(ಬೊಗಳೂರು Someದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ನೆಗೆದು ಏರಿರುವ (ಕಾಂಗ್ರೆಸ್ ಅಧ್ಯಕ್ಷೆಯ) ಉಪ (UPA) ಸರಕಾರದಲ್ಲಿ, ಹಳೆಯ ದೇಹಗಳೆಲ್ಲ ಮರೆಗೆ ಸರಿದು, ಹೊಸ ದೇಹಗಳು, ಯುವ ಮುಖಗಳು ಕಾಣಿಸಿಕೊಳ್ಳುತ್ತಿರುವುದರಿಂದ ದೇಶಾದ್ಯಂತ ಭರವಸೆಯ ಆಶಾಕಿರಣವನ್ನು ಮೂಡಿಸಿದೆ. ಈ ಕುರಿತು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವೆ, ಅತ್ಯಂತ ಕಿರಿ-ಕಿರಿಯ ಹುಡುಗಿ ಅಗಾಥಾ ಕ್ರಿಸ್ಟೀ ಅವರನ್ನು ಬೊಗಳೂರು ರದ್ದಿಗಾರರ ತಂಡ ಮಾತನಾಡಿಸಿತು.ಈ ಸಂದರ್ಭ ಸ್ವಯಂಚಾಲಿತವಾಗಿ ಏರ್ಪಟ್ಟ ಸಂದರ್ಶನ ಸಂದರ್ಭದಲ್ಲಿ ಹಲವಾರು ವಿಷಯಗಳು ಮತ್ತು ಅವುಗಳಿಗೆ Someಗತಿಗಳು ಬಯಲಿಗೆ ಬಿದ್ದವು. ಸಂದರ್ಶನದ ಅಪೂರ್ಣಪಾಠ ಈ ಕೆಳಗಿದೆ.
* ಅಗಾಥಾ ಕ್ರಿಸ್ಟೀ ಅವರೆ, ನಿಮ್ಮಪ್ಪ, ಸೋನಿಯಾರ ಪಿಎ ಆಗಲೊಪ್ಪದ ಸಂಗಮಾ ಅವರು ಸದನದಲ್ಲಿ ಸ್ಪೀಕರ್ ಇಲ್ಲದೆಯೇ ಗದ್ದಲ ನಿಯಂತ್ರಿಸುತ್ತಿದ್ದಾಗ ನೀವೆಲ್ಲಿದ್ದಿರಿ?
ಅಗಾಥ: ಆಘಾತಕ್ಕೊಳಗಾದಂತೆ ಕಂಡುಬಂದ ಅಗಾಥ ಆ ಬಳಿಕ ಸಾವರಿಸಿಕೊಂಡು, "ನಾನು ಹಳ್ಳಿಯಲ್ಲಿದ್ದೆ. ದಿಲ್ಲಿ ತುಂಬಾ ದೂರವಾಗಿರುವುದರಿಂದ ದಿಲ್ಲಿಗೆ ಬರುವುದು ತಡವಾಯಿತು. ಇಲ್ಲದಿದ್ದಲ್ಲಿ, ಐದಾರು ವರ್ಷಗಳ ಹಿಂದೆಯೇ ಸಂಸತ್ತಿಗೆ ತಲುಪುತ್ತಿದ್ದೆ. ಆಗ ಅನುಭವಿ ರಾಜಕಾರಣಿಯೂ ಆಗಿರುತ್ತಿದ್ದೆ. ಹೀಗಾಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಅನುಭವ ಸಾಲದು. ಆದರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ತಡೆಯಲು ಗರಿಷ್ಠ ಪ್ರಯತ್ನ ಮಾಡುತ್ತೇನೆ".
* ನಿಮಗೆ ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಎಕೌಂಟ್‌ನ್ನು ತೆರೆದುಕೊಟ್ಟಿದ್ದಾರೆ. ಇದು ಯಾವ ಬ್ಯಾಂಕಿನಲ್ಲಿ? ಸ್ವಿಸ್ ಬ್ಯಾಂಕೋ, ನಬಾರ್ಡ್ ಬ್ಯಾಂಕೋ ಅಥವಾ ವಿಶ್ವ ಬ್ಯಾಂಕೋ?
ಅಗಾಥ: ನಮ್ಮದು ಗ್ರಾಮಕ್ಕೆ ಸಂಬಂಧಿಸಿದ ಖಾತೆಯಾಗಿರುವುದರಿಂದ ಯಾವುದೋ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಇರಬಹುದೆಂಬ ಆಮ ಶಂಕೆ ನನಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ.
* ನೀವಿರುವ ಹಳ್ಳಿಯಿಂದ ದಿಲ್ಲಿಗೆ ದೂರವಾದ ಕಾರಣದಿಂದಾಗಿ ಹಳ್ಳಿಯವರು ದಿಲ್ಲಿಯವರ ದರ್ಬಾರಿನಿಂದ, ಐಷಾರಾಮದಿಂದ, ಉನ್ನತ ಜೀವನ ಮಟ್ಟದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?
ಅಗಾಥ: ಅದಕ್ಕೆಲ್ಲಾ ನನ್ನ ಬಳಿ ಅಸ್ತ್ರವಿದೆ. ಅಪ್ಪ ಇರುವಾಗಿನಿಂದಲೂ ಅವರಿಗೆ ನನಗೊಂದು ದಿಲ್ಲಿ ತಂದುಕೊಡಪ್ಪಾ ಎಂದು ಸಣ್ಣದಿರುವಾಗಿಂದಲೂ ಕೇಳುತ್ತಿದ್ದೆ. ಆದರೆ ಅಪ್ಪ ತಂದುಕೊಟ್ಟಿರಲಿಲ್ಲ. ಈಗ ನಾನು ದೊಡ್ಡವಳಾಗಿದ್ದೇನೆ. ಹೀಗಾಗಿ ದಿಲ್ಲಿಯನ್ನು ಹಳ್ಳಿಗೆ ತರಲಾಗುವುದಿಲ್ಲ ಎಂದು ಗೊತ್ತಾಗಿದೆ. ಅದಕ್ಕೋಸ್ಕರ...
* ಅದಕ್ಕೋಸ್ಕರ...? ಹೇಳಿ... ಹೇಳಿ... ಬೇಗ ಹೇಳಿ...
ಅಗಾಥ: ಅದಕ್ಕೋಸ್ಕರವೇ, ನಾವು ಹಳ್ಳಿಗಳನ್ನು ದಿಲ್ಲಿಗೆ ಸಮೀಪ ತರಲು ಯೋಜನೆ ರೂಪಿಸಿದ್ದೇವೆ. ದಿಲ್ಲಿಯ ಸುತ್ತಮುತ್ತ ಹಳ್ಳಿಗಳ ಸಂಖ್ಯೆಯನ್ನು ಸಾಕಷ್ಟು ಹೆಚ್ಚಿಸಿದಲ್ಲಿ, ಹಳ್ಳಿ-ದಿಲ್ಲಿ ಅಂತರ ಕುಗ್ಗುತ್ತದೆ, ಹಳ್ಳಿಗರು ಮತ್ತು ದಿಲ್ಲಿಗರು ಚೆನ್ನಾಗಿ ಮಿಕ್ಸ್ ಆಗಿ, ಚರ್ವಿತ ಚರ್ವಣ ಆಗಿ, ಬೆರೆತು, ಎಲ್ಲ ಕಡೆ ಸಮತೋಲನ ಏರ್ಪಡುತ್ತದೆ.
* ಹಾಗಾದ್ರೆ ನಿಮಗೆ ದೊsssssಡ್ಡ ನಮಸ್ಕಾರ.
ಅಗಾಥ: ನಮ್‌ಸ್ಕಾರ
(ಏನೋ ಮಾಡಲು ಹೋಗಿ ಏನ್ಏನೋ ಆದ ಪರಿಣಾಮವಾಗಿ, ಕನ್ನಡ ಬ್ಲಾಗೋತ್ತಮರೆಲ್ಲರೂ ನಾಪತ್ತೆಯಾಗಿಬಿಟ್ಟಿದ್ದಾರೆ. ಅವರನ್ನೆಲ್ಲಾ ಶೀಘ್ರದಲ್ಲೇ ಕೊಂಡಿ ಹಾಕಿ ಎಳೆದು ತರಲಾಗುತ್ತದೆ. ಕ್ಷಮೆ ಮತ್ತು ತಾಳ್ಮೆಯೇ ಮನುಷ್ಯರಿಗೆ ಅತ್ಯಂತ ಮುಖ್ಯ ಎಂದು ನಮ್ಮಜ್ಜ ಹೇಳಿರುವುದರಿಂದ, ಅದುವರೆಗೆ ಕ್ಷಮೆ ಇರಲಿ ಮತ್ತು ತಾಳ್ಮೆಯೂ ಇರಲಿ. -ಸೊಂಪಾದ ಕರು)
6 ಕಾಮೆಂಟ್‌ಗಳು
ಇದೇನಿದು? ಬ್ಲಾಗ್ ಲಿಂಕ್ಸ್ ಇಲ್ಲದಿದ್ರೂ ಪರವಾಗಿಲ್ಲ; ಆದ್ರೆ ಕತ್ತೆ-ಕೋತಿಗಳು ಎಲ್ಲಿ? ಬಯಲಿನ ಹಾಗೆ ಕಾಣ್ತಿದೆ ಖಾಲೀ ಹಸಿರು!
ಪ್ರತ್ಯುತ್ತರಅಳಿಸಿಸುಶ್ರುತ,
ಪ್ರತ್ಯುತ್ತರಅಳಿಸಿಈಗತಾನೇ ಚುನಾವಣೆ ಆಯ್ತಲ್ಲ. ಹಾಗಾಗಿ
ಕತ್ತೆ, ಕೋತಿಗಳೆಲ್ಲ ಪರಲೋಕಸಭೆ ಹಾಗೂ ನಿಧಾನಸಭೆಗಳಲ್ಲಿ ತುಂಬಿಕೊಂಡುಬಿಟ್ಟಿದ್ದಾರೆ. ಬೊಗಳೂರು ಈಗ ಬರಿದೊ ಬರಿದು.
ಯಾರಿಗೂ ಸಿಗದ ಅಗಾಥ, ನಿಮ್ಮ ಸಂಪಾದನೆಗೆ ಅನುವು ಮಾಡಿಕೊಟ್ಟಿರುವುದು ದುಃಖದಾಯಕವಾದ ವಿಷಯ. ಈ ಆಘಾತದಿಂದ ಚೇತರಿಸಿಕೊಳ್ಳಲಾಗದೇ, ಪುಟ್ಟ ಸಯೀದರ ಬಳಿಗೆ ನಮ್ಮ ವದರಿಗಾರ ಹೋಗುತ್ತಿರುವುದನ್ನು ಬಹಿರಂಗವಾಗಿ ಹೇಳಲಿಚ್ಛಿಸುತ್ತಿಲ್ಲ :(
ಪ್ರತ್ಯುತ್ತರಅಳಿಸಿಸುಶ್ರುತರೇ,
ಪ್ರತ್ಯುತ್ತರಅಳಿಸಿಹಸಿರಿಗೆ ಮಸಿ ಬಳಿದಿದ್ದೇವೆ. ಮತ್ತಷ್ಟು ಪ್ರಯೋಗಗಳು ಚಾಲ್ತಿಯಲ್ಲಿರುವ ಕಾರಣ, ಕೋತಿ-ಕತ್ತೆ-ಬೆಕ್ಕು-ನಾಯಿಗಳನ್ನೆಲ್ಲಾ ಮತ್ತೆ ಕರೆದು ತರಲಾಗುತ್ತದೆ.
ಸುನಾಥರೆ,
ಪ್ರತ್ಯುತ್ತರಅಳಿಸಿನೀವು ಇಲ್ಲಿ ಬಂದು ಸತ್ಯ ಹೇಳುವುದು ನಮ್ಮ ಗಾರ್ದಭ ಕಿವಿಗಳಿಗೆ ಇರಿಯುವಂತಾಗುತ್ತಿದೆ. ಬೊಗಳೂರು ಖಾಲಿಯಾಗಿದೆ ಅಂತೆಲ್ಲಾ ಟಾಂಟಾಂ ಮಾಡದೆ ಇಲ್ಲದ ಮಾನ ಕಾಪಾಡಲು ವಿನಂತಿಸುತ್ತಿದ್ದೇವೆ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಅದು ಅಗಾಥ ಅನಾಥ ಅಲ್ಲ. ಬೇಕಿದ್ರೆ ಸುನಾಥರನ್ನೇ ಕೇಳಿ.
ನೀವು ಎಷ್ಟೇ ಬಹಿರಂಗಕ್ಕೆ ಹಾಕಿದರೂ, ಆಗಾಗ್ಗೆ ತಲೆಮರೆಸಿಕೊಳ್ಳುವುದರಿಂದ ಯಾವುದೇ ಪರಿಣಾಮ Beerಉವುದಿಲ್ಲ ಎಂಬ ಗಟ್ಟಿ ಅಭಿಪ್ರಾಯ ನಮ್ಮದು.
ಏನಾದ್ರೂ ಹೇಳ್ರಪಾ :-D