(ಬೊಗಳೂರು ಪಿಂಕ್ ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜು.28- ಯಾವುದೇ ಗಲಭೆ ನಡೆದರೂ, ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗಿ ಮುಮೋದ್ ಪ್ರತಾಲಿಕ್ ಎಂಬ ಸೈನಿಕನನ್ನು ಬಂಧಿಸುವುದು ಏಕೆ ಎಂಬ ಬಗ್ಗೆ ಬೊಗಳೂರು ಬ್ಯುರೋ ಸಂಚೋದನೆ ನಡೆಸಿದಾಗ ಯಾರಿಗೂ ಗೊತ್ತಿಲ್ಲದ, ಗೊತ್ತಿರಲಾರದ ಮತ್ತು ಗೊತ್ತಿರಬೇಡದ ಸಂಗತಿಗಳೆಲ್ಲವೂ ದೊರಕಿದವು.ನಾನು ಕ್ಯಾತಮಾರನಹಳ್ಳಿಯಲ್ಲಿ ಕ್ಯಾಕರಿಸಿ ಉಗುಳಲು ಹೋಗಿಲ್ಲ, ಸುಮ್ಮನೇ ತನ್ನ ಹೆಸರಿಗೆ ಲಿಂಕ್ ಕೊಡಲಾಗಿದೆ ಎಂದು ಮುಮೋದ್ ಪ್ರತಾಲಿಕ್ ಹೇಳಿರುವುದರಿಂದಾಗಿ ಈ ಸಂಚೋದನೆ ಮಾಡಲಾಯಿತು.
ಇದರ ಮೂಲವೆಲ್ಲವೂ ಮಂಗಳೂರಿನಲ್ಲಿ ನಡೆದ ಪಬ್ ದಾಳಿಯಲ್ಲಿದೆ. ಇಲ್ಲಿ ಕುಡಿದು ತೂರಾಡುತ್ತಿದ್ದವರಿಗೆ ಬಡಿದ ಪರಿಣಾಮ ಅದನ್ನು ರಾಷ್ಟ್ರಮಟ್ಟದ ಹೆಡ್ ಬ್ರೇಕಿಂಗ್ (=ತಲೆ ಒಡೆಯುವ ಹೆಡ್‌ಲೈನ್) ನ್ಯೂಸ್ ಆಗಿ ಮಾಡಲಾಗಿತ್ತು. ಆ ಬಳಿಕ ಅಲ್ಲಲ್ಲಿ ಪ್ರತಿಭಟನೆ, ಸಮಾವೇಶ ನಡೆದು, ಕೆಲವರಂತೂ ತಲೆಬಿಸಿಯಿಂದಾಗಿ ಪಬ್ ಭರೋ ಚಳವಳಿಯನ್ನೂ ಮಾಡಿದ್ದರು. ಆ ಮೇಲೆ, ಮಾವನ ಹಕ್ಕುಗಳ ಉಲ್ಲಂಘನೆಯ ಆರೋಪ, ತಾಲಿಬಾನ್ ಇತ್ಯಾದಿ ಕೇಳಿಬಂದಿತ್ತು.
ಕೊಟ್ಟಕೊನೆಗೆ ಮಾವನ ಹಕ್ಕುಗಳ ಉಲ್ಲಂಘನೆ ಸುದ್ದಿ ಜೋರಾಗಿಯೇ ಬಲ ಪಡೆದು ರೇಣುಕಾಚಉದುರಿ ಅವರು ಹೇಳಿಕೆಯೊಂದನ್ನು ಕೊಟ್ಟದ್ದೇ ತಡ, ಪಿಂಕ್ ಕಾಚಗಳು ನೆಟ್ಟಿನಲ್ಲೆಲ್ಲಾ ಹರಿದಾಡಿದವು. ಮುಮೋದ್ ಪ್ರತಾಲಿಕ್ ಮನೆಗೆ ಎಷ್ಟೋ ಸಾವಿರ ಪಿಂಕ್ ಕಾಚಗಳು ತಲುಪಿದವು ಎಂದು ತಿಳಿದುಬಂದಿದೆ.
ಆದರೆ, ಈ ಚಡ್ಡಿಗಳನ್ನು ಅವರೇನು ಮಾಡಿದರು? ಎಂಬ ಬಗ್ಗೆ ಸಂಚೋದಿಸಲಾಗಿ, ಅವುಗಳೆಲ್ಲವನ್ನೂ ರಾಜ್ಯಾದ್ಯಂತ ಬಡಬಗ್ಗರಿಗೆ ವಿತರಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಪ್ರತಾಲಿಕ್ ಅವರ ಹೆಸರು ಹೇಳಿಕೊಂಡು ಸಾಕಷ್ಟು ಮಂದಿ ಪಿಂಕ್ ಚಡ್ಡಿ ಧರಿಸಿಕೊಂಡಿದ್ದಾರೆ. ಹೀಗಾಗಿ, ಅವರೆಲ್ಲರ ಮೇಲೂ ಪಿಂಕ್ ಚಡ್ಡಿಯೂ, ಆ ಮೂಲಕ ಮುಮೋದ್ ಪ್ರತಾಲಿಕ್ ಅವರೂ ಪ್ರಭಾವ ಬೀರಿದರೆಂದಾಯಿತು. ಅಂದರೆ ಪಿಂಕ್ ಚಡ್ಡಿ ಇರುವೆಡೆ ಮುಮೋದ್ ಪ್ರತಾಲಿಕ್ ಕೈವಾಡ ಇದೆ ಎಂಬುದನ್ನು ಗಟ್ಟಿ ಮಾಡಿಕೊಂಡ ಕಾರಣಕ್ಕೆ ಪೊಲೀಸರು, ಎಲ್ಲೇ ಏನೇ ನಡೆದರೂ ಮುಮೋದ್ ಪ್ರತಾಲಿಕ್ ಕೈವಾಡವಿದೆ ಎಂದು ಪಿಂಕ್ ಚಡ್ಡಿಯ ಸಾಕ್ಷ್ಯಾಧಾರ ಸಮೇತ ಬಂಧಿಸಿ ಜೈಲಿಗಟ್ಟುತ್ತಿದ್ದಾರೆ ಎಂದು ನಮ್ಮ ಬಾತ್ಮೀದಾರರು ರದ್ದಿ ಮಾಡಿದ್ದಾರೆ.
4 ಕಾಮೆಂಟ್‌ಗಳು
ಈ ರದ್ದಿಯ (ಅ)ನೈತಿಕ ಪಾಠವೇನೆಂದರೆ:
ಪ್ರತ್ಯುತ್ತರಅಳಿಸಿ"ಚಡ್ಯೂರಪ್ಪನ ಚಡ್ಡಿ ತೊಟ್ಟವರಿಗೆ ಅರಮನೆ;
ಪ್ರತಾಲಿಕನ ಪಿಂಕ್ ಚಡ್ಡಿ ತೊಟ್ಟವರಿಗೆ ಸೆರೆಮನೆ."
ಈ ಪಿಂಕಿ ಚಡ್ಡಿ ಬಗ್ಗೆ ಸ್ವಲ್ಪ ಮಾಹಿತಿ ಬೇಕಿತ್ತಲ್ಲಾ? ರೇಣುಕಪ್ಪನವರಿಗೂ ಮುಮಾದಮ್ಮನವರಿಗೂ ಮಧ್ಯೆ ಏರುತ್ತಿರುವ ಗೋಡೆ ಮಧ್ಯೆ ಸೋನಮ್ಮನವರದೇನಾದ್ರೂ (ಅದೇ ಗೋಲ್ಡಮ್ಮ ಕಣ್ರೀ!) ಏನಾದ್ರೂ ಕಾಲ್ವಾಡ ಇದ್ಯಾ?
ಪ್ರತ್ಯುತ್ತರಅಳಿಸಿಪಿಂಕಿ ಚಡ್ಡಿಯನ್ನು ನಮ್ಮೂರಲ್ಲಿ ಪುಕ್ಕಟೆಯಾಗಿ ಹಂಚಿದ್ರಂತೆ, ನಮ್ಮ ವದರಿಗಾರ ಹೋಗೋ ಹೊತ್ತಿಗೆ ಅದರ ಲಾಡಿ ಕೂಡ ಸಿಕ್ಲಿಲ್ವಂತೆ - ನಿಮ್ಮೂರಲ್ಲೇನಾದ್ರೂ ನಿಮ್ಮ ವದರಿಗಾರರಿಗೆ ಸಿಕ್ತಾ?
ಸುನಾಥರೆ,
ಪ್ರತ್ಯುತ್ತರಅಳಿಸಿನೀವು ಸಂಚೋದಿಸಿರುವ ಈ ಗಾದೆ ವಾಕ್ಯವನ್ನು ಪ್ರತಿಯೊಂದು ಶಾಲೆಗಳಲ್ಲಿ ತೂಗು ಹಾಕುವಂತಾಗಲು, ಕೃಷ್ಣಯ್ಯ ಶೆಟ್ಟರ ಮೊರೆ ಹೋಗಲಾಗುತ್ತದೆ.
ತಿರುಕರೇ,
ಪ್ರತ್ಯುತ್ತರಅಳಿಸಿಪಿಂಕ್ ಕಾಚಕ್ಕೂ ರೇಣುಕಾಚಾರ್ಯಗೂ ಸಂಬಂಧವಿಲ್ಲ ಎಂದು ಈ ಮೂಲಕ ಮೊದಲು ಸ್ಪಷ್ಟಪಡಿಸಲಾಗುತ್ತಿದೆ.
ಮತ್ತೆ ಲಾಡಿ ಬಗ್ಗೆ ಹೇಳಿದ್ದೀರಲ್ಲ, ಲಾಡಿ ಹುಳಗಳು ಪ್ರತಿಯೊಬ್ಬರ ಹೊಟ್ಟೆಯೊಳಗೂ ಸೇರಿಕೊಂಡಿರುವ ಹಿನ್ನೆಲೆಯಲ್ಲಿ ನೀವು ಹೇಳಿರುವ ಲಾಡಿಗೂ, ತಿರುಪತಿಯ ಲಾಡಿಗೂ ಮತ್ತು ಮುಮೋದ್ ಪ್ರತಾಲಿಕ್ ಬಂಧನಕ್ಕೂ ಏನಾದ್ರೂ ಸಂಬಂಧವಿದೆಯೇ ಅಂತಲೂ ಪರಾಮರ್ಶಿಸಲಾಗುತ್ತಿದೆ.
ಏನಾದ್ರೂ ಹೇಳ್ರಪಾ :-D