(ಬೊಗಳೂರು ಫೂಕರ್ ಪ್ರಶಸ್ತಿ ಬ್ಯುರೋದಿಂದ)
ಬೊಗಳೂರು, ಅ.20- ಈ ದೇಶದಲ್ಲಿದ್ದುಕೊಂಡು ದೇಶವನ್ನೇ ದೂರುತ್ತಿರುವವರಿಗೇ (ಅಲ್ಲಲ್ಲ... ದೇಶದ ಹುಳುಕನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಲು ಸಲಹೆ ನೀಡುವವರಿಗೆ !) ಫೂಕರ್ ಪ್ರಶಸ್ತಿ ದೊರೆಯುತ್ತದೆ ಎಂಬುದಕ್ಕೆ ನಿದರ್ಶನವಾಗಿರುವ ಅಂಧಮತಿ ಟಾಯ್ ಅವರು, ಬೊಗಳೆ ರಗಳೆ ಬ್ಯುರೋವನ್ನೇ ಪೋಲಿ-ಈಸರೊಂದಿಗೆ ಮಿಕ್ಸ್ ಮಾಡುತ್ತಿರುವುದು ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳನ್ನು ತೀವ್ರವಾಗಿ ಕೆರಳಿಸಿದೆ.ಹೀಗಾಗಿ ಅವರನ್ನೇ ಹಿಡಿದು ತಂದು ಬೊಗಳೂರಿನ ಜನತೆಯ ಎದುರು ಸಾರಾ ಸಗಟಾಗಿ ಸಂದರ್ಶಿಸಲಾಯಿತು.
ನಿಮಗ್ಯಾರು ಕೊಟ್ಟರು ಫೂಕರ್ ಪ್ರಶಸ್ತಿ?
* ನಮಗ್ಯಾರಾದರೂ ಕೊಡಬೇಕೂಂತಾನೇ ಎಲ್ಲಿಯಾದರೂ ರೂಲ್ಸ್ ಇದೆಯಾ? ನಾವು ಬುದ್ಧಿ ಇರುವ ಜೀವಿಗಳು. ಇಂಥದ್ದೆಲ್ಲವೂ ನಮಗೇ ಸಲ್ಲಬೇಕು. ಯಾಕೆಂದರೆ ನಾವು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ, ದೇಶದ ವ್ಯವಸ್ಥೆ ವಿರುದ್ಧ ಸಿಡಿದೇಳುತ್ತೇವೆ. ನಾವು ಉಟ್ಟು ಓರಾಟಗಾರರು.
ನೀವೇಕೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯಬೇಕೂಂತ ವಾದಿಸ್ತೀರಾ?
* (ವರದ್ದಿಗಾರರನ್ನು ಪಕ್ಕಕ್ಕೆ ಕರೆದು ಕಿವಿಯಲ್ಲಿ...) ರೀ... ಇದ್ರಲ್ಲಿ ಏನಾದರೂ "ನನ್ನ ಹೇಳಿಕೆ ತಿರುಚಲಾಗಿದೆ" ಅಂತ ಹೇಳೋ ಅಂಶವೇನಾದ್ರೂ ಇದೆಯೇ? ಸ್ವಲ್ಪ ನನ್ನ ಹಿಂದಿನ ಸ್ಟೇಟ್‌ಮೆಂಟ್‌ನ ಪುಟ ತಿರುಗಿಸಿ ನೋಡಿ....
ಇಲ್ಲ... ಇಲ್ಲ... ನೀವು ಸ್ಪಷ್ಟವಾಗಿಯೇ ಹೇಳಿದ್ದೀರಿ....ಕಾಶ್ಮೀರ ಸ್ವತಂತ್ರ ಆಗ್ಬೇಕೂಂತ... ಹೇಳಿ ಯಾಕೆ?
* ಉಫ್... (ಜೋರಾಗಿಯೇ) ಇಲ್ಲಪ್ಪ ಹಾಗೇನಿಲ್ಲ.... ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆತರೆ ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ಉಗ್ರವಾದ ಚಟುವಟಿಕೆಗಳೆಲ್ಲಾ ನಿಲ್ಲಬಹುದು. ಭಾರತೀಯರು ನೆಮ್ಮದಿಯಿಂದ ಇರಬಹುದು.
ಓಹ್... ನೀವು ಭಾರತೀಯರು ಅಂತ ಹೇಳಿ ಕೋಮುವಾದವನ್ನು ಉಲ್ಲೇಖಿಸಿದಂತಾಗಿದೆಯಲ್ಲವೇ?
* ಓಹ್... ನಾವು ಹೇಳಬೇಕಾದ ವಿಷಯವನ್ನು ನೀವೇ ಹೇಳಿ ಸಂದರ್ಶನಕ್ಕೇ ಅಪಮಾನ ಮಾಡಿದ್ದೀರಿ. ಇರ್ಲಿ ಬಿಡಿ... ನೆನಪಿಸಿದ್ದಕ್ಕೆ ನಿಮಗೊಂದು ದೊಡ್ಡ ಮುಲಾಂ... ಅಲ್ಲಲ್ಲ ಸಲಾಂ. ನೋಡಿ. ನಮ್ಮಲ್ಲಿ ಭಾರತೀಯರು ಅಂದರೆ ಕೋಮುವಾದಿಗಳು ಅಂತ ಹೇಳಿದ ಹಾಗಾಗುತ್ತದೆ. ಅಥವಾ ಹಾಗಂತ ಹೆಚ್ಚಿನವರ ಕಿವಿಗೆ ಕೇಳಿಸುತ್ತದೆ. ಅಮೆರಿಕ, ವ್ಯಾಟಿಕನ್‌ಗಳೆಲ್ಲವೂ ಸದ್ದು ಮಾಡಲಾರಂಭಿಸುತ್ತವೆ. ಯಾಕೆಂದರೆ ಭಾರತದಲ್ಲಿರೋರು ಭಾರತೀಯರೇ ಆಗಿರ್ಬೇಕಲ್ವಾ... ಹೀಗಾಗಿ ಭಾರತೀಯರನ್ನು ಅಲ್ಪ ಸಂಖ್ಯಾತರು ಮತ್ತು ಬಹುಸಂಖ್ಯಾತರು ಅಂತ ಡಿವೈಡ್ ಮಾಡಿಯೇ ಹೇಳಬೇಕಾಗುತ್ತದೆ. ಇಲ್ಲವಾದಲ್ಲಿ ಒಂದು ಬಗೆಯ ಸಂಖ್ಯಾತರಿಗೆ ನಾವು ವಿಶೇಷ ಸವಲತ್ತು ಎಲ್ಲಾ ಕೊಡಿಸುವುದು ಹೇಗೆ? ನಮ್ಮ ರಾಜಕಾರಣಿಗಳು ಓಟಿಗಾಗಿ ಆಶ್ರಯಿಸುವುದಾದರೂ ಯಾರನ್ನು? ಇಲ್ಲಿ ಒಂದಿಡೀ ಸಮುದಾಯದ ಸಮಸ್ಯೆಯ ಪ್ರಶ್ನೆ ಇದೆ. ಒಂದು ದೇಶದ ಸರಕಾರದ ಪ್ರಶ್ನೆ ಇದೆ. ಹೀಗೆಲ್ಲಾ ಇರುವಾಗ ನಾವು ಒಂದು ಸಮುದಾಯವನ್ನು ಮಾತ್ರವೇ ಬೆಂಬಲಿಸಬೇಕಾಗಿರೋದು ನಮ್ಮ ಧರ್ಮ. ಆದರೆ, ಬೇರೆಯವರು ಮತ್ತೊಂದು ಸಮುದಾಯವನ್ನು ಬೆಂಬಲಿಸಿದರೆ ಖಂಡಿತವಾಗಿಯೂ ಅದು ಕೋಮುವಾದ ಅಂತ ಇಡೀ ಜಗತ್ತಿಗೇ ಗೊತ್ತು.
ಮತ್ತೀಗ ನೀವು ನಮ್ಮ ವಿರುದ್ಧವೇ... ಅಂದರೆ ಮಾಧ್ಯಮದವರು ಅಧಮರಾಗಿದ್ದಾರೆ, ಪೊಲೀಸರ ಜೊತೆ ಸೇರಿಕೊಂಡಿದ್ದಾರೆ ಅಂತೆಲ್ಲಾ ಬೊಗಳೆ ಬಿಡ್ತಾ ಇದ್ದೀರಲ್ಲ?
* ಯಾರ್ರೀ ಹೇಳಿದ್ದು ಅಲ್ಲಾಂತ...??? ನೋಡಿ... ಈಗ ನೀವೇ ನಮ್ಮನ್ನು ಸಂದರ್ಶನ ಮಾಡ್ತಾ ಇದ್ದೀರಿ. ನಮ್ಮಂಥವರನ್ನೆಲ್ಲಾ ನೀವಾಗಿಯೇ ಸಂದರ್ಶನ ಮಾಡ್ತಾ ಇದ್ದೀರಿ ಅಂದ್ಮೇಲೆ, ಬಹುಶಃ ನೀವು ಅಧಮರೇ ಇರಬೇಕು. ಯಾರೋ ಪೊಲೀಸರೇ ನಿಮ್ಮನ್ನು ಛೂ ಬಿಟ್ಟಿರಬೇಕು.
ಫೂಕರ್ ಪ್ರಶಸ್ತಿಯ ಬಳಿಕ ನಿಮ್ಮ ಸದ್ದೇ ಕೇಳುತ್ತಿರಲಿಲ್ಲ. ಇತ್ತೀಚೆಗೆ ಕಾಶ್ಮೀರ ಸ್ವಾತಂತ್ರ್ಯ ಘೋಷಿಸಿ ಸುದ್ದಿಯಾದಿರಿ. ಯಾಕೆ ಹೀಗೆ ಆಗಾಗ್ಗೆ ನಾಪತ್ತೆಯಾಗೋದು?
* ಇಲ್ಲಪ್ಪ... ಹಾಗೇನಿಲ್ಲ... ನಮಗೆ ಮಾಡಲು ಸಾಕಷ್ಟು ಹೋರಾಟಗಳು ಇರುತ್ತವೆ. ಅದು ದಿಢೀರ್ ಆಗಿ ನಮ್ಮ ತಲೆಗೆ ಹೊಳೆಯಬೇಕಷ್ಟೇ. ಇತ್ತೀಚೆಗೆ ಜಾಮಿಯಾ ನಗರ ಎನ್ಕೌಂಟರ್ ವಿಷಯ ಒಂದು ತಡವಾಗಿ ಹೊಳೆದಿದೆ. ಸೋ... ಎಲ್ಲದಕ್ಕೂ ಟೈಮ್ ಅಂತ ಇರುತ್ತೆ. ನಾವು ಟೈಮ್ ನೋಡಿ ಕೆಸರಿಗೆ ಕಲ್ಲು ಎಸೀತೀವಿ. ಉಳಿದ ಸಮಯದಲ್ಲೆಲ್ಲಾ... ಏನು ಸಿಗುತ್ತದೆ ಅಂತ ಯೋಚಿಸ್ತಾ ಇರ್ತೀವಿ. ಹೀಗೇ ದೇಶದ ಬಗ್ಗೆ ನೆಗೆಟಿವ್ ವಿಷಯಗಳನ್ನು ಬರೆದ್ರೆ ಖಂಡಿತವಾಗಿಯೂ ಮತ್ತೊಂದು ಫೂಕರ್ ಪ್ರಶಸ್ತಿಯೂ ದೊರೆಯಬಹುದೆಂಬ ಆಸೆ ನನಗಿಲ್ಲವಾದರೂ, ದುರಾಸೆ ಇದೆ. ಹೀಗಾಗಿ ನಿಮಗೊಂದು ನಮಸ್ಕಾರ... ಮತ್ತೇನು ಹೇಳಿಕೆ ನೀಡಬಹುದೂಂತ ಯೋಚಿಸಬೇಕು!
6 ಕಾಮೆಂಟ್‌ಗಳು
ಈ ವರ್ಷದ ಫೂಕರ್ ಪ್ರಶಸ್ತಿಯನ್ನು ಸಮಾಜ ಕಲ್ಯಾಣ ಮಾಡುತ್ತಿರುವ ಸಂಸ್ಥೆಗೆ ನೀಡಬೇಕೆಂದು ನಿರ್ಧರಿಸಿ, ಯಾವುದಾದರೂ ಉತ್ತಮ ಸಂಸ್ಥೆಯನ್ನು ಅನುಮೋದಿಸಲು ನನ್ನನ್ನು ಕೇಳಿದ್ದಾರೆ (ಇದು ಕಿವಿಮಾತು - ಗಟ್ಟಿಯಾಗಿ ಹೇಳುವಂತಿಲ್ಲ - ಫೂಕರ್ ಪ್ರಶಸ್ತಿಯನ್ನು ಅನೌಂನ್ಸ್ ಮಾಡುವವರೆಗೆ ನಾನು ಮನೆಯಿಂದ ಹೊರಹೋಗುತ್ತಿಲ್ಲ - ತಮ್ಮ ತಮ್ಮ ಸಂಸ್ಥೆಗಳ ಹೆಸರನ್ನು ನಮೂದಿಸಬೇಕೆಂದು ಕೇಳಿಕೊಳ್ಳಲು, ನಮ್ಮ ಮನೆ ಮುಂದೆ ಜನಗಳ ಮಂದೆಯೇ ಮಂದೆ). ನೀವು ನಮ್ಮವರೂ ಅಂತ ನಿಮಗೇ ಕೊಡಿಸುವೆ - ಎಷ್ಟು ಕೊಡ್ತೀರಿ ಪಕ್ಕಕ್ಕೆ ಬಂದು ತಿಳಿಸಿ :D
ಪ್ರತ್ಯುತ್ತರಅಳಿಸಿhmm...
ಪ್ರತ್ಯುತ್ತರಅಳಿಸಿಅಣ್ಣಾ,
ಪ್ರತ್ಯುತ್ತರಅಳಿಸಿಅಂಧಮತಿಯನ್ನು encounter ಮಾಡಿದ್ದಕ್ಕಾಗಿ ನಿಮಗೆ
ಮುಲಾಮ್!
ಈ ಸಲ ಗಂದೀ ರಾಹು ಎನ್ನುವ ಭಾರತೀಯ ಅತ್ಯಲ್ಪಸಂಖ್ಯಾತ ಹುಡುಗನಿಗೆ ಫೂಕರ್ ಪ್ರಶಸ್ತಿಯನ್ನು ಕೊಡುತ್ತಿದ್ದಾರಂತೆ. ಆತ ಬರೆದ ಕಾದಂಬರಿಯ ಹೆಸರು:
"ಅಣುಬಂಧದಿಂದ ಕಲಾವತಿಯ ಮನೆಯಲ್ಲಿ ಪುಕ್ಕಟೆ ವಿದ್ಯುತ್!"
ತಿರುಕನ ಕನಸಿನವರೆ,
ಪ್ರತ್ಯುತ್ತರಅಳಿಸಿಮರಳಿ ನೀವು ಹಳಿಗೆ ಮರಳಿದ್ದು ಕೇಳಿ ನಮಗೆ ಆಘಾತವಾಗಿದೆ. ಇಷ್ಟು ದಿನ ಎಲ್ಲಿ ಹೋಗಿದ್ದಿರಿ ಎಂಬುದು ಈಗ ಗೊತ್ತಾಯಿತು. ಫೂಕರ್ ಪ್ರಶಸ್ತಿಗೆ ಪರದಾಡುತ್ತಾ ಇದ್ದಿರಿ ಅಂತ ನಮ್ಮ ಸಂತಾಪಕರು ಪತ್ತೆ ಹಚ್ಚಿದ್ದಾರೆ.
ಲಕ್ಷ್ಮಿ ಅವರೆ,
ಪ್ರತ್ಯುತ್ತರಅಳಿಸಿಇದು ನಿಮ್ಮ ಕೊಲ್ಲುವ ಮೌನದ ಆರಂಭಿಕ ಭಾಗವೇ? hmmm, hmm, hm, h, . - ಹೀಗಂತ ನಿಮ್ಮ ಕಾಮೆಂಟುಗಳು ಇಳಿತಾಯವಾಗುತ್ತವೆಯೇ?
ಸುನಾಥರೆ,
ಪ್ರತ್ಯುತ್ತರಅಳಿಸಿಕಲಾವತಿ ಮನೆಯಲ್ಲಿ ಅಣುಬಂಧದಿಂದಲೇ ಕಿತಾಪತಿ ಆಗಿದೆ ಎಂಬುದು ಕೋಲಸಭೆಯಲ್ಲೇ ಗೊತ್ತಾಗಿಬಿಟ್ಟಿದೆ. ಇದು ಕೂಡ ಗರೀಬೋಂ ಕೋ ಹಠಾವೋ ಆಂದೋಲನದ ಭಾಗವಾಗಿರುವುದರಿಂದ ಇದಕ್ಕೆ ಓಟಿನ ಪ್ರಾಮುಖ್ಯತೆ ನೀಡಬಹುದು.
ಏನಾದ್ರೂ ಹೇಳ್ರಪಾ :-D