(ಬೊಗಳೂರು ಬಿರುದು-ಬಾವಲಿ ಬ್ಯುರೋದಿಂದ)
ಬೊಗಳೂರು, ಡಿ.29- ನಮ್ಮನ್ನಾಳುವವರು ಬಳೆ ತೊಟ್ಟುಕೊಂಡಿದ್ದಾರೆ ಎಂಬ ಮುದಿ ಹುಲಿಯ ಘರ್ಜನೆಗೆ ಸ್ಪಷ್ಟನೆ ನೀಡಿರುವ ಆಡಳಿತಗಾರರು, ತಾವೇಕೆ ಬಳೆ ತೊಟ್ಟುಕೊಂಡಿಲ್ಲ ಎಂಬುದನ್ನು ವಿವರಿಸಿದ್ದಾರೆ
ಬಳೆಗಳಿಗೇಕೆ ಅವಮಾನ ಮಾಡುತ್ತೀರಿ? ಎಂದು ನೇರಾನೇರ ಠಾಳಾ ಭಾಕ್ರೆಯನ್ನು ಪ್ರಶ್ನಿಸಿರುವ ಬೊಗಳೂರು ಸರಕಾರೀ ವ್ಯಾಕ್‌ತಾರರು, ನಾವು ಬಳೆ ತೊಟ್ಟುಕೊಂಡಿದ್ದರೆ, ಇಂದಿರಾ ಗಾಂಧಿ ಕೈಗೊಂಡಂತಹ ಧೀರ ಕಾರ್ಯಕ್ಕೆ ಮುಂದಾಗುತ್ತಿದ್ದೆವು. ಮುಂಬಯಿ ದಾಳಿ ಬಗೆಗಿನ ವಿಶ್ವ ಸಮುದಾಯದ ಗಮನವನ್ನು ಬೇರೆಡೆಗೆ ಹೊರಳಿಸುವ ಪಾಕಿಸ್ತಾನದ ಬಲೆಗೆ ಬೀಳುತ್ತಿರಲಿಲ್ಲ. ಸೋ... ಹೀಗಾಗಿಯೇ ನಾವು ಬಳೆ ತೊಟ್ಟುಕೊಂಡಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.
ನಾವೇನಾದರೂ ಬಳೆ ತೊಟ್ಟುಕೊಂಡಿದ್ದಿದ್ದರೆ, ಬೊಗಳೂರಿಗೆ ಪಾತಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯವೂ ಇಲ್ಲ ಎಂಬ ಹೇಳಿಕೆ ಬರಲು ಅವಕಾಶ ನೀಡುತ್ತಿದ್ದೆವೇ? ಎಂದು ಪ್ರಶ್ನಿಸಿರುವ ವ್ಯಾಕ್‌ತಾರರು, ದೇಶದ ಭವಿಷ್ಯವೂ ಬಳೆಗಳ ಕೈಯಲ್ಲೇ ಇದೆ. ಹೀಗಾಗಿ ನಾವು ಈಗಾಗಲೇ ಬಳೆ ತೊಟ್ಟುಕೊಳ್ಳಲು ಹೋಗುವುದಿಲ್ಲ. ಹೇಗಿದ್ದರೂ ಶೇ.33 ಸ್ಥಾನವನ್ನು ಬಳೆ ತೊಟ್ಟುಕೊಳ್ಳುವವರಿಗೆ ಮೀಸಲಿಡಲು ನಾವು ಬಿಡುವುದಿಲ್ಲವಲ್ಲ... (ಆದರೆ ಮುಂದೆ ಹೇಗೋ ಗೊತ್ತಿಲ್ಲ ಎಂಬ ಮಾತನ್ನು ಮೆಲ್ಲನೇ ಹೇಳಲು ಅವರು ಮರೆಯಲಿಲ್ಲ.) ನಮ್ಮನ್ನೆಲ್ಲಾ ಜನರು ಕ್ಯಾಕರಿಸಿ ದೂರ ತಳ್ಳುವವರೆಗೂ ಬಳೆಗಳಿಲ್ಲದೆಯೇ ನಾವು ಅಧಿಕಾರ ಮುಂದುವರಿಸುತ್ತೇವೆ ಎಂಬ ಸ್ಪಷ್ಟನೆ ನೀಡಿದರು.
ಇತ್ತೀಚೆಗೆ ಜಗತ್ತಿನ ಪ್ರಮುಖ ಕಂಪನಿಗಳ ಪ್ರಧಾನ ಹುದ್ದೆಯನ್ನು ಬಳೆ ತೊಟ್ಟವರೇ ಅಲಂಕರಿಸುತ್ತಾ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಆಡಳಿತದಲ್ಲಿಯೂ ಅವರೇ ಮೇಲುಗೈ ಸಾಧಿಸಿದರೆ ದೇಶವು ಉದ್ಧಾರವಾಗುತ್ತದೆ. ಅದು ನಮ್ಮ ರಾಜಕೀಯಕ್ಕೆ ವಿರೋಧ. ಈ ಕಾರಣಕ್ಕೆ ಶೇ.33 ಮೀಸಲಾತಿಯನ್ನು ಜನರಿಗೆ ಗೊತ್ತಾಗದ ಹಾಗೆ ಸಂಸತ್ತಿನಲ್ಲಿ ಅಂಗೀಕಾರವಾಗದಂತೆ ನೋಡಿಕೊಳ್ಳುತ್ತೇವೆ. ಆದರೆ ಬಾಯಲ್ಲಿ ಮಾತ್ರ ಮಹಿಳಾ ಮೀಸಲಾತಿಗೆ ಬದ್ಧ ಅಂತನೇ ಹೇಳಿಕೊಳ್ಳುತ್ತಿರುತ್ತೇವೆ. ಯಾಕೆಂದರೆ, ನಮ್ಮ ಓಟಿನ ಬ್ಯಾಂಕಿನಲ್ಲಿ ಠೇವಣಿ ಕಡಿಮೆಯಾಗಬಾರದಲ್ಲ... ಮತ್ತು ಅವರು ಅಧಿಕಾರಕ್ಕೇರುವವರೆಗೂ ನಾವು ಮೇಯುತ್ತಿರಬಹುದಲ್ಲ ಎಂಬ ಸ್ಪಷ್ಟನೆಯೂ ಅವರಿಂದಲೇ ಬಂದಿದೆ.
ಇಡೀ ವಿಶ್ವ ಸಮುದಾಯದಲ್ಲಿ ಮುಂಬಯಿಯ ಹೆಸರೇ ನಲಿದಾಡುತ್ತಿದೆ. ಜನರೆಲ್ಲಾ ನೋಡಿ ನೋಡಿ, ಮಾತನಾಡಿ ಮಾತನಾಡಿ ಈ ಮುಂಬಯಿಗೇನಾದರೂ ದೃಷ್ಟಿ ತಗುಲಿದರೆ ಎಂಬ ಭೀತಿ ನಮ್ಮದು. ಸೋ... ಜನರ ಗಮನ ಬೇರೆಡೆ ಸೆಳೆಯುವುದೊಂದೇ ಮುಂಬಯಿಗೆ ದೃಷ್ಟಿ ತಗುಲದಂತಾಗಿಸಲು ಇರುವ ಉಪಾಯ.
ಅದಕ್ಕಾಗಿ, ಭಾರತ-ಪಾತಕಿಸ್ತಾನ ನಡುವೆ ಯುದ್ಧೋನ್ಮಾದ ಸೃಷ್ಟಿಸಿದರೆ, ಜಗತ್ತಿನ ಗಮನವು ಮುಂಬಯಿ ಪ್ರಕರಣದಿಂದ ಬೇರೆಡೆ ಹೋಗುತ್ತದೆ. ಭಾರತದಲ್ಲಿ ಮುಂಬಯಿ ದಾಳಿ ಮೇಲಿನಿಂದ ಗಮನ ಬೇರೆ ಕಡೆ ಹರಿದರೆ, ಪಾತಕಿಸ್ತಾನದ ಕಡೆಯಲ್ಲಿ ಉಗ್ರರ ನಿವಾರಣೆ ಮೇಲಿನ ಗಮನವೂ ನಿವಾರಣೆಯಾಗುತ್ತದೆ. ಉಪಖಂಡದಲ್ಲಿ ಯುದ್ಧ ತಡೆಯುವುದರತ್ತಲೇ ಜಗತ್ತು ಗಮನ ಹರಿಸುವುದರಿಂದ ಎರಡೂ ದೇಶಗಳ ಇಚ್ಛೆ ಈಡೇರಿದಂತಾಗುತ್ತದೆ. ಭಾರತವು ಮುಂಬಯಿಯನ್ನು ಮರೆಸಲು ಮಾಡಿದ ಯತ್ನ ಫಲಿಸುತ್ತದೆ, ಪಾಕಿಸ್ತಾನವು ಉಗ್ರರ ಮೇಲೆ ಕ್ರಮ ಕೈಗೊಳ್ಳುವ ಒತ್ತಡ ನಿವಾರಿಸಿಕೊಳ್ಳುವಲ್ಲಿ ಯಶಸ್ವಿಯಾತ್ತದೆ ಎಂದು ಬೊಗಳೂರಿನ ಆಡಳಿತ ಪಕ್ಷದ ಅರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ಕಾರಣಗಳಿಗಾಗಿಯೇ ನಾವು ಬಳೆ ತೊಟ್ಟುಕೊಂಡಿಲ್ಲ. ಬಳೆ ತೊಟ್ಟಿದ್ದರೆ ಇದಕ್ಕೆ ವಿರುದ್ಧವಾಗಿಯೇ ಎಲ್ಲವನ್ನೂ ಮಾಡಿಬಿಡುತ್ತಿದ್ದೆವು ಎಂದು ಅವರು ಕೊನೆಗೊಂದು ಪ್ಯಾರಾವನ್ನು ತಮ್ಮ ಮಾತಿನ ಮಧ್ಯೆ ಸೇರಿಸಿದ್ದಾರೆ.
4 ಕಾಮೆಂಟ್‌ಗಳು
ಇವರು ಬಳೆ ತೊಟ್ಟಿದ್ದರೆ, ಬಳೆ ಅವಮಾನದಿಂದ ಗಳಗಳ ಅಳುತ್ತಿತ್ತೇನೊ? ಪಾಪ, ಅದಕ್ಕೇಕೆ ನೋವು ಅಂತ ಇವರು ಬಳೆ ತೊಟ್ಟಿರಲಿಕ್ಕಿಲ್ಲ.
ಪ್ರತ್ಯುತ್ತರಅಳಿಸಿಬಳೆಗಳ ಬೆಲೆ ಇಂಥವರಿಗೆ ಗೊತ್ತಿಲ್ಲ...ಅದಕ್ಕೆ ತೊಟ್ಟಿಲ್ಲ...ಬಳೆ ತೊಟ್ಟವರು ಅಂಥವರನ್ನು ಬಲೆಗೆ ಹಾಕಿಕೊಂಡು ಬೆಲೆ ತೋರಿಸಿದಾಗಲೇ ಗೊತ್ತಾಗೋದು :p
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿಖಂಡಿತವಾಗಿಯೂ ಹೌದು ನೀವೆಂದ ಮಾತು. ಬಳೆ ತೊಟ್ಟು ಕೂಡ ಹೀಗೆ ಮಾಡುತ್ತಿದ್ದಾರಲ್ಲಾ... ನಮ್ಮ ಮರ್ಯಾದೆ ತೆಗೀತಾರಲ್ಲಾ ಎಂಬ ಕೊರಗು ಈ ಬಳೆಗಳಿಗೆ ಬರಬಹುದು.
ಲಕ್ಷ್ಮಿ,
ಪ್ರತ್ಯುತ್ತರಅಳಿಸಿಬಳೆ ತೊಟ್ಟವರು ಇಂಥವರಿಗೆ ಬೆಲೆ ತೋರಿಸಬೇಕಾದದ್ದು ರಸ್ತೆಯಲ್ಲಿ ಕಸ ಸಾರಿಸಲು ಬಳಸುವ ಅಮೂಲ್ಯವಾದ ಆಯುಧದ ಮೂಲಕ!
ಏನಾದ್ರೂ ಹೇಳ್ರಪಾ :-D