ಬೊಗಳೆ ರಗಳೆ

header ads

ಉಗ್ರರಿಗೂ ಮತದಾನದ ಹಕ್ಕು: ಕೇಂದ್ರ ಚಿಂತನೆ

(ಬೊಗಳೂರು ಓಟಿನ ಬ್ಯಾಂಕು ಬ್ಯುರೋದಿಂದ)
ಬೊಗಳೂರು, ಸೆ.29- ಭಯೋತ್ಪಾದಕರಿಗೂ ಮತದಾನ ಹಕ್ಕು ನೀಡಲು ಕೇಂದ್ರ ಗೃಹದೊಳಗಿರುವ ಸಚಿವಾಲಯಕ್ಕೆ ಶಾಸನ ರೂಪಿಸಲು ತೀವ್ರ ಒತ್ತಡ, ಸಲಹೆ, ಮನವಿ ಇತ್ಯಾದಿಗಳು ಕೇಳಿಬರುತ್ತಿರುವುದು ಬೊಗಳೆ ರಗಳೆ ಬ್ಯುರೋದ ವ-ರದ್ದಿಗಾರರ ಕಿವಿಗೆ ಬಿದ್ದಿದೆ.

ಇದಕ್ಕೆ ಮೂಲ ಪ್ರೇರಣೆ ದುರ್ಜನ ಸಿಂಗರು ಕೈಗೊಳ್ಳುತ್ತಿರುವ ನಿರ್ಧಾರಗಳು. ತಮ್ಮ ಓಟಿನ ಬ್ಯಾಂಕುಗಳು ಇತ್ತೀಚೆಗೆ ಜೈಲು ಸೇರುತ್ತಿರುವುದರಿಂದ ತೀವ್ರ ಕಳವಳಗೊಂಡಿರುವ ಸರಕಾರವು, ಇನ್ನು ಮುಂದೆ ಚುನಾವಣೆಯಲ್ಲಿ ಜಯಿಸುವುದಾದರೂ ಹೇಗೆ ಎಂದು ಚಿಂತಾಕ್ರಾಂತವಾಗಿ ಕುಳಿತಿದ್ದಾಗ, ಅರ್ಜುನನಿಗೆ ಅಭಿಮನ್ಯುವಿನಿಂದ ದೊರೆತ ಮಾದರಿಯ ಸಲಹೆಯೊಂದು ಛಕ್ಕಂತ ಸರಕಾರದ ಅಂಗಳದಲ್ಲಿ ಬಂದು ಬಿದ್ದಿದೆ.

ಸ್ವತಃ ದುರ್ಜನ ಸಿಂಗರೇ ಇದರಿಂದ ಕಕ್ಕಾಬಿಕ್ಕಿಯಾಗಿ, ಈ ಸಲಹೆ ಬಿದ್ದದ್ದೆಲ್ಲಿಂದ ಎಂದು ಸಾವರಿಸಿಕೊಳ್ಳುವಷ್ಟರಲ್ಲಿ, ಶಾಸನ ರೂಪಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿವೆ.

ಇದರ ನಡುವೆಯೇ, ತಮ್ಮ ಗೃಹದ ಹೊರಗೆ ಮತ್ತೆ ಮತ್ತೆ ಪಟಾಕಿಗಳು ಸಿಡಿಯುತ್ತಿರುವುದು ಗೃಹದ ಸಚಿವರ ಗಮನಕ್ಕೆ ಬರುವ ವೇಳೆಗೆ ಆ ಸುದ್ದಿಯ Expiry date ಮುಗಿದಿರುತ್ತದೆ. ಹೀಗಾಗಿ, ಅವರು ಗೃಹದ ಒಳಗಿಂದ ಹೊರಗೆ ಬಂದು, "ಹೌದಾ, ಸಿಡಿದದ್ದು ಪಟಾಕಿಯೇ? ಬಹುಶಃ ದೀಪಾವಳಿ ಸಮೀಪಿಸುತ್ತಿದೆಯಲ್ಲ, ಅದೇ ಇರಬೇಕು" ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಂದಲೇ ಸ್ಪಷ್ಟನೆ ಕೇಳಿದ್ದಾರೆ.

ನಾಲ್ಕು ಹೆಜ್ಜೆ ಮುಂದುವರಿದು ಮಾತನಾಡಿದ ಅವರು, ತಮ್ಮ ಕಾರಿನತ್ತ ತಲುಪಿ, "ನಾವು ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕು. ಪಾಪ, ಅವರು ಈ ದೇಶದಲ್ಲಿ ಅದೆಷ್ಟು ಭೀತಿಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ನೆರೆಯ ಪಾಕಿಸ್ತಾನದಲ್ಲೂ ನಮ್ಮಲ್ಲಿದ್ದಂಥದ್ದೇ ಸಮಸ್ಯೆಯಿದೆ. ನಾವಂತೂ ಭಾರತದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟಿಬದ್ಧರಾಗಿದ್ದೇವೆ. ಅವರಿಗೆ ನಾವು ರಕ್ಷಣೆ ಕೊಡದಿದ್ದರೆ, ಬೇರೆ ಯಾರು ಕೊಡುತ್ತಾರೆ? ಉಳಿದ ಎಲ್ಲ ಪಕ್ಷದವರೂ ಭಾರತದಲ್ಲಿರುವವರ ಪರವಾಗಿಯೇ ಮಾತನಾಡುತ್ತಿವೆ. ನಾವಾದರೂ ಇವರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಡ್ವೇ" ಎಂದು ಪ್ರಶ್ನಿಸಿದ್ದಾರೆ.

ಉಗ್ರಗಾಮಿಗಳೆಲ್ಲರನ್ನೂ ಭಯೋತ್ಪಾದಕರೆಂದು ದೂರವಿಡಲಾಗುತ್ತದೆ. ಅವರಿಗೆ ಮತದಾನದ ಹಕ್ಕನ್ನೂ ನಿರಾಕರಿಸುತ್ತಿರುವುದು ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಸಂಗತಿ. ಪಟಾಕಿ ಸ್ಫೋಟಿಸಿದ ಕೆಲವರನ್ನಂತೂ ಜೈಲಿಗೆ ತಳ್ಳಲಾಗುತ್ತಿದೆ. ಅವರೂ ಮಾನವರೇ ಅಲ್ಲವೇ? ಅವರಿಗೂ ಮಾನವೀಯತೆ ತೋರಿಸಬೇಡವೇ? ಓಟಿನ ಸಮಯದಲ್ಲಾದರೂ ಅವರಿಗೆ ಒಂದಷ್ಟು ಕ್ಷಣಗಳ ಕಾಲ ಹೊರಗೆ ಬಂದು ಮತ ಚಲಾಯಿಸುವಂತಾಗಲು, ಅದಕ್ಕೆ ಪೂರಕವಾದ ಕಾನೂನು ನಮ್ಮ ಮುಂದಿದೆ ಎಂದು ಕೇಂದ್ರದ ವಕ್ತಾರರು ಬೇರೆಲ್ಲಾ ಪತ್ರಿಕೆಗಳನ್ನು ಬಿಟ್ಟು, ಬೊಗಳೆ ರಗಳೆ ಬ್ಯುರೋದ ರದ್ದಿಗಾರರಿಗೂ ತಿಳಿಸದೆ ಪತ್ರಿಕಾ ಗೋಷ್ಠಿಯಲ್ಲಿ ವಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. > ಅರ್ಜುನನಿಗೆ ಅಭಿಮನ್ಯುವಿನಿಂದ ದೊರೆತ ಮಾದರಿಯ ಸಲಹೆಯೊಂದು

    ಸಲಹೆಯೇನೋ ಚೆನ್ನಾಗಿರಬಹುದು. ಅಭಿಮನ್ಯುವಿನ ಸಲಹೆ ದೊರೆತುದು ಅರ್ಜುನನಿಗಲ್ಲ, ಧರ್ಮರಾಯನಿಗೆ. ಚಿಂತೆಯಿಲ್ಲ, ಕೊನೆಗೆ ಪರಿಣಾಮ ಏನಾಯಿತು ಎಂಬುದು ಎಲ್ಲರಿಗೆ ತಿಳಿದ ವಿಚಾರ. ದುರ್ಜನರು ಅಭಿಮನ್ಯುವಿನಂತೆ ಆದಷ್ಟು ಬೇಗನೆ ಕೊನೆ ತಲುಪಲಿ ಎಂದು ಆಶಿಸುತ್ತೇವೆ.

    -ಪಬ್

    ಪ್ರತ್ಯುತ್ತರಅಳಿಸಿ
  2. ಪಬ್ಬಿಗರೆ,
    ನೀವು ತಪ್ಪು ಎತ್ತಿ ತೋರಿಸಿ ನಮ್ಮ ಅಸತ್ಯಕ್ಕೂ ಅವಮಾನ ಮಾಡಿದ್ದೀರಿ. ಆದರೆ ನಮ್ಮ ಮತ್ತೊಂದು ಒಣವಾದದ ಪ್ರಕಾರ, ಅಭಿಮನ್ಯುವು ಸಮಸಪ್ತಕರೊಡನೆ ಹೋರಾಡುತ್ತಿದ್ದ ಅರ್ಜುನನಿಗೆ ಮೊಬೈಲ್ ಮೂಲಕ ಸಂಪರ್ಕಿಸಿರಬಹುದೇ? :)

    ಪ್ರತ್ಯುತ್ತರಅಳಿಸಿ
  3. ಅಸತ್ಯಕ್ಕೆ ಮಾನವೇ ಇಲ್ಲವಲ್ಲ. ಅದಕ್ಕೆ ಅವಮಾನ ಮಾಡಲು ಹೇಗೆ ಸಾಧ್ಯ?

    -ಪಬ್

    ಪ್ರತ್ಯುತ್ತರಅಳಿಸಿ
  4. ಮತದಾನದ ಹಕ್ಕಷ್ಟೇ ಸಾಕೆ? ಈ ಸಲದ ಲೋಕಸಭೆ ಚುನಾವಣೆಗೆ ಅಫಝಲ್ ಗುರುವಿಗೆ 'ಕೈ'ಪಕ್ಷದಿಂದ ಟಿಕೆಟ್ ಸಿಗುವದಂತೆ!
    ಪರಲೋಕಕ್ಕೇ ಟಿಕೆಟ್ ತೆಗೆಸಿದವನಿಗೆ ಲೋಕಸಭೆಗಾಗಿ ಟಿಕೆಟ್!

    ಪ್ರತ್ಯುತ್ತರಅಳಿಸಿ
  5. ಪಬ್ಬಿಗರೇ,
    ಈಗ ಹೇಳ್ತಿರೋ ಸಂಗತಿ ಮಾತ್ರ ಸತ್ಯ. ನಮ್ಮನ್ನಾಳುವವರೆಲ್ಲರೂ ಎಷ್ಟು ಸಾಧ್ಯವೋ ಅಷ್ಟು ಅವಮಾನ ಮಾಡುವುದರಲ್ಲಿ, ಮಾಡಿಸಿಕೊಳ್ಳುವುದರಲ್ಲಿ ನಿರತರಾಗಿರುವಾಗ ಅಸತ್ಯಕ್ಕೆ ಮಾನ ಇಲ್ಲದಿದ್ದರೂ ಅದಕ್ಕೂ ಅವಮಾನ ಮಾಡುವಷ್ಟು ನಿಷ್ಣಾತರಾಗಿದ್ದಾರೆ.

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ಹೌದು "ಕೈ" ಎತ್ತಿದರಷ್ಟೇ ಟಾಟಾ ಮಾಡೋದು ಸಾಧ್ಯ. ಸಂಸತ್ತಿನಲ್ಲಿರೋರನ್ನೆಲ್ಲಾ "ಟಾಟಾ" ಮಾಡಲು ಆತ ಬಳಸಿದ್ದೂ ತನ್ನ ಕೈಯನ್ನೇ. ಇದೀಗ ಆ ಕೈ ಬಲಪಡಿಸಲು ಟಿಕೆಟ್ ನೀಡಲಾಗುತ್ತದೆ ಎಂಬ ನಿಮ್ಮ ವದಂತಿಯನ್ನು ನಮ್ಮ ಬ್ಯುರೋ ತನಿಖೆ ನಡೆಸಿ ಖಚಿತಪಡಿಸಿಕೊಂಡಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D