ಬೊಗಳೆ ರಗಳೆ

header ads

ಭಗ್ನಹೃದಯಿಗಳ ವರದಾನ - fake ಹೃದಯ!

(ಬೊಗಳೂರು ಒಡೆದ ಹೃದಯ ಬ್ಯುರೋದಿಂದ)
ಬೊಗಳೂರು, ಮಾ.23- ಇತ್ತೀಚಿನ ದಿನಗಳಲ್ಲಿ ಹೃದಯದ ತುಡಿತ ಹೆಚ್ಚಾಗುವುದು ಇದರಿಂದಾಗಿ ಹೃದಯದ ಬಡಿತವೂ ಹೆಚ್ಚಾಗಿ ಹೃದಯ ಒಡೆದು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಯಾವಾಗಲೂ 'ಇದು ಹೃದಯ ಹೃದಯಗಳಾ ವಿಷಯ' ಎಂದು ತೇಲುತ್ತಿರುವವರಿಗೆ ಹೊಸದಾದ ಸುದ್ದಿಯನ್ನು ಬೊಗಳೂರು ಬ್ಯುರೋ ತಂದುಕೊಡುತ್ತಿದೆ.

ಪ್ರೇಮಿ ಕೈಕೊಟ್ಟನೇ? ಪ್ರೇಯಸಿ ಓಡಿಹೋದಳೇ? ಹೃದಯ ಒಡೆದು ಚೂರು ಚೂರಾಯಿತೇ? ಇನ್ನೇನೂ ಹೆದರಬೇಕಾಗಿಲ್ಲ. ಲಕ್ಷ ರೂಪಾಯಿ ಕೊಟ್ಟರೆ ಹೊಚ್ಚಹೊಸ ಹೃದಯವನ್ನೇ ಜೇಬಿಗೆ (ಜೇಬಿನ ಹಿಂಭಾಗದಲ್ಲಿ) ಒಳಗಿಳಿಸಿಕೊಳ್ಳಬಹುದು!

ಇಂಥದ್ದೊಂದು ಸಂಚೋದನೆ ಮಾಡಿರುವ ಖರಗ್‌ಪುರದ ಐಐಟಿ ವಿಜ್ಞಾನಿಗಳು, "ಲಕ್ಷ ರೂ. ಕೊಂಡರೆ ನ್ಯಾನೋ ಕಾರು ಕೊಡುತ್ತೇವೆ" ಎಂಬ ಭರವಸೆ ನೀಡಿರುವ ಟಾಟಾದವರಿಂದ, ಸೂಕ್ತ ಕಾಲದಲ್ಲಿ ಕಾರು ಲಭಿಸದೆ ನಿರಾಶರಾದ ಕಾರು ಪ್ರೇಮಿಗಳಿಗೂ "ಲಕ್ಷ ರೂ.ನಲ್ಲಿ ಹೊಸ ಹೃದಯವನ್ನೇ ಕೊಡುತ್ತೇವೆ" ಎಂದು ಹೇಳತೊಡಗಿದ್ದಾರೆ.

ಬೇರೆಯವರು ನಿಮ್ಮ ಜೀವನಕ್ಕೆ ಕೈಕೊಟ್ಟು ಟಾಟಾ ಮಾಡಿ ಹೋದರೆ ಚಿಂತಿಸಬೇಡಿ. ಅಷ್ಟೇ ವೆಚ್ಚದಲ್ಲಿ ನಾವು ಹೃದಯ ಕೊಡಲು ಸಿದ್ಧ ಎಂದು ಈ ವಿಜ್ಞಾನಿಗಳು ಘೋಷಣೆ ಹೊರಡಿಸಿರುವುದು ವಿಶ್ವಾದ್ಯಂತ ಕಾಲೇಜು ಪರಿಸರಗಳಲ್ಲಿ ವಿಶೇಷವಾಗಿ ಭಾರೀ ಪ್ರಭಾವ ಬೀರಿದೆ.

ಆದರೆ ಇದರ ಋಣಾತ್ಮಕ ಪರಿಣಾಮವೊಂದು ಕೂಡ ವ್ಯಕ್ತವಾಗತೊಡಗಿರುವುದು ವಿಜ್ಞಾನಿಗಳಿಗೆ ಬಿಡಿ, ಬೊಗಳೆರಗಳೆ ಬ್ಯುರೋದಲ್ಲಿರುವಂತಹ ಅಜ್ಞಾನಿಗಳಿಗೂ ಆತಂಕಕ್ಕೆ ಕಾರಣವಾಗಿದೆ. ಹೃದಯ ಒಡೆದು ಛಿದ್ರಛಿದ್ರವಾದರೂ ಪರವಾಗಿಲ್ಲ, ಸಾಕಷ್ಟು ಬಾರಿ ಚೂರು ಚೂರಾಗಿಸಿಕೊಳ್ಳಲು ಸಿದ್ಧ, ಹೇಗಿದ್ದರೂ ಲಕ್ಷ ರೂಪಾಯಿ ಹೃದಯವಿದೆಯಲ್ಲ ಎಂದು ಯುವಜನತೆಯೇನಾದರೂ ಮುಂದಡಿಯಿಟ್ಟರೆ... ಎಂಬುದೇ ಆತಂಕಕ್ಕೆ ಕಾರಣ.

ಇತ್ತೀಚಿನ ದಿನಗಳಲ್ಲಿ 'ನಿನ್ನದು ಅದೆಂಥ ಕಲ್ಲು ಹೃದಯ, ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಸಿಡಿಮಿಡಿಗುಟ್ಟುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಕಲ್ಲು ಹೃದಯಿ ಅಂತ ಕರೆಸಿಕೊಳ್ಳುವ ಬದಲು ಮತ್ತು ಭಗ್ನ ಹೃದಯಿಯಾಗುವುದನ್ನು ತಪ್ಪಿಸಿಕೊಳ್ಳಲು, ಈ ತಂತ್ರಜ್ಞಾನಹೃದಯಿಯಾಗುವುದು ಲೇಸು ಎಂದು ಯುವಜನಾಂಗ ನಿರ್ಧರಿಸಿರುವುದಾಗಿ ಅಖಿಲ ಭಾರತ ಭಗ್ನ ಪ್ರೇಮಿಗಳ ಸಂಘ, ಅಖಿಲ ಭಾರತ ಭಗ್ನ ಹೃದಯಿಗಳ ಒಕ್ಕೂಟ ಮತ್ತು ಅಖಿಲ ಭಾರತ ಚಿರ ವಿರಹಿಗಳ ಸಂಘದ ಪದಧಿಕ್ಕಾರಿಗಳು ಬೊಗಳೂರಿಗೆ ಮುತ್ತಿಗೆ ಹಾಕಿ ಸಂದರ್ಶನ ನೀಡಿ ಹೇಳಿಕೆ ನೀಡಿದ್ದಾರೆ.

ಈ ಕೃತಕ ಹೃದಯ ಸೃಷ್ಟಿಯಾಗಿದ್ದು ಐಐಟಿ ಕ್ಯಾಂಪಸ್ಸಿನಲ್ಲೇ ಆಗಿರುವುದರಿಂದ, ಖರಗ್‌ಪುರದ ಕಾಲೇಜಿನಲ್ಲಿ ಮೌಲ್ಯಯುತವಾದ ಸಾಕಷ್ಟು ಪ್ರೇಮ ಕಥಾನಕಗಳು ಘಟಿಸಿದ್ದಿರಬಹುದು ಮತ್ತು ಅದರ ಅವಶೇಷಗಳು, ಪಳೆಯುಳಿಕೆಗಳು ಕೂಡ ದೊರಕಿದ್ದಿರಬಹುದು ಎಂದು ಊಹಿಸಲಾಗಿದೆ.

ಆದರೆ, ಈ ಹೃದಯ ಸಂಚೋದನೆಯ ಹಿಂದೆ ಕೂಡ ಸಾಕಷ್ಟು ನೋವಿನ ಕಥೆಗಳಿವೆ ಎಂದು ಸ್ವತಃ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಹೃದಯ ಕೃತಕವಾದಾಗ, ಪ್ರೀತಿಯೂ ಕೃತಕವಾದೀತು, ಎಚ್ಚರಿಕೆ!

    ಪ್ರತ್ಯುತ್ತರಅಳಿಸಿ
  2. ಕೃತಕ ಹೃದಯಕ್ಕೆ ಬ್ಯಾಟರಿ ಬೇಕೇ? ! :)

    ಪ್ರತ್ಯುತ್ತರಅಳಿಸಿ
  3. ಇದನ್ನು ಮೊದಲು ತಮಿಳರಿಗೆ, ಮರಾಠಿಗರಿಗೆ ಹಾಗೂ ಪಾಕೀಸ್ತಾನೀಯರಿಗ ಉಚಿತವಾಗಿ ಕೊಡುವ ಯೋಜನೆ ಏನಾದ್ರೂ ತಮ್ಮಲ್ಲಿ ಇದೆಯಾ ಎಂಬುದನ್ನು ಪತ್ತೆ ಹಚ್ಚಿ,ಇಲ್ಲದಿದ್ದರೆ ಅದರ ಜಾರಿಗೆ ಕೂಡಲೇ ಕ್ರಮ ಕೈಗೊಳ್ಳಲು ಪಿ.ಎಂ.ಗೆ ಸೂಚಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಇದು ಕೃತಕ ಪ್ರೀತಿಯವರಿಗಾಗಿಯೇ ತಯಾರಿಸಲಾಗಿದ್ದು ಅಂತ ತಿಳಿದುಬಂದಿದೆ.

    ಪ್ರತ್ಯುತ್ತರಅಳಿಸಿ
  5. ಅಶೋಕ್ ಅವರೆ, ಬೊಗಳೂರಿಗೆ ಸ್ವಾಗತ.
    ಇದಕ್ಕೆ ಬ್ಯಾಟರಿ ಬೇಡ ಅಂತ ಸಂಚೋದಿಸಲಾಗಿದೆ. ಯಾಕೆಂದರೆ ಕೃತಕ ಹೃದಯ ಜೋಡಿಸಿಕೊಳ್ಳೋರು ಈಗಾಗಲೇ ಹಲವಾರು ಬಾರಿ ಆಘಾತ (ಶಾಕ್)ಕ್ಕೊಳಗಾಗಿ, ಅವರಲ್ಲಿ ಆ ಶಾಕ್‌ನ ವಿದ್ಯುಚ್ಛಕ್ತಿ ಅದಾಗಲೇ ಸಾಕಷ್ಟು ಸಂಗ್ರಹವಾಗಿರುತ್ತದೆ. ಆ ಶಕ್ತಿಯ ಆಧಾರದಲ್ಲಿಯೇ ಅದು ಚಲಿಸಬಹುದು ಎಂಬುದು ಯಾರೂ ಸಂಶೋಧಿಸದ ಸಂಗತಿ.

    ಪ್ರತ್ಯುತ್ತರಅಳಿಸಿ
  6. ಗುರುಗಳೇ,
    ಅದನ್ನು ಇತ್ತೀಚೆಗೆ ನಮ್ಮ ಪೀಎಮ್ಮಿನ ಮೇಲೆಯೇ ಪ್ರಯೋಗ ಮಾಡಲಾಗಿದ್ದು, ಅವರು ನಿನ್ನೆ ಮೊನ್ನೆಯಷ್ಟೇ ಆಸ್ಪತ್ರೆಯಿಂದ ಮರಳಿ ಬಂದಿದ್ದಾರೆ. ಬದಲಾಗಿರುವ ಅವರು ಈಗ ಮತ್ತೊಂದು ಅವಧಿಗೂ ತಾವೇ ಪ್ರಧಾನಿ ಅಂತ ಎದೆ ಮುಟ್ಟಿಕೊಂಡು ಹೇಳತೊಡಗಿರುವುದು ಈ ಕೃತಕ ಹೃದಯದ ಪ್ರಭಾವವಿರಬಹುದು ಎಂಬ ಶಂಕೆಗೆ ಪುಷ್ಟಿ ನೀಡುತ್ತದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D