ಬೊಗಳೆ ರಗಳೆ

header ads

ನಿವೃತ್ತ ಹುದ್ದೆಗಳಿಗೆ ಅರ್ಜಿಗಳ ಮಹಾಪೂರ!

(ಬೊಗಳೂರು, ನಿರುದ್ಯೋಗ ನಿವಾರಣೆ ಬ್ಯುರೋದಿಂದ)
ಬೊಗಳೂರು, ಡಿ.17- ನಿವೃತ್ತ ರಾಷ್ಟ್ರದ ಪತಿ ಮತ್ತು ನಿವೃತ್ತ ರಾಜ್ಯದ ಪಾಲ ಹುದ್ದೆಗೆ ಅರ್ಜಿ ಸಲ್ಲಿಸಲು ಬೊಗಳೂರಿನ ಸಮಸ್ತ ಜನತೆ ಧಾವಂತಕ್ಕೆ ಬಿದ್ದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಇದಕ್ಕೆ ಕಾರಣವೆಂದರೆ, ಕಷ್ಟಪಟ್ಟು ದುಡಿದರೂ ದೊರೆಯದಷ್ಟು ಸಂಬಳವು ನಿವೃತ್ತಿಯಾದ ನಂತರ ದೊರಕುವುದೇ ಆಗಿರುತ್ತದೆ ಎಂದು ಬೊಗಳೂರು ಮಹಾಜನತೆ ಸ್ಪಷ್ಟಪಡಿಸಿದ್ದಾರೆ. ಈ ನಿವೃತ್ತರ ಹುದ್ದೆಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೀಸಲಾತಿ ನೀಡಬೇಕೇ ಎಂಬ ಬಗ್ಗೆ ಜಾರಕಾರಣಿಗಳೆಲ್ಲರೂ ಸೇರಿ ಸಭೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ನಮಗೂ ಸಂಬಳ ಹೆಚ್ಚಿಸಿ ಅಂತ ಸಂಸತ್ತಿನಲ್ಲಿ ನಿದ್ದೆ ಮಾಡುವ ಸಂಸದರೂ ಸೇರಿದಂತೆ ಹಲವರು ಪಟ್ಟು ಹಿಡಿದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕೆಂದರೆ, ಇಂಥದ್ದೊಂದು ವಿಷಯದಲ್ಲಿ ಸಂಸತ್ತಿನಲ್ಲಿ ಯಾವತ್ತಿಗೂ ಪಕ್ಷಭೇದವಿಲ್ಲ, ಆಡಳಿತ ಪಕ್ಷ- ವಿರೋಧ ಪಕ್ಷ ಎಂಬ ತಾರ ತಮ್ಯ ಇರುವುದಿಲ್ಲ. ಪಕ್ಷಭೇದವಿಲ್ಲದೆ ಒಮ್ಮತದಿಂದ ಅಂಗೀಕಾರವಾಗುವ ಏಕೈಕ ಮಸೂದೆ ಎಂದರೆ ಸಂಸದರ ವೇತನ ಏರಿಕೆ ಶಿಫಾರಸು. ಹೀಗಾಗಿ ಈ ಹುದ್ದೆಗಳಿಗೂ ಬೊಗಳೂರು ಜನತೆ ಮುಗಿಬೀಳುತ್ತಿದ್ದಾರೆ.

ಸಂಸದರ ಹುದ್ದೆಗೆ ಇರಬೇಕಾದ ಅರ್ಹತೆಗಳೇನು, ಇಷ್ಟೊಂದು ವೇತನ, ಅನುದಾನ ಪಡೆಯಲು ನಿದ್ರಾ ಸಂಸದನಿಗೆ ಏನೆಲ್ಲ ಇರಬೇಕು ಮತ್ತು ಇರಬಾರದು ಎಂಬುದನ್ನು ಪಟ್ಟಿ ಮಾಡಿ ಬೊಗಳೂರಿನ ಬೀದಿ ಬೀದಿಗಳಲ್ಲಿ ಹಚ್ಚಲಾಗಿದೆ. ಅವುಗಳು ಈ ರೀತಿಯಾಗಿರುತ್ತವೆ:

* ಸಂಸತ್ತಿನಲ್ಲಿ ನಿದ್ದೆ ಮಾಡುತ್ತಿರಬೇಕು.

* ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಮಸೂದೆ ಮಂಡನೆಯಾದರೆ, ಅದರಲ್ಲಿ ಓಟು ಬ್ಯಾಂಕಿಗೆ ಏನಾದರೂ ಪೆಟ್ಟಾಗಬಹುದೇ ಎಂದು ಹುಳುಕು ಹುಡುಕುವಲ್ಲಿ ಎತ್ತಿದ ಕೈ ಆಗಿರಬೇಕು, ಇಲ್ಲವಾದರೆ ಕಾಲೆತ್ತಿದರೂ ಆದೀತು.

* ರಾಜಕಾರಣಕ್ಕೇ ಜೀವನವನ್ನು ಸವೆಸುವ ನಡುವೆ ದೇಶದ ಹಿತ ರಕ್ಷಣೆ ಕುರಿತ ಚರ್ಚೆಗೆ ಸಮಯಾವಕಾಶವಿಲ್ಲವೇ? ಸಂಸತ್ತಿನ ರಿಜಿಸ್ಟರಿಗೆ ಬೆಳ್ಳಾಂಬೆಳಗ್ಗೆ ಸಹಿ ಹಾಕಿ, ಸರಕಾರಿ ವೆಚ್ಚದಲ್ಲಿ ವಿಮಾನದ ಮೂಲಕ ರಾಜಕಾರಣ ಮಾಡಲು ತೆರಳಬೇಕು.

* ಕ್ಷೇತ್ರದಲ್ಲಿ ನೆರೆ ಹಾವಳಿ, ಬರ, ಕ್ಷಾಮ, ರಸ್ತೆ ಸರಿ ಇಲ್ಲ, ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ ಇತ್ಯಾದಿ ಸಮಸ್ಯೆಗಳಿವೆಯೇ? ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರದೇಶದಲ್ಲಿ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ಹೊರ ದೇಶಕ್ಕೆ ತೆರಳುವ 'ಅಧ್ಯಯನ ನಿಯೋಗ'ದಲ್ಲಿ ಪಾಲ್ಗೊಳ್ಳುವ ಅದಮ್ಯ ಉತ್ಕಟ ಆಕಾಂಕ್ಷೆ ಹೊಂದಿರಬೇಕು.

* ಹಿಂದಿನ ಸಂಸದನ ಅವಧಿಯಲ್ಲಿ ಆದ ಉತ್ತಮ ಕೆಲಸ ಕಾರ್ಯಗಳೇನಾದರೂ ಇವೆಯೇ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಿಪುಣರಿರಬೇಕು. ಮಾತ್ರವಲ್ಲ, ಅದನ್ನು ರದ್ದುಪಡಿಸಿ, ಆ ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಲು ಆದೇಶಿಸುವುದರಲ್ಲಿಯೂ ಪರಮ ನೈಪುಣ್ಯ ಸಾಧಿಸಿರಬೇಕು.

* ದೇಶದಲ್ಲಿ ಎಲ್ಲಾದರೂ ಸಣ್ಣಪುಟ್ಟ ಸಂಘರ್ಷವೊಂದು ನಡೆದರೆ, ಅದರಲ್ಲಿ ಕೋಮು ಬಣ್ಣವನ್ನು ಪತ್ತೆ ಹಚ್ಚಿ, ಹೊರಗೆಳೆದು ಆ ಕುರಿತು ಧ್ವನಿ ಎತ್ತಲು ಸಿದ್ಧವಿರಬೇಕು.

* ಸರಕಾರವೊಂದು ಒಳ್ಳೆಯ ಕೆಲಸ ಮಾಡಿದರೆ, ನೀವು ವಿರೋಧ ಪಕ್ಷದವರಾಗಿದ್ದರೆ, ಅದರಲ್ಲಿನ ಹುಳುಕನ್ನು ಎತ್ತಿತೋರಿಸಬೇಕು. ಸಣ್ಣ ಪುಟ್ಟ ನ್ಯೂನತೆಯಾದರೂ ಅದನ್ನು ದೊಡ್ಡ ಕುಂಬಳಕಾಯಿ ಮಾಡಿ, ಸಾಂಬಾರು ಮಾಡುವಂತಿರಬೇಕು.

* ಅದೇ ರೀತಿ, ನೀವು ಆಡಳಿತ ಪಕ್ಷದಲ್ಲಿದ್ದರೆ, ವಿರೋಧ ಪಕ್ಷದವರು ನೀಡುವ ಒಳ್ಳೆಯ ಸಲಹೆಯನ್ನು ಕ್ಯಾಕರಿಸಿ ತಿರಸ್ಕರಿಸಬೇಕು. ಎಲ್ಲಾದರೂ ಕ್ರೆಡಿಟ್ ಅವರಿಗೆ ಹೋದರೆ ಎಂಬ ಆತಂಕ ನಿಮ್ಮ ಮನದಂಗಳದಲ್ಲಿ ಫುಟ್ಬಾಲ್‌ನಂತೆ ಅತ್ತಿಂದಿತ್ತ ಸುಳಿಯುತ್ತಿರಬೇಕು.

* ಆ ಮೇಲೆ, ನೀವು ಸರಕಾರದ ಸಚಿವ ಸಂಪುಟದಲ್ಲಿ ಸಾಧ್ಯವಿದ್ದಷ್ಟು ಮಟ್ಟಿಗೆ ಒಳಗೆ ತೂರಿಕೊಳ್ಳಲು ಪ್ರಯತ್ನಿಸಬೇಕು. ಸಮಾಧಾನವಾಗಲಿಲ್ಲವೋ, ಅಥವಾ ಸಿಕ್ಕಲಿಲ್ಲವೋ... ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆಗೆ, ಅಥವಾ ಯಾವುದಾದರೊಂದನ್ನು ಸುಧಾರಿಸಲು ರಚಿಸಲಾಗುವ ಆಯೋಗವೊಂದನ್ನು ನೇಮಿಸಲು ಒತ್ತಡ ಹೇರಿ, ಅದರ ಮುಖ್ಯಸ್ಥರಾಗಿಯೋ ಕಾರ್ಯನಿರ್ವಹಿಸುವ ಚಾಣಕ್ಯ ತಂತ್ರ ಮತ್ತು ಚಾಣಾಕ್ಷತೆ ನಿಮ್ಮಲ್ಲಿರಬೇಕು.

* ನೀವು ಹಣ್ಣು ಹಣ್ಣು ಮುದುಕರಾದಷ್ಟೂ ಸಂಸದರಾಗುವ ಅವಕಾಶಗಳು ಹೆಚ್ಚು.

* ಇದರೊಂದಿಗೆ, ನಿಮ್ಮ ಮಗ, ಮೊಮ್ಮಗ, ಸೊಸೆ, ಮರಿ ಮಗ, ಗಂಡ, ಹೆಂಡತಿ ಎಲ್ಲರನ್ನೂ ರಾಜಕೀಯಕ್ಕೇ ತಂದು ಬೆಳೆಸುವ ಚಾಕಚಕ್ಯತೆ ಹೊಂದಿರಬೇಕು. ಕುಟುಂಬವೇ ರಾಜಕಾರಣಕ್ಕಾಗಿ ಜೀವ ಸವೆಸುತ್ತಿದೆ, ಮಹಾನ್ ತ್ಯಾಗ ಮಾಡುತ್ತಿದೆ ಎಂಬಂತೆ ಜನರಲ್ಲಿ ಅಭಿಪ್ರಾಯ ಮೂಡಿಸುವಲ್ಲಿ ಸಫಲರಾಗಿರಬೇಕು.

* ಕಪಡಾ, ರೋಟಿ, ಮಕಾನ್ ಎಂಬುದೇ ನಿಮ್ಮ ಮೂಲ ಮಂತ್ರವಾಗಿರಬೇಕು. ಅಲ್ಪಸಂಖ್ಯಾತರನ್ನು ಮೇಲೆ ತರಬೇಕು, ದಲಿತರನ್ನು ಉದ್ಧಾರ ಮಾಡಬೇಕು ಎನ್ನುತ್ತಾ ಬೊಗಳೆ ಬಿಡಬೇಕೇ ಹೊರತು, ಅವರ ಅಭಿವೃದ್ಧಿಗಾಗಿ ನಿಜವಾಗಿಯೂ ಏನು ಮಾಡಬೇಕು ಎಂಬುದನ್ನು ಚಿಂತಿಸುವ ಗೋಜಿಗೆ ಹೋದಿರೋ... ನಿಮ್ಮ ಸಂಸತ್ಸದಸ್ಯತನವೇ ರದ್ದಾಗುತ್ತದೆ, ಜೋಕೆ!

* ಈ ಪಟ್ಟಿ ಹೀಗೆಯೇ ಬೆಳೆಯುತ್ತಿದ್ದು, ಇದಕ್ಕೆ ಬೊಗಳೆ ರಗಳೆ ಓದುಗರೂ ಕೊಡುಗೆ ನೀಡಬಹುದು ಅಂತ ನೋಟೀಸು ಬೋರ್ಡುಗಳಲ್ಲಿ ಎಚ್ಚರಿಕೆ ಎಂಬ ಶೀರ್ಷಿಕೆಯಡಿ ಬರೆಯಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ನಾನು ಅಪ್ಪ್ಲೈ ಮಾಡ್ಲಾ ಅಂದ್ರೆ ನೀವು ಬೇಡಾಆಆಆ ಅಂತ ಬೇಡಿಕೊಳ್ಳುತ್ತೀರಿಯಾದ್ದರಿಂದ, ನಾನು ಏನೂ ಹೇಳಕ್ಕೆ ಹೋಗಲ್ಲ.

    ಪ್ರತ್ಯುತ್ತರಅಳಿಸಿ
  2. ಲಕ್ಷ್ಮಿ ಅವರೆ,
    ಓಹ್... ನಿಮ್ಮ ಬ್ಯುರೋದವರು ಅಪ್ಲೈ ಮಾಡ್ತಾರೆ ಅಂತ ನಾವು ದೊಣ್ಣೆ, ಬ್ಯಾಂಡು, ವಾದ್ಯ, ಕತ್ತಿ, ಕೋಲು, ಪೀಪಿ, ಒನಕೆ, ಮಡಕೆ, ಪೊರಕೆ ಎಲ್ಲಾ ರೆಡಿ ಮಾಡಿಕೊಂಡಿದ್ವಿ... ಎಲ್ಲಾ ವೇಸ್ಟಾಯ್ತು...

    ಪ್ರತ್ಯುತ್ತರಅಳಿಸಿ
  3. ರಿಜರ್ವೇಶನ್ ಬಗೆಗೆ ಉತ್ಸಾಹ ತಳೆದಿರಬೇಕು.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಈಗಾಗಲೇ ದುರ್ಜನ ಸಿಂಗರನ್ನು ಈ ಕುರಿತು ಅಧ್ಯಯನಕ್ಕೆ ಅಟ್ಟಲಾಗುತ್ತಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D