ಬೊಗಳೆ ರಗಳೆ

header ads

ಸೊಳ್ಳೆಗಳಿಗೂ ಭಯೋತ್ಪಾದಕರ ಕಾಟ!

(ಬೊಗಳೂರು ಸೊಳ್ಳೆ ದಯಾ ಬ್ಯುರೋದಿಂದ)
ಬೊಗಳೂರು, ಮಾ.18- ಸಂಗೀತಸುಧೆ ಹರಿಸುವ ಮೂಲಕ ನಿದ್ದೆಗೆಡಿಸುವ ಸಾಮರ್ಥ್ಯವುಳ್ಳ ಏಕೈಕ ಸೊಳ್ಳೆಯೊಂದನ್ನು ಕೊಲ್ಲಲು ಲೇಸರ್ ಗನ್ ಸಂಶೋಧಿಸಿರುವ ಅಜ್ಞಾನಿಗಳ ವಿರುದ್ಧ ಸಿಡಿದೆದ್ದಿರುವ ಅನಾಫಿಲಿಸ್ ದಯಾ ಸಂಘವು, ಇದು ಭಯೋತ್ಪಾದನೆಯ ಪರಮಾವಧಿ ಎಂದು ಬಣ್ಣಿಸಿದೆ.

ಯಃಕಶ್ಚಿತ್ ಆಗಿದ್ದ ನಮ್ಮನ್ನು ನಿರ್ನಾಮ ಮಾಡಲು ಮಾನವನೆಂಬ ಬಡಪಾಯಿ ಜೀವಿ ಇಷ್ಟೊಂದು ಒದ್ದಾಡುತ್ತಾ ಇರುವ ಬಗ್ಗೆ ಇದುವರೆಗೆ ಗಹಗಹಿಸಿ ನಗುತ್ತಿದ್ದ ಇದೇ ಸೊಳ್ಳೆಗಳು, ಇದೀಗ ಗಹಗಹಿಸಿ ಅಳಲಾರಂಭಿಸಿರುವುದು ಸಂಶೋಧಕರಿಗೆ ಸೊಳ್ಳೆ ಚುಚ್ಚಿದ ಅನುಭವವಾಗಿದೆ.

ಜಾಗತಿಕ ಭಯೋತ್ಪಾದಕ ಮತ್ತು ಎಲ್ಲರಿಂದಲೂ ಹೊ(ಹೀ)ಗಳಿಸಿಕೊಳ್ಳುತ್ತಿರುವ ಒಸಾಮಾ ಬಿನ್ ಲಾಡೆನ್‌ನನ್ನೇ ಕೊಲ್ಲಲಾಗದ ಇವರು ಯಃಕಶ್ಚಿತ್ ಸೊಳ್ಳೆಯನ್ನು ಕೊಲ್ಲಲು ಕ್ಷಿಪಣಿ ತಂತ್ರಜ್ಞಾನವನ್ನು ಕಂಡುಹುಡುಕಿರುವುದು ಮಾನವರ ಅಜ್ಞಾನ ಮತ್ತು ಹತಾಶೆಯ ಪರಾಕಾಷ್ಠೆ ಎಂದು ಅನಾಫಿಲಿಸ್ ಸಂಘದ ಸದಸ್ಯರೆಲ್ಲರೂ ತಮ್ಮ ತಮ್ಮಲ್ಲೇ ಗುಂಯ್‌ಗುಡುತ್ತಾ ಹರ್ಷಚಿತ್ತರಾಗಿ, ಮುಸಿ ಮುಸಿ ನಗುತ್ತಾ ವಿಶ್ಲೇಷಿಸುತ್ತಿದ್ದಾರೆ.

ಇದು ಸೊಳ್ಳೆ ಹಕ್ಕುಗಳ ಉಲ್ಲಂಘನೆ, ತುಳಿತ, ದೌರ್ಜನ್ಯ, ಅನ್ಯಾಯ, ಸ್ವಜನ ಪಕ್ಷಪಾತತನ ಇತ್ಯಾದಿತ್ಯಾದಿಯಾಗಿದೆ. ಅದರಲ್ಲೂ ಒಂದು ವರ್ಗದ (ಮಲೇರಿಯಾ, ಡೆಂಗ್ ಇತ್ಯಾದಿ ರೋಗ ಹರಡುವ) ಸೊಳ್ಳೆಗಳನ್ನು ಮಾತ್ರವೇ ಕೊಲ್ಲುವ ಮೂಲಕ, ಕೋಮುವಾದವನ್ನು ಅನುಸರಿಸಲಾಗುತ್ತದೆ ಎಂದು ಆರೋಪಿಸಲಾಗಿದೆ.

ಆದರೆ, ವಿಮಾನದಲ್ಲಿ ಹೋಗಿ ಸೊಳ್ಳೆಗಳನ್ನು ಕೊಲ್ಲುವುದು ಶ್ರೀಮಂತರನ್ನು, ಹಣವಂತರನ್ನು ಓಲೈಸುವ ತಂತ್ರ ಎಂದು ಕೂಡ ಇದೇ ಸಂಘದ ಪದಧಿಕ್ಕಾರಿಗಳು ಆರೋಪಿಸುತ್ತಾರೆ.

ಪ್ರಾಣಿಗಳಲ್ಲೇ ತಾನು ಮೇಲು, ತನಗೆ ಮಾತ್ರ ತಲೆಯಲ್ಲಿಯೇ ಮೆದುಳು ಇರುವುದು ಎಂದೆಲ್ಲಾ ಎದೆತಟ್ಟಿಕೊಳ್ಳುತ್ತಿದ್ದ ಮಾನವ ಜೀವಿಗೆ ಸೊಳ್ಳೆಗಳ ಪರಾಕ್ರಮದ ಬಗ್ಗೆ, ಅವುಗಳ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿಗೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿರುವ ಈ ಪದಧಿಕ್ಕಾರಿಗಳು, ಒಂದು ಸೊಳ್ಳೆ ಇಡೀ ರಾತ್ರಿಯ ನಿದ್ದೆಗೆಡಿಸಬಲ್ಲುದು ಎಂಬ ವಾಸ್ತವಾಂಶವನ್ನು ಈಗಲಾದರೂ ಅರಿತುಕೊಂಡರಲ್ಲ ಎಂದು ಸಮಾಧಾನಪಟ್ಟುಕೊಂಡಿದೆ.

ಅದಕ್ಕೇ "ಏಕ್ ಮಚ್ಛರ್ ನೇ ಆದ್ಮೀ ಕೋ ಹಿಜಡಾ ಬನಾ ದೇತಾ ಹೈ" ಎಂದು ಈ ಹಿಂದೆ ಪ್ರಚಾರ ಮಾಡುತ್ತಿದ್ದ ನಾನಾ ಪಾಟೇಕರ್ ಅವರನ್ನು ಸನ್ಮಾನಿಸಲು ನಿರ್ಧರಿಸಿರುವ ಸಂಘವು, ತಮ್ಮ ರಕ್ತ ಹೀರುವ ಕಲೆಯನ್ನು ಇಂದಿನ ರಜಾಕಾರಣಿಗಳು ಮತ್ತು ಮಜಾಕಾರಣಿಗಳು ಅನುಸರಿಸುತ್ತಿರುವುದರ ಬಗ್ಗೆ ಮತ್ತೊಮ್ಮೆ ಎದೆತಟ್ಟಿಕೊಂಡು, ಬೆನ್ನು ತಟ್ಟಿಕೊಂಡು ಶ್ಲಾಘಿಸಿಕೊಂಡಿವೆ. ಎರಡೂ ಕಡೆ ತಟ್ಟಿಕೊಂಡಾಗ ಉಬ್ಬಿದ ಗುಳ್ಳೆಗಳಂತಿದ್ದ ಒಂದು ಸೊಳ್ಳೆ ಒಡೆದು ಹೋದಾಗ ಅಲ್ಲಿ ರಕ್ತದೋಕುಳಿಯೇ ಹರಿಯಿತು ಎಂದು ನಮ್ಮ ವರದ್ದಿಗಾರರು ತಿಳಿಸಿದ್ದಾರೆ.

ಆದರೆ, ಈ ಹೀರುವ ತಂತ್ರಜ್ಞಾನವನ್ನು ನಾವೇ ರಜಾಕಾರಣಿಗಳಿಂದ ಕಲಿತದ್ದೋ ಅಥವಾ ರಜಾಕಾರಣಿಗಳು ನಮ್ಮಿಂದ ಕಲಿತದ್ದೋ ಎಂಬ ಬಗ್ಗೆ ಹಾಗೂ ಹೀರೋ ಪೆನ್‌ನಲ್ಲಿ ಶಾಯಿ ಹೀರುವ ತಂತ್ರದ ಬಗೆಗೆ ಕೂಡ ಅನಾಫಿಲಿಸ್ ಸಂಘವು ಸಂಶೋಧನೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. "he is the only one who has succeeded in putting man in a cage! A mosquito net" ಅಂತ ಬಲ್ಲವರು ಹೇಳ್ತಾರಪ್ಪ :)

    ಪ್ರತ್ಯುತ್ತರಅಳಿಸಿ
  2. ಎಂಥಾ ಮಹಾಸೊಳ್ಳೆಯಾದರೂ ಸಹ ಲೋಕಸಭೆಯಲ್ಲಿ ನಿದ್ದೆ ಮಾಡುತ್ತಿರುವ ಒದೆಯೋಗೌಡರನ್ನು disturb ಮಾಡಲಾರವು. ಇದರ ಗುಟ್ಟೇನಾದರೂ ನಿಮಗೆ ಗೊತ್ತೆ?

    ಪ್ರತ್ಯುತ್ತರಅಳಿಸಿ
  3. ಸರ್,

    ಓದಿ ಸಿಕ್ಕಾಪಟ್ಟೆ ನಗು ಬಂತು.....ನಗುತ್ತಿರುವಾಗಲೇ ಒಂದು ಸೊಳ್ಳೆ ನಕ್ಕಿದ್ದು ಸಾಕು....ಅಂತ ಚುಚ್ಚಿ ಹೋಗಬೇಕೆ....

    ಪ್ರತ್ಯುತ್ತರಅಳಿಸಿ
  4. ಪಾಲ ಅವರೆ,
    ಪುಣ್ಯಕ್ಕೆ ಕೇಜ್ ಅಂತ ಹೇಳಿದ್ರು. ಹಟ್ಟಿ ಅಥವಾ ಕೋಳಿಗೂಡು ಅಥವಾ ಸರಕಾರಿ ಕಚೇರಿ ಅಂತೆಲ್ಲಾ ಹೇಳಲಿಲ್ಲ!

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ನಿಮ್ಮ ಸಂದೇಹ ನಮಗೂ ಹತ್ತು ಹಲವಾರು ವರ್ಷಗಳಿಂದ ಕಾಡುತ್ತಿತ್ತು. ಇದ್ರಲ್ಲಿ ಕುಟುಂಬ ರಾಜಕಾರಣ ಅಥವಾ ಕುಟುಂಬ ಪ್ರೇಮ ಇತ್ಯಾದಿ ಇರಬಹುದೇ ಎಂಬುದು ನಮಗೂ ಸಂಶಯ!

    ಪ್ರತ್ಯುತ್ತರಅಳಿಸಿ
  6. ಶಿವು ಅವರೆ,
    ನೀವು ನಕ್ಕದ್ದು ಸಾಕು ಅಂತ ಚುಚ್ಚಿ ಹೋಗಿದ್ದು ಸೊಳ್ಳೆ ಅಂತ ಯಾವ ಗ್ಯಾರಂಟಿಯಲ್ಲಿ ಹೇಳ್ತೀರಿ? ನಿಜ ಹೇಳಬೇಡಿ. :)

    ಪ್ರತ್ಯುತ್ತರಅಳಿಸಿ
  7. ಸೊಳ್ಳೆಗಳನ್ನು ಕೊಲ್ಲಲು ಬ್ರಹ್ಮಾಸ್ತ್ರ ತಯಾರಿಸಿರುವ ಸುದ್ದಿ ಕೇಳಿ ಮಲ್ಲಿಕಾ ಶೆರಾವತ್‌ಗೆ ತುಂಬ ಸಂತಸವಾಗಿರುವ ವರದಿ ನಂಬಲನರ್ಹ ಮೂಲಗಳಿಂದ ತಿಳಿದು ಬಂದಿಲ್ಲ. ಮಲ್ಲಿಕಾ ಶೆರಾವತ್ ಎಂದರೆ ಸೊಳ್ಳೆಗಳಿಗೆ ತುಂಬ ಇಷ್ಟ ಎಂಬ ಮಾಹಿತಿ ತಮಗೆ ತಿಳಿದರಲೇ ಬೇಕು. ಅದಕ್ಕೆ ಕಾರಣವೂ ಸ್ಪಷ್ಟ. ಆಕೆ ಅತಿ ಕಡಿಮೆ ಬಟ್ಟೆ ಧರಿಸುವುದರಿಂದ ಸೊಳ್ಳೆಗಳಿಗೆ ಕಡಿಯಲು ಅನುಕೂಲ.

    -ಪಬ್

    ಪ್ರತ್ಯುತ್ತರಅಳಿಸಿ
  8. ಪಬ್ಬಿಗರೇ,
    ಮತ್ತೆ ಪ್ರತ್ಯಕ್ಷರಾಗಿದ್ದು, ಅದು ಕೂಡ, ಮಂಗಳೂರಿನಲ್ಲಿ ಪಬ್ ದಾಳಿಯ ಬಳಿಕ... ಬಂದಿದ್ದು ನೋಡಿ ಸಂತೋಷವಾಯ್ತು. :)


    ನಮಗೆ ಅರಿವಿಲ್ಲದಿದ್ದರೂ ಮಲ್ಲಿಕಾಳಿಗೂ "ಅರಿವೆ" ಇರಲಿಲ್ಲ ಎಂಬುದನ್ನು ನಮಗಿಂತ ಮೊದಲೇ ಸೊಳ್ಳೆಗಳು ಪತ್ತೆ ಹಚ್ಚಿದ್ದು ತೀವ್ರ ಕುತೂಹಲ ಕೆರಳಿಸಿದ ಸಂಗತಿ. ಸೊಳ್ಳೆಗಳು ಸಿಕ್ಕಾಪಟ್ಟೆ ಊದಿಕೊಂಡಿವೆಯಂತೆ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D