(ಬೊಗಳೂರು ಒಡೆದ ಹೃದಯಗಳಾ ಬ್ಯುರೋದಿಂದ)
ಬೊಗಳೂರು, ಅ.8- ಹೆಚ್ಚಾಗಿ ಕಾಲೇಜು ಪರಿಸರದಲ್ಲಿ ಕಂಡುಬರುತ್ತಿರುವ ಹೃದ್ರೋಗಿಗಳಲ್ಲಿ ಆಸೆಯ ಚಿಗುರೊಡೆದಿದೆ ಮತ್ತು ಭರವಸೆಯ ಮೊಳಕೆಯೊಡೆದಿದೆ ಹಾಗೂ ಬತ್ತಿ ಹೋದ ಜೀವನದ ಮೇಲಿನ ಆಸೆ ಮತ್ತೆ ಚಿಗಿತುಕೊಂಡಿದೆ. ಇದಕ್ಕೆ ಕಾರಣವೆಂದರೆ ಇಲ್ಲಿ ಪ್ರಕಟವಾಗಿರುವ ವರದಿ.ಹೃದಯ ಒಡೆದುಕೊಂಡೋ, ಒಡೆಸಿಕೊಂಡೋ ಗೋಳೋ ಎಂದು ಪರಿತಪಿಸುತ್ತಿದ್ದ ಕಾಲ್-Age ವಿದ್ಯಾರ್ಥಿ ಬಳಗವು ಇದೀಗ ನೆಮ್ಮದಿಯ ನಿಟ್ಟುಸಿರುಬಿಟ್ಟಿತ್ತು, ಕೊನೆಗೂ ತಮ್ಮ ಮೊರೆ ಆ ದೇವರಿಗೆ ಕೇಳಿಸಿತಲ್ಲಾ ಎಂದು ಹರ್ಷಚಿತ್ತರಾಗಿ ಬೊಗಳೂರು ಬೊಗಳೆ ಬ್ಯುರೋಗೆ ಬಂದು ಸಿಹಿತಿಂಡಿ ಹಂಚಿ ಹೋಗಿದ್ದಾರೆ.
ತಮ್ಮ ಹೃದಯದ ಮೊರೆಯನ್ನು ಕೇಳುವವರು ಯಾರೂ ಇಲ್ಲ ಎಂದೆಲ್ಲಾ ಪರಿತಪಿಸಿಕೊಂಡು, ಆಗಾಗ್ಗೆ ಬ್ಲಾಗಿನಲ್ಲಿ ವಿರಹ ಗೀತೆಯನ್ನು ಗೀಚುತ್ತಲೋ, ಪತ್ರಿಕಾ ಕಚೇರಿಗಳಿಗೆ. ಬೊಗಳೆ ಬ್ಯುರೋಗೆಲ್ಲಾ ಕವನಗಳನ್ನು ಗೀಚಿ ಕಳುಹಿಸಿಯೋ, ಆಯಾ ಕಚೇರಿಗಳ ಬಕೆಟ್ ತುಂಬಿಸುತ್ತಿದ್ದವರೆಲ್ಲರೂ ಇದೀಗ ಆನಂದ ಬಾಷ್ಪ ಹರಿಸತೊಡಗಿದ್ದಾರೆ.
ಹೀಗಾಗಿ ಇನ್ನು ಮುಂದೆ ಬ್ಲಾಗುಗಳಲ್ಲೆಲ್ಲವೂ ಒತ್ತರಿಸಿ ಬರುವ ವಿ-ರಸ ಗೀತೆಗಳ ಬದಲು ಸ-ರಸ ಗೀತೆಗಳನ್ನು ಬಿತ್ತರಿಸಲಿವೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.
ಇದೇ ಕಾರಣಕ್ಕೆ, ಪಡ್ಡೆ ಹುಡುಗರ ಕಾಟ ಜಾಸ್ತಿಯಾಗಿದೆಯೆಂದು ಹುಡುಗಿಯರೂ, ಪಡ್ಡೆ ಹುಡುಗಿಯರ ಕಾಟ ಹೆಚ್ಚಾಗಿದೆ ಅಂತ ಪಡ್ಡೆ ಹುಡುಗಿಯರೂ ಬೊಗಳೂರು ಬ್ಯುರೋದೆ ದೂರುವುದನ್ನು ಮರೆಯಲಿಲ್ಲ.
ಇದರ ಹಿಂದಿನ ಕಾರಣ ಪತ್ತೆ ಹಚ್ಚಲು ಹೊರಟಾಗ ಬಯಲಾದ ಅಂಶವೆಂದರೆ, ವೈದ್ಯರು ಒಡೆದು ಹೋದ ಹೃದಯದ ಚೂರುಗಳನ್ನು ಜೋಡಿಸಿ, ಹೃದಯಕ್ಕೆ ಪುನಶ್ಚೇತನ ನೀಡುತ್ತಾರೆಂಬ ಭರವಸೆಯಲ್ಲಿ, ಹಲವು ಬಾರಿ ಹೃದಯ ಒಡೆಸಿಕೊಳ್ಳಲು, "ಒಮ್ಮೆ ಒಡೆದರೆ ಹೋಗಲಿ, ಸರಿಪಡಿಸಲು ವೈದ್ಯರಿದ್ದಾರೆ" ಎಂಬ ಭಾವನೆ ಬೆಳೆಸಿಕೊಂಡಿರುವುದು!
4 ಕಾಮೆಂಟ್‌ಗಳು
ಸೊಂಪಾದಕರೆ,
ಪ್ರತ್ಯುತ್ತರಅಳಿಸಿಬೊಗಳೂರು ಒಡೆದ ಹೃದಯಾಲಯದಲ್ಲಿ ನಡೆದ ಘಟನೆಯನ್ನು ನಿಮ್ಮ ನಜರಿಗೆ ತರುವದು ನನ್ನ (ಕು)ಕರ್ತವ್ಯವೆಂದು ಭಾವಿಸಿದ್ದೇನೆ.
ಶ್ರೀಮಾನ್ ಯಡ್ಡಿ ಹಾಗೂ ಶ್ರೀಮಾನ್ ಕೇಡಿಶಿಯವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವಸರದಲ್ಲಿ, ಇವರ ಹೃದಯ ರಿಪೇರಿ ಮಾಡಿ ಅವರಿಗೂ, ಅವರದನ್ನು ಇವರಿಗೂ ಜೋಡಿಸಲಾಯಿತು.
ಈಗ ಶ್ರೀಮಾನ್ ಯಡ್ಡಿಯವರು ಸೋನ್ಯಾಳ ಹಿಂದೆ ಸಿಳ್ಳೆ ಹೊಡೆಯುತ್ತ ಸಾಗಿದ್ದಾರೆ. ಕೇಡಿಶಿಯವರು ಶೋಭನಾಳ ಸೆರಗು ಹಿಡಿದಿದ್ದಾರೆ.
ಈ ಶಸ್ತಚಿಕಿತ್ಸೆಯನ್ನು 'ಆಪರೇಶನ್ ಕಮಾಲ್'ಎಂದು ವೈದ್ಯಕೀಯ ವಲಯದಲ್ಲಿ ಬಣ್ಣಿಸಲಾಗುತ್ತಿದೆ.
ಇತಿ ನಿಮ್ಮ ವ-ರದ್ದಿಗಾರ.
hmmph !
ಪ್ರತ್ಯುತ್ತರಅಳಿಸಿಸುನಾಥರೆ,
ಪ್ರತ್ಯುತ್ತರಅಳಿಸಿನಮ್ಮ ಒಡೆದ ಹೃದಯಾಲಯದಲ್ಲಿ ಅಂಥವರ ಕಲ್ಲು ಹೃದಯಗಳನ್ನೆಲ್ಲಾ ತಂದಿದ್ದೇ ಈ ರೀತಿ ತೇಪೆ ಹಚ್ಚಲು ಕಾರಣವಾಗಿದ್ದು. ಆದರೆ ಮೊನ್ನೆ ಮೈಸೂರಿನಲ್ಲಿ ನಡೆದ ದಸರಾ ಜಂಬೂ ಸವಾರಿಯು "ಶೋಭಾ"ಯಾತ್ರೆಯಾಗಿದ್ದರ ಬಗ್ಗೆ ತನಿಖೆ ಮಾಡತೊಡಗಿದ್ದೇವೆ.
ಲಕ್ಷ್ಮೀ ಅವರೆ,
ಪ್ರತ್ಯುತ್ತರಅಳಿಸಿಯಾವುದೋ ಸಂಕೇತಾಕ್ಷರಗಳು ಇಲ್ಲಿ ಬಿದ್ದು ಹೋಗಿವೆ. ಅವುಗಳಿಗೆ ಪ್ರತಿಕ್ರಿಯಿಸದಂತೆ ಮಾಡಿದ್ದೀರಿ. ಧನ್ಯವಾದಗಳು :))
ಏನಾದ್ರೂ ಹೇಳ್ರಪಾ :-D