(ಬೊಗಳೂರು ಬ್ರೇಕ್‌ಫಾಸ್ಟ್ ಬ್ರೇಕಿಂಗ್ ನ್ಯೂಸ್ ಬ್ಯುರೋದಿಂದ)
ಬೊಗಳೂರು, ಜ.30- ರಾಜ್ಯದ ಅಮುಖ್ಯಮಂತ್ರಿಗಳು ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ವಡೆ ತಿನ್ನುತ್ತಾರೆ ಎಂದು ವರದ್ದಿಯಾಗಿರುವುದು ತನಿಖೆಗೆ ಅರ್ಹ ಎಂದು ಬೊಗಳೂರು ಓದುಗರೆಲ್ಲರೂ ಪ್ರತಿಭಟನೆ ಮಾಡಿರುವುದರಿಂದ ಒತ್ತಡಕ್ಕೆ ಮಣಿದ ನಮ್ಮ ಅನ್ವೇಷಣಾ ಬ್ಯುರೋ, ರದ್ದಿಗಾರರನ್ನು ಅಟ್ಟಾಡಿಸಿ ಕಳುಹಿಸಿತು.ಅಟ್ಟಾಡಿಸಿದ ಭರದಲ್ಲಿ ನಮ್ಮ ವರದ್ದಿಗಾರರು ಪಬ್ಬಿಗೆ ಹೋದರೋ ಅಥವಾ ಕಾಫೀ ಬಾರಿಗೆ ತೆರಳಿದರೋ ಎಂಬುದನ್ನು ಪತ್ತೆ ಹಚ್ಚಲು ಏಕಸದಸ್ಯ ಬ್ಯುರೋದ ಮತ್ತೊಂದು ಬಣವನ್ನು ಕೂಡ ಅಟ್ಟಲಾಯಿತು.
ಒಟ್ಟಿನಲ್ಲಿ ಪಬ್ಬಿನಲ್ಲಿ ಮತ್ತು ಬಾರಿನಲ್ಲಿ (ಕಾಫೀ ಬಾರ್ ಸ್ವಾಮೀ) ಅಮುಖ್ಯಮಂತ್ರಿಗಳು ಬಂದಿದ್ದರೆಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಹಲವಾರು ನಾಯಕ-ನಾಯಕಿ ಮಣಿಗಳನ್ನು ತನಿಖೆಗೆ ಒಳಪಡಿಸಲಾಗಿ ಹತ್ತು ಹಲವು ಧ್ವನಿಗಳು ಏಕಕಾಲಕ್ಕೆ ಮೂಡಿಬಂದವು.
ಈ ಧ್ವನಿಗಳನ್ನು ಈ ರೀತಿ ಪಟ್ಟಿ ಮಾಡಲಾಗಿದೆ:
ಕಲ್ಲಿಕಾರ್ಜುನ ಮರ್ಗೆ: ಅಮುಖ್ಯಮಂತ್ರಿಗಳು ಇಡ್ಲಿವಡೆಯನ್ನು ಮಾತ್ರ ತಿಂದಿದ್ದು ಸರ್ವಥಾ ತಪ್ಪು. ಅವರು ಇಡ್ಲಿವಡೆ ಮಾಡುವವರನ್ನು ಪೋಷಿಸುತ್ತಿದ್ದಾರೆ, ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಇದರಿಂದಾಗಿ ಅಲ್ಪಸಂಖ್ಯೆಯಲ್ಲಿರುವ ಚಪಾತಿ-ಗಸಿಗೆ ಅನ್ಯಾಯ ಎಸಗಲಾಗಿದೆ. ರಾಜ್ಯದಲ್ಲಿ ಅವುಗಳಿಗೆ ಉಳಿಗಾಲವಿಲ್ಲದಂತಾಗಿದೆ. ಅವುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಅಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಬಿಸಾಕಬೇಕು.
ವ್ಯಗ್ರಪ್ಪ: ಇಡ್ಲಿ ವಡೆ ತಿನ್ನುವ ಮೊದಲು ಅಮುಖ್ಯಮಂತ್ರಿಗಳು ಸದನದ ಒಪ್ಪಿಗೆ ಪಡೆಯಬೇಕಿತ್ತು. ಅವರು ಏಕಾಏಕಿಯಾಗಿ ಈ ರೀತಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡು, ವಿರೋಧ ಪಕ್ಷಗಳನ್ನು ಇದ್ದೂ ಇಲ್ಲದಂತೆ ಮಾಡಿದ್ದಾರೆ. ಇದು ವಿರೋಧಿಗಳನ್ನು ಮಟ್ಟ ಹಾಕುವ ಪ್ರಯತ್ನ ಮತ್ತು ಸರಕಾರದ ಸ್ವೇಚ್ಛಾಚಾರ, ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕ. ಸರಕಾರವನ್ನು ತಕ್ಷಣವೇ ವಿಸರ್ಜಿಸಬೇಕು.
ನಿದ್ರೇವೇಗೌಡ: ಇದು ಅಮುಖ್ಯಮಂತ್ರಿಗಳ ಕೋಮುವಾದಿತನವನ್ನು ತೋರಿಸುತ್ತದೆ. ಅವರು ಇಡ್ಲಿಯನ್ನು, ಅದು ಕೂಡ ಬ್ರಾಹ್ಮಣರ ಕಾಫಿ ಬಾರಿನಲ್ಲಿ ಸೇವಿಸಿದ್ದೇಕೆ? ಬೇರಾವುದೇ ಹೋಟೆಲುಗಳಿಗೆ ಹೋಗಬಹುದಿತ್ತಲ್ಲ? ಅವರು ಇಡ್ಲಿ ಜೊತೆ ಚಟ್ನಿಯನ್ನೂ ತಿಂದದ್ದು ಅವರೊಬ್ಬ ಪಕ್ಕಾ ಕೋಮುವಾದಿ, ಜಾತಿವಾದಿ ಎಂಬುದನ್ನು ಬಿಂಬಿಸುತ್ತದೆ. ಚಟ್ನಿ ಬದಲು, ಸಾಂಬಾರು ಇರಲಿಲ್ಲವೇ? ತುಪ್ಪ ಇರಲಿಲ್ಲವೇ? ಉಪ್ಪಿನಕಾಯಿ ಇರಲಿಲ್ಲವೇ? ಅವೆಲ್ಲವನ್ನೂ ಬಿಟ್ಟು ಅವರು ಚಟ್ನಿಯನ್ನು ಮಾತ್ರ ಸೇವಿಸಿದ್ದು ಅವರ ಸ್ವಜನ ಪಕ್ಷಪಾತತನದ ಪ್ರತೀಕ. ವಜಾಗೊಳಿಸಿ.
ಕೇಡಿಶಿ: ಅವರು ಒಂದೆರಡು ಇಡ್ಲಿಯನ್ನು ಮಾತ್ರವೇ ತಿನ್ನಬಹುದಿತ್ತು. ಇಡೀ ರಾಜ್ಯವೇ ಹಸಿವಿನಿಂದ ತತ್ತರಿಸುತ್ತಿರುವಾಗ ಅಷ್ಟೊಂದು ಇಡ್ಲಿವಡೆಯನ್ನು ಕಬಳಿಸಿದ್ದು ಮುಖ್ಯಮಂತ್ರಿಯ ಸಂಸ್ಕೃತಿಗೇ ಅಪಮಾನ. ಅಷ್ಟೊಂದು ತಿಂದಿದ್ದೀರಿ. ತಕ್ಷಣವೇ ವಿಸರ್ಜಿಸಿ.... ಸರಕಾರವನ್ನು!
ಮುದ್ದೆರಾಮಯ್ಯ: ನಮ್ಮ ಹಿಂದಿನ ಬಾಸ್ ತಿಂದ ಹಾಗೆ ಬರೇ ಮುದ್ದೆ ತಿನ್ನಬಹುದಿತ್ತು. ಇದೀಗ ರಾಜ್ಯಾದ್ಯಂತ ಅಕ್ಕಿಯ ಕೊರತೆಯೂ ಇದೆ. ತೆಂಗಿನ ಕಾಯಿ ಕೂಡ ಸಕಾಲಕ್ಕೆ ಸಿಗುತ್ತಿಲ್ಲ. ಹೀಗಿರುವಾಗ ಅಮುಖ್ಯಮಂತ್ರಿಗಳು ಇಡ್ಲಿ-ಚಟ್ನಿಯನ್ನು ತಿಂದಿದ್ದು ತಪ್ಪು. ತಿಂದರೆ ತಿನ್ನಲಿ, ಒಂದಷ್ಟು ಮಾಫಿ ಮಾಡಬಹುದು. ಆದ್ರೆ, ಅವರು ಅದನ್ನು ಸವಿದೂ ಬಿಟ್ಟರಲ್ಲ... ಈ ರೀತಿ ಸವಿದು ತಿನ್ನೋದು ಆ ಹುದ್ದೆಯ ಘನತೆಗೆ ತಕ್ಕುದಾದುದಲ್ಲ.
ರೊಯ್ಯಣ್ಣ: ತಕ್ಷಣವೇ ಸದನ ಕರೆದು ಈ ಬಗ್ಗೆ ತುರ್ತು ಚರ್ಚೆಯಾಗಲಿ. ನಾನು ಎದ್ದು ನಿಲ್ಲುತ್ತೇನೆ. ನನ್ನನ್ನು ಹಿಡಿದೆಳೆಯಲು ಪಕ್ಕದಲ್ಲಿ ಹೇಗಿದ್ದರೂ ತಮ್ಮ ಇರುತ್ತಾನಲ್ಲ...
ಭಾಶೋಕ ರಂದ್ಲಾಜೆ: ನೀವು ಒಬ್ರೇ ತಿಂದ್ರಲ್ಲ ಇಡ್ಲಿ.. ಇರಿ... ನೋಡ್ಕೋತೀನಿ ನಿಮ್ಮನ್ನ!
ಗೋನಿಯಾ ಸಾಂಧಿ: ಕರ್ನಾಟಕದಲ್ಲಿ ಏನಾಗ್ತಾ ಇದೆ? ಮಾನವನ ಹಕ್ಕುಗಳಿಗೆ ಬೆಲೆಯೇ ಇಲ್ಲ. ಒಂದು ಇಡ್ಲಿಯ ಮೇಲೆ ದಾಳಿ ನಡೆಸುವುದೆಂದರೇನು? ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತೋದಾದ್ರೂ ಹೇಗೆ? ತಿಂದವರು ಕಕ್ಕಲೇ ಬೇಕು. ತಕ್ಷಣವೇ ವಿಸರ್ಜಿಸಿ.
ಬೊಗಳೇಶ್: ಅರೆ, ಅಷ್ಟೇನಾ? ಇಡ್ಲಿ ವಡೆ ಚಟ್ನಿ ಮಾತ್ರ ತಿಂದಿದ್ದಾ? ಅದೆಷ್ಟೋ ಮಂದಿ ನಮ್ಮ ಮತಗಳನ್ನು ನುಂಗಿ ನೀರು ಕುಡಿದವ್ರೆ.... ಅವ್ರಿಗೆಲ್ಲಾ ವ್ಯಾಕ್ ಥೂ ಅಂತ ಉಗೀರಿ.
ವಟವಟಾಳ್: ಇಡ್ಲಿ ಚಟ್ನಿಯನ್ನು ತಮಿಳುಕಾಡಿನವರು ಪೇಟೆಂಟ್ ಮಾಡಿಸಿಕೊಳ್ಳೋ ಮೊದ್ಲು ನಾವು ಅದನ್ನು ಒಳಗೆ ಹಾಕಿಕೊಳ್ಳಬೇಕು. ತಕ್ಷಣವೇ ಇಡ್ಲಿ-ವಡೆಯನ್ನು ರಾಜ್ಯ ಪ್ರಧಾನ ತಿಂಡಿಯಾಗಿ ಘೋಷಿಸಬೇಕು. ಇಲ್ಲವಾದರೆ ಟಾಂ ಟಾಂ, ತಾಳ, ಚೆಂಡೆ, ಡೋಲು, ಕತ್ತೆ, ಜಾಗಟೆ, ನಾಯಿ, ಬೆಕ್ಕು, ಕುರಿ ಎಲ್ಲವನ್ನೂ ಕರೆಸಿ ನಿಧಾನಸೌಧದ ಎದುರು ಧರಣಿಶಾಯಿಯಾಗುತ್ತೇವೆ.
ಪ್ರರ್ತೂರು ವಕಾಶ್ (ಸ್ವತಂತ್ರ): ಯೆಡ್ಡಿಯಟ್ಸ್ ನಮಗೆ ಅವಮಾನ ಮಾಡಿದ್ದಾರೆ. ವಿದ್ಯಾರ್ಥಿಭವನದ ಮಸಾಲೆ ದೋಸೆಗೆ ಎಸ್ಸೆಮ್ಮಸ್ ಕೃಷ್ಣ ಕಾಲದಲ್ಲಿ ಒಳ್ಳೆಯ ಬೇಡಿಕೆ ಇತ್ತು. ಈಗ ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದು ಜಾತಿ ರಾಜಕೀಯ. ನಾವು ಬೆಂಬಲ ಹಿಂತೆಗೆತಕ್ಕೆ ಪ್ರಯತ್ನಿಸುತ್ತೇವೆ.
ಪರಾರ್ಧನ ಜೂಜಾರಿ: ಇದು ಅಧಿಕಾರದ ದುರುಪಯೋಗ. ಇದು ಖಂಡನೀಯ. ಇದು ಮಾನವ ಕುಲಕ್ಕೇ ಅವಮಾನ. ಇದರ ಬಗ್ಗೆ ನಮ್ಮ ಮೇಡೆ ದಿಲ್ಲಿಯಲ್ಲಿ ದೊಡ್ಡ ಸಭೆ ಕರೆದು ಕೂಡಲೇ ಚರ್ಚಿಸಬೇಕು. ರಾಜ್ಯ ಸರಕಾರ ವಜಾಗೊಳಿಸಲು ಆಗ್ರಹಿಸಬೇಕು.
ವೀಡಿಎಸ್: ಇದು ಕಮಲಳ ಆಪರೇಶನ್ ಪ್ರಭಾವವೂ ಇರಬಹುದು. ಬೇರೆಯವರ ತಟ್ಟೆಯಿಂದ ಇಡ್ಲಿ ಗುಳುಂಕರಿಸಿದ್ದಾರೆ ಅಂತ ಯಾರ್ಯಾರೋ ಏನೇನೋ ಹೇಳ್ತಾರೆ. ನಾವು ಹಾಗೆಲ್ಲ ತಲೆಕೆಡಿಸಿಕೊಳ್ಳಲ್ಲ. ನಾವೆಲ್ಲರೂ ಚೆನ್ನಾಗಿದ್ದೀವಿ.
ಮಣ್ಣಿನ ಮಕ್ಕಳ ಸಂಘ: ಯಪ್ಪಾ... ಇಡ್ಲಿಯೂರಪ್ಪ ಅವರು ಇಡ್ಲಿ ತಿಂದು ತಿಂದು ಖಾಲಿ ಮಾಡಿಬಿಟ್ರೆ ಮಣ್ಣಿನ ಮಕ್ಕಳಾದ ನಮ್ ಗತಿಯೇನು? ನಮಗೆ ಇಡ್ಲಿ ಉಳಿಯುತ್ತದೋ ಇಲ್ಲವೋ? ನಮಗೆ ಬಿಡಿ, ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆಲ್ಲಾ ಏನ್ ಮಾಡೋದು?
ಅಮುಖ್ಯಮಂತ್ರಿಗಳ ಸ್ಪಷ್ಟನೆ: ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಎಲ್ಲರನ್ನೂ ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಇನ್ನು ಮುಂದೆ ಇಡ್ಲಿ-ವಡೆ ಸೇವಿಸುವ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರಿಗೆ ಎಲ್ಲ ಅಧಿಕಾರವನ್ನೂ ಕೊಟ್ಟಿದ್ದೇವೆ.
ಗಮಾರಸ್ವಾಮಿ: ಅಪ್ಪಂಗೆ ಹೇಳ್ತೀನಿ!
18 ಕಾಮೆಂಟ್‌ಗಳು
ಹಿ ಹಿ ಹಿ :-)
ಪ್ರತ್ಯುತ್ತರಅಳಿಸಿಅನ್ವೇಷಿಗಳು ಇನ್ನೂ ಇಡ್ಲಿ ತಿಂದ ಕಥೆ ಹೇಳ್ತಿದ್ರೆ.... ಶಾಸಕರ ಭವನದಲ್ಲಿ ನೋಟು ತಿನ್ನೊರು ಎನ್ಮಾಡ್ಬೇಕು??? :P
ಪ್ರತ್ಯುತ್ತರಅಳಿಸಿಉದ್ದಿನ ವಡೆ ನೋ ಅಥವಾ ಮದ್ದೂರು ವಡೆನೋ? ತಿ೦ಡಿ ಆರ್ಡರ್ ಮಾಡೋ ಮೊದಲು ವಿವಿಧ ಹೋಟೆಲುಗಳಿ೦ದ ಸರಿಯಾದ ಟೆ೦ಡರ್ ಕರೆದಿದ್ದಾರೋ? ಇಲ್ಲಾ ತಮಗೆ ಬೇಕಾದವರ ಹೋಟೆಲಿಗೆ ಹೋದರೋ?
ಪ್ರತ್ಯುತ್ತರಅಳಿಸಿಜ್ಯೋತಿ ಅವರೆ,
ಪ್ರತ್ಯುತ್ತರಅಳಿಸಿನೀವು ಕೂಡ ನಮ್ಮ ಸ್ಥಿತಿ ನೋಡಿ ನಗಾಡ್ತಾ ಇದ್ದೀರಾ...ಉಫ್...ಯಡಿಯೂರ್ಅಪ್ಪಂಗೆ ಹೇಳ್ತೀವಿ.
ಓಹ್... ಅಮರರೇ,
ಪ್ರತ್ಯುತ್ತರಅಳಿಸಿಹಿಂದಿನ ಮುಖ್ಯಮಂತ್ರಿ ಎಸ್ಎಂಕೃಷ್ಣರು ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನಲಿಲ್ಲವೇ? ಅದೇ ರೀತಿ ಈ ಕಾಲದಲ್ಲಿ, ಶಾಸಕರ ಭವನದಲ್ಲಿ ನೋಟು ತಿಂದರೆ ತಪ್ಪು ಹೇಗೆ? ಅಂತ ಸಂಪಂಗಿಗೆ ಕೆಂಪಂಗಿ ಹಾಕಿ ಪುಂಗಿ ಊದಿದರವರ ವಿರುದ್ಧ ಸಂಪು ಹೂಡಲು ಸಿದ್ಧತೆ ನಡೀತಿದೆ.
ಶ್ರೀನಿಧಿ ಅವರೆ,
ಪ್ರತ್ಯುತ್ತರಅಳಿಸಿಬಹುಶಃ ಅವರಿಗೆ ಇಡ್ಲಿ ಅಂತ ಹೇಳಿ ರಾಗಿಮುದ್ದೆ ತಿನ್ಸಿದ್ದಾರೆ ಅಂತ ಅನ್ಸುತ್ತೆ. ಇದ್ರಲ್ಲಿ ನಿದ್ರೇವೇಗೌಡ್ರ ಕೈವಾಡ ತಳ್ಳಿಹಾಕುವಂತಿಲ್ಲ.
ಮುಕಾರ ಸಾಮಿ : ಇದು ಇಡ್ಲಿ ಮೇಲೆ ನಡೆದಿರತಕ್ಕಂಥ ದೌರ್ಜನ್ಯ. ಇದನ್ನ ನಾವು ಖಂಡಿಸ್ತೀವಿ.
ಪ್ರತ್ಯುತ್ತರಅಳಿಸಿಆದ್ರೆ ನನಗೆ ಈಗತಾನೇ ಕುಂದಾ ತಿಂದು ಅಜೀರ್ಣ ಆಗಿದೆ, ಅಲ್ಲದೆ ಮಾರಿಷಸ್ ಟ್ರಿಪ್ಪಿನ ಸುಸ್ತು ಇನ್ನೂ ಹೋಗಿಲ್ಲ . ಅದಕ್ಕೆ ನಾನು ಸಧ್ಯಕ್ಕೆ ಏನೂ ಹೇಳೋ ಪರಿಸ್ಥಿತಿಯಲ್ಲಿ ಇಲ್ಲ. ಆದರೂ ಕೂಡ ಈ ಇಡ್ಲಿ ವಡೆಯ ಮೇಲೆ ನಡೆದಿರತಕ್ಕಂಥ ಅತ್ಯಾಚಾರವನ್ನು ನಾವು ಎಂದಿಗೂ ಸಹಿಸಲ್ಲ.
ಕಟ್ಟೆ ಶಂಕ್ರ
ಕಟ್ಟೆ ಶಂಕ್ರರೇ, ಬೊಗಳೂರಿನ ಬೊಗಳೆದಾಣಕ್ಕೆ ಸ್ವಾಗತ.
ಪ್ರತ್ಯುತ್ತರಅಳಿಸಿಕುಂದಾ ಮೇಲೆ ನಿರ್ಲಕ್ಷ್ಯ ತೋರಿದ ಯೆಡ್ಡಿಯಟ್ಸ್ ಸರಕಾರವನ್ನು ವಜಾಗೊಳಿಸಲು ಅಪ್ಪನನ್ನು ಒತ್ತಾಯಿಸುವುದಾಗಿ ಮಖಾರ ಸ್ವಾಮಿಯವರು ಹೇಳಿದ್ದು ಕೇಳಿಸಿಕೊಳ್ಳಲಿಲ್ವೆ?
ಇಂತಹ ಬರಹಗಳಿಂದ ನೀವು ಸ್ವಚ್ಚ, ಸಚ್ಚಾರಿತ್ರ್ಯದ ಮಾಜಿ ಮುಖ್ಯಮಂತ್ರಿಗಳ ಮಾನ ಪುಟಗೋಸಿಗೆ ಸಮ ಮಾಡುತ್ತಿದ್ದೀರಿ. ಎಲ್ಲರೂ ಪಬ್ ಮುಚ್ಚಿಸುವ ಸರಕಾರದ ನಿರ್ಧಾರದಿಂದ ಕಂಗಾಲಾಗಿ, ಕಲ್ಲಿಮಾರ್ಜುನ ಮರ್ಗೆ, ಕೇಡಿಶಿ,ಜಗಾರ್ಧಭ ಜಾಪೂರಿ, ನಿದ್ರೇವೆಡೌಗ ಮುಂತಾದವರು ಪಬ್‍ನಲ್ಲಿನ birthdressನಲ್ಲಿನ ನೃತ್ಯದ ಸವಿಯನ್ನು ಯಾವಾಗಲೂ ಮೆಲುಕು ಹಾಕಿಕೊಂಡು ಸದಾ ಮಾನಿನಿಯರ ಹುಸಿಕನಸಿನಲ್ಲಿ ಮಂಡಿಗೆ ಮೆಲ್ಲುತ್ತಾ ಸರಕಾರವನ್ನು ಶಪಿಸುತ್ತಿದ್ದಾರೆ.
ಪ್ರತ್ಯುತ್ತರಅಳಿಸಿಆದಷ್ಟು ಬೇಗ ಈ ಮದ ಕಾಮಿನಿಯರಿಂದೊಳಗೊಂಡ ಒಂದು ಬೃಹತ್ ಪಬ್‍ನ್ನು ಮಂಗಳೂರಿನಲ್ಲಿ ಶುರುಮಾಡಿ ಸುಖದಲ್ಲಿ ತೇಲುವ ಹುನ್ನಾರದಲ್ಲಿದ್ದಾರೆ ಕೆಲವರು. ಈ ಕಾಮಿನಿಯರ ಮನತಣಿಯುವಷ್ಟು ಕುಡಿಸಿ, ಕುಣಿಸಿ ಆಮೇಲೆ......
ಇದು ಸದ್ಯಕ್ಕೆ ಈ ಘಟನೆಯನ್ನು ವಿರೋಧಿಸುವವರ ಒಂದು ಸಂಚು ಆಗಿತ್ತು. ಆದರೆ ಈ ರಾಮಸೇನೆ ಮಂದಿ ಎಲ್ಲವನ್ನೂ ಕೆಡಿಸಿಬಿಟ್ಟರಲ್ಲಾ?....ಛೆ...ಛೇ....
e gataneyannu nanu balavagi otti otti kandisuthene. namma gamara swami cm agi eddaga e rithi agilla. edannu nadina yella laddi jevegalu kandisabeku.
ಪ್ರತ್ಯುತ್ತರಅಳಿಸಿಈಗ ಹೊಸಾ ಗಾದೆಯೊಂದನ್ನು ಬಿಚ್ಚಿದಂತಾಯಿತು:
ಪ್ರತ್ಯುತ್ತರಅಳಿಸಿ"ಇಡ್ಲಿ ತಿಂದೋನು ಎದ್ದ; ಮುದ್ದೆ ತಿಂದೋನು ಬಿದ್ದ!"
ನೋಡಿದೆ ಭಗವಂತಾ, ಅಂದ್ರೂ ಸ್ವಲ್ಪ ಕೀಟಲೆಯಾಗಿ ಬರೆಯೋಣ ಅನ್ನುಸ್ತು ಅದಕ್ಕೆ ಕುಂದಾ ಮತ್ತು ಮಾರಿಷಸ್ ಟ್ರಿಪ್ಪನ್ನು ಸೇರಿಸಿದ್ದು ಅಷ್ಟೇ..
ಪ್ರತ್ಯುತ್ತರಅಳಿಸಿಗುರುಗಳೇ,
ಪ್ರತ್ಯುತ್ತರಅಳಿಸಿನಾವೇನೂ ಪುಟಗೋಸಿಗೆ ಸಮ ಮಾಡಿಲ್ಲ. ತಾನಾಗಿಯೇ ಆಗಿದ್ದು ಅಂತ ನಮ್ಮ ಬ್ಯುರೋದ ತನಿಖಾ ಮಂಡಳಿ ಕಂಡುಕೊಂಡಿದೆ.
ಅನಂತವಾದ ಅನಾನಿಮಸು ಮೂರ್ತಿಗಳೇ,
ಪ್ರತ್ಯುತ್ತರಅಳಿಸಿನಿಮ್ಮ ಖಂಡನೆಗೆ ನಮ್ಮದೂ ಖಂಡನೆ ಇದೆ. ಹೀಗಾಗಿ ನಾವು ಲದ್ದಿಜೀವಿಗಳಲ್ಲ, ನಾವು ಖಂಡಿತಜೀವಿಗಳು. ಅಂದರೆ ಎಲ್ಲರೂ ನಮ್ಮನ್ನು ಖಂಡಿಸುವವರೇ.
ಸುನಾಥರೆ
ಪ್ರತ್ಯುತ್ತರಅಳಿಸಿನೀವು ಬಚ್ಚಿಟ್ಟಿದ್ದ ಈ ಗಾದೆಯನ್ನು ಬಿಚ್ಚಿಡಲು ಸರಕಾರದ ಅನುಮತಿ ಇತ್ತಾ? ಸಂಪುಟದ ಅನುಮತಿ ಪಡೆದಿದ್ದೀರಾ? ಸರ್ವ ಪಕ್ಷ ಸಭೆ ಕರೆದಿದ್ದೀರಾ? ಅಥವಾ ಮುದ್ದೆಯ ಪೇಟೆಂಟ್ ಉಳ್ಳ ಮಣ್ಣಿನಮಕ್ಕಳ ಅನುಮತೀನಾದ್ರೂ ಪಡ್ದಿದ್ದೀರಾ? ಅಂತ ತಕ್ಷಣವೇ ಸ್ಪಷ್ಟಪಡಿಸಿ ಫ್ಯಾಕ್ಸ್ ರವಾನಿಸಲು ಜೇಡಿಮಣ್ಣಿನ ಪಕ್ಷ ಒತ್ತಾಯಿಸ್ತಾ ಇದೆ.
ಕಟ್ಟೆ ಶಂಕ್ರರೇ,
ಪ್ರತ್ಯುತ್ತರಅಳಿಸಿನೀವು ಕೀಟಗಳ ಬಗ್ಗೆ ಕೀಟಲೆಯಾಗಿ ಬರ್ದಿದ್ದಾದರೂ, ಅದರಲ್ಲೆಲ್ಲೋ ಸತ್ಯದ ವಾಸನೆ ಮೂಗಿಗೆ ಅಡರುತ್ತಿತ್ತೂಂತ ನಮ್ಮ ಅನ್ವೇಷಕರು ತಿಳಿಸಿದ್ದಾರೆ. ಆದ್ರೆ, ಇಂಥ ಸತ್ಯ ಸಂಗತಿಗಳನ್ನ ಯಾರಲ್ಲೂ ಹೇಳಬಾರ್ದು ಅಂತ ನಿಮ್ಮನ್ನು ಕೋರಲಾಗುತ್ತಿದೆ. ಯಾಕಂದ್ರೆ ಅಸತ್ಯವೇ ನಮ್ಮ ಮೂಲ ಮಂತ್ರ!
ನೀವು ಇ.ಎಂ.ಸಿಬ್ರಾಹಿಂ ಧ್ವನಿಯನ್ನು ಸೇರಿಸಿಲ್ಲ ಯಾಕೆ? ಕನಿಷ್ಠ ಮಜೀಲ್ ಅಹ್ಮದರನ್ನಾದ್ರೂ ಸೇರಿಸಿದ್ರೆ...
ಪ್ರತ್ಯುತ್ತರಅಳಿಸಿಅನ್ವೇಷಿಗಳು ಕೋಮುವಾದಿ ಎಂದು ನಿದ್ರೇವೇಗೌಡರೋ ಮಜಾರ್ದನ ಜೂಜಾರಿಯವರೋ ಕರೆದಾರು ಜೋಕೆ!
ವಿನೋದರೇ,
ಪ್ರತ್ಯುತ್ತರಅಳಿಸಿನಿಮ್ಮ ಎಚ್ಚರಿಕೆ, ಧಮಕಿ ಎಲ್ಲವೂ ಸಮಯೋಚಿತವಾಗಿದ್ದು, ಮುಂದಿನ ಬಾರಿ ತನಿಖೆ, ರದ್ದಿ ಸಂಗ್ರಹದ ವೇಳೆ ಅವರ ಹೇಳಿಕೆಗಳನ್ನೂ ಡಬ್ಬಿಗೆ ಹಾಕಿಕೊಳ್ಳಲಾಗುವುದು.
ಏನಾದ್ರೂ ಹೇಳ್ರಪಾ :-D