(ಬೊಗಳೆ ಸಂದರ್ಶನ ಬ್ಯುರೋದಿಂದ)
ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ಆಯೋಗದ ಸಮಸ್ತ ಸದಸ್ಯರು, ವಿಶ್ವಕಪ್ ಟಿಕ್ ಟ್ವೆಂಟಿ ಕೂಟದಿಂದ ಇಂದ್ರನನ್ನೇ ಗೆದ್ದಂತಿದ್ದ ಸಿಂಹೇಂದ್ರ ಮಂಗ್ ಧೋನಿ ಬಳಗ ದಿಢೀರ್ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಟೀಮಿಂಡಿಯಾ ನಾಯಕನನ್ನು ಸಂಪರ್ಕಿಸಲು ಯತ್ನಿಸಿ ಏರ್‌ಸೆಲ್ ಮೊಬೈಲ್ ಮೂಲಕ ಫೇಸ್‌ಬುಕ್‌ನಲ್ಲಿ ಜಾಲಾಡಿದರೂ ಧೋನಿ ಸಿಗಲಿಲ್ಲ.ಓರಿಯಂಟ್ ಪಿಎಸ್‌ಪಿಒ ಫ್ಯಾನ್ ಹಾಕಿಕೊಳ್ಳುತ್ತಾ ತನ್ನ ಮತ್ತು ಟೀಂ ಇಂಡಿಯಾದ ಫ್ಯಾನ್‌ಗಳ ಆಕ್ರೋಶದ ಬಿಸಿಯನ್ನು ತಂಪಗಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಧೋನಿ, ಕೊನೆಗೂ ಒಂದು ಕೋಕೋ ಕೋಲಾ ಶಾಪದಲ್ಲಿ ಸೆರೆ ಸಿಕ್ಕರು. ಅವರನ್ನು ಹಿಡಿದೆತ್ತಿ ಸಂದರ್ಶಿಸಲಾಯಿತು.
ನೀವು ಯಾಕೆ ಸೋತಿರಿ?
ಛೆ, ನಾವು ಸೋತಿಲ್ಲ, ನಾವು ಮೂರು ರನ್ ಕಡಿಮೆ ಬಿತ್ತಷ್ಟೆ. ಅವರು ಗೆದ್ದರು. ನಾವೂ ಗೆಲ್ಲುತ್ತಿದ್ದೆವು. ಆದರೆ ಕೇವಲ 3 ರನ್ ಅಂತರದ ಗೆಲುವಾಗಿರುವುದರಿಂದ ಅವರು ನಿಜವಾಗಿ ಗೆದ್ದಿಲ್ಲ. ಗೆದ್ದವರು ನಾವೆ.
ಛೆ, ಹಾಗೆಲ್ಲಾ ಬಡಬಡಿಸದಿರಿ. ಈಗ ಸೋಲಿಗೆ ಕಾರಣ ಏನೂಂತ ಹೇಳ್ತೀರಾ...
ಹೇಳ್ತೀನಿ ಹೇಳ್ತೀನಿ. ಸೋತ ತಕ್ಷಣ ನೀವು ಹೀಗೆ ಕೇಳಿದ್ರೆ ಉತ್ತರಿಸೋದು ಕಷ್ಟವಾಗುತ್ತೆ. ನಮಗೆ ಕೂಡ ಸ್ವಲ್ಪ ಸುಧಾರಿಸೋದಿಕ್ಕೆ ಸಮಯಾವಕಾಶ ಕೊಡಬೇಕಲ್ವ. ತಕ್ಷಣ ಉತ್ತರಿಸೋಕೆ ನಾವು ಪ್ರಿಪೇರ್ ಆಗಿರೋದಿಲ್ಲ. ಸೋ, ಒಂದೈದು ನಿಮಿಷ ಕೊಡಿ. ಅಷ್ಟ್ರೊಳ್ಗೆ ಒಂದು add ಶೂಟಿಂಗ್ ಮುಗ್ಸಿ, ಯೋಚಿಸಿ ಹೇಳ್ತೀನಿ.
ಕಳೆದ ಬಾರಿ ಗೆದ್ದವರು, ಈ ಬಾರಿ ಸೂಪರ್ 8ರಲ್ಲಿ ಸೋತಿರುವ ಬಗ್ಗೆ ಏನನ್ನಿಸುತ್ತದೆ?
ಕಳೆದ ಬಾರಿ ಅದೃಷ್ಟ ಇತ್ತು. ಮಳೆಯಿಂದ ಒಂದು ಪಂದ್ಯ ರದ್ದಾಗದೇ ಹೋಗಿದ್ದರೆ ಕಳೆದ ಬಾರಿಯೂ ಕಪ್ ನಮ್ಮದಾಗಿರುತ್ತಿರಲಿಲ್ಲ. ಈ ಬಾರಿ ಆ ಅದೃಷ್ಟ ಎಲ್ಲೋ ತಲೆಮರೆಸಿಕೊಂಡಿತ್ತು. ಮುಂದಿನ ಬಾರಿ ಹೇಗಾದರೂ ಮಾಡಿ ಅದೃಷ್ಟವನ್ನು ಮೊದಲೇ ಹಿಡಿದು ಭದ್ರವಾಗಿಟ್ಟುಕೊಳ್ಳುತ್ತೇವೆ. ಅದೇನೂ ದೂರವಿಲ್ಲ ಅಲ್ವಾ.
ಈಗ ಹೇಳಿ, ಸೋಲಲು ಕಾರಣವೇನು?
ಒತ್ತಡ ಕಾರಣ, ಇಷ್ಟೆಲ್ಲ ಜಾಹೀರಾತುಗಳಿರುವಾಗ, ಅವುಗಳ ಮಧ್ಯೆ ಮಧ್ಯೆ ಕ್ರಿಕೆಟ್ ಕೂಡ ಆಡಬೇಕು. ಅದಲ್ಲದೆ, ಸಿನಿಮಾದವ್ರು ಕೂಡ ಬೆನ್ನಹಿಂದೆ ಬರ್ತಾ ಇದ್ದಾರೆ. ಇಷ್ಟೆಲ್ಲಾ ಒತ್ತಡದ ನಡುವೆ ನಾವು ಸೂಪರ್8 ತಲುಪಿದ್ದೇ ದೊಡ್ಡ ದುರಂ... ಅಲ್ಲಲ್ಲ ಸಂಗತಿ... ಮತ್ತೆ ನಮ್ಮಲ್ಲಿ ಚಚ್ಚಿಂಗ್ ಚೆಂಡುಲ್ಕರ್, ಸ್ಫೋಟೇಂದ್ರ ಸೇವಾಗ್ ಮುಂತಾದವರಿರಲಿಲ್ಲ ಎಂಬ ಕಾರಣವೂ ಈಗೀಗ ಹೊಳೆಯುತ್ತಿದೆ.
ನಾವು ಸೋತಿದ್ದಕ್ಕೆ ಮತ್ತೊಂದು ದೊಡ್ಡ ಕಾರಣವೂ ಇದೆ. ಕಳೆದ ಬಾರಿ ಹೇಗೋ ಗೆದ್ದು ಕಪ್ಪನ್ನು ಎರಡು ವರ್ಷ ನಮ್ಮಲ್ಲಿ ಉಳಿಸಿಕೊಂಡೆವು. ಈ ಬಾರಿ ಕಪ್ ಗೆದ್ರೆ ಅದನ್ನು ಕೇವಲ 9 ತಿಂಗಳ ಕಾಲ ಮಾತ್ರವೇ ನಮ್ಮ ಬಳಿ ಉಳಿಸಿಕೊಳ್ಳಬಹುದು. ಹೀಗಾಗಿ ನಮಗೆ ಈ ಕಡಿಮೆ ಅವಧಿಯ ಕಪ್ಪು ಬೇಡ ಅಂತ ನಿರ್ಧರಿಸಿದೆವು.
ಈಗೇನು ಯೋಚಿಸ್ತಾ ಇದ್ದೀರಿ?
ಏನಿಲ್ಲ, ರವೀಂದ್ರ ಜಡೇಜಾರನ್ನು ಮೇಲಿನ ಕ್ರಮಾಂಕಕ್ಕೆ ಬಡ್ತಿ ನೀಡಿ ಕಳಿಸಿದ್ದು ಏನಾದ್ರೂ ತಪ್ಪಾಗಿರಬಹುದೇ? ನಾನು ಕೊನೆಗೆ ಬಂದಿದ್ದರೆ ಚೆನ್ನಾಗಿತ್ತೇ? ಅಂತೆಲ್ಲಾ ಆಲೋಚನೆ ಆಗ್ತಾ ಇದೆ. ಆದ್ರೆ ಅದಕ್ಕೂ ಹೆಚ್ಚಾಗಿ, ನಾನು ರೂಪದರ್ಶಿಯಾಗಿರುವ ಕೋಕೋ ಕೋಲಾ, ಪಿಎಸ್ಪೀಓ ಮತ್ತು ಏರ್ಸೆಲ್‌ಗಳ ಗತಿಯೇನು? ಅವರು ನನ್ನನ್ನು ಉಳಿಸಿಕೊಳ್ಳುತ್ತಾರಾ? ನನಗೆ ಗೇಟ್ ಪಾಸ್ ಕೊಡ್ತಾರಾ ಅನ್ನೋದೇ ಚಿಂತೆಯಾಗಿಬಿಟ್ಟಿದೆ.
ಬಿದ್ದವರಿಗೆ ಆಳಿಗೊಂದರಂತೆ ಕಲ್ಲು ಎಂಬ ಮಾತು ನಿಮಗೆ ಹೇಗೆ ಅನ್ವಯವಾಗುತ್ತದೆ?
ಭಾರತ ದೇಶ ಭಾವನೆಗಳಿಂದ ತುಂಬಿದ ದೇಶ. ಯಾವ ಭಾವನೆ ಎಲ್ಲಿ ಹೇಗೆ ವ್ಯಕ್ತವಾಗಬೇಕು ಎಂದು ಜನರಿಗೆ ಗೊತ್ತಾಗೋದಿಲ್ಲ. ಬಾಯಿಗೆ ಬಂದಂತೆ ಆಡೋದು ನಮ್ಮ ಕೆಲಸ, ಮನ ಬಂದಂತೆ ತೆಗಳುವುದು ಮತ್ತು ಹೊಗಳುವುದು ಅವರಿಗೆ ಬಿಟ್ಟ ವಿಷಯ. ಬಿದ್ದಾಗ ಒದ್ದು ಬಿಡುವುದು, ಎದ್ದಾಗ ಹೊದ್ದು ಮಲಗುವುದು, ಇಲ್ಲಾ ಅಟ್ಟಕ್ಕೇರಿಸುವುದು ನಮ್ಮ ಜಾಯಮಾನ.
ಆದ್ರೆ ಒಂದು ಮಾತ್ರ ನೆನಪಿಡಿ. ಇದುವರೆಗೆ ಟಿ-ಟ್ವೆಂಟಿ ವಿಶ್ವ ಕಪ್ ಪಂದ್ಯಗಳನ್ನು, ಅದರಲ್ಲಿಯೂ ಭಾರತ ಇರೋ ಪಂದ್ಯಗಳನ್ನು ನಮ್ಮ ಭಾರತೀಯರು ಭಾರೀ ಟೆನ್ಷನ್‌ನಿಂದ, ಉದ್ವಿಗ್ನರಾಗಿ, ಉದ್ವೇಗಗೊಂಡು, ಉಸಿರು ಬಿಗಿಹಿಡಿಯುವುದೇ ಮುಂತಾಗಿ ಸರ್ಕಸ್ ಮಾಡುತ್ತಾ ನೋಡುತ್ತಿದ್ದರು. ಅವರಿಗೀಗ ಈ ಎಲ್ಲ ಯಾವುದೇ ತಾಪತ್ರಯಗಳಿಲ್ಲದೆ ಆಟ ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಸ್ಟ್ರೆಸ್ ಎಂಬುದು ಅತಿ ದೊಡ್ಡ ಕಿಲ್ಲರ್ ಎಂದು ನಮಗೆ ಯಾರೋ ಹೇಳಿರುವುದರಿಂದ, ನಾವು ಭಾರತೀಯರಿಗೋಸ್ಕರ ಏನಾದ್ರೂ ಮಾಡಬೇಕೆಂದು ಯಾವತ್ತೋ ಆಲೋಚಿಸಿದ್ದೆವು. ಅದೀಗ ಕೈಗೂಡಿದೆ. ಎಲ್ಲ ಭಾರತೀಯರೂ ಶಾಂತರಾಗಿ ಇನ್ನು ಕ್ರಿಕೆಟ್ ಮ್ಯಾಚ್ ನೋಡಬಹುದು ಎಂದು ಬೊಗಳೆ ರಗಳೆ ಮೂಲಕ ನಾವು ಸಂದೇಶ ನೀಡುತ್ತಿದ್ದೇವೆ.
7 ಕಾಮೆಂಟ್‌ಗಳು
ಧೋನಿಯು ಇನ್ನು ಮುಂದೆ ಹರಳೆಣ್ಣೆ ಜಾಹೀರಾತಿನಲ್ಲಿ ರೂಪದರ್ಶಿಯಾಗ್ತಾನಂತೆ!
ಪ್ರತ್ಯುತ್ತರಅಳಿಸಿಈ ವದರಿ ಸ್ವಲ್ಪ ಸಾಫ್ ಸೀದಾ ಆಗಿದೆ. ಸೋಲಿಗೆ ಕಾರಣ ಒತ್ತಡ ಎನ್ನುವುದಂತೂ ನಿಜ. ಆದರೆ ಎಲ್ಲಿ ಒತ್ತಿದ್ದು, ಯಾರು ಒತ್ತಿದ್ದು, ಹೇಗೆ ಒತ್ತಿದ್ದು ಎಂಬುದರ ಬಗ್ಗೆ ಸಂಚೋದಿಸಬೇಕೆಂದು ಕೇಳಿಕೊಳ್ಳುವೆವು.
ಪ್ರತ್ಯುತ್ತರಅಳಿಸಿಈ ಗತಿಯಲ್ಲಿ ನಮ್ಮ ವದರಿಯನ್ನು ಚೋರಿ ಮಾಡಬಾರದೆಂದು ಕಳಕಳಿಯಾಗಿ ಒತ್ತಾಯಿಸುವೆವು
"ಧೋನಿಯು ಇನ್ನು ಮುಂದೆ ಹರಳೆಣ್ಣೆ ಜಾಹೀರಾತಿನಲ್ಲಿ ರೂಪದರ್ಶಿಯಾಗ್ತಾನಂತೆ"
ಪ್ರತ್ಯುತ್ತರಅಳಿಸಿಕಾಕಾ, ತುಂಬಾ ನಗಿಸಿದ್ರಿ :))
"ನಮ್ಮ ಭಾರತೀಯರು ಭಾರೀ ಟೆನ್ಷನ್‌ನಿಂದ, ಉದ್ವಿಗ್ನರಾಗಿ, ಉದ್ವೇಗಗೊಂಡು, ಉಸಿರು ಬಿಗಿಹಿಡಿಯುವುದೇ ಮುಂತಾಗಿ ಸರ್ಕಸ್ ಮಾಡುತ್ತಾ ನೋಡುತ್ತಿದ್ದರು. ಅವರಿಗೀಗ ಈ ಎಲ್ಲ ಯಾವುದೇ ತಾಪತ್ರಯಗಳಿಲ್ಲದೆ ಆಟ ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ."
ಹೌದು, ನಮ್ಮನೆಯವರು ಮನೆಯಲ್ಲಿ ಕಂಪ್ಯೂಟರಿನಲ್ಲಿ ನೋಡೋದು, ಮನೆಯಿಂದ ಹೊರಗಿದ್ದಾಗ ಐಫೋನಿನಲ್ಲಿಯೂ ನೋಡಿ ಕಣ್ಣು ಹಾಳುಮಾಡಿಕೊಳ್ಳೋದು ತಪ್ಪಿತು. ಸದ್ಯ....
ಬೊಗಳೆರಗಳೆ ಮುಖಪುಟ ಲಿರಿಲ್ ಸೋಪನ್ನು ನೆನಪಿಸುತ್ತಿರುವ ಮರ್ಮ?
ಸುನಾಥರೆ,
ಪ್ರತ್ಯುತ್ತರಅಳಿಸಿಧೋನಿ ಪೆಸ್ಟಿ ಕೋಲಾ ಕುಡಿದೇ ಸೋತದ್ದು ಅಂತ ಜನ ಆಡಿಕೊಳ್ತಾ ಇದ್ದಾರಾದುದರಿಂದ ಹರಳೆಣ್ಣೆಯನ್ನು ಧೋನಿ ಕುಡೀತಾರಾ, ಕುಡಿಸ್ತಾರಾ ಅಥ್ವಾ ಹಚ್ಕೋತಾರಾ ಎಂಬ ಬಗ್ಗೆ ಸಂಚೋದನೆ ಆಗಬೇಕಿದೆ.
ಶ್ರೀನಿವಾಸರೆ,
ಪ್ರತ್ಯುತ್ತರಅಳಿಸಿನೀವು ಒದರಿದ್ದನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಒತ್ತಡ ಎಂಬುದು ಅಕ್ಷರದೋಷಜನ್ಯವಾಗಿದೆ. ಇದು ಒತ್ತ"ದ", ಅಂದರೆ ಐಪಿಎಲ್ಲಿನಲ್ಲಿದ್ದ ಹಾಗೆ, ಸೂಟುಕೇಸುಗಳನ್ನು, ಜೇಬುಗಳನ್ನು ಒತ್ತಲಾರದಂತದ್ದು ಮಾತ್ರ ಇದ್ದದ್ದೇ ಕಾರಣ ಎಂದು ಕಂಡುಕೊಳ್ಳಲಾಗಿದೆ. ಈ ವರದ್ದಿಗೆ ನಿಮಗೆ ಪೇಟೆಂಟ್ ನೀಡಲಾಗುವುದಿಲ್ಲ.
ಶ್ರೀತ್ರೀಯವರೆ,
ಪ್ರತ್ಯುತ್ತರಅಳಿಸಿನಮ್ಮ ಮುಖಪುಟವು ಲಿರಿಲ್ ಸೋಪನ್ನು ನೆನಪಿಸಿಕೊಂಡಿರುವುದರ ಹಿಂದೆಯೂ ಧೋನಿ ಮರ್ಮವೇ ಅಡಗಿದೆ. ಇದೀಗ ಟಿ-ಟ್ವೆಂಟಿ ಸೇವಿಸಿ ಬಿದ್ದುಕೊಂಡಿರುವ ಅವರ ಪಡೆಯನ್ನು ಲಿರಿಲ್ ಸೋಪಿನಲ್ಲಿ ಉಜ್ಜಿ ತೊಳೆಯಬೇಕೆಂದು ನೆನಪಿಸಿಕೊಳ್ಳಲಾಗುತ್ತದೆ. ಯಾಕೆಂದರೆ, ಬಲಿಷ್ಠ ಎಂಬ ಹೆಗ್ಗಳಿಕೆ ಪಡೆದಿದ್ದ ತಂಡದ ಮಾನವೂ ಅದೇ ಸೋಪಿನಿಂದ ಸ್ವಚ್ಛಗೊಳಿಸಲಾಗಿದೆಯಲ್ಲ... ಅದಕ್ಕೆ.
parvagilla
ಪ್ರತ್ಯುತ್ತರಅಳಿಸಿಏನಾದ್ರೂ ಹೇಳ್ರಪಾ :-D