ಬೊಗಳೆ ರಗಳೆ

header ads

ಪೊಲೀಸ್ ನಿಷ್ಕ್ರಿಯ ದಳ, ಸಾಕುನಾಯಿ ದಳ ಸ್ಥಾಪನೆ

(ಬೊಗಳೂರು ನಿಷ್ಕ್ರಿಯ ಬ್ಯುರೋದಿಂದ)
ಬೊಗಳೂರು, ಜು.೩೦- ಭಯೋತ್ಪಾದಕರನ್ನು ಮತ್ತು ಉಗ್ರವಾದವನ್ನು ಮಟ್ಟ ಹಾಕುವ ಪೊಲೀಸರ ಕ್ರಮವನ್ನು ಖಡಾಖಂಡಿತವಾಗಿ ಖಂಡಿಸಿರುವ ಅಖಿಲ ಭಾರತ ಓಟು ಓಲೈಕೆ ಪಕ್ಷವು, ಅಲ್ಲಲ್ಲಿ ಬಾಂಬ್ ಸ್ಫೋಟಿಸುತ್ತಾ, ರಕ್ತ ಪಾತ ಮಾಡುತ್ತಾ, ಕಾಶ್ಮೀರದಲ್ಲಿ ಸದಾ ಹಿಂಸಾಚಾರದಲ್ಲಿ ತೊಡಗುತ್ತಾ, ಬಾಂಬುಗಳ ಸಹಿತವಾಗಿ ಪತ್ತೆಯಾಗುತ್ತಿರುವ 'ಮತದಾರರನ್ನು' ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ನಿಷ್ಕ್ರಿಯ ದಳಗಳನ್ನು ರಚಿಸುವ ಪ್ರಸ್ತಾಪ ಮುಂದಿಟ್ಟಿದೆ.

ಭಯೋತ್ಪಾದಕರನ್ನು ಪತ್ತೆ ಹಚ್ಚಿದರೆ ಮತ್ತು ಅವರನ್ನು ಬಂಧಿಸಿದರೆ, ಶೀಘ್ರವೇ ನಡೆಯಲಿರುವ ಚುನಾವಣೆಗಳಲ್ಲಿ ನಮಗೆ ಮತ ಹಾಕುವವರಾರು ಎಂಬ ಸಂದಿಗ್ಧತೆಗೆ ಸಿಲುಕಿರುವ ಅಭಾಓಓ ಪಕ್ಷ, ಪೊಲೀಸ್ ನಿಷ್ಕ್ರಿಯ ದಳದ ರೂಪು ರೇಷೆ ತಯಾರಿಸಿದೆ.

ಅದರ ಪ್ರಕಾರ, ಪೊಲೀಸ್ ನಿಷ್ಕ್ರಿಯ ದಳಕ್ಕೆ ನ್ಯೂಟನ್ ನಿಯಮ, ಐನ್‌ಸ್ಟೀನ್ ಸೂತ್ರ ಹಾಗೂ ದೇಶದ ಹೆಸರಾಂತ ಜಾರಕಾರಣ ವಿಜ್ಞಾನದ ವಿಶಿಷ್ಟ ಸೂತ್ರವನ್ನು ಕೂಡ ರೂಪಿಸಲಾಗಿದೆ.

ನ್ಯೂಟನ್ ನಿಯಮದ ಪ್ರಕಾರ, ಭಯೋತ್ಪಾದಕರು ದಾಳಿ ಮಾಡಲು ಅವಕಾಶ ಮಾಡಿಕೊಡಬೇಕು. ಆಗ ಭಯೋತ್ಪಾದಕರು ತಾವಾಗಿಯೇ ಬಲೆಗೆ ಬೀಳುವಂತಾಗುತ್ತದೆ. ಸಿಕ್ಕಿದರೆ 'ಯುರೇಕಾ' ಎನ್ನುತ್ತಾ, ಭಯೋತ್ಪಾದಕರನ್ನು ಹಿಂದಿಕ್ಕುವ ಭರದಲ್ಲಿ ಅವರನ್ನು ಅಲ್ಲೇ ಬಿಟ್ಟು ಓಡಬಹುದು.

ಐನ್‌ಸ್ಟೀನ್ ನಿಯಮದ ಪ್ರಕಾರ, ಬಾಂಬು ಇಡಲು ಬರುವ ಉಗ್ರಗಾಮಿಗಳನ್ನು ಬೆನ್ನಟ್ಟಬೇಕು. ಉಗ್ರರಿಗೆ ಓಡಿ ಓಡಿ ಸಾಕು ಸಾಕಾಗುವವರೆಗೂ ಓಡಿಸಬೇಕು. ಕೊನೆಗೆ ಆಯಾಸದಿಂದ ಅವರು ಬೀಳುತ್ತಾರೆ. ಆಗ ಶಕ್ತಿಗುಂದಿದ ಅವರನ್ನು (ನಮಗೆ ಶಕ್ತಿಯಿದ್ದರೆ) ಹಿಡಿಯುವುದು ಸುಲಭ.

ವಿಶಿಷ್ಟ ಮತ್ತು ವಿಶೇಷವಾದ ಜಾರಕಾರಣ ನಿಯಮದ ಪ್ರಕಾರ, ದಾಳಿ ನಡೆದಾಗ ಯಾರಾದರೊಬ್ಬರನ್ನು ಬಂಧಿಸಲೇಬೇಕಲ್ಲ... ಇದಕ್ಕಾಗಿ ಒಬ್ಬ ಮುಗ್ಧನನ್ನು ಬಂಧಿಸಿಡಬೇಕು. "ಅಯ್ಯೋ... ಬಿಟ್ಬಿಡಿ.... ನನ್ನೇನೂ ಮಾಡ್ಬೇಡಿ... ನಾನು ಉಗ್ರಗಾಮಿ ಅಂತ ಒಪ್ಪಿಕೊಳ್ತೀನಿ" ಅಂತ ಗೋಗರೆಯುವವರೆಗೂ ಚೆನ್ನಾಗಿ 'ಪೊಲೀಸ್ ಟ್ರೀಟ್‌ಮೆಂಟ್' ಕೊಟ್ಟಾಗ ನಮಗೊಬ್ಬ ಭಯೋತ್ಪಾದಕ ಸಿಕ್ಕಿದಂತಾಗುತ್ತದೆ!

ಇದರೊಂದಿಗೆ, ಬಾಂಬ್ ಪತ್ತೆಗೆ ಮತ್ತು ಅವುಗಳನ್ನಿರಿಸಿದವರ ಶೋಧಕ್ಕೆ ಶ್ವಾನ ದಳಗಳನ್ನು ಸುಖಾಸುಮ್ಮನೆ ದುಡಿಸಿಕೊಳ್ಳಲಾಗುತ್ತಿದೆ. ಅವುಗಳು ನಿಷ್ಠೆಗೆ ಹೆಸರಾಗಿರುವ ಪ್ರಾಣಿಗಳಾಗಿರುವುದರಿಂದ ಮತ್ತು ಅವುಗಳಿಗೆ ಯಾವುದೇ ಆಮಿಷ ನೀಡುವುದು ಸಾಧ್ಯವಿಲ್ಲ. ಅವುಗಳು ನಿಷ್ಪಕ್ಷಪಾತವಾಗಿ ಶೋಧನೆ ಮಾಡುತ್ತವೆಯಾದುದರಿಂದ, ನಮ್ಮ ಬಂಡವಾಳಗಳು ಹೊರಗೆ ಬರದಂತಾಗಲು, ಈ ಶ್ವಾನ ದಳಗಳಲ್ಲಿ ನಾಯಿಗಳ ಬದಲು ನಮ್ಮ ಪಕ್ಷದ ಮುಖಂಡರಿಗೇ ಅವಕಾಶ ನೀಡಬೇಕು ಎಂದೂ ಆಗ್ರಹಿಸಲಾಗಿದೆ. ಅದು ಶ್ವಾನದಳವೇ ಆಗಬೇಕೂಂತ ಇದ್ದರೆ, ಈ ಮುಖಂಡರು ತಮ್ಮ ಜೊತೆ ಮನೆಯಲ್ಲಿರುವ ಸಾಕುನಾಯಿಗಳನ್ನೂ ಒಯ್ಯುತ್ತಾರೆ ಎಂಬ ವಾಕ್ಯವನ್ನೂ ಈ ಪಕ್ಷವು ಸೇರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. :) :) ಸಖತ್ ಸೂಪರ್ !!

    ನನ್ನದೊಂದು ಐಡಿಯ. ಐನ್ ಸ್ಟೈನ್ ನಿಯಮ ಮತ್ತು ನ್ಯೂಟನ್ನಿನ ನಿಯಮ ಎರಡನ್ನು ಐವತ್ತೆಪ್ಪತ್ತು ಪ್ರತಿಶತ ಸೇರಿಸಿ ಕುದಿಸಿ ಆರಿಸಿ ನಿಮ್ಮದೊಂದು ಹೊಸನಿಯಮದ ಕಶಾಯ ಮಾಡಿ ಭಯೋತ್ಪಾದಕರಿಗೆ ಕುಡಿಸಿ. ಅವರು ಓಡುವುದೂ ಇಲ್ಲ, ಮಲಗುವುದೂ ಇಲ್ಲ...ನೀವೆಲ್ಲಿದ್ದರೂ ಅಲ್ಲೇ ಬಂದು ಬೀಳುತ್ತಾರೆ ಥೊಪ್ ಅಂತ ! ನೋಡಿ ಬೇಕಾದ್ರೆ !

    ಪ್ರತ್ಯುತ್ತರಅಳಿಸಿ
  2. ಶ್ವಾನದಳಕ್ಕೆ ಓಓ ಪಕ್ಷದವರನ್ನೇ ಸೇರಿಸಿಕೊಳ್ಳುತ್ತೀರಾ? Good idea! ದುರ್ಜನ ಸಿಂಗನನ್ನು ಶ್ವಾನದಳದ ಮುಖ್ಯ ಶ್ವಾನನಾಗಿ ಮಾಡಬೇಕು.

    ಪ್ರತ್ಯುತ್ತರಅಳಿಸಿ
  3. ಸ್ವಾಮೀ...ಈ ಎಲ್ಲ ನಿಯಮಗಳನ್ನು ಕೂಡಿಸಿ ಕುದಿಸಿ ಕುಡಿಸುಸುವ ಬದಲು...ಕಾರ್ಕೋಟಕ ವಿಷವನ್ನೇ ಕುಡಿಸಿದರೆ ಈ ಸಮಸ್ಯೆಯೇ ಇರುವುದಿಲ್ಲ. ಅವರು ಓಡುವುದು, ಮಲಗುವುದು, ಬಂದು ಬೀಳುವುದು...ಎಲ್ಲ ತೊಂದರೆ ತಪ್ಪುತ್ತದೆ. ಅವರನ್ನು ಕಾರ್ಕೋಟಕ ವಿಷ ಕುಡಿಸಿ ಕೂಡಲೇ ಸ್ಮಶಾನಕ್ಕೇ ಸಾಗಿಸಬಹುದಲ್ಲ?.....ಇಂತಹ ಐಡಿಯಾ ಯಾಕೆ ಹೊಳೆಯಲಿಲ್ಲ?

    ಪ್ರತ್ಯುತ್ತರಅಳಿಸಿ
  4. ಲಕ್ಷ್ಮಿ ಅವರೆ, ಬೊಗಳೂರಿಗೆ ಸ್ವಾಗತ.

    ನಿಮ್ಮ ಐಡಿಯಾದ ಕಶಾಯವನ್ನು ನಾವೀಗಾಗಲೇ ಕೆಲವೊಂದಷ್ಟು ಸೊಳ್ಳೆಗಳ ಮೇಲೆ ಪ್ರಯೋಗ ಮಾಡಿ ನೋಡಿದ್ದೇವೆ. ಅಲ್ಲಿ ಸುರಿದ ರಕ್ತ ಸೊಳ್ಳೆಯದೋ, ಮನುಜರದೋ... ಯಾರದ್ದು ಅಂತ ತಿಳಿಯದೆ ನಾವು ಕೂಡ ಗೊಂದಲದ ಗೂಡಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಗೂಡಿನ ಬಾಗಿಲು ತೆರೆಯಲು ಇಷ್ಟು ಹೊತ್ತು ಬೇಕಾಯಿತು.

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ದುರ್ಜನ ಸಿಂಗರನ್ನು ಎಳೆದುತರಲೆಂದು ಹೋದಾಗ... ಅವರನ್ನು ಆಸುಪತ್ರೆಗೆ ಕಟ್ಟಿ ಹಾಕಿದ್ದರು.

    ಪ್ರತ್ಯುತ್ತರಅಳಿಸಿ
  6. ಗುರುಗಳೇ,
    ನೀವು ಹೇಳಿದ ಕಾರ್ಕೋಟಕ ವಿಷವೆಲ್ಲವೂ ಖಾಲಿಯಾಗಿಬಿಟ್ಟಿದೆ. ಈಗಾಗಲೇ ಜಾರಕಾರಣಿಗಳು ತಮ್ಮ ಮತದಾರರಿಗೆ ಇದನ್ನು ಕುಡಿಸಲೆಂದು ಹೋಲ್ ಸೇಲ್ ಆಗಿ ಖರೀದಿಸಿಬಿಟ್ಟಿದ್ದಾರೆ. ಆ ಕಾರ್ಕೋಟಕ ವಿಷಕ್ಕೆ ಬೆಲೆ ಏರಿಕೆ ಎಂಬ ಮತ್ತೊಂದು ಅಡ್ಡ ಹೆಸರನ್ನು ಇಟ್ಟಿ ಕಾಳಸಂತೆಯಲ್ಲಿ ಮಾರುತ್ತಾ ಇದ್ದಾರಷ್ಟೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D