(ಬೊಗಳೂರು ಪ್ರತಿ'ಘ'ಟನಾ ಬ್ಯುರೋದಿಂದ)
ಬೊಗಳೂರು, ಜೂ22- ಮುಂಬೈ ದಾಳಿಯಲ್ಲಿ ಕೈವಾಡ ಜಗಜ್ಜಾಹೀರಾದರೂ, ನೀವು ಒಮ್ಮೆಗೆ ಒಂದೇ ಸೂಟುಕೇಸಿನಲ್ಲಿ ತುಂಬಿ ಸಾಕ್ಷ್ಯಗಳನ್ನು ಕೊಡಬೇಕಿತ್ತು ಅಂತ ನೆವನ ಹೇಳುತ್ತಿರುವ ಪಾತಕಿಸ್ತಾನ ಮತ್ತು "ಇಲ್ಲ, ಇಲ್ಲ, ನಾವು ಸಾಕ್ಷ್ಯ ಕೊಡುತ್ತಲೇ ಇದ್ದೇವೆ, ನೀವು ಕೇಳಿದಾಗಲೆಲ್ಲಾ ಕೊಡ್ತೀವಿ, ಎಷ್ಟು ನಿಧಾನವಾಗಿ ಆದ್ರೂ ಪರವಾಗಿಲ್ಲ, ಆದರೆ ಕನಿಷ್ಠ ನಾಲ್ಕೈದು ವರ್ಷದೊಳಗಾದರೂ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂಬ ಧೋರಣೆ ತಳೆದಿರುವ ಬೊಗಳೂರು ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ಮಾಡಲು ಕೊನೆಗೂ ಎಚ್ಚೆತ್ತುಕೊಂಡ ಬೊ.ರ. ಜನತೆ ನಿರ್ಧರಿಸಿದ್ದಾರೆ.ಎಲ್ಲರೂ ಕತ್ತೆ ಮೇಲೆ, ಎತ್ತಿನ ಬಂಡಿ ಇಟ್ಟು, ಜಾಗಟೆ ಬಾರಿಸಿ, ರಸ್ತೆ ತಡೆ, ರೈಲು ತಡೆ, ಧರಣಿ ಎಂಬಿತ್ಯಾದಿ ಸಕಲ ಮಾರ್ಗಗಳ ಮೂಲಕ ಪ್ರತಿಭಟನೆ ನಡೆಸಿಯಾಗಿದೆ. ಮುಂಬೈ ದಾಳಿಗೆ ಬಲಿಯಾದವರ ಕುಟುಂಬದವರ ರೋದನವಿನ್ನೂ ಸರಕಾರಕ್ಕೆ ಕೇಳಿಸಿಲ್ಲ. ಈ ಕಾರಣಕ್ಕೆ ಈ ಬಾರಿ ಸರಕಾರದ ಗಮನ ಸೆಳೆದೇ ಸಿದ್ಧ ಎಂದು ಪಣ ತೊಟ್ಟಿರುವ ಬೊಗಳೂರು ಜನತೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಹೇಗೆ ಎಂದು ಯೋಚಿಸಿ ಯೋಚಿಸಿ ಅರಬ್ಬೀ ಕಡಲಿನ ನೀರೆಲ್ಲಾ ಖಾಲಿಯಾಗುವ ಹಂತ ತಲುಪಿದಾಗ, ಸರಕಾರದಲ್ಲಿರುವವರಷ್ಟೇ ದಪ್ಪ ಮಂಡೆಯ ಬೊಗಳೂರು ಮಂದಿಯ ಮಂಡೆಯೊಳಗೂ ಒಂದು ನಕ್ಷತ್ರ ಹೊಳೆದಿದ್ದು, ಅವರೆಲ್ಲರೂ "ಹೀಗೆ ಮಾಡಿದರೆ ಹೇಗೆ" ಎನ್ನುತ್ತಾ ಏಕ ಸದಸ್ಯ ಬ್ಯುರೋದಲ್ಲಿರುವ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡವರಂತೆ ಬೊ.ರ. ಕಚೇರಿಗೆ ಧಾವಿಸಿ ಬಂದರು.
ಬೊ.ರ. ಕಚೇರಿಯಲ್ಲಿದ್ದ ಏಕಸದಸ್ಯರಲ್ಲಿ ಎಲ್ಲರೂ ಒಂದೊಂದಾಗಿ ಎದ್ದು ನಿಂತು "ಹೇಗೆ" ಎಂದು ಸಮುದ್ರದ ಅಲೆಅಲೆಗಳು ಬಂದಂತೆ ಕೇಳುತ್ತಾ ಹೋದರು.
ಮುಂಬೈ ದಾಳಿಕೋರರೆಲ್ಲ ಅರಬ್ಬೀ ಸಮುದ್ರದ ಮೂಲಕವೇ ಒಂದು ದೋಣಿಯಲ್ಲಿ ಬಂದಿದ್ದಲ್ಲವೇ? ಅದಕ್ಕೆ ಈ ಬಾರಿ ನಾವು ಸಮುದ್ರದಲ್ಲಿ ರಸ್ತೆ ತಡೆ ಮಾಡಬೇಕೆಂದಿದ್ದೇವೆ. ಸಮುದ್ರದ ನೀರು ಒಂದಿಷ್ಟೂ ಕದಲದಂತೆ ಮಾಡುತ್ತೇವೆ. ಸಮುದ್ರದಲ್ಲಿ ಜಲಚರಗಳ ಓಡಾಟವನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತಡೆದು, ಸಮುದ್ರತಡೆ ಮಾಡುವ ಮೂಲಕ ನಮ್ಮ ಪ್ರತಿಭಟನೆ ಸಲ್ಲಿಸುತ್ತೇವೆ ಎಂದ ಅವರು, ಅರಬ್ಬೀ ಸಮುದ್ರದಲ್ಲಿ ರಾಸ್ತಾ ರೋಕೋ ಮಾಡುವ ಈ ಪ್ರಯತ್ನಕ್ಕೆ ಬೊಗಳೂರು ಶುಭ ಹಾರೈಸದಿದ್ದರೆ ಮಟಾಷ್ ಎಂದು ಎಚ್ಚರಿಕೆ ನೀಡಿದ ಅವರು ಹೊರಟೇ ಹೋದರು.
4 ಕಾಮೆಂಟ್‌ಗಳು
ಸಮುದ್ರ ತಡೆ ನಡೆಸುವಾಗ, ಆಚೀಚೆಯ ನೀರು ತಮ್ಮ ಮೇಲೆ ಬಾರದಿರಲು ಮೋಸಸ್ ಮೊರೆ ಹೋಗಿದ್ದಾರಂತೆ. ಅದಿನ್ನೂ ನಿಮ್ಮ ವದರಿಗಾರರಿಗೆ ತಿಳಿದಿರಲಿಕ್ಕಿಲ್ಲ. ಹಾಗೇನಾದರೂ ಮೋಸಸ್ ಬಾರದಿರಲಾಗದಿದ್ದರೆ, ಪ್ರತಿಕ್ಷಣವೂ ಮೋಸ ಹೋಗುತ್ತಿರುವ ಮೋಸಿಸರನ್ನಾದರೂ ಕಳುಹಿಸುವಂತೆ ಕೋರಿಕೊಳ್ಳುತ್ತಿದ್ದಾರೆ. ಈ ಸಮುದ್ರ ತಡೆ ಮಾಡುವಾಗ, ಕಲ್ಲು ತೂರಾಟ ಮಾಡದಿದ್ದರೆ ಶಾಂತಿ ಬರೋಲ್ಲ ... ಸಿಗೋಲ್ಲ ಅಂತ ಪಕ್ಕೆ ಪಿಚ್ಚುಗಳನ್ನು ಬಳಸಲು ಹಠ್ಯಂತ್ರ ನಡೆಸುತ್ತಿದ್ದಾರೆ. ಈ ಎಲ್ಲದರ ಹಿಂದೆ ಪಾತಕಿಸ್ಥಾನಿಗಳ ಕಾಲ್ವಾಡ ಇದೆಯೆಂದು ತರಕಾರ ಹೇಳುತ್ತಿದ್ದರೆ, ಪಾತಕಿಗಳು ಕಮೆರಿಕನ್ನರ ಮೈವಾಡ ಇದೆಯೆಂದು ದೂರುತ್ತಿದ್ದಾರೆ. ಇದೆಲ್ಲದರ ಮಧ್ಯೆ ಸಿಲುಕಿದ್ದ ನಮ್ಮ ವದರಿಗಾರ ಎಲ್ಲಿದ್ದಾನೋ ಏನೋ ಎಂದು ತಿಳಿಯದಾಗಿ ನಾವು ಹರ್ಷಿಸುತ್ತಿದ್ದೇವೆ.
ಪ್ರತ್ಯುತ್ತರಅಳಿಸಿಬೊಗಳೂರಿನಲ್ಲಿ ಸಮುದ್ರವನ್ನು ತೋಡಿದವರು ಯಾರು?
ಪ್ರತ್ಯುತ್ತರಅಳಿಸಿಜೋಕುಮಾರಸ್ವಾಮಿಯೆ ಅಥವಾ ಚಡ್ಯೂರಪ್ಪನೆ?
ತಿರುಕರೇ ಉಫ್.. ಕುರುಕುರೇ....
ಪ್ರತ್ಯುತ್ತರಅಳಿಸಿನಿಮ್ಮ ಈ ಪುಟ್ಟ ಬಾರ್ಕಿಂಗ್ ನ್ಯೂಸ್‌ನಿಂದ ನಮ್ಮ ರದ್ದಿಗಾರರು ಕೂಡ ಅಡಗಿಕೂತು ಹೊಸಹೊಸಾ ರದ್ದಿಗಳನ್ನು ಬಿಸಾಕುತ್ತಿದ್ದಾರೆ.
ಸಮುದ್ರವನ್ನು ಎಲ್ಲರೂ ತೋಡುತ್ತಿದ್ದಾರೆ ಸುನಾಥರೆ,
ಪ್ರತ್ಯುತ್ತರಅಳಿಸಿಎಲ್ಲಾದರೂ ಓಟುಗಳ ನಿಧಿ ಸಿಗುತ್ತದೋ ಅಂತ...
ಏನಾದ್ರೂ ಹೇಳ್ರಪಾ :-D