(ಬೊಗಳೂರು ನಾನಲ್ಲ ಬ್ಯುರೋದಿಂದ)
ಬೊಗಳೂರು, ಮಾ.25- ಲಕ್ಷ ರೂ. ಕಾರು ಬಂದಿರುವುದರಿಂದಾಗಿ ದ್ವಿಚಕ್ರ ಸವಾರರು ಮತ್ತು ಹಳೆಯ ಕಾರು ಓಡಿಸುತ್ತಿರುವವರೆಲ್ಲರೂ ಇದೀಗ ತಮ್ಮ ತಮ್ಮ ವಾಹನಗಳಿಗೆ ಟಾಟಾ ಹೇಳಿ, ನ್ಯಾನೋದ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಈ ಲಕ್ಷ ರೂ. ಕಾರು ಯಾವ ರೀತಿ ಭಾರತೀಯ ಮತದಾರರ ಮೇಲೆ, ಆಕಾಂಕ್ಷಿಗಳ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕಾಗಿ ಬೊ.ರ. ಬ್ಯುರೋ ಒಂದು ಸುತ್ತುನೋಟ ಹರಿಸಿದಾಗ, ಹಲವು ಹೇಳಬಾರದ ಸಂಗತಿಗಳು ಪತ್ತೆಯಾದವು.ಈ ಕಾರಣದಿಂದಾಗಿ, ಎರಡನೇ ಕೈಯ (ಸೆಕೆಂಡ್ ಹ್ಯಾಂಡ್) ಮಾರುಕಟ್ಟೆಯಲ್ಲಿ ತೀವ್ರ ಏರುಪೇರಾಗಿದೆ ಎಂದು ತಿಳಿದುಬಂದಿದೆ. ಹೊಸ ವಾಹನ ಖರೀದಿಸಿದ ತಕ್ಷಣ ಅದನ್ನು ಸೆಕೆಂಡ್ ಹ್ಯಾಂಡ್ ಎಂದು ಮಾರಾಟ ಮಾಡುವ ಶೋಕಿಲಾಲರ ಸಂಖ್ಯೆಯೂ ಹೆಚ್ಚಿರುವುದರಿಂದ, ಎರಡನೇ ಹಸ್ತದ ಮಾರುಕಟ್ಟೆ ದಿಕ್ಕೆಟ್ಟಿದೆ.
ಹೀಗಾಗಿ, ಸೆಕೆಂಡ್ ಹ್ಯಾಂಡ್ ವಾಹನಗಳ ದರ ಏರಿಸಬೇಕು ಮತ್ತು ನ್ಯಾನೋ ಸೆಕೆಂಡ್ ಹ್ಯಾಂಡ್ ಕಾರುಗಳ ದರವನ್ನು ಕೇವಲ ಕೈಬೆರಳೆಣಿಕೆಯಷ್ಟು ರೂಪಾಯಿಗೆ ಏರಿಸಬೇಕು ಮುಂತಾದ ಬೇಡಿಕೆಗಳೊಂದಿಗೆ, ಮಾರುಕಟ್ಟೆ ಮಂದಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮತಸಮರದಲ್ಲಿಯೂ ನ್ಯಾನೋದ ನಾನಾ ಪ್ರಭಾವ
ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡುತ್ತೇನೆ ಎಂದು ಆಡ್ವಾಣಿ ಈಗಾಗಲೇ ಘೋಷಿಸಿರುವ ಹಿನ್ನೆಲೆಯಲ್ಲಿ, ಅದರ ಜೊತೆಗೆ ನ್ಯಾನೋ ಕೂಡ ಕೊಟ್ಟರೆ ಮಾತ್ರವೇ ಓಟು ಎಂದು ಮತದಾರರು ಪಟ್ಟು ಹಿಡಿದಿರುವುದಾಗಿ ವರದಿಯಾಗಿದೆ.
ಈ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ಓಟಿಗೆ ನಿಲ್ಲುವವರು ಕಂಗಾಲಾಗಿದ್ದು, ಟಾಟಾದ ನ್ಯಾನೋಗೆ ಹಿಡಿಶಾಪ ಹಾಕುತ್ತಿದ್ದಾರೆಂದು ಮೂಲಗಳು ಹೇಳಿಲ್ಲ. ಆದರೆ, ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮಾತ್ರ, ದೇಶದ ಜನತೆಗೆ ತಿಂದುಂಡು ಸುಖವಾಗಿರಲು ಏರುತ್ತಿರುವ ಆಹಾರದ ಬೆಲೆಗಳು ಬಿಡದಿದ್ದರೂ, 'ಆಸ್ಕರ್ ತಂದುಕೊಟ್ಟದ್ದು ನಾವು, ಟ್ವೆಂಟಿ-20 ವಿಶ್ವಕಪ್ ತಂದಿದ್ದು ಕೊಟ್ಟದ್ದು ನಾವು' ಎಂಬಿತ್ಯಾದಿ ಬೊಗಳೆ ಬಿಡುತ್ತಿದ್ದವರು ಇದೀಗ "ದೇಶಕ್ಕೆ ನ್ಯಾನೋ ಕೊಟ್ಟದ್ದು ನಾವು" ಎಂದು ಸದ್ದಿಲ್ಲದೆ ಪ್ರಚಾರ ಮಾಡತೊಡಗಿದ್ದಾರೆ.
ಸದ್ದಿಲ್ಲದ ಪ್ರಚಾರ ಯಾಕೆಂದರೆ, ಜೋರಾಗಿ ಪ್ರಚಾರ ಮಾಡಿದರೆ, ನಿಮ್ಮ ಚುನಾವಣಾ ಪ್ರಣಾಳಿಕೆಯೊಳಗೆ "ಬಡವರಿಗೆ ಉಚಿತವಾಗಿ ನ್ಯಾನೋ ನೀಡಿ" ಎಂಬ ಅಂಶವನ್ನೂ ಸೇರಿಸಿಬಿಡಿ ಎಂಬ ಕೂಗು ಹೆಚ್ಚು ಜೋರಾಗಿ ಕೇಳಿದರೆ ಎಂಬ ಭೀತಿ!
ಜನ ಸಾಮಾನ್ಯರ ಕನಸಿನಲ್ಲಿಯೂ ನ್ಯಾನೋ
ಇತ್ತಕಡೆ, ಇದು ಜನ ಸಾಮಾನ್ಯರ ಕಾರು ಎಂದು ರತನ್ ಟಾಟಾ ಘೋಷಿಸಿದಂದಿನಿಂದ ನಿದ್ದೆ ಮಾಡದೆ, ಹಗಲಲ್ಲೂ, ರಾತ್ರಿಯಲ್ಲೂ ನ್ಯಾನೋ ನ್ಯಾನೋ ಕಾರುಗಳ ಮಹಾಪೂರವನ್ನೇ ಕನಸಿನಲ್ಲಿ ಕಾಣುತ್ತಿದ್ದ ಮಂದಿಗೆ ದಿಢೀರ್ ಅಜ್ಞಾನೋದಯವಾಗಿದೆ. ಒಂದು ಲಕ್ಷ ಅಂತ ಹೇಳಿದ್ದರೂ, ಆ ಟ್ಯಾಕ್ಸ್, ಈ ಟ್ಯಾಕ್ಸ್ ಅಂತ ಒಂದಿಪ್ಪತ್ತು ಮೂವತ್ತು ಸಾವಿರ ಹೆಚ್ಚೇ ಕೊಡಬೇಕಾಗುತ್ತದೆ. ಅದರ ಜೊತೆಗೆ, ಕಾರಿಗೂ ಪೆಟ್ರೋಲ್ ಸುರಿಯಬೇಕು, ತಾವು ಬದುಕಬೇಕಾದರೆ ಊಟವನ್ನೂ ಮಾಡಬೇಕು ಎಂಬಂತಾಗಿರುವುದರಿಂದ, ಕಾರು ನಿಲ್ಲಿಸಲು ಒಂದಷ್ಟು ಜಾಗ ಮಾತ್ರ ಉಳಿಸಿಕೊಂಡು, ಮನೆ ಮಠ ಮಾರಿದ ಹಲವಾರು ಮಂದಿ, ನ್ಯಾನೋದತ್ತ ಚಿತ್ತ ನೆಟ್ಟಿದ್ದಾರೆ ಎಂದು ದುರ್ಉದ್ದೇಶಪೂರಕವಾಗಿ ವರದಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ, ತಾವೂ ನ್ಯಾನೋ ಕೊಳ್ಳಲಿರುವುದರಿಂದ ಅಥವಾ ತಮಗೆ ಸಿಗಲಿರುವುದರಿಂದ, ಅದು ಸಣ್ಣ ಕಾರು. ಹೀಗಾಗಿ ಅದಕ್ಕೆ ಪಾರ್ಕಿಂಗ್ ಶುಲ್ಕದಲ್ಲಿಯೂ ಡಿಸ್ಕೌಂಟ್ ನೀಡಬೇಕು ಎಂದು ಭಾವೀ ನ್ಯಾನೋ ಒಡೆಯರು ಆಗ್ರಹಿಸಲು ನಿರ್ಧರಿಸಿದ್ದಾರೆ.
ರಾಜಕಾರಣಿಗಳು ಹೇಗೂ ತಾವು ಇರೋ ಸ್ಲಮ್ಮುಗಳಲ್ಲಿರುವ ಪೈಪ್‌ಗಳ ಬಾಗಿಲಿಗೆ ಬಂದು, ಮನೆ ಕೊಡುತ್ತೇವೆ, ನಿವೇಶನ ಕೊಡುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಈ ಬಾರಿ ನಿವೇಶನ ಬೇಡ, ನ್ಯಾನೋ ಕಾರು ನಿಲ್ಲಿಸಲು ಮಾತ್ರ ಪಾರ್ಕಿಂಗ್ ಸ್ಥಳ ಕೊಟ್ಟರೆ ಸಾಕು. ಅದರೊಳಗೇ ಸುಖವಾಗಿರುತ್ತೇವೆ ಎಂದು ಅಖಿಲ ಭಾರತ ಪೈಪು ನಿವಾಸಿಗಳ ಸಂಘವು ಆಗ್ರಹಿಸಲಾರಂಭಿಸಿದೆ.
ಇವೆಲ್ಲದರ ಮಧ್ಯೆ, ಟ್ರಾಫಿಕ್ಕೂ ಕಿರಿಕ್ಕೂ ಅನುಭವಿಸುತ್ತಿರುವ ಸಿಟಿ ಮಂದಿ, ನ್ಯಾನೋ ಕಾರಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಬೇಕು, ಸಣ್ಣದಾಗಿರುವುದರಿಂದ ಫುಟ್ ಪಾತ್ ಮೇಲೂ ಅದಕ್ಕೆ ಮಾರ್ಗ ಮಾಡಬಹುದು ಎಂಬ ಸಲಹೆ ನೀಡಿದ್ದಾರೆ.
ಇಷ್ಟೇಯಾ ಎಂದು ಆಲೋಚಿಸುತ್ತಿರುವಾಗ, ಮತ್ತೊಂದು ಸುದ್ದಿ ಬಂದಿದೆ. ನ್ಯಾನೋ ಬಿಡುಗಡೆ ಮಾಡಿದ್ದೇ ಚುನಾವಣೆ ಲಾಭಕ್ಕೋಸ್ಕರ ಎಂದು ಇಲ್ಲಿ ವರದಿಯಾಗಿದ್ದು, ಇದು ಒಂದು ಧರ್ಮೀಯರ ಭಾವನೆಗಳನ್ನು ಕೆರಳಿಸುವುದರಿಂದ ಅದನ್ನು ನಿಷೇಧಿಸಬೇಕು ಎಂಬ ಒತ್ತಾಯವೂ ಶೀಘ್ರದಲ್ಲೇ ಕೇಳಿಬರುವ ಸಾಧ್ಯತೆಗಳಿವೆ.
4 ಕಾಮೆಂಟ್‌ಗಳು
ಜನ ಮಾರುತಿಗೆ ‘ಟಾಟಾ’ ಹೇಳಿ, ನ್ಯಾನೋ ತಗೋತಾ ಇದ್ದಾರಂತೆ. ಇದು ಖಂಡಿತವಾಗಿಯೂ ಚುನಾವಣಾ ತಂತ್ರ!
ಪ್ರತ್ಯುತ್ತರಅಳಿಸಿನಾನೋ ಯಾವ ರೀತಿ ಭಾರತದ ಜನಮನದಲ್ಲಿ ನಿಲ್ಲುತ್ತದೋ ನೋಡೋಣ,
ಪ್ರತ್ಯುತ್ತರಅಳಿಸಿನಾನೋ ದಿಂದ ಯಾರು ಅಧಿಕಾರ ಪಡೆಯುತ್ತಾರೋ ಗೊತ್ತಿಲ್ಲ, ಚುನಾವಣಾ ತಂತ್ರ ವಿರಬಹುದು ಎನಿಸುತ್ತಿದೆ.
ಸುನಾಥರೆ,
ಪ್ರತ್ಯುತ್ತರಅಳಿಸಿಹೌದು ಹೌದು ಇದು ಕುತಂತ್ರವೇ ಸರಿ. ಮುಂದಿನ ವರ್ಷ ರತನ್ ಟಾಟಾಗೆ ಟಿಕೆಟು ಕೊಡ್ತಾರಂತೆ.... ಸಿಪಿಎಂನಿಂದ
ಸಾಗರದಾಚೆಯ ಇಂಚರರೇ,
ಪ್ರತ್ಯುತ್ತರಅಳಿಸಿಬೊಗಳೂರಿಗೆ ಸ್ವಾಗತ.
ಮತದಾರರು ಈಗಾಗ್ಲೇ ನ್ಯಾನೋ ಬಗ್ಗೆ ಹಗಲಿನಲ್ಲಿಯೂ ಕನಸು ಕಾಣುತ್ತಿದ್ದಾರೆ. ಸೋ... ಭರವಸೆ ಕೊಡಲು ಜಾರಕಾರಣಿಗಳಿಗೆ ಇದೊಂದು ಒಳ್ಳೆಯ ಕಾಲ.
ಏನಾದ್ರೂ ಹೇಳ್ರಪಾ :-D