ಬೊಗಳೆ ರಗಳೆ

header ads

ನಿದ್ರೇವೇಗೌಡರು ನಿಧಾನಿಯಾಗಿದ್ದೇಕೆ?: ಸಂಶೋಧನೆ

(ಬೊಗಳೂರು ದಾರಿತಪ್ಪಿದ ವಿಶ್ಲೇಷಣೆ ಬ್ಯುರೋದಿಂದ)
ಬೊಗಳೂರು, ಫೆ.2- ನಿಧಾನಿಯಾಗುವುದಕ್ಕೂ ಮುಂಚಿನಿಂದಲೂ ಮಾಜಿ ನಿಧಾನಿ ಎಂದು ಕರೆಸಿಕೊಳ್ಳುತ್ತಿದ್ದವರೆನ್ನಲಾಗುತ್ತಿರುವ ನಿದ್ರೇವೇಗೌಡರು ಪ್ರಧಾನಿಯಾಗಿದ್ದೇಕೆ ಎಂಬುದನ್ನು ಬೊಗಳೂರು ಬ್ಯುರೋ ತನ್ನ ವಿಶೇಷ ಚಾಣಾಕ್ಷ ಮತ್ತು ಚಾಣಕ್ಯರೂಪಿ ಏಕಸದಸ್ಯ ವರದ್ದಿಗಾರರ ಮಂಡಳಿಯ ಮೂಲಕ ಪತ್ತೆ ಹಚ್ಚಿಸಿದೆ.

ಮಾಡಲು ಬೇರೆ ಕೆಲಸವಿಲ್ಲದ್ದರಿಂದಲೇ ಪ್ರಧಾನಿಯಾಗಬೇಕಾಯಿತು ಎಂದು ಅವರು ಇಲ್ಲಿ ಉವಾಚಿಸಿರುವುದು ಹಲವರು ಹುಬ್ಬುಗಳು (ತಲೆಗಿಂತಲೂ) ಮೇಲೇರಲು ಕಾರಣವಾಗಿದ್ದರೂ, ಅದರೊಳಗಿನ ಸತ್ಯಾಂಶವನ್ನು ಯಾರು ಕೂಡ ನಿರಾಕರಿಸಲು ಅಸಾಧ್ಯವಾಗಿದೆ ಎಂದು ನಮ್ಮ ಸಂಚೋದನಾ ಬ್ಯುರೋ ಕಂಡುಕೊಂಡಿದೆ.

ಜೂನಿಯರ್ ಎಂಜಿನಿಯರ್ ಆಗಲು ಯಾರ್ಯಾರದೋ ಕೈಕಾಲು ಹಿಡಿದು ಇನ್‌ಫ್ಲುಯೆನ್ಸ್ ಮಾಡಿಸಿದ್ದು ಅವರೊಳಗೊಬ್ಬ ಧೀಮಂತ ರಾಜಕಾರಣಿಯಿದ್ದಾನೆ ಎಂಬುದರ ಸೂಚನೆಯಾಗಿತ್ತು ಎಂದು ಬೊ.ರ. ಬ್ಯುರೋ ವಿಶ್ಲೇಷಿಸಿದೆ.

ಆದರೆ ಅವರ ಬಾಯಿಯಿಂದ ಉದುರಿದ ಕೆಲವು ಸತ್ಯಗಳನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಪಂಚೆಯನ್ನೇ ಉಲ್ಟಾಪಲ್ಟಾ ಉಡುತ್ತಿದ್ದ ಅವರು ರಾಜಕೀಯದಲ್ಲೂ ಉಲ್ಟಾಪಲ್ಟಾ ಸೂತ್ರವನ್ನೇ ಅನುಸರಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಒಂದು ಕಾಲದಲ್ಲಿ ಅಂತಹ ಸ್ಥಿತಿಯಲ್ಲಿದ್ದ ಅವರು ಈಗಲೂ ಅದನ್ನು ಅನುಸರಿಸಿಕೊಂಡು ಹೋಗುತ್ತಿರುವುದು ಅವರೊಳಗೊಬ್ಬ ಧೀಮಂತ ನಾಯಕನಿದ್ದಾನೆ ಎಂಬುದರ ಸಂಕೇತ ಎಂದು ಬೊಗಳೂರಿನ ಸೊಂಪಾದಕರುಗಳ ಬ್ಯುರೋ ತನ್ನ ಸೊಂಪಾದ-ವಿಷಾದಕೀಯದಲ್ಲಿ ಬರೆದಿದೆ.

ಮರಕ್ಕೆ ವಯಸ್ಸಾದರೂ ಮರ್ಕಟ ಅಲ್ಲಲ್ಲ... ಹುಳಿ ಮುಪ್ಪೇ ಎಂದು ಸ್ವತಃ ಅವರೇ ಪ್ರಶ್ನಿಸಿಕೊಂಡಿರುವುದು ಅವರೊಳಗಿನ ಛಲದ ಸೂಚನೆ. 
ಮತ್ತೆ ದಾರಿತಪ್ಪಿದ ಮಗನನ್ನು... ಅಲ್ಲಲ್ಲ... ದಾರಿ ತಪ್ಪಿದ ವ್ಯವಸ್ಥೆಯನ್ನು ಸರಿಪಡಿಸಲು ಯಾವ ರಾಜಕಾರಣಿಯಿಂದಲೂ ಸಾಧ್ಯವಿಲ್ಲ, ಸಾಧ್ಯವಿದ್ದದ್ದೇ ಆದರೆ, ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತೇನೆ ಎಂದು ಅವರು ಯಾವುದೇ ಎಗ್ಗಿಲ್ಲದೆ ನುಡಿದಿರುವುದು, ತಾಕತ್ತಿದ್ದರೆ ತಮ್ಮ ದಾರಿ ತಪ್ಪಿದ ಮಗ... ಅಲ್ಲಲ್ಲ... ವ್ಯವಸ್ಥೆಯನ್ನು ಸರಿಪಡಿಸಿ ಎಂದು ವಿರೋಧಪಕ್ಷಗಳಿಗೆ ನೀಡಿದ ಸವಾಲು ಎಂದೂ ಪರಿಗಣಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ದಾರಿ ತಪ್ಪದೆ, ಸಿಕ್ಕೀತೆ ನಿಧಾನಿ ಪಟ್ಟ?
    ಅದಕಾಗಿ ಈ ಗೌಡ ಬಲು ಕಷ್ಟಪಟ್ಟ!
    ಸರಿಯಾಗಿ ನಡೆವವರ ಕಾಲೆಳೆದು ಬಿಟ್ಟ,
    ಮತವನ್ನು ದೊರಕಿಸಲು ಮೂರನ್ನು ಬಿಟ್ಟ!

    ಪ್ರತ್ಯುತ್ತರಅಳಿಸಿ
  2. ನನ್ನದೊಂದೆರಡ್ಮೂರ್ನಾಲ್ಕು ತಕರಾರಿವೆ.

    ಸಂಶೋಧನೆ---> ಇದು ನೀವು ಉಪಯೋಗಿಸಲಾ(ಬಾ)ರದ ಶಬ್ದ !ಈ ಶಬ್ದ ನಮ್ಮ ಬ್ಯೂರೋ ಗೆ ಸಂಬಂಧ ಪಟ್ಟಿದ್ದು. inter-depart-mental ಜಗಳವಾಗತ್ತೆ ಗೊತ್ತ ?

    ನಿದ್ರೇವೇಗೌಡರು ದಾರಿ ತಪ್ಪಿದ "ಮಣ್ಣಿನ" ಮಗ . "ಮಣ್ಣು" ಅನ್ನೋ ಪದವನ್ನ ನೀವು ನಿಮ್ಮ ಬಾಲದಲ್ಲಿ ಯಾಕೆ ಗುಡಿಸಿ ಹಾಕ್ಬಿಟ್ರಿ ? ಕಾಲಲ್ಲಿ ಒತ್ತಿ ಒತ್ತಿ ಹೇಳ್ಬೇಕು ಈ ಪದವನ್ನ !

    ಗೌಡರ ಗಾತ್ರ ಎಷ್ಟಿದೆ ಅಂದರೆ, ಅವರಿಗೆ ಬಗ್ಗಲಿಕ್ಕೇ ಆಗಲ್ಲ...ಇನ್ನು ಕಾಲಿಗೆ ನಮಸ್ಕಾರ ಮಾಡ್ತಾರಂತಾ ? ಈ ನೆಪದಲ್ಲಿ ಅವರ ಕಾಲನ್ನು ಅವರೇ ಮುಟ್ಟಿಕೊಳ್ಳುತ್ತಾರಾ ಅನ್ನೋ ಸಂಚೋದನೆಯನ್ನ ನೀವು ಮೊದಲು ಮಾಡುವುದು ಒಳಿತು. ಇದಕ್ಕೆ ನಮ್ಮ ಪಕ್ಕದ ಬ್ಯೂರೋ ಆದ್ರ ವೈದ್ಯಶಾಸ್ತ್ರ ಬ್ಯೂರೋ ಶಿಫಾರಸ್ಸು ಕೊಡಿಸಲು ನಾವಲ್ಲ, ನೀವೇ ಪ್ರಯತ್ನಿಸಬೇಕು.

    ಒಂದಂತೂ ನಿಜ- ಅವರಿಗೆ ಮಾಡಲು ಏನೂ ಕೆಲಸವಿರಲಿಲ್ಲ ಅನ್ನೋದಕ್ಕೇ ಅವರು ದೇಶದ ನಿಧಾನಿ ಆಗಿದ್ದು !

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ಮೂರನ್ನು ಮಾತ್ರವೇ ಬಿಟ್ಟದ್ದೇ ಎಂದು ಅವರ ಕಾರ್ಯ-ಲಯದ ಸಿಬ್ಬಂದಿಗಳು ಪ್ರಶ್ನಿಸಲಾರಂಭಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮಿ ಅವರೆ,
    ನಿಮ್ಮ ತಕರಾರಿಗೆ ನಮ್ಮ ಮರುತ-ಕರಾರು ಕೂಡ ಇದೆ.
    ಜಗಳವಾಗದಂತೆ ಮೆಂಟಲ್ ಡೀಪಾರ್ಟ್ ಸ್ಟೋರ್‌ಗೆ ಹೋಗಿ ಮೊದಲೇ ಬುಕ್ ಮಾಡಿದ್ದರಾಗುತ್ತಿತ್ತು.

    ಕಾಲಿನಲ್ಲಿ ಒತ್ತಿ ಒತ್ತಿ ಹೇಳಿದರೂ ಅದು ಬೂದಿಯಿಂದ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬರುತ್ತಲೇ ಇದ್ದುದರಿಂದ ಗುಡಿಸಬೇಕಾಯಿತು.

    ಸಂಚೋದನೆ ಪ್ರಕಾರ, ಗೌಡರಿಗೆ ವಯಸ್ಸಾಗಿದೆ, ವ್ಯಾಯಾಮ ಅಗತ್ಯ ಎಂದು ಅವರ ಹಳೆ ತಲೆಮಾರಿನ ಅಜ್ಜ ಮೇಲಿನಿಂದಲೇ ಎಸ್ಎಂಎಸ್ ಕಳಿಸಿದ್ದರು. ನಿಮ್ಮ ಅಭೌತಶಾಸ್ತ್ರದ ಬ್ಯುರೋವನ್ನು ಇಲ್ಲಿಗೆ ಎಳೆದು ತಂದರೆ ಖಂಡಿತವಾಗಿಯೂ ನಿಮ್ಮ ಸಂಶೋಧನೆಗೆ ಒಳ್ಳೆ ವಸ್ತು ಸಿಕ್ಕಂತಾಗುತ್ತದೆ. ಪೀಯಚ್ಡಿಯನ್ನೂ ಮಾಡಬಹುದು.

    ಮತ್ತೆ ಕೊನೆಯ ಸಾಲಿನಲ್ಲಿ ನೀವು ಹೇಳಿದ ನಿಜವನ್ನು ತಕ್ಷಣವೇ ಮುಚ್ಚಿಬಿಡಿ. ಕೇಳಿಸಿಕೊಂಡಾರು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D