(ಬೊಗಳೂರು ನಿದ್ರೆಯಿಂದ ಎಚ್ಚೆತ್ತ ಬ್ಯುರೋದಿಂದ)
ಬೊಗಳೂರು, ಸೆ.23- ಬೊಗಳೂರಿನಿಂದ ಪರಾರಿಯಾಗಿದ್ದೇ ತಡ, ಮಂಗಳೂರು-ಬೆಂಗಳೂರುಗಳಲ್ಲಿ ದಾಳಿ-ಗಲಭೆಗಳ ನಡುವೆ ರಾಜಕೀಯ ದೊಂಬರಾಟ ಮೇರೆ ಮೀರುತ್ತಿರುವ ಹಂತ ತಲುಪಿದ ಸಂದರ್ಭದಲ್ಲಿ, ಈ ರಾಜಕೀಯ ದೊಂಬರಾಟಕ್ಕೆ ಮೂಲ ಪ್ರೇರಣೆಯೊಂದು "ಅದಲ್ಲ" ಅನ್ನಿಸಿಕೊಂಡಿದೆ.ಅದೆಂದರೆ, ದೊಂಬರಾಟಗಳಿಗೆ ಬಳಸುವ ಗೊಂಬೆಯು 'ಅದು ಅಲ್ಲ' ಎಂದು ಗಣಿ ಧಣಿಗಳು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ನಾವು ಇದುವರೆಗೆ ನಮ್ಮ ಕೈಯಲ್ಲಿರೋದು ಸಿಎಂ ಗೊಂಬೆ ಅಂತ ತಿಳಿದುಕೊಂಡಿದ್ದೆವು. ಆದರೆ ಅದು ಆಟವಾಡುತ್ತಿರುವ ರೀತಿ ನೋಡಿದರೆ, ಅದು ಕೈಗೊಂಬೆಯಲ್ಲ. ಚನ್ನಪಟ್ಟಣದ ಗೊಂಬೆಗಿಂತಲೂ ಶಾರ್ಪ್ ಆಗಿದೆ ಎಂದು ಗಣಿ ರೆಡ್ಡಿಗಳು ವಿಶೇಷವಾಗಿ ಬೆಂಗಳೂರಿಗೆ ಓಡಿಬಂದಿದ್ದ ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ಬ್ಯುರೋದ ತಂಡದ ಸಮಸ್ತ ಸಿಬ್ಬಂದಿಗೆ ಏಕಾಂತದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅವರೀಗ ಕೈಗೊಂಬೆಯಲ್ಲ. ಅವರ ಕೈಗಳನ್ನು ಕಟ್ಟಿ ಹಾಕಲಾಗಿರುವುದರಿಂದ ಅವರು ಕೈಕಟ್‌ಗೊಂಬೆ ಹಾಗೂ ಕಣ್ಣುಗಳಿಗೂ ಬಟ್ಟೆಕಟ್ಟಿರುವುದರಿಂದ ಕಣ್‌ಕಟ್ ಗೊಂಬೆ ಎಂಬುದು ನಮಗೀಗ ಅರಿವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಹಿತವನ್ನು ಬಲಿ ಕೊಡುವುದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದನ್ನು ಬಲಿ ಕೊಟ್ಟರೆ, ಅದು ಮುಂದಿನ ಪೀಳಿಗೆಗೆ ಉಳಿಯುವುದಾದರೂ ಹೇಗೆ ಎಂದು ಮರು ಸವಾಲು ಹಾಕಿದ ಅವರು, ಆದರೆ ಈ ಹಿತ-ಅಹಿತ ಬಗ್ಗೆ ಗಂಭೀರವಾಗಿ, ಮಾರಾಮಾರಿಯಾಗಿ, ಭೀಕರವಾಗಿ, ಭೀಭತ್ಸಕರವಾಗಿ, ಅಸಹ್ಯವಾಗಿ ಚರ್ಚೆಯಾಗಬೇಕಿದೆ ಎಂದು ಮಾತ್ರ ಸೇರಿಸುವುದನ್ನು ಮರೆಯಲಿಲ್ಲ.
ನಾವಿರೋವಾಗ ಯಾವುದೇ ರೀತಿಯ ಅಕ್ರಮಗಳನ್ನು ಬೇರೆಯವರು ಮಾಡುವುದನ್ನು ಸಹಿಸುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲವರು ಗುಸುಗುಸು ಎಂದು ಬೊಬ್ಬಿಟ್ಟಿದ್ದಾರೆ.
2 ಕಾಮೆಂಟ್‌ಗಳು
ಸಿ. ಎಮ್. ಅವರ ಗಂಟಲು ಕಟ್ಟಿದೆ ಎಂದು ಕೊಂಡಿದ್ದೆ.
ಪ್ರತ್ಯುತ್ತರಅಳಿಸಿಈಗ ನೋಡಿದರೆ ಕೈಕಟ್ಟು, ಕಾಲ್-ಕಟ್ಟು, ಕಣ್ಕಟ್ಟು ಎಂದು ಹೇಳುತ್ತಿದ್ದೀರಿ. ಅದಕ್ಕೇ ದಾಸರು ಹಾಡಿದ್ದು:
"ಗೊಂಬೆಯಾಟವಯ್ಯಾ......"
ಸುನಾಥರೆ,
ಪ್ರತ್ಯುತ್ತರಅಳಿಸಿಗಂಟಲು ಕೆಟ್ಟಿದ್ದು ಮಾತ್ರ, ಈಗಿನ ಎದುರಾಳಿ ಪಕ್ಷದವರ ಆಟ/ಪರಿಸ್ಥಿತಿ ನೋಡಿದ್ರೆ ಈ ಕೆಡುವಿಕೆಯು ತಲೆಯವರೆಗೂ ಹೋಗಬಹುದೆಂಬ ಗುಮಾನಿ ನಮ್ಮ ಇಲ್ಲದ ತಲೆಗೂ ಬಂದಿದೆ.
ಏನಾದ್ರೂ ಹೇಳ್ರಪಾ :-D