ಬೊಗಳೆ ರಗಳೆ

header ads

ಭಾರತಕ್ಕೆ ಒಲಿಂಪಿಕ್ಸ್ ಚಿನ್ನ: ತನಿಖೆಗೆ ಆದೇಶ!

(ಬೊಗಳೂರು ಒಲಿಂ-ಫಿಕ್ಸ್ ಬ್ಯುರೋದಿಂದ)
ಬೊಗಳೂರು, ಆ.11- ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ 28 ವರ್ಷಗಳ ಬಳಿಕ ಚಿನ್ನದ ಪದಕ ಸಿಕ್ಕಿರುವ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಭಾರತೀಯ ರಾಜಕೀಯ ಒಲಿಂಪಿಕ್ಸ್ ಮಂಡಳಿಯು (ಭಾರಾಓಮ), ಈ ಒಲಿಂಪಿಕ್ಸ್‌ನಲ್ಲಿ ಏನು ಫಿಕ್ಸ್ ಆಗಿದೆ ಎಂಬುದರ ಕುರಿತು ತನಿಖೆಗೆ ಆದೇಶಿಸಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ತಾವು ಎಷ್ಟೆಲ್ಲಾ ಹರ ಸಾಹಸ ಮಾಡಿದರೂ, ಕ್ರೀಡಾಗಳುಗಳ ಜಂಘಾಬಲ ಉಡುಗಿಸಲು ಬೇಕಾದ ಎಲ್ಲ ರೀತಿಯ ರಾಜಕೀಯ ಮಾಡಿದರೂ, ಅದು ಹೇಗೆ ಈ ವ್ಯಕ್ತಿ, ರಾಜಕೀಯದಿಂದ ನುಸುಳಿ, ಬೀಜಿಂಗಿಗೆ ತೆರಳಿ ಚಿನ್ನ ಗೆದ್ದ ಎಂಬುದು ಭಾರಾಓಮಗೆ ಇನ್ನೂ ನಂಬಲಾಗದ ಸಂಗತಿಯಾಗುಳಿದಿದೆ.

ಭಾರತದಲ್ಲಿ ದುಡ್ಡು ಕೊಡುವ ಕ್ರಿ-ಕೆಟ್ಟಿದೆ. ಬೇರಾವುದೇ ಆಟಗಳು ನಮಗೆ ಬೇಕಾಗಿಲ್ಲ. ಹೀಗಾಗಿ ಇತರ ಕ್ರೀಡೆಗಳನ್ನೆಲ್ಲಾ ನಾಮಾವಶೇಷ ಮಾತ್ರವೇ ಉಳಿಸುವ ನಿಟ್ಟಿನಲ್ಲಿ ಹಾಕಿ ಕ್ರೀಡೆಗೆ ಈಗಾಗಲೇ ಒಲಿಂಪಿಕ್ಸ್‌ನಿಂದ ಖೋ ನೀಡಿಸಲಾಗಿದೆ. ಇನ್ನು ವೇಟ್ ಲಿಫ್ಟಿಂಗಿನಲ್ಲಿ ತಮ್ಮ ರಾಜಕೀಯವನ್ನೂ ಮೀರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೋನಿಕಾ ದೇವಿ ವಿರುದ್ಧ ಎಷ್ಟೋ ಶ್ರಮ ಪಟ್ಟು, ಅವರು ಅಲ್ಲಿ ಹೋಗಿ ಭಾರತದ ಮಾನ ಕಾಪಾಡದಂತೆ ನೋಡಿಕೊಳ್ಳಲಾಗಿದೆ ಎಂದು ಭಾರಾಓಮದ ಅದಕ್ಷರು ಬೊಗಳೆ ರಗಳೆಗೆ ತಿಳಿಸಿದ್ದಾರೆ.

ಈ ಮಧ್ಯೆ, ಮತ್ತೊಂದು ತನಿಖೆಗೆ ಹೊರಟಿರುವ ಭಾರತೀಯ ಕೆಸರೆರಚಾಟ ಕ್ರೀಡೆ ವಿಭಾಗದ ಅದಕ್ಷರು, ನೂರಾಹತ್ತು ಕೋಟಿ ಭಾರತೀಯರಲ್ಲಿ, ಒಬ್ಬರಿಗೆ ಮಾತ್ರವೇ ಚಿನ್ನ ಕೊಟ್ಟಿದ್ದೇಕೆ ಎಂಬುದರ ಕುರಿತು ಶೋಧ ನಡೆಸಲು ಆಜ್ಞಾಪಿಸಿದ್ದಾರೆ. ಇಷ್ಟು ಕೋಟಿ ಭಾರತೀಯರಿಗೆ ಇದು ಏನೇನೂ ಸಾಲದು. ಇಲ್ಲಿ ದೊರೆತ ಚಿನ್ನದಲ್ಲಿ ಅಲ್ಪಸಂಖ್ಯಾತರಿಗೆ ಶೇ.50, ಹಿಂದುಳಿದವರಿಗೆ ಶೇ.40 ಮತ್ತು ಮುಂದುವರಿದವರಿಗೆ ಶೇ.1 ಇತ್ಯಾದಿಯೆಲ್ಲಾ ಮೀಸಲಾತಿ ನೀಡಬೇಕು. ಇಷ್ಟು ಪುಟ್ಟ ಚಿನ್ನದ ಪದಕದಲ್ಲಿ ಇದನ್ನೆಲ್ಲಾ ಲೆಕ್ಕಾಚಾರ ಹಾಕಿ ಸರಿಪಡಿಸುವುದು ಹೇಗೆ ಎಂಬುದು ತಿಳೀತಿಲ್ಲ ಎಂದು ಅವರು ತಲೆಯನ್ನು ಸಂಪೂರ್ಣವಾಗಿ ಕೆಡಿಸಿಕೊಂಡುಬಿಟ್ಟಿದ್ದಾರೆ.

ಕನಿಷ್ಠ ಪಕ್ಷ ಮುಂದಿನ ಒಲಿಂಪಿಕ್ಸ್‌ನಲ್ಲಾದರೂ ಹಣದ ಥೈಲಿ ತರುವ ಆಟ, ರಾಜಕೀಯ ಪ್ರಾವೀಣ್ಯ ಪ್ರದರ್ಶಿಸುವ ಆಟಗಳನ್ನು ಕೂಡ ಅಳವಡಿಸಲಿ, ಇದರಿಂದಾಗಿ ತಮ್ಮ ಜೇಬು ಸಾಕಷ್ಟು ತುಂಬಿಕೊಳ್ಳಬಹುದು, "One World, One Dream" ಎಂಬ ಕನಸು ನನಸಾಗುವುದು ಎಂಬುದಾಗಿ ಶತಕೋಟಿ ಭಾರತೀಯರಲ್ಲಿ ಹಲವು, ಕೆಲವು ಜಾರಕಾರಣಿಗಳು ತೀವ್ರವಾಗಿ ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

11 ಕಾಮೆಂಟ್‌ಗಳು

  1. ತುಂಬಾ ಅಣಕವಾಗಿ ನಮ್ಮ ದೇಶದ ರಾಜಿಕಿಯ ಸ್ಥಿತಿಯನ್ನು ಕೂಲಂಕುಷವಾಗಿ ವಿವರಿಸಿದ್ದೀರ.

    ಪ್ರತ್ಯುತ್ತರಅಳಿಸಿ
  2. ತುಂಬಾ ಆಘಾತಕಾರಿ ಬೆಳವಣಿಗೆ ಇದು ಕ್ರೀಡಾರಂಗದಲ್ಲಿ ! :-)...ಒಂದು ಸೆಕೆಂಡು ನಾನೇ ಗಾಬರಿಯಾಗಿಹೋದೆ ಗೊತ್ತಾ ? ಏನಪ್ಪ..ನಮ್ಮ ದೇಶಕ್ಕೇನಾ ಚಿನ್ನ ಸಿಕ್ಕಿದ್ದು ಅಂತ ! [:-)] ತನಿಖೆ ಮಾಡಿಸ್ಲೇ ಬೇಕು ಬಿಡಿ ಇದಕ್ಕೆ...ಸಿಓಡಿ ನೋ ಅಥವಾ ಸಿಬಿಐ ತನಿಖೆ ಆಗ್ಲೇ ಬೇಕು ಇದಕ್ಕೆ ! ಮತ್ತೆ ಸರ್ಕಾರಗಳಿಂದ "ಬಹುಮಾನ" ರೂಪದಲ್ಲಿ ಹರಿದುಬರುತ್ತಿರುವ ಕೋಟ್ಯಂತರ ರುಪಾಯಿ ದುಡ್ಡು "ಚಿನ್ನ"ದಂಥ ಹುಡುಗನಿಗೇ ಸಲ್ಲತ್ತಾ ಅನ್ನೋದರ ಬಗ್ಗೆ ನೀವು ಮೊದಲು ತನಿಖೆ ನಡೆಸಿ !

    ಸಿಕ್ಕಾಪಟ್ಟೆ ಸೂಪರ್ ಪೋಸ್ಟಿದು !

    ಪ್ರತ್ಯುತ್ತರಅಳಿಸಿ
  3. ತುಂಬಾ ಕಳವಳಕಾರಿ ವಿಷಯ. ನಮ್ಮ ಲೋಕಸಭಾ ಸದಸ್ಯರನ್ನು ತಕ್ಷಣವೇ ಬೀಜಿಂಗಕ್ಕೆ ಕಳುಹಿಸಿಕೊಟ್ಟು ತೀವ್ರವಾದ ತನಿಖೆ ನಡೆಸಬೇಕು.

    ಪ್ರತ್ಯುತ್ತರಅಳಿಸಿ
  4. ಕುಕುಕೂ ಅವರೆ, ನಿಮಗೆ ಸ್ವಾಗತ.
    ನಾವೇನಿದ್ದರೂ ಸತ್ಯವಿದ್ರೋಹಿಗಳು. ಹೀಗಾಗಿ ನೀವು ಕೂಲಂಕಷವಾಗಿ ಅಂದಿದ್ದು ಕರುಳು ಚುರುಕ್ ಅನ್ನಿಸಲು ಕಾರಣವಾಗಿದೆ. ಅಣಕ ಅಂತಲೂ ಹೇಳಿದ್ದೀರಿ. ಅದರಿಂದ ಮತ್ತಷ್ಟು ಕರುಳು ಚುರುಕ್ ಅನ್ನಿಸಿ, ಕರುಳೇ ಇಲ್ಲದಂತಹ ಮಟ್ಟಕ್ಕೆ ತಲುಪಿದೆ.

    ಪ್ರತ್ಯುತ್ತರಅಳಿಸಿ
  5. ಲಕ್ಷ್ಮಿಯವರೆ,
    ಈಗ ಚಿನ್ನದ ಹುಡುಗನಿಗೆ ದಕ್ಕಿದ್ದು ದಕ್ಕಿಯಾಗಿದೆ. ಯಾವುದೇ ಸರಕಾರೀ ಬೆಂಬಲವಿಲ್ಲದೆ ಆತ ಸಾಧನೆ ಮಾಡಿದ್ದಾನೆ. ಆದರೆ ರಾಜ್ಯ, ಕೇಂದ್ರ ಸರಕಾರಗಳು ಈಗ ನಾ ಮುಂದು ತಾ ಮುಂದು ಅಂತ ಅಭಿನವನಿಗೆ ಉಡುಗೊರೆ, ಹಣ, ಸನ್ಮಾನ ಇತ್ಯಾದಿ ಏರ್ಪಡಿಸುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳಲು, ಅಭಿನವನ ಸಾಧನೆಯ ಹಿಂದೆ ತಮ್ಮದೇ ಕೈವಾಡವಿದೆ ಎಂದೆಲ್ಲಾ ಎದೆತಟ್ಟಿಕೊಳ್ಳಲು ಹವಣಿಸುತ್ತಿವೆ.

    ಅದಿರಲ್ಲಿ, ಇದನ್ನು ಸೂಪರ್ ಫಾಸ್ಟ್ ಅಂತ ಹೇಳಿ ನಮ್ಮ ಕಣ್ಣು ತೆರೆಸಿದ್ದೀರಿ. ಇನ್ನು ಮುಂದೆ ಹೀಗಾಗದಂತೆ ಕಟ್ಟೆಚ್ಚರ ವಹಿಸುತ್ತೇವೆ!

    ಪ್ರತ್ಯುತ್ತರಅಳಿಸಿ
  6. ಸುನಾಥರೆ,
    ಕೋಲಸಭೆಯ ಸದಸ್ಯರೆಲ್ಲರೂ ಬೀಜಿಂಗಿಗೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಅವರಿಗೆ ಸೂಟ್ ಕೇಸುಗಳು ಇನ್ನೂ ಬಂದಿಲ್ಲ. ಅದಕ್ಕಾಗಿ ಕಾಯ್ತಾ ಇದ್ದಾರೆ. ಮತ್ತೆ ಅಲ್ಲಿ ಕೆಸರೆರಚಾಟ ಸ್ಪರ್ಧೆಯೂ ಇಲ್ಲದ್ದರಿಂದ ಅವರಿಗೆ ಚಿನ್ನದ ಪದಕ ತರುವ ಅವಕಾಶ ತಪ್ಪಿದೆ ಅಂತ ತೀವ್ರ ನಿರಾಶೆಯಾಗಿಬಿಟ್ಟಿದೆ.

    ಪ್ರತ್ಯುತ್ತರಅಳಿಸಿ
  7. ಈ ಸಾಧನೆಯಲ್ಲಿ ತಮ್ಮ ಪಾತ್ರ ಏನೂ ಇರದಿದ್ದರೂ ಕೆಲವು ರಾಜ್ಯ ಸರಕಾರಗಳು (ಕರ್ನಾಟಕವೂ ಸೇರಿ) ಅಭಿನವ್ ಬಿ೦ದ್ರಾಗೆ ಬಹುಮಾನ ಘೋಷಿಸಿರುವುದು ಇನ್ನೂ ಚೋದ್ಯಕರ. ಅ೦ತೂ ತೆರಿಗೆ ಪಾವತಿದಾರರ ಹಣ ಹೀಗೂ ಪೋಲಾಯಿತು!

    ಪ್ರತ್ಯುತ್ತರಅಳಿಸಿ
  8. ಎಲ್ಲ ಮೋಸದ ನಡುವೆಯೂ ಚಿನ್ನ ಗೆದ್ದ ಬಿಂದ್ರಾ ಅಭಿನಂದನೆಗೆ ಅರ್ಹ......ಆದರೆ ಚೈನಾ ಮೋಸದಿಂದ, ತೀರ್ಪುದಾರರನ್ನೇ ಖರೀದಿಸಿ ಚಿನ್ನವನ್ನು ಬಾಚುತ್ತಿರುವುದು ಅಮೆರಿಕಾದ ನಿದ್ದೆಗೆಡಿಸಿದೆಯಂತೆ. ಆದರೆ ಶತಕೋಟಿಗೊಬ್ಬನೇ ದೇಶಭಕ್ತ ಎಂಬುದು ಸಾಬೀತಾಯಿತು. ಎಲ್ಲರೂ ನಮ್ಮ ಹಣದಲ್ಲಿ ಭರ್ಜರಿ ಚೈನಾ ಟ್ರಿಪ್ ಮುಗಿಸಿ ಎದೆಯುಬ್ಬಿಸಿಕೊಂಡು ಬರುತ್ತಿದ್ದಾರೆ. ಸ್ವಾಗತಿಸಲು ಚಪ್ಪಲಿ ರೆಡಿ ಮಾಡಿಟ್ಟುಕೊಳ್ಳಿ. ಮೊದಲು ಆಯ್ಕೆದಾರರಿಗೆ ಹೊಡೆಯಿರಿ, ನಂತರ ಕ್ರೀಡಾ ಸಚಿವರಿಗೆ ಹೊಡೆಯಿರಿ, ನಂತರ ಬೀಜಿಂಗ್‌ಗೆ ಹೋಗಿ ಬಂದವರಿಗೆ ಹೊಡೆಯಿರಿ(ಪದಕ ಗೆದ್ದವರನ್ನು ಬಿಟ್ಟು).

    ಪ್ರತ್ಯುತ್ತರಅಳಿಸಿ
  9. ರವೀಶ್ ಕುಮಾರ್ ಅವರೆ,

    ತೆರಿಗೆದಾರರ ತೆರಿಗೆ ಪ್ರಮಾಣ ಹೆಚ್ಚಾದ ಪರಿಣಾಮವಾಗಿ ನಮ್ಮ ರಾಜ್ಯದ ಖಜಾನೆ ತುಂಬಿ ತುಳುಕಾಡುತ್ತಾ ಇದೆಯಂತೆ. ಅದನ್ನು ಏನು ಮಾಡುವುದು ಅಂತ ಗೊತ್ತಾಗದೆ, ತುಳುಕಾಡಿದ್ದನ್ನೇ ಮುಖ್ಯಮಂತ್ರಿ ಒಡೆಯೋರಪ್ನೋರು ಹಂಚ್ತಾ ಇದ್ದಾರಂತೆ.

    ಪ್ರತ್ಯುತ್ತರಅಳಿಸಿ
  10. ಗುರುಗಳೇ,
    ನಾವಂತೂ ನಮ್ಮ ಚಪ್ಪಲಿಯನ್ನು ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದೇವೆ. ಪದಕ ಗೆಲ್ಲಲೆಂದು ಹೋದವರಿಗೆ ಶಾಭಾಷ್ ಹೇಳೋಣ. ಅವರ ಜತೆ ಮಜಾ ಮಾಡಿಬರಲು ಹೋದವರನ್ನು ವಿಚಾರಿಸೋಣ.

    ಪ್ರತ್ಯುತ್ತರಅಳಿಸಿ
  11. ಭಾರತಕ್ಕೆ ಕೇವಲ ಒಂದೇ ಪದಕ ಗಟ್ಟಿ. ಉಳಿದವರೆಲ್ಲ ಮಜಾ ಮಾಡಲೇ ಹೋದವರು. ಮೊದಲೇ SC/ST seat reserve ಮಾಡಿದ್ದರೆ ಕೆಲವು ಪದಕಗಳಾದರೂ ಬುಟ್ಟಿಗೆ ಬೀಳುತ್ತಿದ್ದವು. ಆದರೆ ಚೈನಾದಲ್ಲಿ reservation ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಆ ಕೋಟಾದಲ್ಲಾದರೂ ಕೆಲವು ಚಿನ್ನದ ಪದಕ ಗೆದ್ದು ಬರಬಹುದಾಗಿತ್ತು. ಏಕೆಂದರೆ ಬೇರೆ ಯಾವ ದೇಶದಲ್ಲೂ SC/ST ಇರಲು ಸಾಧ್ಯವೇ ಇಲ್ಲ. ಭಾಗವಹಿಸಿದ ಎಲ್ಲ ಕ್ರೀಡೆಗಳಲ್ಲಿ ಚಿನ್ನ ಗಟ್ಟಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D