(ಬೊಗಳೂರು ತಾಳಿ ಕಟ್ ಬ್ಯುರೋದಿಂದ)
ಬೊಗಳೂರು, ಸೆ.8- ತಾಳಿ ಕಟ್ಟುವಾಗ ಸ್ವಲ್ಪ ತಾಳಿ ಎಂಬ ಹಿರಿಯರ ವಾಕ್ಯಕ್ಕೆ ಸೊಪ್ಪು ಹಾಕದ ಮಂದಿ, ಕರೆಂಟು ಹೋದ ಪರಿಣಾಮ, ಪಕ್ಕದಲ್ಲೇ ಗೋಣೊಡ್ಡಿದ ಮುತ್ತಜ್ಜಿಯರಿಗೆ ತಾಳಿ ಕಟ್ಟಿದ ಪ್ರಸಂಗವೊಂದು ಇಲ್ಲಿ ವ-ರದ್ದಿಯಾಗಿದೆ.ಇದಕ್ಕೆ ಕಾರಣವೆಂದರೆ, ಜಿಗಿಜಿಗಿ ಜನರಿಂದ ತುಂಬಿರುವ ವಿವಾಹ ಸಭಾಂಗಣದಲ್ಲಿ ತನ್ನ ಮರಿಮೊಮ್ಮಗಳಿಗೆ ಮದುವೆಯಾಗುವುದನ್ನು ಕಣ್ಣಾರೆ ಕಾಣಬೇಕು ಎಂದು ಮಂಟಪದಲ್ಲಿ ಹಾತೊರೆಯುತ್ತಿದ್ದ ಮುತ್ತಜ್ಜಿ. ಕರೆಂಟ್ ಹೋದಾಗ ಆಘಾತಗೊಂಡು, ತನ್ನ ಮರಿಮೊಮ್ಮಗಳನ್ನು ಇರುವೆ ಕಚ್ಚಿಕೊಂಡು ಹೋದರೆ... ಎಂಬ ಭೀತಿಗೊಳಗಾದಳು. ಸಾಲಂಕೃತಳಾದ ವಧುವಿಗೆ ಏನೂ ಆಗಬಾರದು ಅಂತ ತಮ್ಮ ಗೋಣನ್ನು ವಧುವಿನ ಮುಖದ ಬಳಿಯೇ ಇರಿಸಿದ್ದರು. ವರ ಮಹಾಶಯನಿಗೆ "ತಾಳಿ ತಾಳಿ" ಎಂದು ಹೇಳಿದ್ದಷ್ಟೇ ಕೇಳಿಸಿತ್ತು. ಅದು 'ತಾಳಿರಿ ತಾಳಿರಿ' ಎಂದಿದ್ದೋ, ಅಥವಾ 'ಮುಹೂರ್ತ ಬಂದಿದೆ ಬೇಗನೇ ತಾಳಿ ಕಟ್ಟಿ' ಅಂದಿದ್ದೋ ಎಂದು ಬೊಗಳೆ ರಗಳೆ ಬ್ಯುರೋದಂತೆ ವಿಶ್ಲೇಷಣೆ ಮಾಡಲು ಹೋಗದ ಆತ, ಪವರ್ ಕಟ್ಟಿನ ಮಧ್ಯೆಯೇ ತಾಳಿ ಕಟ್ಟಿದಾಗ ಕೆಲಸ ಕೆಟ್ಟಿತ್ತು. ಅಜ್ಜಿ ಗೋಳೋ ಎಂದು ಅಳಲಾರಂಭಿಸಿದಾಗಲೇ ವಿಷಯ ಅರಿವಿಗೆ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ವ-ರದ್ದಿ ತಂದೊಪ್ಪಿಸಿದ್ದಾರೆ.
ಈ ಕುರಿತು ಉನ್ನತ ವಿಶ್ಲೇಷಣೆ ಮಾಡಲಾರಂಭಿಸಿದ ಬೊಗಳೂರು ಬ್ಯುರೋ, ಮದುವೆಯಾಗುವುದು ಜನುಮ ಜನುಮದ ಅನುಬಂಧವಾದರೂ, ಪವರ್ ಕಟ್ ಇದ್ದಾಗಲೇ ತಾಳಿ ಕಟ್ಉವುದು, ಮುಂದಿನ ಭವಿಷ್ಯದಲ್ಲಿ ವಧು-ವರರಿಬ್ಬರ ಪವರ್‌ಗಳು ಕಟ್ ಆಗುವ ವಾಸ್ತವಾಂಶಕ್ಕೆ ಮುನ್ನುಡಿ ಮತ್ತು ಅವರವರ ಭವಿಷ್ಯದ ಕನ್ನಡಿ ಎಂದು ಹೇಳಲಾಗುತ್ತಿದೆ.
ಇನ್ನೊಂದು ವಾದದ ಪ್ರಕಾರ, ಇಷ್ಟವಿಲ್ಲದವರನ್ನು ಗಂಟು ಹಾಕುವ ಹೆತ್ತವರ ಪ್ರಯತ್ನದಿಂದ ಪಾರಾಗಲು ಇದು ವಧು ಮತ್ತು ವರರು ಸೇರಿಕೊಂಡು ಮಾಡಿದ ಪೂರ್ವಯೋಜಿತ ಸಂಚು. ಆದರೆ ಅವರ ಸಂಚಿನ ಅರಿವಿದ್ದ ಹೆತ್ತವರು, ಕಲ್ಯಾಣ ಮಂಟಪದಲ್ಲಿ 80ಕ್ಕಿಂತ ಹೆಚ್ಚು ವಯಸ್ಸಾದವರಿಗೆ ಮಾತ್ರವೇ ಪ್ರವೇಶ ನೀಡಿ, ಯತ್ನ ವಿಫಲಗೊಳಿಸಲು ಪ್ರಯತ್ನಿಸಿದ್ದರು. ಇದನ್ನು ಮೊದಲೇ ಊಹಿಸಿದ್ದ ವರ, ಚೆಂದಾಗಿ ಕಾಣುತ್ತಿದ್ದವಳಿಗೆ ಅಜ್ಜಿಯ ಮಾರುವೇಷದಲ್ಲಿ ಬರುವಂತೆ ಹೇಳಿದ್ದ. ಅಲ್ಲಿಗೆ ಆ ಅಧ್ಯಾಯ ಮುಗಿದಿತ್ತು.
ವರರ ಗೊಂದಲ: ತಾವು ಕಟ್ಟಿದ ತಾಳಿಯನ್ನು ಕಿತ್ತು, ಮರಳಿ ಮರಳಿ 'ಬಲಿಪಶು'ವಿಗೇ ಕಟ್ಟುವಂತೆ ಮಾಡಿದ ಹಿರಿಯರು ವಿರುದ್ಧ ಕೇಸು ದಾಖಲಿಸಲು ವರ-ಮಹಾಶಯರು ತೀರ್ಮಾನಿಸಿದ್ದಾರೆ. ಇದಕ್ಕೆ ಕಾರಣವೆಂದರೆ, ತಮ್ಮ ಮೇಲೆ ದ್ವಿಪತ್ನಿತ್ವ ಎಂಬ ಕೇಸು ಜಡಿಯುವ ಸಾಧ್ಯತೆಗಳು. ಯಾಕೆಂದರೆ ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ ಎಂದು ಬೊಗಳೆ ರಗಳೆ ಸಹಿತ ಹಲವಾರು ಪತ್ರಿಕೆಗಳು ವ-ರದ್ದಿ ಮಾಡಿದ್ದವು.
ಸಾಮೂಹಿಕ: ಆದರೆ, ಮತ್ತೆ ಕೆಲವರು ಇದು 'ಸಾಮೂಹಿಕ ವಿವಾಹ' ಆಗಿದ್ದುದರಿಂದ, ಯಾರು ಯಾರಿಗೆ ಬೇಕಾದರೂ, ಎಷ್ಟು ಬಾರಿಯೂ ತಾಳಿ ಕಟ್ಟಬಹುದು ಎಂದು ತಿಳಿದುಕೊಂಡಿದ್ದು, ಈ ರೀತಿಯ ವಿಶ್ಲೇಷಣೆಗಳಿಂದ ತಮ್ಮ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.
ಕಾಳದಂಧೆ: ಈ ಮಧ್ಯೆ, ಈ ಘಟನೆಗಳಿಂದ ಪ್ರೇರಿತರಾಗಿ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಎಂಬ ಬೋರ್ಡು ತಗುಲಿಸಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಕಲ್ಯಾಣ ಮಂಟಪಗಳಲ್ಲಿ ತಮಗೆ (ಕರೆಂಟು ತೆಗೆಯಲು) ಬೇಡಿಕೆ ಹೆಚ್ಚಾಗುತ್ತಿದ್ದು, ಇಂತಹ engineered ಮದುವೆ ಏರ್ಪಡಿಸಲೆಂದೇ ಅವರು ಡಿಪ್ಲೊಮಾಗಳನ್ನು ಕದ್ದು ತಗುಲಿಸಿಕೊಂಡಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.
ಆದರೆ, ಇದು ಬೊಗಳೆ ಬ್ಯುರೋ ಸಂಶೋಧಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಡೈವೊರ್ಜೀನ್ ಎಂಬ ವಿವಾಹೋತ್ತರ ಕಾರ್ಯಕ್ರಮದ ಬೇಡಿಕೆ ತಗ್ಗಿಸಿ, ಬ್ಯುರೋಗೆ ಭಾರೀ ಪ್ರಮಾಣದ ನಷ್ಟ ಉಂಟುಮಾಡುವ ಸಂಚು ಎಂಬುದೂ ಪತ್ತೆಯಾಗುತ್ತಿದೆ.
8 ಕಾಮೆಂಟ್‌ಗಳು
ಹ್ಮ್ಮ್ಮ್...ಅಂತು ಇಂತು ಪವರ್ ಕಟ್ಟಿಗೂ ಬೇಡಿಕೆ ಹೆಚ್ಚಾಯ್ತು ! ಆದರೂ ..."ತಾಳಿ"ದವನು ಬಾಳಿಯಾನು ಅಲ್ವಾ ? :-)
ಪ್ರತ್ಯುತ್ತರಅಳಿಸಿtappu nadediddu gottaada takshaNa hiriyaru eno pooje maadisi taaLi tegesidarantalla- can this be done after say few years/decade?
ಪ್ರತ್ಯುತ್ತರಅಳಿಸಿಏನ್ ತಪ್ಪಾಯ್ತು ಬಿಡಿ, ಮುತ್ತಜ್ಜನ ಕೈಯಿಂದ ಆ ಹುಡುಗಿಗೆ ತಾಳಿ ಕಟ್ಟಿಸಿದರಾಯ್ತು. "ಹಳೇ ಗಂಡ-ಹೊಸಾ ಹೇಣ್ತಿ" ಹಾಗು "ಹೊಸಾ ಗಂಡ-ಹಳೇ ಹೇಣ್ತಿ" ಎನ್ನುವ ಎರಡೂ ಜೋಡಿಗಳು ಜೊತೆಯಾಗಿಯೇ ಹನಿಮೂನಿಗೆ ಹೋಗಬಹುದು.
ಪ್ರತ್ಯುತ್ತರಅಳಿಸಿಲಕ್ಷ್ಮಿ ಅವರೆ,
ಪ್ರತ್ಯುತ್ತರಅಳಿಸಿಈಗೀಗ ತಾಳಿ ಇದ್ದರೆ ಬಾಳಬಹುದು ಅಂತ ಪಿಕ್ ಪಾಕೆಟೀರ್ಸ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಮತ್ತೆ ಇದೇ ರೀತಿ ವಧು ಅದಲು ಬದಲು ಆದಾಗ, ಕೆಲವರು ಪವರ್ ಉಳ್ಳ ಕಟ್ಟಿಗೆ ತುಂಡು ಹುಡುಕಾಡುತ್ತಿದ್ದರಂತೆ. ಬಹುಶಃ ಅದೇ ಇರಬೇಕು ಪವರ್ ಕಟ್ಟಿಗೆ ಬೇಡಿಕೆ!
ಶ್ರೀನಿಧಿ ಹಂದೆ ಅವರೆ,
ಪ್ರತ್ಯುತ್ತರಅಳಿಸಿಅಲ್ಲಿಗೇ ಬನ್ನಿ... ಅದನ್ನೇ ಈ ಸಂಚೋದನೆ ಮಾಡ್ತಾ ಇರೋದು. ಎಲ್ಲರೂ ಈ ಕುರಿತು ಗಮನ ಹರಿಸ್ತಾ ಇದ್ದಾರಂತೆ. ಪತ್ನಿಪೀಡಿತ ಸಂಘದ ಸದಸ್ಯರಂತೂ ಈ ಜೋಯಿಸರನ್ನು ತೀವ್ರವಾಗಿ ಹುಡುಕಾಡುತ್ತಿದ್ದಾರಂತೆ.
ಸುನಾಥರೆ,
ಪ್ರತ್ಯುತ್ತರಅಳಿಸಿನಿಮ್ಮ ಸಲಹೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ. ತಪ್ಪಾಗಿ ತಾಳಿ ಕಟ್ಟಿಸಿಕೊಂಡ ಹುಡುಗಿ, ಆ ತಪ್ಪು ಸರಿಪಡಿಸುವುದಕ್ಕಾಗಿ, ತಾನೇ ತಾಳಿಯನ್ನು ಮತ್ತೊಂದು ಕುತ್ತಿಗೆಗೆ ಕಟ್ಟಿದರಾಯಿತು. ಅಲ್ಲಿಗೆ... ಮೈನಸ್ ಇಂಟು ಮೈನಸ್ ಈಸ್ ಇಕ್ವಲ್ ಟು ಪ್ಲಸ್!
ಮದುವೆಯಲ್ಲಿ ಗಣಿತದ ಪಾತ್ರ ಇದು!
hahahaha,,,, konegu maduve aagiye bittitu....
ಪ್ರತ್ಯುತ್ತರಅಳಿಸಿಬಾಲು ಅವರೆ,
ಪ್ರತ್ಯುತ್ತರಅಳಿಸಿಮದುವೆ ಇರುವುದೇ ಆಗುವುದಕ್ಕಾಗಿ ಎಂದು ಯಾರೋ ಹೇಳಿದ್ದರು. ಹೀಗಾಗಿ ಅದು ಆಗಿಯೇ ಬಿಟ್ಟಿದೆ.!
ಏನಾದ್ರೂ ಹೇಳ್ರಪಾ :-D