ಬೊಗಳೆ ರಗಳೆ

header ads

(Afzal) ಗುರು ಹತ್ಯೆ ಮಹಾ ಪಾಪ!

(ಬೊಗಳೂರು ಓಟ್ ಬ್ಯಾಂಕ್ Repeat telecast ಬ್ಯುರೋದಿಂದ)
ಬೊಗಳೂರು, ಜೂ.29- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಹಿಂದಿನ ವರದಿಗಳನ್ನು ಕೆದಕಿದಾಗ, ಮೂರು ವರ್ಷದ ಹಿಂದೆಯೇ ಬೊಗಳೂರು ಬ್ಯುರೋ, ಗುರು ಹತ್ಯೆಯ ಮಾಡದಂತೆ ಜಾಗೃತಿ ಮೂಡಿಸಿತ್ತೆಂಬ ಅಂಶ ಜಾಗೃತವಾಗಿ ಈ ವರದಿಯನ್ನು ಮತ್ತೆ ನೀಡಲಾಗುತ್ತಿದೆ. ಇದಕ್ಕೆ ಕಾರಣವೆಂದರೆ, ಸಚಿವಗಿರಿಯಲ್ಲಿದ್ದಾಗಲೂ ಇಲ್ಲದಿದ್ದಾಗಲೂ ಕಾನೂನು ಮಾತನಾಡುತ್ತಿದ್ದ ಮತ್ತು ಮಾತನಾಡುತ್ತಿರುವ ಕಾನೂನು ಸಚಿವರ ಈ ಹೇಳಿಕೆ.

ಭಾರತದ ಪರಮೋನ್ನತ ಅಧಿಕಾರ ಕೇಂದ್ರವಾದ ಸಂಸತ್ತಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಜೈಶ್ ಎ ಮಹಮ್ಮದ್ ಉಗ್ರಗಾಮಿ ಮತ್ತು ಭಯೋತ್ಪಾದಕರ ಗುರುವೇ ಆಗಿಬಿಟ್ಟಿರುವ ಮಹಮದ್ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯವು ಆದೇಶ ನೀಡಿದ್ದರೂ, ಈ ಬಗ್ಗೆ ದಯಾಭಿಕ್ಷೆ ದೊರಕಿಸಲು ಯತ್ನಿಸುತ್ತಿರುವುದೇಕೆ ಎಂಬುದಾಗಿ ಮಾಡಲು ಬೇರೇನೂ ಕೆಲಸವಿಲ್ಲದ ಕಾರಣದಿಂದಾಗಿ ಬೊಗಳೆ ರಗಳೆ ಬ್ಯುರೋ ನಮ್ಮನ್ನಾಳುವ ಕೇಂದ್ರದ ವಕ್ತಾರನನ್ನು ಹಿಡಿದು ಪ್ರಶ್ನಿಸಿತು.

ಈ ಪ್ರಶ್ನೆಗೆ ಬಂದ ಉತ್ತರಗಳು ಯಾವುದೇ ಭಯೋತ್ಪಾದನೆಗೆ ಕಡಿಮೆಯಾಗಿರಲಿಲ್ಲವಾದ ಕಾರಣ, ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ ಎಂದುಕೊಂಡು ಸುಮ್ಮನಾಗಬೇಕಾಯಿತು.

ನೀವೇಕೆ ಗುರುವಿಗೆ ತಿರುಮಂತ್ರ ಹಾಕುವ ಬದಲು, ನೇಣಿನಿಂದ ರಕ್ಷಿಸಲು ಯತ್ನಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಅಂಥ ಮರಳುಗಾಡಿನ ಮುಸ್ಲಿಂ ರಾಷ್ಟ್ರಗಳಲ್ಲೇ ಕೊಂದವನಿಗೆ ಕೊಲೆಯೇ ಶಿಕ್ಷೆ ಎಂಬುದಿದೆ. ಮತ್ತು ತಪ್ಪು ಮಾಡಿದರೆ ಮಾತ್ರವೇ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈತ ಇಲ್ಲಿ ಯಾರನ್ನೂ ಕೊಂದಿಲ್ಲ. ಸಂಸತ್ ಭವನವನ್ನೇ ಸ್ಫೋಟಿಸಲು ಯತ್ನಿಸಿದ್ದು ಮಾತ್ರ. ಸ್ಫೋಟವಾಗಿದೆಯೇ? ನಾವೆಲ್ಲಾ ಇನ್ನೂ ಬದುಕುಳಿದಿಲ್ಲವೇ? ಹಾಗಾಗಿ ಈತ ತಪ್ಪು ಮಾಡಿದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಉತ್ತರ ಬಂತು.

ಮತ್ತೆ, ಅನಾದಿ ಕಾಲದಿಂದ ನಮ್ಮ ವೇದ ಶಾಸ್ತ್ರ ಪುರಾಣಗಳಲ್ಲೇ ಗುರು ಹತ್ಯೆ ಮಹಾಪಾಪ ಎಂದು ಹೇಳಲಾಗಿದೆ. ಈ ಅಫ್ಜಲ್ ಗುರು ಕೂಡ ಸಾಕಷ್ಟು ಮಂದಿಗೆ ಬಂದೂಕು ಹಿಡಿಯುವುದು ಹೇಗೆ, ಬಾಂಬ್ ಸ್ಫೋಟಿಸುವುದು, ಭಯವನ್ನು ಉತ್ಪಾದಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಶಿಕ್ಷಣ ನೀಡಿದ್ದಾನೆ. ಇಂಥ ಮಹಾನ್ ಗುರುವಿಗೆ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಪುರಸ್ಕಾರ ನೀಡುವುದು ಬಿಟ್ಟು, ಇಲ್ಲವೇ ದ್ರೋಣಾಚಾರ್ಯ ಪ್ರಶಸ್ತಿ ಕೊಡುವುದು ಬಿಟ್ಟು, ಗಲ್ಲು ಶಿಕ್ಷೆ ನೀಡಲು ಹೊರಟಿದ್ದಾರಲ್ಲಾ... ಇವರಿಗೆ ಯಾರಾದರೂ ಹೇಳೋರು ಕೇಳೋರು ಇಲ್ಲವೇ ಎಂದು ನಮ್ಮನ್ನೇ ಪುನರಪಿ ಪ್ರಶ್ನಿಸಲಾಯಿತು.

ಇನ್ನು, ಆತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾನೆ. ಈ ಸಮುದಾಯವೇ ನಮ್ಮನ್ನು ಇಂದು ಈ ಸ್ಥಾನದಲ್ಲಿ ಕುಳ್ಳಿರಿಸಿರುವುದು. ಅವರ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ನಾವು ಮತ್ತು ನಮ್ಮ ಪಕ್ಷ ಕೈಗೊಂಡಿದ್ದಕ್ಕಾಗಿಯೇ ಇಂದು ಅಧಿಕಾರಕ್ಕೇರಿದ್ದೇವೆ. ಅವರಿಗೆ ಕಲ್ಯಾಣ ಮಾಡಿಸುವುದು ಬಿಟ್ಟು ಅವರನ್ನೇ ಕೊಂದು ಹಾಕಿಬಿಟ್ಟರೆ, ನಮಗೆ ಓಟು ಹಾಕುವವರಾದರೂ ಯಾರು? ನಾವು ಮತ್ತೊಮ್ಮೆ ಅಧಿಕಾರದ ಕುರ್ಚಿಗೆ "ಗ್ರಹಣ" ಮಾಡುವುದಾದರೂ ಹೇಗೆ ಎಂದು ಈ ವಕ್ತಾರರು ವರಾತ ತೆಗೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುವವರೇ ಹೆಚ್ಚಾಗಿದ್ದಾರೆ. ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಕಲ ಕ್ರಮಗಳನ್ನು ಕೈಗೊಳ್ಳುವವರೇ ಇರುವುದರಿಂದ ಆ ಸಮುದಾಯದ ಮಂದಿಗೆ ನಾವು ಪ್ರೋತ್ಸಾಹ ನೀಡಬೇಕು. ಅವರ ಓಟಿನ ಬ್ಯಾಂಕ್ ಠೇವಣಿಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಗುಲಾಮನ ಬೀಜಾದ್ ಅವರೇ ಹಿಂದೊಮ್ಮೆ ಗುರುವಿಗೆ ಕ್ಷಮೆ ನೀಡುವಂತೆ ಹೇಳಿರುವುದರಿಂದ ಮುಖ್ಯಮಂತ್ರಿ ಮಾತಿಗಾದರೂ ಬೆಲೆ ಕೊಡಬೇಡವೇ ಎಂದು ಈ ವಕ್ತಾರ ಘೊಳ್ಳನೆ ನಕ್ಕಿದ್ದಾನೆ.

ಅಲ್ಲಿಗೆ ಬೊಗಳೆ-ರಗಳೆ ಬ್ಯುರೋದ ಬಾಯಿ ಬಂದ್! ಬಾಯಿಯಿಂದ ಒಂದು ಶಬ್ದ ಉದುರಿದ್ದರೆ ಮತ್ತೆ ಕೇಳಿ!!!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ನಿಮ್ಮ ಬೊಗಳೆ ರಗಳೆ ಚೆನ್ನಾಗಿದೆ, ಹ ಹ ಅಹ

    ಪ್ರತ್ಯುತ್ತರಅಳಿಸಿ
  2. ಈ ಖಾನೂನು ಮಂತ್ರಿಯ ಕೆಲಸವೆಂದರೆ ‘ಹರಾಮಾಯಣ ದರ್ಶನ’! ಈತನ್ನ, ಆ ಅರೂಖ್ ಫಬ್ದುಲ್ಲಾನ ಮೊದಲು
    ಗಲ್ಲಿಗೇರಿಸಬೇಕು!

    ಪ್ರತ್ಯುತ್ತರಅಳಿಸಿ
  3. ಬಾಯಿಂದ ಒಂದು ಶಬ್ದ ಉದುರ್ತು, ಅದಕ್ಕೇ ಈಗ ಮತ್ತೆ ಕೇಳ್ತಿದ್ದೀವಿ ಹತ್ತು ಹಲವಾರು ಮಂದಿಗಳಿಗೆ ನೀವೇ ಗುರು. ಇಲ್ಲಿಯೇ ಇನ್ನೊಬ್ರು ಗುರುಗಳೂ ಇದ್ದಾರೆ. ಅಂತಹ ಮಹನೀಯರುಗಳ ಹತ್ಯೆ ಯಾರ ಪಾಪ. ಪಾಪ ಅಂದ್ರೆ ಪಾಪು ಇರ್ಬೇಕು ಅಲ್ವಾ?

    ಪ್ರತ್ಯುತ್ತರಅಳಿಸಿ
  4. ಸಾಗರದಾಚೆಯವರೆ,
    ಬೊಗಳೆ ಚೆನ್ನಾಗಿದೆ ಅಂತ ಜೋರಾಗಿ ಹೇಳಿ ನಾವು ನಿದ್ರೆಯಿಂದ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದೀರಿ. ನಿಮಗೆ ಕೂಡ ತಕ್ಕ ಶಾಸ್ತ್ರಿಗಳನ್ನು ಕಾಯಿಸಿ ಕಾಯಿಸಿ ಕಾದಿರಿಸುತ್ತೇವೆ.

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    "ಹರಾಮಾಯಣ ಅದರ್ಶನಂ ಎಂಬುದು ಕಾರಕೂನ ಮಂತ್ರಿಯೇ ಬರೆದಿದ್ದೆಂದು ಸಾಬೀತುಪಡಿಸಲಿ, ಅವರು ಯಾವ ಕಾನೂನು ಕಾಲೇಜಲ್ಲಿ ಓದಿದ್ದು" ಅಂತ ಹಿಂದೊಮ್ಮೆ, "ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ರಾಮ ಸೇತು ಕಟ್ಟಿಸಿದ" ಎಂದೆಲ್ಲಾ ಪ್ರಶ್ನಿಸಿ ದೇಶಾದ್ಯಂತ ಕ್ಯಾಕರಿಸಿ ಹೊಗಳಿಸಿಕೊಂಡಿದ್ದ ನಮ್ಮೂರಿನ ಕೂಲಿಂಗ್ಲಾಸ್ ಮುಖ್ಯಮಂತ್ರಿಗಳು ಪ್ರಶ್ನಿಸಲು ನಿರ್ಧರಿಸಿದ್ದಾರಂತೆ.

    ಪ್ರತ್ಯುತ್ತರಅಳಿಸಿ
  6. ಕುರುಕುರೇ,
    ನಮ್ಮನ್ನು ಗುರುಗೋಳು ಅಂತ ನಾಮಕರಣ ಮಾಡಿಸಿ, ಅಫಜಲನೊಟ್ಟಿಗೆ ಸೇರಿಸಿ ಬಾಹ್ಯಾಕಾಶದಲ್ಲಿ ನೇತುಹಾಕುವ ಬಗೆಗಿನ ಸಲಹೆ ಕೂಡ ಒಪ್ಪತಕ್ಕದ್ದು. ಇದೇ ಕಾರಣಕ್ಕೆ ನಾವು ಕೂಡ ಓಟ್ ಬ್ಯಾಂಕು ಸ್ಥಾಪಿಸಲು ನಿರ್ಧರಿಸಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D