗಜ್ಜಾಹೀರಾಗಿರುವುದರಿಂದ, ನಾವು ಯಾರನ್ನು ಕೂಡ ಆರಿಸಿಬಿಡುವ ನಮ್ಮ ಸ್ಥಿತಪ್ರಜ್ಞತೆಯನ್ನು ಬೇಕಿದ್ದರೆ ದೂರಬಹುದು. ಈ ಬಗ್ಗೆ ಪೊಲೀಸರಿಗೂ ದೂರು ನೀಡಬಹುದು.
ಏನಾದ್ರೂ ಹೇಳ್ರಪಾ :-D