ಬೊಗಳೆ ರಗಳೆ

header ads

ಆರ್ಥಿಕ ಕುಸಿತಕ್ಕೆ ಕಾರಣ ಪತ್ತೆ - ಕತ್ತೆ!

(ಬೊಗಳೂರು Unಅರ್ಥ ವ್ಯವಸ್ಥೆ ಬ್ಯುರೋದಿಂದ)
ಬೊಗಳೂರು, ಮಾ.19- ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಬೊಗಳೆ ರಗಳೆ ಕಾರಣ ಪತ್ತೆ ಹಚ್ಚಿದೆ. ಅಂದರೆ ಬೊಗಳೆ ರಗಳೆಯೇ ಕಾರಣ ಎಂದು ಓದುಗರು unಅರ್ಥ ಮಾಡಿಕೊಳ್ಳಬೇಕಿಲ್ಲ. ಕಾರಣವನ್ನು ಮಾತ್ರವೇ ಬೊಗಳೆ ರಗಳೆ ಶೋಧಿಸಿದ್ದು ಎಂದು ಅರ್ಥೈಸಿಕೊಳ್ಳಬೇಕು ಮತ್ತು ಇದರಲ್ಲಿ ನಮ್ಮ ತಾಣದ ಹೆಡ್ಡರ್‌ನಲ್ಲಿ ಲಾಂಛನವಿದೆ ಎಂಬ ಕಾರಣಕ್ಕೆ ಯಾರೂ ಶಂಕೆಪಡಬೇಕಿಲ್ಲ ಎಂದು ದಯನೀಯವಾಗಿ ಎಚ್ಚರಿಸಲಾಗುತ್ತಿದೆ.

ವಿಷಯ ಇಲ್ಲಿದೆ. ನಮ್ಮನ್ನು ಕತ್ತೆಗಳು, ಗೊಡ್ಡುಗಳು, ಕೆಲಸಕ್ಕೆ ಬಾರದವರು ಎಂಬಿತ್ಯಾದಿಯಾಗಿ ಟೀಕಿಸುತ್ತಾ ಕಾಲ ಕಳೆಯುತ್ತಿರುವವರಿಗೆ ಪಾಠ ಕಲಿಸಲು ನಿರ್ಧರಿಸಿದ್ದ ಗಾರ್ದಭ ಸಂಘವು, ಈ ಬಗ್ಗೆ ಸಂಚು ನಡೆಸಿದ್ದೇ, ಈಗಿನ ಜಾಗತಿಕ ಅರ್ಥವ್ಯವಸ್ಥೆಯ ಅನರ್ಥಕ್ಕೆ ಕಾರಣ.

ಕತ್ತೆಗಳು ಕೂಡ ಈಗ ಶ್ರಮವಹಿಸಿ ದುಡಿಯತೊಡಗಿವೆ. ಹಿಂದಿನಿಂದಲೂ ಅವುಗಳು ದುಡಿಯುತ್ತಿದ್ದರೂ ಈಗೀಗ ಹೆಚ್ಚು ಹೆಚ್ಚು ದುಡಿಯಲಾರಂಭಿಸಿವೆ ಅಥವಾ ದುಡಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಗಾರ್ದಭ ಸಮಾಜವು ಔದ್ಯೋಗಿಕ ಕ್ಷೇತ್ರದಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ಪರಿಣಾಮ, ಮಾನವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಾರಂಭಿಸಿದ್ದಾರೆ. ಹೀಗಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ (ಗಮನಿಸಿ ಮಾನವರಿಗೆ ಮಾತ್ರ!) ಗಣನೀಯ ಏರಿಕೆಯಾಗುವಲ್ಲಿಯೂ ಈ ಕತ್ತೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ನಮ್ಮ Someಚೋದಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸಮಸ್ಯೆ ಅಥವಾ ಧನಾತ್ಮಕ ಬೆಳವಣಿಗೆಯ ಇನ್ನೊಂದು ಆಯಾಮವೂ ಇದೆ. ಚುನಾವಣೆಗಳು ಕಾಲಬುಡದಲ್ಲೇ ಇವೆ. (ಚುನಾವಣೆಗಳು ಇಲ್ಲದಿದ್ದರೂ, ಚುನಾವಣೆಗೆ ನಿಂತವರು ಕಾಲ ಬುಡದಲ್ಲಿ ಬಿದ್ದಿರುತ್ತಾರೆ ಎಂದು ನಾವು ಹೇಳುವುದಿಲ್ಲ). ಓಟು ಕೇಳಲು, ನೋಟು ಹಂಚಲು, ಹೆಂಡ-ಸಾರಾಯಿ ವ್ಯವಸ್ಥೆ ಮಾಡಲು... ಇತ್ಯಾದಿ ಚುನಾವಣಾ ಪ್ರಚಾರ ಕಾರ್ಯಗಳಿಗೆ ಮಾನವ ಜನಾಂಗದ ಜನರ ಕೊರತೆಯಿದೆ. ಹೀಗಾಗಿ ಅವರ ಉದ್ಯೋಗ ಬಿಡಿಸಿ, ಅವರನ್ನು ಈ ಕಾರ್ಯಗಳಿಗೆ ಬಳಸಿಕೊಳ್ಳಲು ವಿವಿಧ ಅರಾಜಕ ಪಕ್ಷಗಳು ದಾಪುಗಾಲಿಟ್ಟು ಕೆಲಸ ಮಾಡಿವೆ. ಈ ಕಾರಣಕ್ಕೆ, ಉದ್ಯೋಗಿಗಳ ಕೊರತೆಯಿಂದಾಗಿ ಉದ್ಯೋಗದಾತರೆಲ್ಲರೂ ಗಾರ್ದಭ ಸಮಾಜದ ಮೊರೆ ಹೋಗಿದ್ದರು.

ಈ ರೀತಿ ಮೊರೆ ಹೋದ ಪ್ರಮಾಣ ಹೆಚ್ಚಾಗಿದ್ದರ ಪರಿಣಾಮವೇ, ದಿಢೀರ್ ಆರ್ಥಿಕ ಕುಸಿತ ಎಂದು ಬೊಗಳೂರಿನ ಏಕಸದಸ್ಯ ಸಂಚೋದನಾ ಬ್ಯುರೋದ ಸರ್ವರೂ ಕತ್ತೆ ಕಾರಣ ಪತ್ತೆ ಹಚ್ಚಿದ್ದಾರೆ.

ಪೂರಕ ಓದಿಗೆ:
ಮಾನವಶಕ್ತಿ ಕೊರತೆ ಬಗ್ಗೆ ಹಿಂದೆಯೇ ಬೊಗಳೆ ನುಡಿದಿದ್ದ ನಮ್ಮ ಪತ್ರಿಕೆ
ಕತ್ತೆಗಳಿಗಾಗಿ ಚುನಾವಣಾ ಪ್ರಣಾಳಿಕೆ
ಅಲ್ಲಲ್ಲಿ ಸ್ಲಮ್, ರಾಷ್ಟ್ರೀಯ ಪ್ರಾಣಿ ಡಾಗ್

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಅದಕ್ಕೇ ಹೇಳೋದು: "ಅತ್ತೆಗೊಂದು ಕಾಲ, ಕತ್ತೆಗೊಂದು ಕಾಲ".
    (ಟಿಪ್ಪಣಿ: ಅತ್ತೆ=ಇಂದಿರಾ ಗಾಂಧಿ;ಸೊಸೆ=ಸೋನಿಯಾ ಗಾಂಧಿ.)

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ಬದಲಾಗಬೇಕು, ವರುಣನಿಗೊಂದು ಕಾಲ, ರಾಹುಲನಿಗೊಂದು ಕಾಲ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D