(ಬೊಗಳೂರು ಫರ್ಟಿಲೈಸರ್ ಬ್ಯುರೋದಿಂದ)
ಬೊಗಳೂರು, ಜು.14- ಕಾಲ ಬದಲಾಗಿದೆ ಎಂದು ತಿಳಿದುಬಂದಿದೆ. ಅದು ಬೊಗಳೂರು ಬ್ಯುರೋಗೆ ಈಗಷ್ಟೇ ಜ್ಞಾನೋದಯವಾಗಿದ್ದೇ ಅಥವಾ ಮೊದಲೇ ಈ ಕುರಿತ ಅಜ್ಞಾನ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.ಈ ತನಿಖೆಯ ನಡುವೆ, ಗರ್ಭಿಣಿಯರಿಗೂ ಮದುವೆಯಾಗುವ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಘಟನೆಯೊಂದು ಇಲ್ಲಿ ಪ್ರಕಟವಾಗಿದ್ದನ್ನು ಕೇಳಿದ ಬೊಗಳೂರು ಬ್ಯುರೋ, ಈ ಸಮಸ್ಯೆಗೆ ಪರಿಹಾರವೇನೆಂಬುದನ್ನು ಆಲೋಚಿಸತೊಡಗಿತು.
ದೊಡ್ಡವರಾದ ಬಳಿಕ ಬ್ರಹ್ಮಚರ್ಯ ಪರೀಕ್ಷೆ, ಕನ್ಯತ್ವ ಪರೀಕ್ಷೆ ಮುಂತಾದವೆಲ್ಲ ಮಾಡಿಸಿದರೆ, ಅವು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಟೀಕೆ, ಆಕ್ರೋಶ, ಸಿಡಿಮಿಡಿ, ಆರೋಪ ಕೇಳಿಬರುವ ಹಿನ್ನೆಲೆಯಲ್ಲಿ, ಹುಟ್ಟುವ ಮೊದಲೇ ಇಂಥ ಪರೀಕ್ಷೆಗಳನ್ನು ನಡೆಸಬೇಕು ಎಂಬ ಊರು ಲಗಾಡಿ ತೆಗೆಯುವ ಉಪಾಯವೊಂದು ಬೊಗಳೂರು ಬ್ಯುರೋ ಸಿಬ್ಬಂದಿಗೆ ಹೊಳೆದಿದೆ.
ಬರ್ತ್ ಸರ್ಟಿಫಿಕೆಟ್ ಜೊತೆಗೇ ಈ ಕುರಿತ Fertiಸಿಕೆಟ್ ಕೂಡ ಲಗತ್ತಿಸಿ ನೀಡುವ ಯೋಜನೆಯನ್ನು ಶೀಘ್ರವೇ ಸರಕಾರಗಳು ಸಿದ್ಧಪಡಿಸಬೇಕು ಎಂದು ಬೊಗಳೂರು ಮಂದಿ ಒತ್ತಾಯಿಸತೊಡಗಿದ್ದಾರೆ.
ಆದರೆ, ಕನ್ಯಾ ಪರೀಕ್ಷೆ, ವಧು ಪರೀಕ್ಷೆ ಎಂಬಿತ್ಯಾದಿಗಳು ಇದುವರೆಗೆ ಮದುವೆಗೆ ಮುನ್ನ ನಡೆಯುತ್ತಿದ್ದವು. ಈಗ ಮದುವೆ ಮಂಟಪದಲ್ಲೇ ಕನ್ಯಾ ಪರೀಕ್ಷೆ, ವರ ಪರೀಕ್ಷೆ, ವಧು ಪರೀಕ್ಷೆಗಳನ್ನೆಲ್ಲಾ ನಡೆಸುವ ಸಂಪ್ರದಾಯದಿಂದಾಗಿಯೇ ಇದು ಕಾಲ ಬದಲಾಗಿದೆ ಎಂಬ ಅಂಶವೊಂದು ಬೊಗಳೂರು ಮಂದಿಯ ಇಲ್ಲದ ತಲೆಯೊಳಗೆ ಧುತ್ತನೇ ಗೋಚರವಾಗಿತ್ತು ಎಂದು ಮೂಲಗಳು ವರದಿ ಮಾಡಿವೆ.
0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D