ಬೊಗಳೆ ರಗಳೆ

header ads

ಬೇಕಾರಾಗಿದ್ದಾರೆ!

[ಮುಂಬೈ ಮೇಲೆ ಪಾಕಿಸ್ತಾನೀ ಬೆಂಬಲಿತ ಉಗ್ರಗಾಮಿಗಳಿಂದ ದಾಳಿ ನಡೆದು ಒಂದು ವರ್ಷವಾದರೂ, ಪಾಕಿಸ್ತಾನವು ಪರಿಣಾಮಕಾರಿಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆ ರೀತಿ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಬೊಗಳೂರಿನಲ್ಲಿ ಕಾಣಿಸಿಕೊಂಡ ಜಾಹೀರಾತಿದು]

ಮುಂಬೈ ಮೇಲೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದಾಳಿ ನಡೆಸಿದವರು ಮತ್ತು ಅವರ ಅಪ್ಪ ಅಮ್ಮ ಎಲ್ಲರೂ ಪಾಕಿಸ್ತಾನದಲ್ಲಿದ್ದಾರೆ ಎಂಬುದು ಜಗತ್ತಿಗೇ ತಿಳಿದರೂ, ಪಾಕಿಸ್ತಾನವು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡಿಸುವ ವ್ಯಕ್ತಿಗಳು ಬೇಕಾರಾಗಿದ್ದಾರೆ.


ಪಾಕಿಸ್ತಾನವು ಪ್ರತಿ ಬಾರಿಯೂ ಸಾಕ್ಷ್ಯಾಧಾರ ಕೊಡಿ, ಸಾಕ್ಷ್ಯಾಧಾರ ಕೊಡಿ ಅಂತ ಕೇಳುತ್ತಿರುವಾಗ, ಕೊಡ್ತೀವಿ ಕೊಡ್ತೀವಿ ಅನ್ನುತ್ತಲೇ ರಾಶಿ ರಾಶಿ ಕಾಗದ ಪತ್ರಗಳನ್ನು ಟ್ರಕ್‌ಗಳಲ್ಲಿ ಪಾಕಿಸ್ತಾನಕ್ಕೆ ರವಾನಿಸುವ ಸರಕಾರವನ್ನು ನಿಭಾಯಿಸುವವರು ಬೇಕಾರಾಗಿದ್ದಾರೆ.


ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಯನ್ನು ಇನ್ನಾದರೂ ಸಮರ್ಥವಾಗಿ ಎದುರಿಸುವಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಆಧುನೀಕರಣಗೊಳಿಸಲು ಸಮಯವಿಲ್ಲದಿರುವುದರಿಂದ, ಇನ್ನಾದರೂ ಪೊಲೀಸರಿಗೆ ಬಲ ತುಂಬುವವರು ಬೇಕಾರಾಗಿದ್ದಾರೆ.


ಪಾಕಿಸ್ತಾನದೊಂದಿಗೆ ಶಾಂತಿ ಶಾಂತಿಯೇ ಮುಖ್ಯವಾಗಿರುವವರು ಮತ್ತು ಯಾವುದೇ ಕಾರಣಕ್ಕೂ ಪಾಕಿಸ್ತಾನವು ನೊಂದುಕೊಳ್ಳಬಾರದು. ಯಾಕೆಂದರೆ, ಅವರಲ್ಲಿಯೂ ಉಗ್ರಗಾಮಿಗಳ ದಾಳಿ ನಡೆಯುತ್ತಿದೆಯಲ್ಲ ಎಂಬ ಮನೋಭಾವವಿರುವವರು ದೇಶವಾಳಲು ಬೇಕಾರಾಗಿದ್ದಾರೆ.


ಪಾಕಿಸ್ತಾನವನ್ನು ನಡುಗಿಸುವ, ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ವ ರೀತಿಯಲ್ಲಿಯೂ ಒತ್ತಡ ಹೇರುವ ಅವಕಾಶಗಳನ್ನೆಲ್ಲಾ ಕೈಚೆಲ್ಲಿ, ಶಾಂತಿ ಮಂತ್ರ ಪಠಿಸುತ್ತಲೇ ಇರುವವರು ಬೇಕಾಗಿದ್ದಾರೆ.


ಅತ್ತ ಕಡೆಯಿಂದ ಚೀನಾ ಪಾಕಿಸ್ತಾನಕ್ಕೆ ಸಕಲ ರೀತಿಯಲ್ಲಿಯೂ ನೆರವು ನೀಡುತ್ತಾ, ಅರುಣಾಚಲ ಪ್ರದೇಶ ನನ್ನದು ಎಂದು ಹೇಳಿಕೊಳ್ಳುತ್ತಲೇ ಇದೆ. ಇನ್ನೊಂದೆಡೆಯಿಂದ, ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಹೋರಾಡಲೆಂದು ಕೋಟಿ ಕೋಟಿ ನೆರವು ನೀಡುತ್ತಲೇ, ಭಾರತ ನನ್ನ ಪರಮಾಪ್ತ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಇವುಗಳೊಂದಿಗೆ ಮೈತ್ರಿಯನ್ನು ಗಾಢವಾಗಿ ಬೆಸೆಯುವವರು ಬೇಕಾರಾಗಿದ್ದಾರೆ.


ದೇಶದಲ್ಲಿ ಪ್ರಜೆಗಳು ಬೆಲೆ ಏರಿಕೆಯಿಂದ ಕಂಗಾಲಾಗಿ, ಪ್ರವಾಹ, ಅತಿವೃಷ್ಟಿ-ಪ್ರವಾಹ, ಅನಾವೃಷ್ಟಿಯಿಂದ ತತ್ತರಿಸುತ್ತಿದ್ದರೂ, ನಮಗೆ ಬೇರೆ ದೇಶಗಳೊಂದಿಗಿನ ಸಂಬಂಧವೇ ಮುಖ್ಯ, ಅದಕ್ಕಿಂತಲೂ ಅಣು ಒಪ್ಪಂದ ಮುಖ್ಯ ಎನ್ನುತ್ತಾ, ದೇಶದ ಜನತೆಯ ಕಣ್ಣೀರೊರೆಸಬೇಕಾದವರು ಬೇಕಾರಾಗಿದ್ದಾರೆ.


ಭವಿಷ್ಯದಲ್ಲಿ ನಡೆಯುವ ಉಗ್ರರ ನೂರಾರು ದಾಳಿ ಪ್ರಕರಣಗಳಿಗೆ ಈಗಲೇ ವಿಷಾದಿಸ್ತೀವಿ ಮತ್ತು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ತೀವಿ ಅಂತ ಭರವಸೆಯನ್ನು ಈಗಲೇ ಕೊಡುವ ದೇಶವಾಳುವ ನಾಯಕರೂ ಬೇಕಾರಾಗಿದ್ದಾರೆ.


ಮುಖ್ಯ ಅರ್ಹತೆ: ಉಗ್ರಗಾಮಿಗಳೇನಾದರೂ ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡಿದರೆ ಅವರಿಗೆಲ್ಲಾ ಬಾಳಾ ಠಾಕ್ರೆ ಮತ್ತು ಶಿವಸೇನೆಯ ವಿರುದ್ಧ ಏನಾದರೂ ಒದರುವಂತೆ ಉಪಾಯ ಮಾಡಿ ಮನವೊಲಿಸುವುದು. ಇದರಿಂದ ಶಿವಸೈನಿಕರೇ ಈ ಉಗ್ರರನ್ನು ಚೆನ್ನಾಗಿ ಚಚ್ಚಿ ಚಚ್ಚಿ ಮುಗಿಸಿಬಿಡಬಹುದು. ಇಲ್ಲವಾದರೆ, ಹಿಂದಿ, ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಂತೆ/ಶಪಥ ಮಾಡುವಂತೆ/ಪಣ ತೊಡುವಂತೆ/ ಭಾಷೆ ಕೊಡುವಂತೆ ಉಗ್ರರನ್ನು ಪ್ರೇರೇಪಿಸುವುದು. ಆಗ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ನಾಮ ಸೇನೆಗಳು ನಾ ಮುಂದು ತಾ ಮುಂದು ಅಂತ ಚಚ್ಚಲು ಹೊರಡುತ್ತವೆ. ಇಂತ ಚಾಕಚಕ್ಯತೆ ಉಳ್ಳವರು ಕೂಡ ಬೇಕಾರಾಗಿದ್ದಾರೆ.
(ಸೂಚನೆ: ನಾವು ಸರಿಯಾಗಿಯೇ ಬರೆದಿದ್ದರೂ ಬೇಕಾಗಿದ್ದಾರೆ ಮಧ್ಯೆ ಒಂದು ರಾ ಹೆಚ್ಚು ಸೇರಿಕೊಂಡಿದ್ದು ಹೇಗೆಂಬುದು ನಮಗೇ ಗೊತ್ತಿಲ್ಲ. ಈ ಬಗ್ಗೆ ತನಿಖೆಗೆ ಆಯೋಗವೊಂದನ್ನು ರಚಿಸಲಾಗಿದ್ದು, ಅದಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈ ಆಯೋಗವು ಸುಮಾರು ೧೭ ವರ್ಷಗಳ ಬಳಿಕ ಎಲ್ಲರಿಗೂ ಗೊತ್ತಿರುವ ವರದಿಯನ್ನು ಸಲ್ಲಿಸಲಿದೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಅನ್ವೇಷಿ,
    ನೀವು ‘ರಾ,ರಾ,ರಾ’ ಎಂದು ಕರೆದಿದ್ದರಿಂದ, ‘ಬೇಕಾದವರ’ ನಡುವೆ ‘ರಾ’ ಸೇರಿಕೊಂಡು, ಅವರನ್ನು ‘ಬೇಕಾರ್’ ಮಾಡಿಬಿಟ್ಟಿದೆ, ನೋಡಿ!
    ಇನ್ನೊಂದು ವಿಷಯ: ಮಹಾರಾಷ್ಟ್ರದಲ್ಲಿ ‘ಬಾಳ’(=ಮಗು) ಆಗಿರುವ ಠಾಕರೆ, ಕರ್ನಾಟಕದಲ್ಲಿ ‘ಬಾಳಾ’(=ಮಗನೇ) ಏಕಾಗಿದ್ದಾನೋ ತಿಳೀತಾ ಇಲ್ಲ!

    ಪ್ರತ್ಯುತ್ತರಅಳಿಸಿ
  2. ಈ ವರ್ಷದ ಅತ್ಯುತ್ತಮ ಜಾಹಿರಾತು ವಿಭಾಗದಲ್ಲಿ ಕೊಡುವ ಪ್ರಶಸ್ತಿ ಇದಕ್ಕೇ ಲಭಿಸುವ ಚಾನ್ಸ್ ಇದೆ......!!!!!

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ನಮ್ಮ ಸರಕಾರಗಳು ಇನ್ನೂ ಉಗ್ರರಿಗಾಗಿ ರಾರಾ ಹಾಡುತ್ತಿವೆಯಲ್ಲ... ಅದಕ್ಕೇ ಈ ಸಿದ್ಧಾಂತ!

    ಆ ಮೇಲೆ, ಬಾಳ (ಬಾಲವೂ ಆಗುತ್ತದೆ!) ಸಿಕ್ಕಾಪಟ್ಟೆ ಬೆಳೆದು ಬಾಳಾ ಆಗಿರುವುದರಿಂದ ಮತ್ತು ಅದು ಅರಿವಿನ ಕೊರತೆಯಿಂದಲೂ ಬರೆಯಲಾದ ಪದ.

    ಪ್ರತ್ಯುತ್ತರಅಳಿಸಿ
  4. ಚುಕ್ಕಿ ಚಿತ್ತಾರರೇ,
    ದಯವಿಟ್ಟು ಪ್ರಶಸ್ತಿ ಕೊಡುವುದಿದ್ದರೆ ಮೊದಲೇ ಹೇಳಿ. ಯಾಕಂದ್ರೆ ಸಾಕಷ್ಟು ಮಂದಿ ಪ್ರಶಸ್ತಿಗಾಗಿ ಇದನ್ನು ಈಗಲೇ ಬುಕ್ ಮಾಡಿದ್ದಾರೆ. ನಾವು ಹರಾಜು ಹಾಕಿ, ಯಾವ ಪ್ರಶಸ್ತಿ ಆಗಬಹುದು ಅಂತ ಅಳೆದು ತೂಗಿ ಆರಿಸಿಕೊಳ್ಳುತ್ತೇವೆ.:)

    ಪ್ರತ್ಯುತ್ತರಅಳಿಸಿ
  5. ವಿಕ್ರಮರೇ,
    ನಮ್ ಬೊಗಳೂರಿಗೆ ಸ್ವಾಗತ.

    ಅವರನ್ನೆಲ್ಲಾ ಉಲ್ಲೇಖಿಸಿದ್ದು ಅವರ ಧೈರ್ಯಕ್ಕಾಗಿ ಮಾತ್ರವೇ. ನಮ್ಮೋರಿಗೆ ಯಾರಿಗೂ ಚಚ್ಚೋ ಧೈರ್ಯ ಇರಲಿಲ್ಲ. ಅದ್ಕೇ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D