(ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ)
ಬೊಗಳೂರು, ಜೂ.10- ಕ್ಯಾಪಿಟೇಶನ್ ಶುಲ್ಕ, ಡೊನೇಶನ್, ಸುಲಿಗೆ ಇತ್ಯಾದಿ ಪದಗಳನ್ನು ಭಾರತೀಯ ಡಿಕ್ಷ-ನರಿಯಿಂದ ಕಿತ್ತು ಹಾಕಬೇಕು ಎಂದು ಅಖಿಲ ಭಾರತ (ಜಕೈಎ*) ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಸರಕಾರಿ ಕ್ಯಾಪಿಟೇಶನ್-ರಹಿತ) ಕೇಂದ್ರದ ಸರಕಾರವನ್ನು ಒತ್ತಾಯಿಸಿರುವುದಾಗಿ ಇಲ್ಲಿ ವರದ್ದಿಯಾಗಿದೆ.
ಆದರೆ ಕೇಂದ್ರದಲ್ಲಿ ಮಾಹಿತಿ ಮತ್ತು ಅಪಪ್ರಚಾರ ಖಾತೆ ಸಚಿವರಾಗಿ ಆಯ್ಕೆಯಾಗಿರುವ ಜಗದ್ರಾಕ್ಷಸನ್ ಅವರದ್ದೇ ಕೈವಾಡವಿದೆ ಎಂಬ ಬಗ್ಗೆ ಮಾಹಿತಿ ಮತ್ತು ಪ್ರಚಾರವಾಗಿರುವುದು ಎಲ್ಲರ ಹುಬ್ಬುಗಳನ್ನು ತಲೆಯಿಂದ ಎರಡಿಂಚು ಮೇಲಕ್ಕೇರಿಸಿದೆ. ಹೀಗಾಗಿ ಅಭಾ(ಜಕೈಎ)ಶಿಸಂ ಒಕ್ಕೂಟ(ಸರಕಾರಿ ಕ್ಯಾಪಿಟೇಶನ್ ರಹಿತ) ಈ ಕ್ರಮ ಕೈಗೊಂಡಿರುವುದಾಗಿ ಬೊಗಳೆ ರಗಳೆಯ ಅನ್ವೇಷಣಾ ರದ್ದಿಗಾರರು ಪತ್ತೆ ಹಚ್ಚಿದ್ದಾರೆ.
ಮೂಲಗಳ ಪ್ರಕಾರ, ಧಾವಂತದಿಂದ ದಂತ ವೈದ್ಯರಾದ ಬಳಿಕ ಹಲ್ಲು ಕೀಳುವಷ್ಟೇ ಸಲೀಸಾಗಿ ಪೋಷಕರಿಂದ ಹಣವನ್ನೂ ಕೀಳಲಾಗುತ್ತದೆ. ಅಂತೆಯೇ ಕೋಟಿ ಕೋಟಿ ಹಣ ಕೊಟ್ಟು ಶಸ್ತ್ರಕ್ರಿಯೆ ಮಾಡಲು ಕಲಿತ ವೈದ್ಯರಲ್ಲಿ ಹೆಚ್ಚಿನವರು ತಮ್ಮ ತಮ್ಮ ಸಂಸ್ಥೆಗಳ ಒಡೆಯರ ಸಲಹೆ ಮೇರೆಗೆ ಶಸ್ತ್ರಕ್ರಿಯೆಗೆ ಬಳಸುವ ಎಲ್ಲಾ ಉಪಕರಣಗಳನ್ನು ಉಪಯೋಗಿಸಿ ಚಿಕಿತ್ಸೆಗೆ ಬಂದ ರೋಗಿಗಳ ಜೇಬಿನ ಮೇಲೆ ಪ್ರಯೋಗ ಮಾಡಿ, ತಾವು ಸಮರ್ಥ ಶಸ್ತ್ರಜ್ಞರು ಎಂದು ಟೆಸ್ಟ್ ಮಾಡಿಕೊಳ್ಳುತ್ತಾರೆ. ಜೇಬು ಕುಯ್ದ ಬಳಿಕವಷ್ಟೇ ಅವರು ಹೊಟ್ಟೆ, ಕಿಡ್ನಿ, ಮೆದುಳು, ಪಿತ್ತಕೋಶ ಇತ್ಯಾದಿಗಳನ್ನು ಕುಯ್ಯಲಾರಂಭಿಸುತ್ತಾರೆ.
ಇಂತಿರಲು, ಜಗದ್ರಾಕ್ಷಸರ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಹೋದ ಜನ್ಮದಲ್ಲಿ ತಿಗಣೆಗಳಾಗಿದ್ದ ಮತ್ತು ಸೊಳ್ಳೆಗಳಾಗಿದ್ದವರೆಲ್ಲರೂ ಈ ಜನ್ಮದಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಹಳೆಯ ಜನ್ಮದ ಹೀರುವ ಬುದ್ಧಿಯನ್ನು ಅತ್ಯಂತ ಚಾಣಾಕ್ಷತೆಯಿಂದ, ಅದ್ಭುತವಾಗಿ, ಸುಂದರವಾಗಿ ಪ್ರದರ್ಶಿಸುತ್ತಿದ್ದಾರೆ. ಕಳೆದ ಜನ್ಮದ ಬುದ್ಧಿಯು ನೆನಪಿರುವುದರಿಂದ ಅವರು ಯಾವ ನೆನಪಿನ ಔಷಧಿ ತೆಗೆದುಕೊಳ್ಳುತ್ತಿದ್ದಾರೆ ಮತ್ತು ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸಂಚೋದನೆಗಳು ಬೊಗಳೂರು ಬ್ಯುರೋದಲ್ಲಿ ನಡೆಯುತ್ತಲೇ ಇದೆ.
ಈ ಹೋದ ಜನ್ಮದ ಜ್ಞಾಪಕಶಕ್ತಿಯ ಪ್ರಭಾವವು ಹೊತ್ತಿನ ತುತ್ತಿಗೆ ಪರದಾಡುತ್ತಾ, ಉನ್ನತ ವ್ಯಾಸಂಗಕ್ಕೆ ತೆರಳಲು ಸಜ್ಜಾಗಿರುವ ಮತ್ತು ಅದಕ್ಕಿಂತಲೂ ಉನ್ನತವಾದ ಎಲ್‌ಕೆಜಿ, ಯುಕೆಜಿ ಸೇರಲು ಸಜ್ಜಾಗಿರುವ ಜನರ ಮೇಲೂ ಆಗಿದೆ. ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ, ಈ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿಂದಾಗಿ ಉಂಟಾಗಿರುವ ನಷ್ಟವನ್ನು ಭರಿಸಲು, ಕಲಿಯಲು ಬಂದವರ ಮೇಲೆಯೇ ಬಾರದಿರುವವರ ಶುಲ್ಕವನ್ನೂ ಹೇರಿ ಹೀರಿ ಬಿಡಲಾಗುತ್ತದೆ ಎಂದು ಅಭಾ(ಜಕೈಎ)ಶಿಸಂ ಒಕ್ಕೂಟ(ಸರಕಾರಿ ಕ್ಯಾಪಿಟೇಶನ್ ರಹಿತ)ದ ಪದಧಿಕ್ಕಾರಿಗಳು ಹೇಳಿದ್ದಾರೆ.
(* ಜಕೈಎ = ಜನಸಾಮಾನ್ಯರ ಕೈಗೆ ಎಟುಕದ)
4 ಕಾಮೆಂಟ್‌ಗಳು
ಇದು ಬೋರಣ್ಣನವರ ಮನೆಯಾ? :o
ಪ್ರತ್ಯುತ್ತರಅಳಿಸಿಎಲ್ಲೆಲ್ಲೋ ಯಾವುದ್ಯಾವುದೋ ಬಣ್ಣದ ಕಿಟಕಿಗಳು, ಮನ ಸೂರೆಗೊಳ್ಳುವ ವಿನ್ಯಾಸ - ಕಣ್ಣು ಎಷ್ಟೇ ಹೊಸಕಿಕೊಂಡರೂ ನಂಬಲಾಗುತ್ತಿಲ್ಲ
ಇದನ್ನು ನೋಡುತ್ತಾ ನೋಡುತ್ತಾ ಈ ಬೋರಣ್ಣ, ಓದನ್ನೇ ಮರೆತು ಹೋದ :)
ಹೇಗೆ ಮಾಡಿದ್ರಿ ಸಾರ್! (ಹಿಂದೆ ಟಿವಿಯಲ್ಲಿ ಬರುತ್ತಿದ್ದ ರಿನ್ ಸಾಬೂನಿನ ಡಯಲಾಗ್ ನೆನಪಾಗುತ್ತಿದೆ!)
ಮನೆಯೇನೊ ಹೊಸಾ ರೀತಿಯಲ್ಲಿ ಝಗಮಗ ಆಗಿದೆ. ಆದರೆ
ಪ್ರತ್ಯುತ್ತರಅಳಿಸಿಒಳಗಿರೋರು ಅವರೇ ಕಣ್ರೀ! ನಮ್ಮ ಹಳೇ ಅನ್ವೇಷಿಗಳೇ!!
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿಸಿಕ್ಕ ಸಿಕ್ಕ ಕಿಟಕಿಯೊಳಗೆ ಇಣುಕಿ ನೋಡಿದರೆ ನೋಡಬಾರದ್ದು ನೋಡಿಹೋಗಬಹುದು!
ಫಳಫಳನೇ ಹೊಳೆಯವಂತೆ ಮಾಡುವುದಕ್ಕೆನಿಮ್ಮಂತಹ ಹಿಟ್ಟಿಗರ ಆಶೀರ್ವಾದ, ನಮ್ಮ ಬೊಗಳೂರು ಬ್ಯುರೋದ ಸಂ-ಚೋದನೆ ಎಲ್ಲವೂ ಕಾರಣ.
ಸುನಾಥರೆ,
ಪ್ರತ್ಯುತ್ತರಅಳಿಸಿಬಣ್ಣ ಬಣ್ಣದ ಅನ್ವೇಷಿಯ ಬಣ್ಣಕೆಡಿಸಲಾಗಿದೆ ಎಂಬುದು ನಿಜವಾಗಿ ಅಸತ್ಯವಾದರೂ, ಹೊಸ ಹೊಸ ಅನ್ವೇಷಣೆ ನಡೀತಾನೇ ಇದೆ ಎಂಬುದು ದೊಡ್ಡಾಸತ್ಯ!
ಝಗಮಗ ಇಷ್ಟವಾಯಿತಲ್ವಾ...
ನಿಮ್ಮಲ್ಲಿದ್ದರೆ ಒಂದಿಷ್ಟು ಸಮಯವನ್ನು (ಕಳಿಸಿ)ಕೊಡಿ. ನಾವು ಮತ್ತಷ್ಟು Someಚೋದನೆ ಮಾಡ್ತೀವಿ.
ಏನಾದ್ರೂ ಹೇಳ್ರಪಾ :-D