ಬೊಗಳೆ ರಗಳೆ

header ads

ಚುನಾವಣೆ ಘೋಷಣೆ: ಹಸಿವಿನ ಪ್ರಮಾಣ ಹೆಚ್ಚಳ!

(ಬೊಗಳೂರು ಹಸಿವು ಬ್ಯುರೋದಿಂದ)
ಬೊಗಳೂರು, ಮಾ.5- ಅನಾರೋಗ್ಯ ಇದ್ದರೂ ಚುನಾವಣೆ ಘೋಷಣೆಯಾಗುವ ಮುನ್ನವೇ ಬೊಗಳೆ ರಗಳೆ ಬ್ಯುರೋ ಹಣ ಮಾಡಲು ಹೋಗಿ ನಾಪತ್ತೆಯಾಗಿದೆ ಎಂಬ ವದಂತಿಗಳಿಂದ ಕಂಗೆಟ್ಟ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರು, ದಿಢೀರ್ ಆಗಿ ಮರಳಿ ಬಂದಿದ್ದು, ಅವರು ನಾಪತ್ತೆಯಾಗಲು ಬಡತನದಲ್ಲಿಯೂ ಭಾರತ ನಂಬರ್ 1 ಆಗಿರುವುದು ಎಂದು ಇಲ್ಲಿ ಪತ್ತೆಯಾಗಿದೆ.

ಅಪೌಷ್ಠಿಕತೆಯಿದ್ದವರಿಗೆ ಹಸಿವು ಇದ್ದೇ ಇರುತ್ತದೆ ಎಂಬ ಅನ್‌ಕಾಮನ್ ಸೆನ್ಸ್ ಉಪಯೋಗಿಸಿದ ಬೊ.ರ. ಸದಸ್ಯರು, ಈ ಬಗ್ಗೆ ಮತ್ತಷ್ಟು ಡೀಪ್ ಫ್ರೈ ತನಿಖೆ ನಡೆಸಿದಾಗ ಹಲವಾರು ಅಂಶಗಳೂ ಪತ್ತೆಯಾದವು.

ಇತ್ತೀಚೆಗಂತೂ ಹಸಿವು ತೀರಾ ತೀರಾ ಹೆಚ್ಚಾಗಿರುವುದಕ್ಕೂ ವಿಶ್ವಸಂಸ್ಥೆ ಈ ವರದಿ ಪ್ರಕಟಿಸಿರುವುದಕ್ಕೂ ಸಂಬಂಧವಿದೆಯೇ ಎಂದು ಇಲ್ಲದ ಸಂಬಂಧವನ್ನು ಸೃಷ್ಟಿಸಿ ತನಿಖೆ ಮಾಡಲಾಗಿ, 'ಹೌದು' ಎಂಬ ಉತ್ತರ ಅದೆಲ್ಲಿಂದಲೋ ಹೊಳೆದಿದೆ.

ಹೌದು. ಭಾರತದಲ್ಲಿ ಚುನಾವಣೆ ಘೋಷಣೆಯಾಗಿರುವಂತೆಯೇ ಈ ಹಸಿವಿನ ಪ್ರಮಾಣವೂ ಹೆಚ್ಚಿದೆ. ಜಾರಕಾರಣಿಗಳಿಗೆ ಓಟಿನ ಹಸಿವು ಎಂಬ ಅಮೂಲ್ಯವಾದ, ವಿಶಿಷ್ಟವಾದ ಹಸಿವು ಹೆಚ್ಚಾಗಿದ್ದು, ಇದರ ಮೂಲವನ್ನೂ ಕೆದಕಲಾಯಿತು. ಆಗ ಸಿಕ್ಕಿದ್ದು ಅವರ ಅಧಿಕಾರದ ಹಸಿವು!

ಮೊನ್ನೆ ಮೊನ್ನೆವರೆಗೆ ದೇಶದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯೆಂಬ Someಸತ್ತಿನಲ್ಲಿ ಸಮಸ್ತ ಮಾನವನ್ನೂ ಹರಾಜಿಗೆ ಹಾಕಿ, ಕೂಗಾಡುತ್ತಲೇ ಕಾಲ ಕಳೆದು ಅಧಿಕಾರವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದ ಮಂದಿ ಇದೀಗ ಬೀದಿಗೆ ಬಿದ್ದಿದ್ದಾರೆ. ಜನರಿಗೆ ಸದುಪಯೋಗವಾಗುವ ಏನೋ ಒಂದೆರಡು ಕೆಲಸ ಮಾಡುವುದು ಬಿಟ್ಟು ಹೊಲಸು ರಾಜಕೀಯವನ್ನೇ ಪರಸ್ಪರರ ವಿರುದ್ಧ ಎರಚಾಡುತ್ತಾ, ಅಮೂಲ್ಯ ಸಮಯದ ಸದುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಮಜಾಕಾರಣಿಗಳು ಎಂಬ ಬಿರುದನ್ನೂ ಬೊಗಳೂರು ಬ್ಯುರೋದಿಂದಲೇ ಗಿಟ್ಟಿಸಿಕೊಂಡಿದ್ದಾರೆ. ಈಗ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅವರ ಎರಡೂ ಕೈಗಳು ತಾನಾಗಿಯೇ ಜೋಡಣೆಯಾಗುವ ಹಂತಕ್ಕೆ ತಲುಪುತ್ತಿವೆ. ಇದು ಹಸಿವಿನ ಪ್ರಭಾವ ಎಂದು ಕಂಡುಕೊಳ್ಳಲಾಗಿದೆ.

ಹೀಗೆಯೇ ತನಿಖೆ ಮುಂದುವರಿಸಲಾಗಿ, ಜಾರಕಾರಣಿಗಳ ಓಟಿನ ಹಸಿವನ್ನು ಉತ್ತೇಜಿಸುವ ಕಾರಣವನ್ನೂ ಪತ್ತೆ ಹಚ್ಚಲಾದಾಗ, ಸಿಕ್ಕಿದ್ದು ಮತದಾರರ ನೋಟಿನ ಹಸಿವು! "ಸ್ಲಮ್.."ಗೆ ಆಸ್ಕರ್ ಸಿಕ್ಕಿದ್ದರಿಂದಾಗಿ ಇದಕ್ಕೆಲ್ಲ ಗಲ್ಲಿಗಲ್ಲಿಯನ್ನೇ ಸ್ಲಮ್ಮು ಮಾಡಲು ಹೊರಟ ರಜಾಕಾರಣಿಗಳ (ಯಾಕೆಂದರೆ "ಭಯಂಕರ" ರಾಜಕಾರಣಿಗಳು ಮುಷ್ಕರ, ಬಂದ್ ಇತ್ಯಾದಿ ಮಾಡುತ್ತಾ ರಜೆಗೆ ಕಾರಣಿಗಳಾಗುತ್ತಾರೆ!) ಕೃಪೆಯಿಂದಾಗಿ ಮತ್ತು ಅವರ ಸಿಕ್ಕಿದ್ದೆಲ್ಲಾ ಕಬಳಿಸುವ ನೀತಿಗಳಿಂದಾಗಿ ವಿಟಮಿನ್ M ಕೊರತೆಯಿಂದ ಬಳಲುವ ಬಡ ಪ್ರಜೆಗಳು, ಹಸಿವು, ಬಡತನದಿಂದ ತತ್ತರಿಸುತ್ತಿದ್ದಾರೆ ಎಂಬುದೂ ಈ ಸಂದರ್ಭ ಪತ್ತೆಯಾಗಿದೆ.

ರಜಾಕಾರಣಿಗಳ ಬಳಿಕ ತನಿಖೆಯನ್ನು ನಿಜವಾದ ಮನುಷ್ಯರ ಮೇಲೂ ಮುಂದುವರಿಸಲಾಯಿತು. ಇಲ್ಲಿಯೂ ಕೆಲವರಿಗೆ ಜ್ಞಾನದ ಹಸಿವು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಹಸಿವು ಹೆಚ್ಚಾಗಿ ಇಡೀ ಬೊಗಳೆ ಲೋಕವೇ ವಿಜೃಂಭಿಸತೊಡಗಿದೆ. ಇನ್ನು ಕೆಲವು ಬೊಗಳೂರು ಮಂದಿಯಲ್ಲಿ ಅಜ್ಞಾನದ ಹಸಿವು ಕೂಡ ಹೆಚ್ಚಾದ ಪರಿಣಾಮ ಇಂಥ ವ-ರದ್ದಿಗಳು ಪ್ರಕಟವಾಗುತ್ತಿವೆ ಎಂಬ ವಿಷಯವೂ ಪಕ್ಕದಲ್ಲೇ ಪತ್ತೆಯಾಗಿ ಬಂದು ಬಿದ್ದ ಪರಿಣಾಮವಾಗಿ, ಇದು ಬುಡಕ್ಕೇ ಬಂತಲ್ಲಪ್ಪ ಎಂದುಕೊಂಡ ಬೊ.ರ. ಬ್ಯುರೋ ತನಿಖೆಯನ್ನು ಅರ್ಧಕ್ಕೇ ನಿಲ್ಲಿಸಿ ಅರ್ಧಂಬರ್ಧ ವರದ್ದಿ ಒಪ್ಪಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಸ್ವಾಮಿ, ನಿಮಗೆ ಧನ್ಯವಾದಗಳು.
    ಎಲ್ಲಾ ವರ್ಗದವರ ಹಸಿವಿನ ಬಗೆಗೆ ಹೇಳಿದಿರಿ.
    ಇನ್ನೂ ನಮ್ಮ ನಿಧಾನಿಯಾಗಿ ಉಳಿದಿರುವ ಜೋಗಪ್ಪನಿಗೆ ಯಾವ
    ಹಸಿವು ಹಾಗೂ ಆತನ ಹಿಂದೆ ನಿಂತು ಆಟ ಆಡಿಸುತ್ತಿರುವ ಜೋಗಮ್ಮನಿಗೆ ಯಾತರ ಹಸಿವು ಎನ್ನುವದನ್ನು ತಾವು ಕಣಿ ನುಡಿಯಬೇಕಾಗಿ ಪ್ರಾರ್ಥನೆ.

    ಪ್ರತ್ಯುತ್ತರಅಳಿಸಿ
  2. ಯಾರಿಗೇನೇ ಹಸಿವಿರಲಿ...ಇಂಥಾ ಹಸಿವಲ್ಲೂ ಕಳೆದು ಹೋದ ನನ್ನ ಫೇವರೈಟ್ ಬೆಕ್ಕನ್ನ ವಾಪಸ್ ತಂದು ನಮ್ಮ ಆಟದ ಹಸಿವನ್ನು ನೀಗಿಸಿದಿರಲ್ಲ...ಅಷ್ಟು ಸಾಕು ನಮಗೆ. ಲೋಕ ತಲೆಕೆಳಕಾಗಲಿ, ದೇಶವೇ ಸ್ಲಮ್ಮಾಗಲಿ ಅಥವಾ ಸ್ಲಮ್ಮೇ ದೇಶವಾಗಲಿ...ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾವಾಯ್ತು...ಬೆಕ್ಕಾಯ್ತು ! ಜೈ ಮಾರ್ಜಾಲ ಮೀಸಲಾತಿ !

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ನೀವು ಧನ್ಯವಾದ ಹೇಳಿದ್ದಕ್ಕೆ ನಮ್ಮ ಆಂಟಿ-ಧನ್ಯವಾದ. ಜೋಗಪ್ಪನಿಗೆ ಹೇಗಾದರೂ ಅಮೆರಿಕದ ಮತ್ತು ಇಟಲಿಯ ಕಾಲು ಹಿಡಿಯುತ್ತಲೇ ಇರುವ ಹಸಿವು, ಜೋಗಮ್ಮನಿಗಂತೂ ಮಾತನಾಡಲು ಬಾರದಿದ್ದರೂ ತಾನು ನಾಯಕಿಯಾಗಿದ್ದೇನೆ ಎಂಬ ಹಮ್ಮು, ಚುನಾವಣೆಯೂ ಬರುತ್ತಿರುವುದರಿಂದ ವೇದಿಕೆಯಲ್ಲಿ, ಚುನಾವಣಾ ರ‌್ಯಾಲಿಗಳಲ್ಲಿ ಓದುತ್ತಲೇ ಇರುವ ಹಸಿವು ಹೆಚ್ಚಾಗತೊಡಗಿದೆ.

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮಿ ಅವರೆ,
    ನೀವು ನಮ್ಮ ಬೆಕ್ಕಿಗೆ ಒಕ್ಕಣ್ಣು ಹಾಕುತ್ತೀರಿಂತ ಗೊತ್ತಾಗಿಯೇ ಅದನ್ನು ಇಲ್ಲಿ ಇರಿಸಿದ್ದೇವೆ ಮತ್ತು ಅದಕ್ಕೆ ಕಪ್ಪು ಬಣ್ಣವನ್ನೇ ಬಳಿದಿದ್ದೇವೆ. ತಲೆ ಕೆಳಗಾದರೆ ಕಾಲು ಮೇಲೆ ಆಗಲೇಬೇಕು ಎಂಬುದು ನೆನಪಿರಲಿ. ಬೆಕ್ಕಿಗೇನಾದ್ರೂ ಮಾಡಿದ್ರೆ ಹುಷಾರ್!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D