ಬೊಗಳೆ ರಗಳೆ

header ads

ಕೆಲವ್ರು ಮಾತ್ರ ಸೋಂಬೇರಿಗಳು: ಮು.ಮಂ. ಹೇಳಿಕೆಗೆ ಆಕ್ರೋಶ

(ಬೊಗಳೂರು ಸೋಂಬೇರಿ ಬ್ಯುರೋದಿಂದ)
ಬೊಗಳೂರು, ಜು. 10- ಕೆಲವರನ್ನು ಮಾತ್ರ ಸೋಂಬೇರಿಗಳು ಎಂದು ಕರೆದಿರುವ ಮುಖ್ಮಂತ್ರಿಗಳ ವಿರುದ್ಧ ಉಳಿದ ಸಚಿವರು ಕ್ಯಾತೆ ತೆಗೆದಿದ್ದಾರೆ.

ಕಳೆದೊಂದು ವರ್ಷದಿಂದ ಆಪರೇಶನ್‌ನಲ್ಲೇ ಮುಳುಗಿ, ಸಚಿವಾಲಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳತ್ತ ತಲೆ ಹಾಕದಿರುವ ನಮ್ಮೆಲ್ಲರಿಗೂ ಸೋಂಬೇರಿ ಬಿರುದು ದಯಪಾಲಿಸಬೇಕಿತ್ತು. ಹೀಗೇ ಮಾಡದೆ ಮುಖ್ಯಮಂತ್ರಿಗಳು ಸ್ವಜನಪಕ್ಷ-ವಾತ ಮೆರೆದಿದ್ದಾರೆ ಎಂದು ಸಾವಿರಾರು ಮಂದಿ ಸಚಿವರು ವಿಧಾನಸೌಧದ ಮುಂದೆ ಧರಣಿ ಕೂರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ಇತ್ತೀಚೆಗೆ ರೈಲ್ವೇ ಬಜೆಟಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಅದೆಲ್ಲಾ ಮಾಮೂಲಿ ಇದ್ದದ್ದೇ. ಕನ್ನಡಿಗರು ಕ್ಷಮಯಾಧರಿತ್ರಿಗಳು ಆಗಿರುವುದರಿಂದ ಅವರ ತಾಳ್ಮೆಗಾಗಿಯೇ ಬೂಕರ್, ನೊಬೆಲ್ ಪ್ರಶಸ್ತಿ ಎಲ್ಲಾ ಕೊಡಬೇಕಾಗಿತ್ತು.

ಕೇಂದ್ರದಲ್ಲಿ ರಾಜ್ಯದಿಂದ ನಾಲ್ಕು ಮಂದಿ ಮಂತ್ರಿಗಳಿದ್ದರೂ ಗಪ್ ಚುಪ್ಪೆನ್ನದೆ ನಿಂತಿದ್ದು ಅವರ ಸೋಂಬೇರಿತನಕ್ಕೆ ಸಾಕ್ಷಿಯಲ್ಲವೇ ಎಂದು ಸಾಕ್ಷ್ಯಾಧಾರ ಸಹಿತ ಈ ಸಚಿವರ ಗಡಣ ಕೇಳಿದೆ.

ಅಷ್ಟು ಮಾತ್ರವಲ್ಲ, ಅಷ್ಟು ಪ್ರಮಾಣದಲ್ಲಿ ಅನ್ಯಾಯವಾಗಿದ್ದರೂ ಕೂಡ, ರಾಜ್ಯದ ಸಂಸದರು, ಸಚಿವರ ಗಡಣ, ಮುಖ್ಯಮಂತ್ರಿಗಳು, ಹಿಂಬಾಲಕರು, ಬೆಂಬಾಲಕರು ಎಲ್ಲರೂ ಸುಮ್ಮನಿರುವುದು ಅವರವರ ಸೋಂಬೇರಿತನದ ಪ್ರತಿಭೆಗೆ ಸಾಕ್ಷಿ. ಹೀಗೆಲ್ಲಾ ಇರುವಾಗ, ಕೆಲವರಿಗೆ ಮಾತ್ರವೇ ಸೋಂಬೇರಿತನ ಪಟ್ಟ ಕೊಡುವುದು ಅನ್ಯಾಯ. ಇದರ ಬಗ್ಗೆ ನಾವಂತೂ ನಾಲ್ಕೈದು ವರ್ಷಗಳ ಬಳಿಕ ಖಂಡಿತಾ ಸಿಡಿದೇಳುತ್ತೇವೆ ಎಂದು ಅವರು 'ಈಗ ಪ್ರತಿಭಟನೆ ಮಾಡಲು ಉದಾಸೀನ' ಎನ್ನುತ್ತಾ ನುಡಿದರು.

ಹೇಗೂ ಬಹುತೇಕರು ಆಲಸಿಗಳಾಗಿದ್ದಾರೆ. ಈ ಆಲಸ್ಯ ನಿವಾರಣೆ ಹೇಗೆ ಎಂಬ ಬಗ್ಗೆ ಸಚಿವರು, ಶಾಸಕರ ಗಡಣವೆಲ್ಲವನ್ನೂ ವಿದೇಶಕ್ಕೆ ಕಳುಹಿಸಿ ಅಧ್ಯಯನ ಮಾಡಿಕೊಂಡು ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿರುವ ಅವರು, ಆದರೆ ವಿದೇಶಕ್ಕೆ ಹೋದವರು ಆಲಸ್ಯ ನಿವಾರಣೆ ಬಗ್ಗೆ ಅಧ್ಯಯನ ಮಾಡುತ್ತಾರೋ ಅಥವಾ ಈ ಸಚಿವ-ಶಾಸಕರ ಗಡಣವೇ ವಿದೇಶೀಯರಿಂದ ಅಧ್ಯಯನಕ್ಕೀಡಾಗುತ್ತದೆಯೋ ಎಂಬುದನ್ನು ಮಾತ್ರ ಜಪ್ಪಯ್ಯ ಎಂದರೂ ಸ್ಪಷ್ಟಪಡಿಸಲಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಎಲ್ಲಾ ಶಾಸಕರು/ಸಚಿವರು ಸೋಮಾರಿಗಳೇ ಆಗಿದ್ದರಿಂದ, ಇವರಲ್ಲಿ gradation ಮಾಡುವದು ಅವಶ್ಯವಾಗಿದೆ. ಕೆಳಗಿನ ತರಗತಿಯ ಸೋಮಾರಿಗಳಿಗೆ ಕರ್ನಾಟಕ-(ಸೋಮಾರಿ)-ಶ್ರೀ ಎಂದೂ, ಮಧ್ಯಮ ವರ್ಗದವರಿಗೆ ಕರ್ನಾಟಕ-(ಸೋಮಾರಿ)-ಭೂಷಣ ಎಂದೂ,ಉಚ್ಚ ವರ್ಗದ ಸೋಮಾರಿಗಳಿಗೆ ಕರ್ನಾಟಕ-(ಸೋಮಾರಿ)-ವಿಭೂಷಣ ಎಂದೂ ಪ್ರಶಸ್ತಿ ನೀಡಬಹುದು. ಕರ್ನಾಟಕ-(ಸೋಮಾರಿ)-ರತ್ನ ಪ್ರಶಸ್ತಿಯನ್ನು ಮುಖ್ಯ ಮಂತ್ರಿಗಳು ತಾವೇ ಇಟ್ಟುಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ಗ್ರೇಡೇಶನ್ ಮಾಡಿದರೂ, ಎಲ್ಲರೂ ಆ ಗ್ರೇಡಿನ ಮೇಲೆಯೇ ಇರುವುದರಿಂದ ಅಪ್‌ಗ್ರೇಡೇಶನ್ನೇ ಅತ್ಯಗತ್ಯವಾಗಿದ್ದು, ಎಲ್ಲರಿಗೂ ರತ್ನಳನ್ನು ನೀಡಬಹುದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D