(ಬೊಗಳೂರು ಎಮ್ಮೆ ಪ್ರತಿಭಟನಾ ಬ್ಯುರೋದಿಂದ)
ಬೊಗಳೂರು, ಜು.16- ಎಂಎ ಪದವಿ ಕೊಡುತ್ತೇವೆಂದರೂ ಕೈಗೆ ಸಿಗದಂತೆ ಓಡಿ ಪರಾರಿಯಾಗಿರುವ ಎಂಪಿಗಳ ಬಗ್ಗೆ ಬೊಗಳೂರಿನಲ್ಲಿ ತೀವ್ರ ಉತ್ಸಾಹದ ನುಡಿಗಳು, ಪ್ರಶಂಸೆ ಭರಿತ ಆಕ್ರೋಶದ ನುಡಿಗಳು, ಹಗೆನುಡಿಗಳು ಮತ್ತಿತರ ನುಡಿಗಳು ಕೇಳಿಬರುತ್ತಿವೆ.ಇದಕ್ಕೆಲ್ಲಾ ಕಾರಣವಾದದ್ದು ಹೈಕದ ಹೈಕಳು ನಡೆಸಿದ ಪ್ರತಿಭಟನೆ. ಅದನ್ನು ಪ್ರತಿಭಟನೆ ಎಂದು ಕರೆಯಬಾರದು, ಪ್ರಶಂಸಾಘಟನೆ ಎಂದು ಕರೆಯಬೇಕೆಂಬ ಬೊಗಳೋದುಗರ ಒತ್ತಾಯದಿಂದಾಗಿ ಕೆಲವುಕಾಲ ಇಂಟರ್ನೆಟ್‌ನಲ್ಲಿ ಟ್ರಾಫಿಕ್ ಜಾಮ್ ಆದ ವರದಿಗಳು ಒಂದೆಡೆಯಿಂದ ಬರುತ್ತಿರುವಂತೆಯೇ ಅದನ್ನು ಬಿಟ್ಟು, ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮೌನವೇ ಮೂರ್ತಿವೆತ್ತಂತೆ ಕುಳಿತುಕೊಳ್ಳುವ 28 ಮಂದಿ ಸಂಸದರಿಗೆ ಎಂಎ ಪ್ರದಾನಮಾಡುವ ಬಗ್ಗೆ ಬಿಸಿಬಿಸಿ ಸಿದ್ಧತೆ ನಡೆಸಿರುವುದನ್ನು ವರದಿ ಮಾಡಲು ತೀರ್ಮಾನಿಸಲಾಗಿದೆ.
ಅಲ್ಲಿ ನಡೆದ ಪ್ರಶಂಸಾಘಟನೆಯಲ್ಲಿ, ಆ 28 ಮಂದಿಯಲ್ಲಿ ಉಳಿದದ್ದು ಕೇವಲ ಒಂದು ಎಮ್ಮೆ ಮಾತ್ರ. ಅದು ಕೂಡ ಸಂಸತ್ತಿನಲ್ಲಿ ಸಂಸದರು ಕಣ್ಣಿನ ಭಾರವನ್ನು ಅಳೆದು ಅಳೆದು ತೂಗಿ ತೂಗಿ ತೂಕಡಿಸುತ್ತಾ ಕುಳಿತಿದ್ದ ಮಾದರಿಯಲ್ಲೇ, ಅಥವಾ ಎಂದಿನ ಅಭ್ಯಾಸ ಬಲದಂತೆ ಅಂದು ಕೂಡ ಇದ್ದುದರಿಂದಾಗಿ ಆ ಒಂದು ಎಮ್ಮೆಗೆ ಓಡಲಾಗಿರಲಿಲ್ಲ. ಕೊನೆಗೆ ಎಲ್ಲ ಅತ್ಯುತ್ತಮ ಎಂಎ ಪ್ರಶಸ್ತಿಗಳನ್ನು ಇದ್ದ ಎಮ್ಮೆಯ ಕೊರಳಿಗೇ ಕಟ್ಟಲಾಯಿತು.
ರೈಲ್ವೇ ಬಜೆಟಿನಲ್ಲಾಗಲೀ, ಮುಖ್ಯ ಬಜೆಟಿನಲ್ಲಾಗಲೀ, ಅದರ ಆಚೀಚೆಯಾಗಲೀ, ಕರ್ನಾಟಕಕ್ಕೆ ಯಾವಾಗಲೂ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದೆ. ಇದೆಲ್ಲಾ "ಮಾಮೂಲು, ಇದ್ದದ್ದೇ, ಕಳೆದ ಐವತ್ತು ವರ್ಷಗಳಿಂದ ಹೀಗೇ ನಡೆದುಕೊಂಡುಬರುತ್ತಿದೆ. ಈ ಒಂದು ವರ್ಷ ಮುಂದುವರಿದರೆ ಆಕಾಶ ಕಳಚಿಬೀಳುವುದಿಲ್ಲ" ಎಂದುಕೊಂಡಿದ್ದ 28 ಮಂದಿ ಸಂಸದರು, ಸಂಸತ್ತಿನಲ್ಲಿ ಕುಳಿತು ಎಲ್ಲವನ್ನೂ ಅಳೆದು ತೂಗಿ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದರು ಎಂದು ನಮ್ಮ ರಹಸ್ಯ ವರದ್ದಿಗಾರರು ಯಾವಾಗಲೂ ವರದ್ದಿ ತಂದೊಪ್ಪಿಸುತ್ತಿರುತ್ತಾರೆ.
ಈ ಸಂಸದರನ್ನೂ ಈ ಪ್ರಶಂಸಾಘಟನಾ ಸ್ಥಳಕ್ಕೆ ಕರೆದಾಗ ಅವರು ಬಂದರೂ, 27 ಮಂದಿ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದೇಕೆ ಎಂಬ ಬಗ್ಗೆ ಬೊಗಳೆ ರಗಳೆ ಬ್ಯುರೋ ತೀವ್ರ ತನಿಖೆ ನಡೆಸಿತು. ಇದಕ್ಕೆ ಕಾರಣವೆಂದರೆ, ಪ್ರಜಾಪ್ರತಿನಿಧಿಗಳ ವೇತನ ಹೆಚ್ಚಳದ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸಂಸತ್ತಿನಲ್ಲಿ ತೀವ್ರ ಚರ್ಚೆಯಾಗುತ್ತಿತ್ತು ಮತ್ತು ಅದು ಅವಿರೋಧವಾಗಿ ಮಂಡನೆಯಾಗಿ, ಅವಿರೋಧವಾಗಿಯೇ ಸ್ವೀಕಾರವಾಗುವಂತೆ, ಅವಿರೋಧವಾಗಿಯೇ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಬೇಕಾಗಿತ್ತು. ಯಾಕೆಂದರೆ ಇದು ಅತಿಗಂಭೀರವಾದ, ದೇಶವನ್ನೇ ಗಡಗಡನೆ ನಡುಗಿಸಬಹುದಾದ ಗಂಡಾಂತರ ತರಬಲ್ಲಂತಹ ತೀವ್ರ ಗಂಡಾಂತರಕಾರಿಯೂ ಹೆಂಡಾಂತರಕಾರಿಯೂ ಆಗಿರುವ ಚರ್ಚೆಯಾಗಿತ್ತು.
ಹೀಗಾಗಿ ಸಂಸತ್ತಿನಲ್ಲಿ ತಾವಿರುವುದು ಕಡ್ಡಾಯ ಎಂಬುದು ಅರಿವಿಗೆ ಬಂದ ತಕ್ಷಣವೇ ಅವರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಆದರೆ ಒಬ್ಬರಿಗೆ ಮಾತ್ರ ಹಗಲು ರಾತ್ರಿ ದುಡಿದು, ಮುದ್ದೆ ತಿಂದು ಕಣ್ಣುಗಳಲ್ಲೆಲ್ಲಾ ಮಣಭಾರವಾದ ಏನೋ ವಸ್ತುಗಳು ತಗುಲಿಸಿದಂತಾಗಿದ್ದ ಪರಿಣಾಮ ಏಳಲಾಗಿರಲಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗಿದೆ.
2 ಕಾಮೆಂಟ್‌ಗಳು
ಮುದ್ದೆ ತಿನ್ನೊ ಎಮ್ಮೇನಾ?
ಪ್ರತ್ಯುತ್ತರಅಳಿಸಿಹುಲ್ಲು ತಿಂದರೂ ಹಾಲು ಕೊಡೋದಿಲ್ಲ ಅನ್ನೋ ಕೃತಘ್ನ ಎಮ್ಮೆ ಇದು. ಅಜೀರ್ಣವಾಗಿದ್ದಕ್ಕೆ ಹೊಟ್ಟೆ ಉಬ್ಬಿಸಿಕೊಂಡು ಕೂತಿರಬಹುದು.
ಸುನಾಥರೆ,
ಪ್ರತ್ಯುತ್ತರಅಳಿಸಿಹೌದು ಹೌದು ಮುದ್ದೆ ತಿನ್ನೋದ್ರಲ್ಲಿ ಎಮ್ಮೆ ಅಲ್ಲ, ಮುದ್ದೆ ತಿನ್ನೋ ಎಮ್ಮೆ. ವಿಶ್ವಾಸಘಾತ ತಂತ್ರಜ್ಞಾನದಲ್ಲಿ ಆ ಡಿಗ್ರಿ ಪಡೆದುಕೊಂಡದ್ದು...
ಏನಾದ್ರೂ ಹೇಳ್ರಪಾ :-D