ಬೊಗಳೆ ರಗಳೆ

header ads

ಬೊಗಳೆ: ಕಣ್ಣೀರ ಧಾರಾವಾಹಿಗಳಿಗೆ ನೀರಿನ ಬಿಕ್ಕಟ್ಟು!

(ಬೊಗಳೂರು ಕುಮಾರಧಾರಾವಾಹಿ ಬ್ಯುರೋದಿಂದ)
ಬೊಗಳೂರು, ಏ.23- ಕನ್ನಡದ ಮತ್ತು ಬಹುಭಾಷಾ ಧಾರಾವಾಹಿ ನಿರ್ದೇಶಕರೆಲ್ಲರೂ ಇದೀಗ ಕಂಗಾಲಾಗಿ ತಮ್ಮ ತಮ್ಮ ತಲೆ ಮೇಲೆಯೇ ಕಲ್ಲು ಹೊತ್ತುಕೊಂಡು ಕುಳಿತಿದ್ದಾರೆ ಎಂಬ ವರದ್ದಿ ಕೇಳಿ ಗಡಬಡಿಸಿ ಎದ್ದು ಕುಳಿತಾಗ ದೊರೆತ ಸುದ್ದಿ ಇದು.

ಕಣ್ಣೀರ ಧಾರಾ ವಾಹಿಯನ್ನು ಎತ್ತ ಕಡೆ ಹರಿಯಬೇಕೆಂದು ನಿರ್ದೇಶಿಸುವವರಿಗೆಲ್ಲ ದೊಡ್ಡ ಅಡೆತಡೆಯಾಗಿದ್ದೆಂದರೆ, ತಮ್ಮ ಧಾರಾಪ್ರವಾಹಿಗಳ ಮೂಲಾಧಾರವಾಗಿರುವ ನೀರಿನ ಕೊರತೆ. ಕಣ್ಣೀರು ಹರಿಯಬೇಕಿದ್ದರೆ ನೀರು ಅತ್ಯಗತ್ಯ ಎಂದು ಸಂಶೋಧಿಸಿಕೊಂಡಿರುವ ಅವರು, ಇದೀಗ ನದಿಗಳೆಲ್ಲವೂ ಬತ್ತಿ ಹೋಗಲಿದೆ, ಇನ್ನು ಮುಂದೆ ಕಣ್ಣೀರು ಮೂಡಿಸುವುದು ಹೇಗೆಂಬ ಚಿಂತೆಯಲ್ಲಿ ಕೈತೊಳೆಯತೊಡಗಿದ್ದಾರೆ ಎಂದು ನಮ್ಮ ಸಂ-ಚೋದನಾಗಾರರು ಪತ್ತೆ ಹಚ್ಚಿಬಿಟ್ಟಿದ್ದಾರೆ.

ದೊಡ್ಡ ದೊಡ್ಡ ಚೂಯಿಂಗ್ ಗಮ್ ಕಂಪನಿಗಳಲ್ಲಿ ತಮಗಿದ್ದ ದೊಡ್ಡ ದೊಡ್ಡ ಹುದ್ದೆಗಳನ್ನೆಲ್ಲಾ ಎಡಗಾಲಿನಿಂದ ತುಳಿದು, ಅಲ್ಲಿನ ಅನುಭವದ ಧಾರೆಯನ್ನು ಕಣ್ಣೀರ ಧಾರಾವಾಹಿ ನಿರ್ಮಾಣಕ್ಕೆ ಸುರಿದ ತಮಗೆ ಈಗ ನೀರಿನ ಕೊರತೆಯಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಮನರಂಜನೆಗಾಗಿ ಟೀವಿ ಮುಂದೆ ಕುಳಿತವರ ಮನ ಕೆಡಿಸುವ, ಮನೆಕೆಡಿಸುವ ಹೃದಯ ವಿ-ದ್ರಾವಕವಾಗಿಸುವ, ಮನಸ್ಸು ತೋಯಿಸುವ ಕಾರ್ಯಗಳನ್ನೆಲ್ಲಾ ಇನ್ನು ಮುಂದೆ ಮಾಡುವುದಾದರೂ ಹೇಗೆ ಎಂಬುದು ಅವರ ಚಿಂತೆಗೆ-ಚಿತೆಗೆ ಪ್ರಧಾನ ಕಾರಣವೆಂದು ನಮ್ಮ ವ-ರದ್ದಿಗಾರರು ಪತ್ತೆ ಹಚ್ಚಿಬಿಟ್ಟಿದ್ದಾರೆ.

ಧಾರಾವಾಹಿಗಳಿಗೆಲ್ಲ ಹೆಸರು ಸಿಗದೆ, ಕಣ್ಣೀರು-1, ಕಣ್ಣೀರು-2, ಒಂದೊಂದು ಮನೆಯೊಡೆದು ಐದಾರು ಬಾಗಿಲು, ದಾಂಪತ್ಯ ಕಲಹ, ಬಹುಪತ್ನಿತ್ವ, ಬಹುಪತಿತ್ವ, ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ, ಹೆಂಡತಿಯಿಂದ ಗಂಡನಿಗೆ ಕಪಾಳಮೋಕ್ಷ, ವಿವಾಹಿತರ ಪ್ರೇಮ ಪ್ರಸಂಗ, ಬೈಯುವುದು ಹೇಗೆ, ಮನೆಯೊಳಗೆ ಕಲಹ ಮಾಡುವಾಗ ಯಾವ ಯಾವ ವಿಧಾನವನ್ನು ಅನುಸರಿಸಬೇಕು, ಗಂಡ-ಹೆಂಡತಿ ಯಾವ ರೀತಿ ಜಗಳ ಮಾಡಬೇಕು, ಗಂಡ ಹೇಗೆ ನಾಪತ್ತೆಯಾಗಬೇಕು, ಹೆಂಡತಿ ಹೇಗೆ ತವರಿಗೆ  ಓಡಿಹೋಗಬೇಕು, ಮಗು ಹೇಗೆ ಒಂಟಿತನ ಅನುಭವಿಸಬೇಕು, ಅಜ್ಜ-ಅಜ್ಜಿಯರು, ಅತ್ತೆ-ಸೊಸೆಯರ ಸಂಬಂಧ ಹೇಗಿರಬೇಕು ಎಂಬಿತ್ಯಾದಿ ದುರ್-ಬೋಧನೆಗಳನ್ನೇ ನೀಡುತ್ತಿದ್ದ ಕುಮಾರಧಾರಾವಾಹಿಗಳು, ನೇತ್ರಾವತಿ ಧಾರಾವಾಹಿಗಳು, ಕಾವೇರಿ ಧಾರಾವಾಹಿಗಳು ಒಟ್ಟಿನಲ್ಲಿ ನೀರಿನ ಕೊರತೆಯಿಂದ ಒಂದಷ್ಟು ಹೊಡೆತ ಅನುಭವಿಸುವುದು ಖಚಿತ ಎಂದು ನಮ್ಮ ವಿಶ್ಲೇಷ್ಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಧಾರಾವಾಹಿಗಳನ್ನು ನೋಡಿದವರಿಗೆ, ಮನರಂಜನೆಗಾಗಿ ಟೀವಿ ಮುಂದೆ ಕುಳಿತಿದ್ದೇವೆ ಎಂಬುದು ಮರೆತೇಹೋಗುತ್ತದೆ, ಮನೋವೇದನೆಯೇ ಹೆಚ್ಚಾಗಿರುತ್ತದೆ. ಹೀಗಾಗಿ ಅವರಿಗೆ ಕರವಸ್ತ್ರಗಳನ್ನೂ ಉಚಿತವಾಗಿ ನೀಡುವ ತಯಾರಿ ಮಾಡುತ್ತಿದ್ದ ತಮಗೆ, ನೀರಿನ ಕೊರತೆ ಕಾಡುತ್ತಿರುವುದು ನಿಜಕ್ಕೂ ಶಾಕ್ ಎಂದು ಅನೇಕ(ಕಂತು)ತಾ ಕಪೂರ್ ಅವರು ಬೊಗಳೆ ರಗಳೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಧಾರಾವಾಹಿಗಳಿಗೆ ನೀರಿನ ಕೊರತೆ ಎಲ್ಲಿಂದ ಬರ್ಬೇಕು ? ನಮ್ಮಜ್ಜಿ ಮೊನ್ನೆ ಮೂರು ಬಾಗಿಲು,ಗುಪ್ತಗಾಮಿನಿ ಮತ್ತೆ ದಿಬ್ಬಣ ನೋಡಿ ೧೫೦ ಬಕೆಟ್ ನೀರು ಸುರಿಸಿದರಲ್ಲ...ಯಾವುದಕ್ಕೂ ಸ್ಟಾಕ್ ಚೆಕ್ ಮಾಡಿಕೊಳ್ಳಲಿಕ್ಕೆ ಹೇಳಿ :)

    ಪ್ರತ್ಯುತ್ತರಅಳಿಸಿ
  2. ತೀರಾ ಇತ್ತೀಚಿನ ಧಾರವಾಹಿಯಾದ ದಿಬ್ಬಣ ದ ಸಂಭಾಷಣೆ ಕೇಳಿದ್ದೀರಾ..? ಏನೇ time constraint ಇದ್ದರೂ ತೀರಾ ಆ ಪರಿಯ ಸಂಭಾಷಣೆ, ನನಗೆ ಗೊತ್ತಿರುವಂತೆ ಕನ್ನಡದ ಯಾವ ಮೂಲೆಯಲ್ಲೂ ಕೇಳಿ ಬರುವುದಿಲ್ಲ. ಇಂತಹ ಧಾರವಾಹಿಗಳನ್ನು ನೋಡುವ ಜನರಿದ್ದಾರೆಂಬುದೇ ವಿಸ್ಮಯ.ಎಂದು ಆದೇವು ಮುಕ್ತ ? ಎಂದರೆ - ಧಾರವಾಹಿಗಳನ್ನು ನೋಡೋದು ಬಿಟ್ಟಾಗಲೇ ಮುಕ್ತ..ಮುಕ್ತ..ಮುಕ್ತ.ನೀವೇನಂತೀರಾ??

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಯವರೆ,
    ನಾನು ಈ ಯಾವ ಧಾರಾವಾಹಿಯನ್ನೂ ನೋಡಿಲ್ಲ, ನೋಡುವದಿಲ್ಲ. ಹೀಗಾಗಿ ನನ್ನ ಕಣ್ಣೀರೆಲ್ಲ ನನ್ನ ಕಣ್ಣುಗಳಲ್ಲೆ
    ತಣ್ಣೀರಾಗಿ ಸುರಕ್ಷಿತವಾಗಿದೆ.
    ಯಾರಿಗಾದರೂ ಬೇಕಾಗಿದ್ದರೆ ತಿಳಿಸಲಿ, ಧಾರಣಿ ಮಾಡೋಣ!

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮೀಸ್,
    ಅಂದ್ರೆ ನಿಮ್ಮಜ್ಜಿ ಕೂಡ ಅತ್ತು ಅತ್ತು ಅಷ್ಟೊಂದು ಕಣ್ಣೀರು ಸುರಿಸಿಬಿಟ್ರಾ? ಗ್ರೇಟ್... ಆದ್ರೆ, ಅದನ್ನು ಧಾರಾವಾಹಿ ನಿರ್ದೇಶಕರಿಗೆ ಮಾತ್ರ ಹೇಳ್ಬೇಡಿ, ಅಜ್ಜಿಯನ್ನು ಅಪಹರಿಸಿಯಾರು...

    ಪ್ರತ್ಯುತ್ತರಅಳಿಸಿ
  5. ಭಾವತರಂಗಿಣಿಯವರೆ, ಬೊಗಳೂರಿಗೆ ಸ್ವಾಗತ.
    ಈಗಿನ ಧಾರಾವಾಹಿಗಳಲ್ಲಿ ದಿಬ್ಬಣಕ್ಕೂ ಮಸಣಕ್ಕೂ ವ್ಯತ್ಯಾಸವೇ ಇಲ್ಲದಂತೆ ಸಂಭಾಷಣೆಗಳಿರುತ್ತವೆ...

    ಖಂಡಿತ, ಎಲ್ಲ ನೋಡೋದು ಬಿಟ್ಟಮೇಲೆ ಖಂಡಿತವಾಗಿಯೂ ಎಲ್ಲ ಚಿಂತೆಗಳಿಂದ ಮುಕ್ತ ಮುಕ್ತ

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ನೀವು ಈ ಕಾಲದಲ್ಲಿ ಭಾರೀ ಪಾಪ ಮಾಡ್ತಾ ಇದ್ದೀರಿ. ಧಾರಾವಾಹಿ ನೋಡೋದಿಲ್ಲ ಅಂದ್ರೆ ಏನರ್ಥ! ಈ ವಿಷ್ಯ ಎಲ್ಲಾದ್ರೂ ಧಾರಾವಾಹಿ ನಿರ್ದೇಶಕರಿಗೆ ಗೊತ್ತಾದ್ರೆ, ನಿಮ್ ಗತಿ ಏನೂಂತ ಯೋಚ್ನೆ ಮಾಡಿದ್ದೀರಾ?
    ನಿಮ್ ಕಣ್ಣಲ್ಲೂ ನೀರು ಬರಿಸಲು ಮತ್ತಷ್ಟು ಮಹಾ ಧಾರಾವಾಹಿಗಳನ್ನು ಸೃಷ್ಟಿ ಮಾಡುವತ್ತ ಸಂಶೋಧನೆ ಮಾಡ್ತಾರೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D