(ಬೊಗಳೂರು ಆರ್ಥಿಕ ಅಧಿಕಪ್ರಸಂಗ ಬ್ಯುರೋದಿಂದ)
ಬೊಗಳೂರಿನಲ್ಲಿ ಅಪ್ಪಿತಪ್ಪಿ ಬಜೆಟ್ ಮಂಡನೆಯಾಗಿದ್ದು, ಬೊಗಳೂರು ಸರಕಾರದ ಅಮುಖ್ಯಮಂತ್ರಿಗಳು ಈ ಬಜೆಟ್ ಮಂಡಿಸಿ ಸಾರ್ವಜನಿಕರಿಂದ ಸೈಸೈ ಗಿಟ್ಟಿಸಿಕೊಂಡಿದ್ದಾರೆ. ಕ್ಷಿಪ್ರ ಕಲ್ಯಾಣ ಯೋಜನೆ, ಅಡ್ಡದಾರಿಗಳ ನಿರ್ಮಾಣ ಯೋಜನೆ, ರೋಸಿಹೋಗುವಂತೆ ಚಿತ್ರೀಕರಣ ಮಾಡುವ ಕ್ಯಾಮರಾ ಯೋಜನೆ... ಇತ್ಯಾದಿಗಳು ಈ ಬಾರಿಯ ಮುಂಗಡ ಪತ್ರದ ಅಮುಖ್ಯಾಂಶಗಳು.
ಬಜೆಟ್ ವಿವರಗಳು ಈ ರೀತಿ ಇವೆ:
* ಪ್ರತಿ ತಾಲೂಕು ಕೇಂದ್ರಗಳಲ್ಲಿ ಬಿಳಿಯಾನೆಗಳನ್ನು ಸಾಕಲು 100 ಕೋಟಿ ರೂ.
* ಪ್ರತಿ ಜಿಲ್ಲಾ ಕೇಂದ್ರಗಳ ಗಲ್ಲಿ ಗಲ್ಲಿಗಳಲ್ಲಿ ಕಡ್ಡಾಯ ಪಬ್ ಸ್ಥಾಪನೆಗೆ 106 ಕೋಟಿ ರೂ.
* ಪಿಂಕ್ ಚಡ್ಡಿ ತಯಾರಿಕಾ ಘಟಕಗಳಿಗೆ ಉತ್ತೇಜನ ನೀಡಲು ಏಳೆಂಟು ಕೋಟಿ ರೂ.
* ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೊಳೆತ ಮೊಟ್ಟೆ, ಕಲ್ಲು, ಚಪ್ಪಲಿ ಇತ್ಯಾದಿಗಳ ಬೆಲೆ ಕೈಗೆ ಎಟುಕದಷ್ಟು ಮೇಲಕ್ಕೆ ಏರಿಸಲು ನಿರ್ಧಾರ
* ರೈಲು ಬಿಡುವ ಮಂತ್ರಿ ಮಹೋದಯರಿಗೆ ವಿಶೇಷ ಪಿಂಚಣಿ ಯೋಜನೆ. (ಇದು ಕೂಡ ಚುನಾವಣೆಯನ್ನು ಗುರಿಯಾಗಿರಿಸಿ ಎಂಬುದು ಪ್ರತಿಪಕ್ಷಗಳ ಆರೋಪ).
* ಮದ್ರಾಸ್ ಹೈಕೋರ್ಟಿನಲ್ಲಿ ಹೊಡೆದಾಡಿ, ಪೊಲೀಸರಿಗೆ ಕಾನೂನು ತಿಳಿಹೇಳುವ ವಕೀಲರನ್ನು ಕರ್ನಾಟಕಕ್ಕೆ ಕರೆತರುವ ಯೋಜನೆ
* ಪುತ್ರಕರ್ತರಿಗೆ ಮತ್ತು ಪುತ್ರಿಕರ್ತರಿಗೆ ವಿಶೇಷ ಬ್ರೇಕಿಂಗ್ ನ್ಯೂಸ್ ನೀಡಲು ವ್ಯವಸ್ಥೆ, ಪದೇ ಪದೇ ತೋರಿಸುವಂತಾಗಲು ವೀಡಿಯೋ ಕ್ಯಾಮರಾ ಉಚಿತ.
* ವಿಧಾನಸೌಧದ ಸುತ್ತ ಮುತ್ತ ರಾಜಕೀಯ ಪಕ್ಷಗಳಿಗೆ ಪರಸ್ಪರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಕೆಸರಿನ ಬೆಲೆಯನ್ನು ಅತ್ಯಂತ ಅಗ್ಗಗೊಳಿಸಲಾಗುತ್ತದೆ. ಇದರಿಂದ ಕೆಸರೆರಚಾಟ ಸುಲಭ.
* ತಮ್ಮ ತಮ್ಮ ಮನೆಯೊಳಗೆ ಕುಳಿತೇ ಗಣಿಗಾರಿಕೆ ಮಾಡುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ಮನೆಗೂ ಒಂದೊಂದು ಕ್ರಶರ್‌ಗಳು
* ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಮದ್ಯಪಾನ, ಸುರಾಪಾನ ಕೇಂದ್ರಗಳು ತೀವ್ರವಾಗಿ ನಲುಗುತ್ತಿರುವ ಕಾರಣ, ಅವುಗಳ ಪುನಶ್ಚೇತನಕ್ಕೆ ಹೊಸದಾದ 'ರೇಣುಕಾ ಯೋಜನೆ' ಘೋಷಿಸಲಾಗಿದ್ದು, ಇದರ ಅನುಸಾರ ಎಲ್ಲರೂ ಕಡ್ಡಾಯವಾಗಿ ಪಬ್‌ಗಳಿಗೆ, ಮದ್ಯ ಕೇಂದ್ರಗಳಿಗೆ ಹೋಗಿ ಕುಡಿದು ಕುಣಿದು ಕುಪ್ಪಳಿಸಬೇಕಾಗುತ್ತದೆ.
* ಆರ್ಥಿಕ ಬಿಕ್ಕಟ್ಟಿನ ಬಿಸಿಯು ವೈದ್ಯ ಸಮುದಾಯವನ್ನೂ ತಟ್ಟಿದೆ. ಇತರ ಉತ್ಪಾದನಾ ವಲಯದಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳುವ ಮಾದರಿಯಲ್ಲೇ, ರೋಗಿಗಳನ್ನು ಆಸ್ಪತ್ರೆಯಲ್ಲೇ (ವೈದ್ಯರ ಗ್ರಾಹಕರು) ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೈದ್ಯರಿಗೆ ವಿಶೇಷ ಯೋಜನೆ - "ಸದಾ ರಕ್ಷಾ" ಜಾರಿ
* ರಾಜ್ಯದ ಪ್ರಮುಖ ನಗರಗಳು ಸಿಕ್ಕಾಪಟ್ಟೆ ಬೆಳೆಯುತ್ತಾ, ವಿದೇಶೀ ಸಂಸ್ಕೃತಿ ಹೆಚ್ಚಾಗುತ್ತಿದೆ. ಜೊತೆಗೆ ಜನಜಂಗುಳಿ, ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕಾಗಿ, ಯುವಜನಾಂಗ ಬೇಗನೇ 'ಗಮ್ಯ'ಸ್ಥಾನ ತಲುಪುವಂತಾಗಲು ಅಲ್ಲಲ್ಲಿ ಅಡ್ಡದಾರಿಗಳ ನಿರ್ಮಾಣ. ಅಡ್ಡ ವರ್ತುಲ ರಸ್ತೆ, ಅಡ್ಡ ಫ್ಲೈಓವರ್, ವಾಮ ಮಾರ್ಗ ಇತ್ಯಾದಿಗಳನ್ನೆಲಾ ನಿರ್ಮಿಸಲು ಕೋಟಿ ಕೋಟಿ ಯೋಜನೆ.
* ಶ್ರೀರಾಮ ಸೇನೆ ಕೈಯಿಂದ ಹೆಣ್ಣು ಮಕ್ಕಳು ಪೆಟ್ಟು ತಿನ್ನದಂತಾಗಲು ಅವರ ಕಲ್ಯಾಣಕ್ಕೆ "ಚೌಧುರಿ ಯೋಜನೆ" ಜಾರಿ.
* ಪ್ರೇಮಕೂಪದಲ್ಲಿ ಬಿದ್ದ ಯುವ ಜನತೆಯ ಕಲ್ಯಾಣಕ್ಕಾಗಿ 'ಶ್ರೀರಾಮಸೇನಾ ಕ್ಷಿಪ್ರ ಕಲ್ಯಾಣ ಯೋಜನೆ' ನಿಧಿ ಘೋಷಣೆ.
* ಮಣ್ಣಿನ ಮಕ್ಕಳಿಗೆ ವಿಶೇಷವಾದ ಕುಟುಂಬ ಯೋಜನೆ "ಆಪರೇಶನ್ ವಿಮಲ" ಜಾರಿ!
ಇವಿಷ್ಟು ಯೋಜನೆಗಳನ್ನು ಜಾರಿಮಾಡಲಾಗಿದ್ದು, ಉಳಿದ ಯೋಜನೆಗಳು ಅವಶ್ಯಕತೆಯಿದ್ದಾಗಲೆಲ್ಲಾ ಹೊರಬೀಳಲಿದೆ ಎಂದು ಬೊಗಳೂರು ಅಮುಖ್ಯಮಂತ್ರಿಗಳು ಪುತ್ರಿ-ಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
6 ಕಾಮೆಂಟ್‌ಗಳು
ಕಟುವಾದ..
ಪ್ರತ್ಯುತ್ತರಅಳಿಸಿಕಹಿ.. ಕಹಿ..
ಸತ್ಯ..!
ನೀವು ಹೇಳುವ ರೀತಿ
ವಿಭಿನ್ನವಾದರೂ
ಇಷ್ಟವಾಯಿತು...
ಗುರೂ,
ಪ್ರತ್ಯುತ್ತರಅಳಿಸಿಚಡ್ಯೂರಪ್ಪನವರಿಗೆ dream budget ಮಾಡಿಕೊಟ್ಟಿದ್ದೀರಿ.
ಒಂದೇ ಅಂಶ ಮರೆತು ಬಿಟ್ಟಿರಿ:
ರೈತರಿಗೆ ಉಚಿತ ನೇಣು ಪೂರೈಕೆ.
ಹಹಹಹ...!
ಪ್ರತ್ಯುತ್ತರಅಳಿಸಿ-ಚಿತ್ರಾ
ಸಿಮೆಂಟು ಮರಳಿನ ಮಧ್ಯೆ ಇಣುಕುವವರೆ,
ಪ್ರತ್ಯುತ್ತರಅಳಿಸಿನಿಮ್ಮ ಬಾಯಿ ಕಹಿ ಮಾಡಿದ್ದಕ್ಕೆ ಕ್ಷಮೆ ಇರಲಿ. ಆದರೆ, ಇಷ್ಟವಾಯಿತು ಅಂತ ನೀವು ಕೂಡ ಕಹಿ ಕಹಿಯಾಗಿಯೇ ಹೇಳಿದ್ದೀರಿಂತ ನಮ್ಮ ಏಕ ಸದಸ್ಯ ಬ್ಯುರೋದ ಸರ್ವರೂ ಆರೋಪಿಸತೊಡಗಿದ್ದಾರೆ.
ಸುನಾಥರೆ,
ಪ್ರತ್ಯುತ್ತರಅಳಿಸಿಚೆಡ್ಯೂರಪ್ಪರು ಕನಸಿನಲ್ಲಿಯೂ ಯೋಚಿಸದ ಬಜೆಟ್ಟಿದು. ನಾವು ಹಾಕಿಕೊಳ್ಳದೆ ಬಿಟ್ಟ ನೇಣನ್ನು ಶೀಘ್ರವೇ ಅವರ ಕೈಗೊಪ್ಪಿಸುತ್ತೇವೆ.
ಚಿತ್ರಾ ಕರ್ಕೇರಾ ಅವರೆ,
ಪ್ರತ್ಯುತ್ತರಅಳಿಸಿಯಾವಾಗಲೂ ಸತ್ಯ ಹೇಳಬಾರದು ಎಂಬುದು ಇದಕ್ಕೇ. ಸತ್ಯ ಹೇಳಿದ್ರೆ ಜನಾ ನಗ್ತಾರೆ...
ಬಜೆಟ್ಟನ್ನು ನೋಡಿ ನೀವು ನಕ್ಕುಬಿಟ್ರಿ...
ಬರ್ತಾ ಇರಿ
ಏನಾದ್ರೂ ಹೇಳ್ರಪಾ :-D