ಬೊಗಳೆ ರಗಳೆ

header ads

ಮಾನವನಿಂದ ಮಂಗ: ಹಾಟ್ ಕಲ್ಚರ್ ವಿಕಾಸವಾದ

(ಬೊಗಳೂರು ಅಸತ್ಯ Someಚೋದನಾ ಬ್ಯುರೋದಿಂದ)
ಬೊಗಳೂರು, ಸೆ.2- ಮಾನವರಿಂದಲೇ ಮಂಗ ಎಂಬ ವಿಕಾಸವಾದಕ್ಕೆ ಹೊಸ ಪುಷ್ಟಿ ದೊರೆತದ್ದು ಬೊಗಳೂರು ಬ್ಯುರೋದ ಸೊಂಪಾದಕರಿಂದ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದವರಿಗೆ ಹೊಸ ಸುದ್ದಿ. ಇದು ತಪ್ಪು ಎಂದು ಇಲ್ಲಿ ಸಾಬೀತಾಗಿದೆ.

ಇದೀಗ ಜಗತ್ತಿನಲ್ಲಿ ಹಾಟ್ ಕಲ್ಚರ್ ಹೆಚ್ಚಾಗುತ್ತಿದೆ. ಯಾವುದೇ ಚಲನಚಿತ್ರ ನೋಡಿದರೂ ಹಾಟ್ ಹಾಟ್ ಆಗಿರೋ ತಾರೆಯರು ಮೈ ಕುಲುಕಿಸುತ್ತಿರುತ್ತಾರೆ. ಹೀಗಾಗಿ ದೇಹದ ತಾಪಮಾನ ಹೆಚ್ಚಾಗುತ್ತಿರುವಂತೆಯೇ ಬಿಚ್ಚೋಲೆ ಗೌರಮ್ಮರ ಮಾನ ಹರಾಜಾಗುತ್ತಾ ದೇಶದ ತಾಪಮಾನವೂ ಏರುತ್ತಲೇ ಇರುತ್ತದೆ. ಈ ರೀತಿಯಾಗಿ ಉಷ್ಣತೆ ಏರುತ್ತಿರುವುದರಿಂದ ಮಾನವನಾಗಿದ್ದ ಪ್ರಾಣಿಯು ನಿಧಾನವಾಗಿ ಮಂಗನ ರೂಪವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಬೊಗಳೂರಿನ ಏಕ ಸದಸ್ಯ ಬ್ಯುರೋದ ಅವ್ಯವಸ್ಥಾಪಕ ಮುಖ್ಯ ಕಿರಿ(ಕಿರಿ) ಸೊಂಪಾದಕರು ಭಾರೀ ಪ್ರಯತ್ನ ಪಟ್ಟು ಪತ್ತೆ ಹಚ್ಚಿ, ತಮ್ಮ ಮೇಲೆ ಯಾರಾದರೂ ಕಿರುಬೆರಳೆತ್ತಿ ತೋರಿಸುತ್ತಿರುವುದನ್ನು ತಪ್ಪಿಸಲು ಶತ ಪ್ರಯತ್ನ ಮಾಡಿದ್ದಾರೆ.

ಇತ್ತೀಚೆಗೆ ನಟೀಮಣಿಯರು ಪುಟ್ಟ ಬೆಂಕಿ ಪೆಟ್ಟಿಗೆಯೊಳಗೆ ಮಡಚಿ ಇರಿಸಬಹುದಾದಷ್ಟು ಭಾರೀ ಗಾತ್ರದ ಉಡುಗೆ ತೊಡುವ, ಅಥವಾ ಆ ಉಡುಗೆಯನ್ನು ದೇಹಕ್ಕೆ 'ಸ್ಯಾಂಪಲ್' ಆಗಿ ತೋರಿಸುವ ಪ್ರವೃತ್ತಿ ಹೆಚ್ಚಿಸುತ್ತಾ ಪ್ರಸಿದ್ಧಿ ಪಡೆಯಲು ಹರಸಾಹಸ ಮಾಡುತ್ತಿರುವುದರಿಂದ ಸುತ್ತಮುತ್ತಲಿನವರು ಕೂಡ ಹಾಟ್ ಆಗಿ ತಾಪಮಾನ ಹೆಚ್ಚಾಗಿಬಿಡುತ್ತಿದೆ. ಇದರಿಂದಾಗಿ ಅಲ್ಲಲ್ಲಿ ಅನ್ಯಾಯ, ಅನಾಚಾರ, ಅತ್ಯಾಚಾರ ಇತ್ಯಾಚಾರಗಳು ನಡೆಯುತ್ತಿವೆ. ಈ ರೀತಿ, ಮಾನವರು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಪ್ರಾಣಿಗಳಾಗಿ ವಿಕಾಸಗೊಳ್ಳುತ್ತಿದ್ದಾರೆ ಎಂಬುದು ಬೊಗಳೆ ರಗಳೆಯ ಅಸತ್ಯ ಬ್ಯುರೋ ಕಂಡುಕೊಂಡಿರುವ ನಿಗೂಢ ರಹಸ್ಯವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪೈಸಿ ಗರ್ಲ್ಸ್ ಮುಂತಾದ ಹಿರಿಮೆ-ಗರಿಮೆಗಳನ್ನು ಪಡೆದುಕೊಂಡು ಮನಸ್ಸನ್ನು ಸ್ಪೈಸೀಕರಣಗೊಳಿಸಿರುವುದರಿಂದ ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿದೆ ಎಂದು ನಮ್ಮ ವಿಶ್ಲೇಷಣಾಕಾರರು ತರ್ಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ತಾಪ ಹೆಚ್ಚಿದ್ದಕ್ಕೆ ಉಡುಗೆ ಕಡಿಮೆಯಾಯಿತೊ?
    ಉಡುಗೆ ಕಡಿಮೆಯಾದದ್ದಕ್ಕೆ ತಾಪ ಹೆಚ್ಚಿತೊ?

    ಪ್ರತ್ಯುತ್ತರಅಳಿಸಿ
  2. ಕರುಣಾನಿಧಿ ಎಂಬ ಮಂಗ ಇವತ್ತು ಬಾಲ ಇಲ್ಲದಿದ್ದರೂ ತಾನೊಬ್ಬ ಮಂಗ ಎಂಬುದನ್ನು ಸಾಬೀತುಪಡಿಸಲು ಹರಸಾಹಸ ಪಡುತ್ತಿದ್ದಾನೆ. ಮಂಗನಿಂದ ಮಾನವ ಎಂಬ ಸೂತ್ರ ರಾಮಾಯಣದಲ್ಲಿರುವುದರಿಂದ ಇವ ರಾಮಾಯಣ ವಿರೋಧಿಯಾದ್ದರಿಂದ ಮಾನವನಿಂದ ಮಂಗ ಎಂಬ ಸಿದ್ದಾಂತವೇ ಸರಿ ಎಂದು ಅರಚುತ್ತಿದ್ದಾನೆ.

    ಪ್ರತ್ಯುತ್ತರಅಳಿಸಿ
  3. ಲಕ್ಷ್ಮಿ ಅವರೆ,

    ಸಕ್ಕಟ್ಟು ಹೋತ ಆಗಿದೆ ಅಂದಹಾಗೆ ಕೇಳಿಸ್ತು... ಇಷ್ಟು ಬಿಸಿಯಾದ ಬೇಳೆ ಬಾತ್ ಸಂಚೋದನೆ ಮಾಡಿ ನಮ್ಮ ಬ್ಯುರೋ ಕೈಸುಟ್ಟುಕೊಂಡಿದೆ.

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಎಲ್ಲವೂ ಆರಂಭವಾಗಿದ್ದು ಉಡುಗೆ ಹೆಚ್ಚಾಗಿದ್ದರಿಂದ. ಹೆಚ್ಚು ಉಡುಗೆ ಹಾಕಿದರೆ ಮೈಬಿಸಿಯೂ ಜಾಸ್ತಿ ಆಗುತ್ತದಲ್ಲ. ಜ್ವರ ಬರುತ್ತದೆ ಅಂತ ತಿಳಿದುಕೊಂಡು ಉಡುಗೆ ಕಡಿಮೆ ಮಾಡಲಾಯಿತು.

    ಪ್ರತ್ಯುತ್ತರಅಳಿಸಿ
  5. ಗುರುಗಳೇ,
    ನಾವು ಹುಟ್ಟಿದಂದಿನಿಂದಲೂ ವಿರೋಧಿಸುತ್ತಾ ಬಂದಿರುವ ಸತ್ಯವನ್ನು ಇಲ್ಲಿ ಪ್ರಕಟಿಸಬಾರದು ಅಂತ ಎದ್ದು ಬಿದ್ದು ಧಮಕಿ ಹಾಕುತ್ತಿದ್ದೇವೆ. ಇಲ್ಲಿ ಕೇವಲ ಅಸತ್ಯಕ್ಕೆ ಮಾತ್ರ ಅವಕಾಶ. :)

    ಪ್ರತ್ಯುತ್ತರಅಳಿಸಿ
  6. ನನ್ನ ಬ್ಲಾಗ್ ಹೆಸರನ್ನು ದುರುಪಯೋಗಪಡಿಸಿಕೊಂಡು ಬೊಗಳೆ ಬಿಡಲಾಗಿದೆ ಎಂದು ಬ್ಲಾಗ್ ಮಾಲೀಕನಾದ ನಾನು ರಗಳೆ ಎಬ್ಬಿಸಿ ಮಾನನಷ್ಟ ಮೊಕದ್ದಮೆಯನ್ನು ಹಾಕಲು ಯೋಚಿಸುತ್ತಿದ್ದೇನೆ. ನನ್ನ ಮುಂದಿನ ನಡಿಗೆ ಅಸತ್ಯ ಅನ್ವೇಷಿಯವರು ಏನಾದ್ರೂ ಡೀಲಿಂಗಿಗೆ ಬರುತ್ತಾರಾ ಎಂದು ಕಾದು ನೋಡುವುದು :)

    ಪ್ರತ್ಯುತ್ತರಅಳಿಸಿ
  7. ವಿಕಾಸ ವಾದಿಗಳೇ,
    ನಿಮ್ಮ ಅವಮಾನ ನಷ್ಟವಾಗಿದ್ದು ಕೇಳಿ ಸಂತಸವಾಯಿತು. ನಿಮ್ಮದು ವಿಕಾಸ'ರ' ವಾದವಾಗಿದೆ, ಆದರೆ ನಾವಿಲ್ಲಿ ಹೇಳಿರೋದು ವಿಕಾಸ'ದ' ವಾದ ಆಗಿರೋದ್ರಿಂದ ನಾವು ಅಡಿಗೆ ಬಿದ್ದರೂ ಮೂಗು ಮೇಲೆ ಮಾಡಲು ಶತಪ್ರಯತ್ನ ಮಾಡುತ್ತಿದ್ದೇವೆ.

    ಡೀಲಿಂಗಿಗೆ ಬರಲು ನಾವೀಗ ಯುಪಿಎ ಸರಕಾರದ, ಜಾರ್ಖಂಡ್ ಮುಕ್ತಿ ಮೋರ್ಚಾದ ಮತ್ತು ಗಣಿ ಧಣಿಗಳ ಮೊರೆ ಹೋಗುತ್ತಿದ್ದೇವೆ. ಯಾಕೆಂದರೆ ಅವರೆಲ್ಲಾ ಅದ್ರಲ್ಲಿ ಎಕ್ಸ್‌ಪರ್ಟ್‌ಗಳು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D