ಬೊಗಳೆ ರಗಳೆ

header ads

ಆ ಚಿತ್ರ ಚಂದಿರನ ಊರಿದ್ದಲ್ಲ, ನಮ್ಮೂರ ರಸ್ತೆಗಳದು!

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ನ.17- "ತಿಂಗಳ"ನ ಅಂಗಳಕ್ಕೆ ಕಳುಹಿಸಿದ ಮಾನವರಹಿತ ನೌಕೆಯಲ್ಲಿ ಭಾರೀ ಒಳಸಂಚೊಂದು ನಡೆದಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮಾನವರಹಿತ ಅಥವಾ ಅಮಾನವೀಯ ಚಂದ್ರನೌಕೆಯನ್ನು ಮೊನ್ನೆ ಮೊನ್ನೆ ತಿಂಗಳನ ಅಂಗಳಕ್ಕೆ ಕಳುಹಿಸಿದೆ ಎಂಬುದು ನಿಜವಾದ ಅಸತ್ಯವಾದರೂ, ಇದಕ್ಕೆ ಮೊದಲೇ ಮಾನವಸಹಿತ ಚಂದ್ರನೌಕೆಗಳನ್ನು ಯಾರೋ ಹಾರಿಬಿಟ್ಟಿದ್ದರು ಎಂಬುದು ಕೂಡ ಇದೇ ಸಂದರ್ಭದಲ್ಲಿ ಬಯಲಾಗಿದೆ.

ಪರಲೋಕ ಯಾತ್ರೆಗಾಗಿ ಪ್ರತಿಯೊಂದು ಯೋಜನೆಗಳಲ್ಲಿಯೂ ದುಡ್ಡು ಒಟ್ಟುಗೂಡಿಸುವ ಜಾರಕಾರಣಿಗಳ ಪ್ರಯತ್ನದ ಫಲವಿದು ಎಂದು ಬೊ.ರ. ಬ್ಯುರೋ ವರದ್ದಿ ತಂದುಹಾಕಿದೆ.

ಇಷ್ಟೆಲ್ಲಾ ಭೂಮಿಯ ಬಯಲಿಗೆ ಬೀಳಲು ಕಾರಣ ಇಷ್ಟೆ. ಮೊನ್ನೆ ಮೊನ್ನೆ ಚಂದ್ರಯಾನ ನೌಕೆಯು ಚಂದಿರನ ಮೇಲ್ಮೈ ಅಂತ ಕೆಲವೊಂದು ಚಿತ್ರಗಳನ್ನು ಚಂದ್ರಲೋಕದಿಂದ ಭೂಲೋಕಕ್ಕೆ ರವಾನಿಸಿತ್ತು. ಅದು ಕೂಡ ಒಂದೇ ಎರಡೆ? ಸಾವಿರಗಟ್ಟಲೆ! ಈ ಚಿತ್ರಗಳನ್ನು ಬೊಗಳೆ ಬ್ಯುರೋದ ಮಂದಿ ತಮ್ಮದೇ ಆದ ಪ್ರಯೋಗ-ಲಯದಲ್ಲಿ ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದರು.

ಆಗ ತಿಳಿದುಬಂದಿದ್ದೇನೆಂದರೆ, ಚಂದ್ರಲೋಕದಲ್ಲಿ ಕೂಡ ಈಗಾಗಲೇ ಭೂಲೋಕದಲ್ಲಿರುವಂತೆ "ಅಭಿವೃದ್ಧಿ" ಯೋಜನೆಗಳು ನಡೆಯುತ್ತಿವೆ. ಯೋಜನೆ ಎಂದ ತಕ್ಷಣ "ಗುಳುಂ" ಎಂಬ ಸದ್ದೇ ನೆನಪಾಗುವ ನಮ್ಮ ಜಾರಕಾರಣಿಗಳು ಹೇಗಾದರೂ ಮಾಡಿ ಅಲ್ಲಿಗೆ ತಲುಪಬೇಕು ಎಂದು ಶತಪಥ ಪ್ರಯತ್ನ ಕೈಗೊಂಡರು. ಅದರ ಫಲವಾಗಿ, ಅವರು ಅದಾಗಲೇ ಮಾವನಲೋಕದಿಂದ ಪರಲೋಕಕ್ಕೆ ದಿಢೀರ್ ಧಾವಿಸಿದರು. ಅದಕ್ಕಾಗಿಯೇ ಅವರು ಪರಲೋಕಯಾನ-೧ ಎಂಬ ನೌಕೆಯನ್ನು ಕಳುಹಿಸಿದ್ದು, ಇದಕ್ಕೆ ಈ ಹೆಸರಿಡಲು ಸಾಕಷ್ಟು ಮಂಡೆ ಖರ್ಚು ಮಾಡಿದ್ದಾರೆಂಬುದೂ ತಿಳಿದುಬಂದಿದೆ.

ಅಲ್ಲಿ ಅವರ ಕಣ್ಣಿಗೆ ಮೊದಲು ಕಂಡದ್ದು ಚಂದ್ರ ಲೋಕದ ರಸ್ತೆಗಳು. ಹೀಗಾಗಿ ಅಲ್ಲಿನ ರಸ್ತೆಗಳನ್ನು ಕೂಡ ಭೂಲೋಕದ ರಸ್ತೆಗಳಂತೆಯೇ ಅರೆಬರೆ, ಹೊಂಡಭರಿತವಾಗಿ ಮಾಡಿಸಿದರೆ, ಗುಳುಂಕರಿಸಿದಷ್ಟೂ ದುಡ್ಡು ಸರಕಾರದಿಂದ ಬಿಡುಗಡೆಯಾಗುತ್ತಲೇ ಇರುತ್ತದೆ ಎಂದು ತೀರ್ಮಾನ ಮಾಡಿದ್ದೇ ತಡ, ಗುಳುಂ ಕಾಮಗಾರಿ ಆರಂಭಿಸಿ ಬಿಟ್ಟಿದ್ದರು.

ಭೂಲೋಕದಲ್ಲಿರುವ ರಸ್ತೆಗಳು ನಿತ್ಯ ಪ್ರಯಾಣಿಕರನ್ನು ಪರಲೋಕ ಯಾತ್ರೆಗೆ ಕಳುಹಿಸುತ್ತಿರುವಂತಿರುತ್ತದೆ. ಇದೇ ಕಾರಣಕ್ಕೆ ತಾವು ಹೋದ ನೌಕೆಗೆ ಪರಲೋಕಯಾನ-೧ ಎಂಬ ಹೆಸರಿಟ್ಟಿದ್ದರು ಎಂಬುದು ಸಾಬೀತಾಗಿಬಿಟ್ಟಿದೆ.

ಇದೀಗ ಮಾನವರಹಿತವಾಗಿ ಹೋಗಿರುವ ಚಂದ್ರಯಾನ-೧ ನೌಕೆಯು, ಏನೂ ಅರಿಯದ ಮುಗ್ಧನಂತೆ ಅಲ್ಲಿನ ನೆಲದ ಫೋಟೋ ಅಂತ ಅಲ್ಲಿನ ರಸ್ತೆಗಳ ಫೋಟೋ ಕಳುಹಿಸಿದೆ. ಅದನ್ನು ಬೊ.ರ. ಬ್ಯುರೋದ ಅಜ್ಞಾನಿಗಳೆಲ್ಲರೂ "ಚಂದ್ರನ ಕುಳಿಗಳು ಚಂದ್ರನ ಕುಳಿಗಳು" ಎಂದೆಲ್ಲಾ ಅನರ್ಥೈಸಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ, ಈ ಚಿತ್ರಗಳು ಚಂದ್ರನಿಂದ ಬಂದಿದ್ದಲ್ಲ, ನಮ್ಮೂರಿನ ರಸ್ತೆಗಳ ಚಿತ್ರವನ್ನು ಯಾರೋ ಕುಹಕಿಗಳು ವಿಜ್ಞಾನಿಗಳಿಗೆ ಕಳುಹಿಸಿದ್ದಾರೆ ಎಂದೆಲ್ಲಾ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋಕ್ಕೇ ಇದರ ತನಿಖೆಯನ್ನೂ ಒಪ್ಪಿಸಲಾಗಿ, ಅದರ ತನಿಖೆ ಮುಂದುವರಿಸಲಾದಾಗ, ಅದು ಆರೋಪ ಎಂಬುದು ಸಾಬೀತಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಚಂದ್ರನ ಮೇಲ್ಮೈ ರೇಲು ಬಿಡೋ ಸಚಿವ ಲೋಲೋನ ಕಪಾಳದಂತೇ ಇದೆಯಲ್ಲ ಅಂದುಕೊಂಡಿದ್ದೆ. ನಿಮ್ಮ ವ-ರದ್ದಿ ಓದಿದ ಮೇಲೆ ಅಸತ್ಯ ಸಂಗತಿ ಏನೂಂತ ಗೊತ್ತಾಯ್ತು.

    ಪ್ರತ್ಯುತ್ತರಅಳಿಸಿ
  2. ಲಕ್ಷ್ಮಿ ಅವರೆ,
    ಏನೋ ಹೇಳಬೇಕೆಂದು ಬಂದು ಮರೆತುಬಿಟ್ಟು ಮರಳಿ ಹೋಗುವುದರ ಹಿಂದಿನ ರಹಸ್ಯ "ಕೊಲ್ಲುವ ಮೌನ" ಅಂತ ಪತ್ತೆ ಹಚ್ಚಿದ್ದೇವೆ. ಸೋ....
    ಸಾಕುಉಉಉಉಉಉಉಉಉಉಉಉ !!!!!!!!!!!!!!!!!!!!!!!!!!!!!!

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ನೀವಾದರೂ ಅಸತ್ಯವನ್ನು ನಂಬ್ತೀರಲ್ಲ ಎಂಬುದೇ ನಮಗೆ ಬೆಲೆ ಏರಿಕೆಯ ಬಿಸಿಯ ನಡುವೆಯೂ ಒಂದಿಷ್ಟು ಅಸಂತೋಷಕರವಾದ ವಿಚಾರ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D