(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಜೂ.19- ಎಷ್ಟೇ ಅವಕಾಶಗಳು ದೊರೆತರೂ ಮುಂಬೈಗೆ ಹೋಗದಿರಲು ಬೊಗಳೆ ರಗಳೆ ಬ್ಯುರೋ ನಿರ್ಧರಿಸಿದೆ. ಇದಕ್ಕೆ ಪ್ರಮುಖ ಕಾರಣವೊಂದು ಪತ್ತೆಯಾಗಿದೆ.ಅಲ್ಲಿರುವ ಮೃಗಾಲಯವನ್ನು ಆಧುನೀಕರಿಸಲು ಸರಕಾರವು ಯೋಜನೆ ಹಾಕಿಕೊಳ್ಳುವುದರಿಂದಾಗಿ, ಅಲ್ಲಿ ಮತ್ತಷ್ಟು ಹೊಸ ಹೊಸಾ ಪ್ರಾಣಿಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೊ.ರ. ಬ್ಯುರೋ ಸಂತಾಪಕರು ತಿಳಿಸಿದ್ದಾರೆ.
ಆದರೆ, ವೇಷ ಮರೆಸಿಕೊಂಡು ಅಲ್ಲಿಗೆ ಹೋಗಿಯೇ ತೀರುವುದಾಗಿಯೂ ಇದೇ ಸಂದರ್ಭದಲ್ಲಿ ಅವರು ಘೋಷಿಸಿಬಿಟ್ಟಿದ್ದಾರೆ. ಯಾಕೆಂದರೆ, ಮೃಗಗಳ ಆಲಯವನ್ನು 433 ಕೋಟಿ ರೂಪಾಯಿ ಹಣ ಪಡೆದು ಆಧುನೀಕರಿಸಲಾಗುತ್ತಿದೆ. ಕಾಡು ಬೆಟ್ಟ ಗುಡ್ಡಗಳಿಗೆ 433 ಕೋಟಿ ರೂಪಾಯಿಯಲ್ಲಿ ಏನು ಮಾಡಬಹುದು ಎಂಬ ಶಂಕೆಯೊಂದು ದಿಢೀರ್ ಹುಟ್ಟಿಕೊಂಡಿದ್ದೇ ಈ ಅವಾಂತರಕ್ಕೆ ಕಾರಣ.
ಬಹುಶಃ ಪ್ರಾಣಿಗಳಿಗೆಲ್ಲಾ ಲ್ಯಾಪ್‌ಟಾಪ್ ಕೊಡಬಹುದೇ? ಎಂಬ ಪ್ರಶ್ನೆ ಹುಟ್ಟಿಕೊಂಡ ನಡುವೆಯೇ, ಅವುಗಳಿಗೂ ಒಂದೊಂದು ಇ-ಮೇಲ್ ಅಕೌಂಟ್ ತೆರೆದು, ಓರ್ಕುಟ್ ಹಾಗೂ ಗೂಗಲ್ ಟಾಕ್ ವ್ಯವಸ್ಥೆ ಮಾಡಿಕೊಟ್ಟು, ಬೊಗಳೂರು ಬ್ಯುರೋದೊಂದಿಗೆ ಸಂಪರ್ಕಕ್ಕೆ ಹಾದಿ ಮಾಡಿಕೊಡಬಹುದೇ ಎಂಬಿತ್ಯಾದಿ ಪ್ರಶ್ನೆಗಳೆಲ್ಲವೂ ಇತ್ತೀಚೆಗೆ ಹುಟ್ಟಿಕೊಂಡಿರುವುದಾಗಿ ಪತ್ತೆಯಾಗಿದೆ.
ನಾವು ಕಾಲಕ್ಕೆ ತಕ್ಕಂತೆ ಕೋಲ ಕಟ್ಟಿಕೊಂಡು ಆಧುನೀಕರಣಗೊಂಡರೆ ಮಾತ್ರವೇ ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದು ಮಾನವ ಸಮುದಾಯ ಹೇಳುತ್ತಲೇ ಬಂದಿದೆ. ಇದು ಪ್ರಾಣಿಗಳಿಗೂ ಅನ್ವಯವಾಗಬೇಕು ಎಂದು ಬೊಗಳೂರು ಬ್ಯುರೋದ ನೂರಾರು ವರ್ಷಗಳ ಹೋರಾಟದ ಫಲವಿದು ಎಂಬ ಅಪರೂಪದ ಸಂಚೋದನೆಯೊಂದನ್ನೂ ಇದೇ ಸಂದರ್ಭ ಬೊಗಳೂರು ಸಂತಾಪಕರು ಹೊರಗೆಡಹಿದ್ದಾರೆ.
ಈ ಹಿಂದೆ ಪ್ರಾಣಿಗಳ ಕೈಗೆ ಪೇಜರ್ ಕೊಡುವ ಬಗ್ಗೆ ಸರಕಾರ ಯೋಜನೆ ರೂಪಿಸಿತ್ತು. ಆದರೆ ಮೊಬೈಲ್ ಫೋನುಗಳ ಹಾವಳಿ ಜೋರಾದ ಬಳಿಕ ಪೇಜರುಗಳೆಲ್ಲ ಮೂಲೆಗೆ ಸೇರಿದವು. ಮತ್ತು ಅದಾಗಲೇ ಪ್ರಾಣಿಗಳ ಸಮುದಾಯವು ನಂಗೂ ಒಂದು ಮೊಬೈಲ್ ಕೊಡಿಸಪ್ಪ ಎಂದು ಹಠ ಮಾಡತೊಡಗಿದ್ದವು.
ಮತ್ತು ಇದೀಗ, ಭಿಕ್ಷುಕರು ಕೂಡ, ತಮ್ಮ ಕೈಯಲ್ಲಿದ್ದ ಮೊಬೈಲ್ ಫೋನಿನಲ್ಲೇ ಪಕ್ಕದ ಬೀದಿಗೆ ಫೋನಾಯಿಸಿ, ಮಗಾ, ಅಲ್ಲಿ ಯಾಪಾರ ಚೆನ್ನಾಗಿ ನಡೀತೈತಾ, ತುಂಬಾ ರಶ್ ಇದೆಯಾ, ನಿಂಗೆ ಯಾಪಾರ ಮಾಡಕ್ಕಾಗ್ದಿದ್ರೆ, ನಾನೂ ಅಲ್ಲೇ ಬತ್ತೀನಿ ಅಂತ ವಿಚಾರಿಸಿ ಬೀದಿ ಬೀದಿಯಲ್ಲಿ ಡ್ಯೂಟಿಗೆ ಹಾಜರಾಗುವ ಘಟನೆಗಳು ಕೂಡ ಹೆಚ್ಚಾಗುತೈತೆ.
ಈ ಎಲ್ಲ ಹಿನ್ನೆಲೆಯಲ್ಲಿ, ಮೊಬೈಲ್ ಕೊಡಿಸುವ ಯೋಜನೆ ಜಾರಿಗೆ ಬರುವಾಗ, ಅದು ಕೂಡ ಔಟ್-ಡೇಟೆಡ್ ಆಗಿ, ಪುಟ್ಟ ಪುಟ್ಟ ಲ್ಯಾಪುಟಾಪುಗಳು, ಐಫೋನುಗಳು, ಕಪ್ಪು-ಬೆರಿಗಳೆಲ್ಲಾ ಮೇಳೈಸುವುದರಿಂದಾಗಿ, ಈಗಲೇ ಲ್ಯಾಪುಟಾಪು ನೀಡುವ ಯೋಜನೆಯನ್ನು ಔಟ್‌ಡೇಟ್ ಆಗುವ ಸಾಕಷ್ಟು ಮುಂಚೆಯೇ ಘೋಷಿಸುವ ತೀರ್ಮಾನ ಮಾಡಲಾಗಿದೆ ಎಂದು ಪ್ರಾಣಿಗಳ ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟ್ಟಪ್ಪಣೆಯಲ್ಲಿ ತಿಳಿಸಿದ್ದಾರೆ.
2 ಕಾಮೆಂಟ್‌ಗಳು
ಸದ್ಯ ನೀವು ಬರೋಲ್ಲ ಎನ್ನುವ ಸುದ್ದಿ ತಿಳಿದು ಹಿರಿಹಿರಿ ಹೀರೇಕಾಯಿ ಆಗುತ್ತಿದ್ದೇವೆ. ೪೩೩ ಕೋತಿಗಳನ್ನು ನಾವೇ ನಮ್ಮವರೇ ಮಾಣುಸಿಗರೇ ನುಂಗಿಕೊಳ್ಳಬಹುದು. ಕೈಗೆ ಪಾಮುಟಾಪು, ತೊಡೆಯ ಮೇಲೆ ಲ್ಯಾಪುಟಾಪು, ಇಟ್ಕೊಂಡು ಚನಾ ಸೇಂಗಾ ತಿನ್ಕೊಂಡು ರೋಗಗಳನ್ನು ನಾವು ಮಾತ್ರ ಅನುಭವಿಸಿಕೊಂಡು ಮಜವಾಗಿರಬಹುದು.
ಪ್ರತ್ಯುತ್ತರಅಳಿಸಿಅದ್ಸರಿ, ಈ ವದರಿ ನಮ್ಮ ಬೀರುವಿನಿಂದ ಹೇಗೆ ನಿಮ್ಮ ಕಡೆಗೆ ಲೀಕಾಯ್ತು? ನಮ್ಮ ಬೀರುವಿನ ಏಕಮಾತ್ರ ಸದಸ್ಯನ ಮೇಲೆ ನಾಲ್ಕುಕಣ್ಣುಗಳನ್ನು ಇಟ್ಟು ವಿಚಾರಿಸುತ್ತಿದ್ದೇವೆ
ನಿಮ್ಮ ಬೀರುವಿನ ಯಾರೂ ಈ ಕಡೆ ಬರ್ಬಾದು, ಗೊತ್ತಾಯ್ತಾ? ಇಲ್ದೇ ಇದ್ರೆ ೪೩೩ ಕೋತಿಗಳಲ್ಲಿ ಸ್ವಲ್ಪ ಛೋಟಣ್ಣ ಮತ್ತು ದುಬಾಯಿ ರಾಜರುಗಳಿಗೆ ಕೊಡಬೇಕಾಗಬಹುದು
ಹೆಚ್ಚರಿಕೆ!
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನಿಮ್ಮ ಬೀರುವಿನ ಬೀರಾಳುವಿಗೆ ಒಂದು ತೊಟ್ಟೆ ಬೀರು ಕುಡಿಸಿದ್ದೇ ತಡ, ನಮ್ಮ ಕೆಲಸ ಆಗಿಹೋಗಿದೆ!
ನೀವು ಹಿಗ್ಗೇಕಾಯಿ ಆಗಿದ್ದು ಯಾಕೇಂತ ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ನೀವು ಕೂಡ ಅಲ್ಲಿನ ಪ್ರಾಣಿ ಸಂಗ್ರಹಾಲಯದೊಳಗೆ ಸೇರಿಕೊಳ್ಳುವ ಯೋಚನೆ ಮಾಡಿದ್ದೀರಿ, ಮತ್ತು ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಲಿದ್ದೀರಿ ಎಂಬ ಸಂಚಿನ ಬಗ್ಗೆ ನಮ್ಮ ರದ್ದಿಗಾರರು ನಿಮ್ಮ ಬೀರುವಿನಿಂದ ಬೀಗ ಮುರಿದು ಕಳ್ಳತನ ಮಾಡಿ ಸುದ್ದಿ ತಂದು ಹಾಕಿದ್ದಾರೆ.
ಏನಾದ್ರೂ ಹೇಳ್ರಪಾ :-D