(ಬೊಗಳೂರು ನಾಮ ಹಾಕಿಸಿಕೊಳ್ಳೋ ಬ್ಯುರೋದಿಂದ)
ಬೊಗಳೂರು, ಸೆ.17- ತಿರುಪತಿಯ ನಕಲಿ ಲಡ್ಡು ತಯಾರಿಸದಂತೆ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ, ನಾಮ ಹಾಕಿಸಿಕೊಳ್ಳುವುದಕ್ಕೂ ಪೇಟೆಂಟ್ ಮಾಡಿಸಬೇಕು ಎಂದು ಬೊಗಳೂರು ಪ್ರಜೆಗಳು ವ್ಯರ್ಥಾಲಾಪ ಆರಂಭಿಸಿದ್ದಾರೆ.
ಈಗಾಗಲೇ ನಮ್ಮನ್ನು ಆಳಲೆಂದು ನಾವು ಆರಿಸಿ ಕಳುಹಿಸಿದವರೆಲ್ಲರೂ ಬೊಗಳೂರಿನ ಬಡ ಪ್ರಜೆಗಳಿಗೆ ಸಾಕಷ್ಟು ಬಾರಿ ನಕಲಿ ಮೂರ್‌ನಾಮಗಳನ್ನು ಹಾಕಿದ್ದಾರೆ. ಕೇಂದ್ರ ಸರಕಾರವಂತೂ ತಿನ್ನುವ ಆಹಾರ ವಸ್ತುಗಳ ಬೆಲೆಯನ್ನು ಬೇಕಾಬಿಟ್ಟಿ ಏರಿಸಿ, ಆರಾಮವಾಗಿ ಪ್ರಯಾಣದಲ್ಲಿ ಮಿತವ್ಯಯ ಮಾಡಿ ಎಂಬಿತ್ಯಾದಿ ಗಿಮಿಕ್‌ಗಳ ಮೂಲಕ ಈಗಾಗಲೇ ಪ್ರಜೆಗಳಿಗೆ ದೊಡ್ಡ ದೊಡ್ಡ ಮೂರು ನಾಮ ಹಾಕಲಾರಂಭಿಸಿದೆ. ಇದೇ ರೀತಿ ರಾಜ್ಯ ಸರಕಾರದಲ್ಲಿ ಭದ್ರವಾಗಿ ನೆಲೆಯಾಗಿರುವ ಮಂತ್ರಿ-ಮಾಗಧರು, ಅಧಿಕಾರಿಗಳು ಕೂಡ ಗಣಿ ಲೂಟಿ, ಇದ್ದಿಲು-ಮಣ್ಣು-ಮಸಿ ಹಗರಣ, ಭೂಕಬಳಿಕೆ ಮುಂತಾದ ಹಗರಣಗಳು, ವಿದ್ಯುತ್ ಕೊಡುತ್ತೇವೆ ಎಂಬೋ ಭರವಸೆಗಳ ಹೆಸರಲ್ಲಿ ನಕಲಿ ನಾಮ ಹಾಕುತ್ತಿರುವುದನ್ನು, ನಮ್ಮನ್ನಾಳುವವರ ಅಂದ-ಚಂದ-ವೈಭವವನ್ನೆಲ್ಲ ಕಣ್ಣಾರೆ ಕಾಣಲಾರಂಭಿಸಿದ್ದಾರೆ.
ಚೀಲ ತುಂಬಾ ಹಣ ಒಯ್ದು, ಜೇಬು ತುಂಬಾ ದಿನಸಿ ಸಾಮಗ್ರಿ ಖರೀದಿಸಬೇಕಾಗಿರುವ ಈ ದಿನಗಳಲ್ಲಿ, ನಾಮ ಹಾಕಿಸಿಕೊಳ್ಳೋದಕ್ಕೂ ಕೆಲವರ ಬಳಿ ಹಣವಿಲ್ಲದಿರುವುದು ಕಂಡುಬಂದಿದೆ. ಹಿಂದೆ, ವಿನಿವಿಂಕ್‌ನಿಂದ ಬಿದ್ದ ನಾಮದಿಂದಲೇ ಪ್ರಜೆಗಳು 'ಚಾ'ತರಿಸಿಕೊಂಡಿಲ್ಲ, ಅದರ ನಡುವೆ ಆ ಸ್ಕೀಮು, ಈ ಸ್ಕೀಮು ಎಂಬಿತ್ಯಾದಿ ಸಾಲೋಸಾಲಾಗಿ ಬ್ಲೇಡು ಕಂಪನಿಗಳು ನಾಮ ಹಾಕುತ್ತಲೇ ಇರುತ್ತವೆ. ಈ ನಾಮದ ಮಹಿಮೆ ಅಪಾರವಾಗಿ, ನಾಮದ ಬಲ ಜೋರಾಗಿ ಜನರು ಜಾಗತಿಕ ಹಣಕಾಸು ಬಿಕ್ಕಟ್ಟಿನ ಮಧ್ಯೆ ಅಳಿದುಳಿದ ಬಿಡಿಗಾಸನ್ನೂ ಕಳೆದುಕೊಳ್ಳತೊಡಗಿರುವುದು ಈ ಪೇಟೆಂಟ್ ಕುರಿತ ಜನಾಗ್ರಹಕ್ಕೆ ಮೂಲ ಹೇತುವಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆಯೇ, ನಾಲ್ಕನೇ ನಾಮ ಹಾಕಲು ಭಾರೀ ಸಿದ್ಧತೆ ನಡೆದಿದ್ದು, ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆ, ಬ್ಯುಸಿನೆಸ್ ದರ್ಜೆ, ಎಕ್ಸಿಕ್ಯೂಟಿವ್ ದರ್ಜೆ ಮುಂತಾದವುಗಳು ಮಾತ್ರವಲ್ಲದೆ, ಹಸುಗಳ ದರ್ಜೆ, ನಾಯಿ-ನರಿಗಳ ದರ್ಜೆಗಳನ್ನೂ ತೆರೆಯುವ ಮೂಲಕ ಮತ್ತೊಂದು ನಾಮದ ಸ್ಮರಣೆಯೊಂದು ಕೇಳಿಬರುತ್ತಿದೆ ಎಂದು ಇಲ್ಲಿ ವರದಿಯಾಗಿರುವುದು, ಬಡ ಪ್ರಜೆಗಳೆಲ್ಲರೂ, ಇಷ್ಟೆಲ್ಲಾ ನಾಮಗಳನ್ನು ಎಲ್ಲಿ ಧರಿಸುವುದು ಎಂಬ ಕುರಿತು ಕಕ್ಕಾಬಿಕ್ಕಿಯಾಗಿದ್ದಾರೆ ಎಂದು ಅಪ್ರತ್ಯಕ್ಷದರ್ಶಿ ವರದಿಗಾರರು ವರದ್ದಿ ತಂದು ಸುರುವಿದ್ದಾರೆ.
ಇದ್ದ ಬದ್ದವರ ಕೈಯಲ್ಲಿ ನಮಗೆ ನಾಮ ಹಾಕಿಸಿಕೊಳ್ಳೋದೇ ಆಯ್ತು. ಹೀಗಾಗಿ ಈ ತಿರುಪತಿ ಲಡ್ಡಿನ ಬದಲು, ತಿರುಪತಿಯ ನಕಲಿ ನಾಮ ಹಾಕುವ ಈ ಪ್ರಕ್ರಿಯೆಗಳಿಗೆ ಪೇಟೆಂಟ್ ಮಾಡಿಸಿಟ್ಟರೆ ಸ್ವಲ್ಪವಾದರೂ ಉಸಿರುಬಿಡಬಹುದು ಎಂಬುದು ಬೊಗಳೂರು ಪ್ರಜೆಗಳ ಲೆಕ್ಕಾಚಾರ.
8 ಕಾಮೆಂಟ್‌ಗಳು
ನಿಜ ಸರ್,
ಪ್ರತ್ಯುತ್ತರಅಳಿಸಿನಾಮ ದ ಹಿಂದೆ ದೊಡ್ಡ ಕಥೆಯಿದೆ, ನಾಮ ಹಾಕುವವವ್ರೆ ಜಾಸ್ತಿ, ಸಮಯೋಚಿತ ಬರಹ
ನೀನ್ಯಾಕೊ, ನಿನ ಹಂಗ್ಯಾಕೊ?
ಪ್ರತ್ಯುತ್ತರಅಳಿಸಿನಿನ ನಾಮದ ಬಲವೊಂದಿದ್ದರೆ ಸಾಕೊ!
ವಿಠ್ಠಲ.. ರಂಗ... ನಿನ್ನ ನಾಮದ ಮಹಿಮೆ ಅಪಾರ!!!
ಪ್ರತ್ಯುತ್ತರಅಳಿಸಿನನಗನ್ನಿಸತ್ತೆ...ಶ್ರೀಮದ್ರಮಾರಮಣ ಗೋವಿಂದಾsssssss ಗೋವಿಂದಾ...... ಅಂತ ಕೂಗಲು ಪೇಟೆಂಟ್ ಮಾಡಿಸಿಕೊಳ್ಳೋದು ಹೆಚ್ಚು ಲಾಭದಾಯಕ :)
ಪ್ರತ್ಯುತ್ತರಅಳಿಸಿಸಾಗರದಾಚೆಯೋರೇ,
ಪ್ರತ್ಯುತ್ತರಅಳಿಸಿನಿಮ್ಮ ವಾದ ಸರಿಯೇ ಆದರೂ, ಇಂದಿನ ಪರಿಸ್ಥಿತಿಯಲ್ಲಿ ಅದಕ್ಕಿಂತಲೂ ಹೆಚ್ಚು ಸರಿಯಾದುದೆಂದರೆ ನಾಮ ಹಾಕುವವರಲ್ಲ, ಹಾಕಿಸಿಕೊಳ್ಳುವವರೇ ಜಾಸ್ತಿ!
ಸುನಾಥರೇ,
ಪ್ರತ್ಯುತ್ತರಅಳಿಸಿಬೆಲೆ ಏರಿಕೆಯ ದಿನಗಳಲ್ಲಿ ನೀನ್ಯಾಕೋ, ನಿನ್ನ ಅಂಗ್ಯಾಕೋ, ಚಡ್ಯಾಕೋ ಅಂತೆಲ್ಲಾ ಕೇಳುವ ಪರಿಸ್ಥಿತಿ ಇದೆ.
ಬಾಲು ಅವರಿಗೆ ಬೊಗಳೂರಿಗೆ ಸ್ವಾಗತ.
ಪ್ರತ್ಯುತ್ತರಅಳಿಸಿಮೂರ್ನಾಮವೇ ಚಂದ, ಅದ ನಂಬಿಕೋ ನೀ ಕಂದ ಅಂತ ದಾಸರು ಹಾಡಿದ್ದಾರಲ್ಲ...
ಲಕ್ಷ್ಮೀಯೋರೇ,
ಪ್ರತ್ಯುತ್ತರಅಳಿಸಿಜಾಗತಿಕ ಹಣಕಾಸು ಬಿಕ್ಕಟ್ಟಿನ ಸಮಯದಲ್ಲಿಯೂ ಲಾಭ ಮಾಡಿಕೊಳ್ಳುವ ನಿಮ್ಮ ಮಂಡೆಯನ್ನು ಯುಪಿಎ ಸರಕಾರದಲ್ಲಿರೋರು ಯಾರಾದರೂ ಕದ್ದಾರು, ಜಾಗ್ರತೆ ವಹಿಸಿ.
ಏನಾದ್ರೂ ಹೇಳ್ರಪಾ :-D